ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ತೆರಿಗೆ ಹೊರೆಯಿಲ್ಲ, ಮಠಗಳಿಗೆ ಕಾಣಿಕೆಯಿಲ್ಲ, ಚುನಾವಣಾ ಕಸರತ್ತು

Last Updated 4 ಮಾರ್ಚ್ 2022, 23:30 IST
ಅಕ್ಷರ ಗಾತ್ರ

‘ಚುನಾವಣಾ ಜಾತ್ರೆ’ ಸನ್ನಿಹಿತವಾಗಿರುವ ಈ ಹೊತ್ತಿನಲ್ಲಿ ಎಲ್ಲ ಧರ್ಮ, ಜಾತಿ, ಸಮುದಾಯ ಹಾಗೂ ಪ್ರದೇಶಗಳ ಜನರಿಗೂ ಬಜೆಟ್‌ನ ‘ಪ್ರಸಾದ’ವನ್ನು ಹಂಚುವ ಉಮೇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ 2022–23ರ ರಾಜ್ಯ ಬಜೆಟ್‌ನಲ್ಲಿ ಢಾಳಾಗಿ ಎದ್ದು ಕಾಣುತ್ತದೆ. ಆದರೆ, ತಮ್ಮ ರಾಜಕೀಯ ‘ಗುರು’ ಬಿ.ಎಸ್‌. ಯಡಿಯೂರಪ್ಪನವರು ಸುರಿಸಿದಂತೆ ಇವರೇನೂ ಮಠಗಳ ಮೇಲೆ ಅದೇ ರೀತಿಯ ಪ್ರೀತಿಯ ಮಳೆ ಸುರಿಸುವ ಗೋಜಿಗೆ ಹೋಗಿಲ್ಲ. ತೆರಿಗೆ ಹೆಚ್ಚಳದ ಸೊಲ್ಲೂ ಈ ಬಜೆಟ್‌ನಲ್ಲಿಲ್ಲ. ಹೀಗಾಗಿ ಈ ಆಯವ್ಯಯ ಜನಪ್ರಿಯತೆಯ ಹಾದಿಯನ್ನೇ ಹಿಡಿದಿದೆ.

ತಾವು ಪ್ರತಿನಿಧಿಸುತ್ತಿರುವ ಪಕ್ಷದ ಬಲವನ್ನು ಹೆಚ್ಚಿಸಲು ಅತ್ಯುತ್ಸಾಹ ತೋರಿರುವ ಮುಖ್ಯಮಂತ್ರಿ, ಸರ್ವರ ಹಿತವನ್ನು ಬಯಸುವ ಮಾತುಗಳನ್ನಾಡಿ, ರಾಜ್ಯದ ಮೂಲೆ, ಮೂಲೆಯಲ್ಲಿರುವ ಎಲ್ಲರನ್ನೂ ಓಲೈಸುವ ಕಸರತ್ತು ನಡೆಸಿದ್ದಾರೆ. ಹೀಗಾಗಿ ತಿಗಳ, ಮಾಳಿ, ಕುಂಬಾರ, ಯಾದವ, ದೇವಾಡಿಗ, ಸಿಂಪಿ, ಕ್ಷತ್ರಿಯ, ಮೇದಾರ, ಕುರ್ಮ, ಪಿಂಜಾರ/ನದಾಫ್‌, ಕುರುಬ, ಬಲಿಜ, ಈಡಿಗ, ಮಡಿವಾಳ, ಹಡಪದ ಮೊದಲಾದ ಹಿಂದುಳಿದ ಸಮುದಾಯಗಳೂ ಬಜೆಟ್‌ನಲ್ಲಿ ಪಾಲು ಪಡೆದಿವೆ.

‘ಅಹಿಂದ’ದ ವ್ಯಾಪ್ತಿಯನ್ನು ಹಿಗ್ಗಿಸಿರುವ ಅವರು, ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸಮುದಾಯಗಳತ್ತಲೂ ಗಮನಹರಿಸದೇ ಬಿಟ್ಟಿಲ್ಲ. ಜೈನ, ಸಿಖ್‌, ಬೌದ್ಧ, ಕ್ರೈಸ್ತ, ಮುಸ್ಲಿಂ ಧರ್ಮಗಳ ಕಡೆಗೂ ಅವರ ಚಿತ್ತ ಹರಿದಿದೆ. ಧರ್ಮ, ಜಾತಿಗಳನ್ನು ಹುಡುಕಿ, ಹುಡುಕಿ ಅನುದಾನವನ್ನು ಹಂಚಿಕೆ ಮಾಡಿಬಿಟ್ಟಿದ್ದಾರೆ ಮುಖ್ಯಮಂತ್ರಿ. ಮತ ಅರಳಿಸುವ ಎಲ್ಲ ಗಿಡ–ಮರಗಳ ‘ಫಸಲು’ ತಮ್ಮ ಪಕ್ಷದ ಬುಟ್ಟಿಗೇ ಬೀಳಬೇಕು ಎನ್ನುವ ಇರಾದೆ ಬೊಮ್ಮಾಯಿಯವರ ಬಜೆಟ್‌ನ ಉದ್ದಕ್ಕೂ ಗೋಚರಿಸುತ್ತದೆ.

ಅದಕ್ಕೆ ತಕ್ಕಂತೆ ಆರ್ಥಿಕ ದಾಳ ಉರುಳಿಸುವಲ್ಲಿ ಅವರು ಚಾಣಾಕ್ಷತೆಯನ್ನೂ ಮೆರೆದಿದ್ದಾರೆ. ಎಲ್ಲವನ್ನೂ ಹುಡುಕಿ ತೆಗೆಯುವ ಅವರ ನಡೆ ಧರ್ಮ, ಜಾತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಅಷ್ಟೂ ನೀರಾವರಿ ಯೋಜನೆಗಳ ಕಡತಗಳ ಮೇಲಿನ ದೂಳು ಝಾಡಿಸಿ ತೆಗೆದು, ಎಲ್ಲ ಯೋಜನೆಗಳಿಗೂ ಅಷ್ಟಿಷ್ಟು ಅನುದಾನವನ್ನು ಎತ್ತಿಟ್ಟಿದ್ದಾರೆ. ಮೇಕೆದಾಟು, ಎತ್ತಿನಹೊಳೆ, ಕಳಸಾ–ಬಂಡೂರಿ, ಕೃಷ್ಣಾ, ಮಹದಾಯಿ, ಭದ್ರಾ, ತುಂಗಭದ್ರಾ... ಹೀಗೆ ಎಲ್ಲ ಯೋಜನೆಗಳ ಜಪವನ್ನೂ ಮಾಡಿದ್ದಾರೆ. ಎಲ್ಲರನ್ನೂ ತಲುಪುವ ಜನಪ್ರಿಯತೆಯ ಹಾದಿಯಲ್ಲಿ ಮುಖ್ಯಮಂತ್ರಿ ಎಷ್ಟು ದೂರ ಕ್ರಮಿಸಿದ್ದಾರೆಂದರೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಗ್ರಾಮ ಸಹಾಯಕರು ಹಾಗೂ ಅರ್ಚಕರ ವೇತನವನ್ನು, ತುಸುವೇ ಆಗಿರಲಿ, ಹೆಚ್ಚಿಸಿದ್ದಾರೆ.

ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡುವುದಾಗಿಯೂ ಘೋಷಿಸಿದ್ದಾರೆ. ರೈತರಿಗೆ ಡೀಸೆಲ್‌ ಸಹಾಯಧನ ನೀಡಲು ‘ರೈತ ಶಕ್ತಿ’ ಯೋಜನೆಯನ್ನೂ ಪ್ರಕಟಿಸಿದ್ದಾರೆ. ಹಳೆಯ ಯೋಜನೆಗಳ ಹೆಸರನ್ನೇ ಉಲ್ಲೇಖಿಸಿ ರಾಜಧಾನಿ ಬೆಂಗಳೂರಿನ ಜನರಿಗೂ ಸಿಂಹಪಾಲು ಕೊಟ್ಟಿರುವಂತೆ ಬಿಂಬಿಸಿದ್ದಾರೆ.

ಗಣರಾಜ್ಯೋತ್ಸವದ ಸಮಯದಲ್ಲಿ ನಾರಾಯಣ ಗುರುಗಳ ಕುರಿತ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ದೊರೆತಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಅದರಿಂದ ಆಗಬಹುದಾದ ‘ಹಾನಿ’ಯನ್ನು ಕಡಿಮೆ ಮಾಡುವ ಭಾಗವಾಗಿ ನಾರಾಯಣ ಗುರು ವಸತಿಶಾಲೆ ಸ್ಥಾಪನೆಯ ಘೋಷಣೆ ಹೊರಬಿದ್ದಂತಿದೆ. ರೈತರು ಮತ್ತು ಮಹಿಳೆಯರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ದೇವಾಲಯಗಳನ್ನು ಸರ್ಕಾರದ ಸುಪರ್ದಿಯಿಂದ ಮುಕ್ತಗೊಳಿಸುವ ವಿವಾದಾತ್ಮಕ ಅಂಶದ ಪ್ರಸ್ತಾವವನ್ನೂ ಮುಖ್ಯಮಂತ್ರಿ ಮಾಡಿದ್ದಾರೆ. ಸಕಾರಾತ್ಮಕ ಪರಿಣಾಮ ಬೀರಬಹುದಾದ ಅಂಶಗಳು ಕೂಡ ಬಜೆಟ್‌ನಲ್ಲಿವೆ. ಯಶಸ್ವಿನಿ ಯೋಜನೆ ಪುನರಾರಂಭ ಮಾಡುತ್ತಿರುವುದು ಅವುಗಳಲ್ಲೊಂದು. ಬಡವರು ಸುಲಭವಾಗಿ ಚಿಕಿತ್ಸೆ ಪಡೆಯಲು ಇದರಿಂದ ಅನುವಾಗಲಿದೆ. ನಗರ ಪ್ರದೇಶಗಳಲ್ಲಿ ವಾರ್ಡ್‌ಗೆ ಒಂದರಂತೆ ‘ನಮ್ಮ ಕ್ಲಿನಿಕ್‌’ ಆರಂಭಿಸುವ ನಿರ್ಧಾರ ಕೂಡ ಉತ್ತಮ ನಡೆ. ಶೈಕ್ಷಣಿಕ ಹಾಗೂ ಆರೋಗ್ಯ ಸೌಕರ್ಯ ಹೆಚ್ಚಳಕ್ಕೆ ಅನುದಾನ ಒದಗಿಸಲು ಮುಂದಾಗಿರುವುದು ಸ್ವಾಗತಾರ್ಹ ಹೆಜ್ಜೆ.

ಐಐಟಿ ಮಾದರಿಯಲ್ಲಿ ಏಳು ಕೆಐಟಿಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಗೂ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆಯ ಘೋಷಣೆ ಕುತೂಹಲ ಮೂಡಿಸಿವೆ. ‘ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು’ಗಳನ್ನು ಗುರುತಿಸಿ, ಅವುಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಒದಗಿಸಲಿರುವುದು ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪೂರಕವಾದ ಯೋಜನೆ. ಚಲನಚಿತ್ರಗಳಿಗೆ ಸಹಾಯಧನ ನೀಡುವ ಪ್ರಮಾಣವನ್ನು ಈಗಿನ 125 ಚಿತ್ರಗಳಿಂದ 200 ಚಿತ್ರಗಳಿಗೆ ಏರಿಕೆ ಮಾಡಲಾಗುವುದು ಎಂದು ಪ್ರಕಟಿಸಿರುವುದು ಸಿನಿಮಾ ಮಂದಿಗೆ ಸಂತಸ ತಂದೀತು. ಆದರೆ, ಸರ್ವರನ್ನೂ ಖುಷಿಪಡಿಸುವ ಭರದಲ್ಲಿ ಬಜೆಟ್‌ನಲ್ಲಿ ದೂರದರ್ಶಿತ್ವದ ನೋಟವೇ ಕಾಣೆಯಾಗಿಬಿಟ್ಟಿದೆ.

ಹೀಗಾಗಿ ದೂರಗಾಮಿ ಪರಿಣಾಮ ಬೀರುವಂತಹ, ಸಾರ್ವಜನಿಕ ಆಸ್ತಿ ಸೃಷ್ಟಿಸುವಂತಹ ಯೋಜನೆಗಳು ಗೈರಾಗಿವೆ. ಜಿಎಸ್‌ಟಿ ರಾಜ್ಯಭಾರದ ಈ ದಿನಗಳಲ್ಲಿ ತೆರಿಗೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆಸ್ಪದವಿಲ್ಲ. ಮದ್ಯದ ಮೇಲಿನ ತೆರಿಗೆ ಹೆಚ್ಚಿಸುವ ಗೋಜಿಗೆ ಮುಖ್ಯಮಂತ್ರಿ ಹೋಗಿಲ್ಲ. ಅನುದಾನ ಹಂಚಿಕೆಗೆ ಬೇಕಾದ ಕೊರತೆಯನ್ನು ₹ 72 ಸಾವಿರ ಕೋಟಿ ಸಾಲದಿಂದ ತುಂಬಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಸಾಲ ತೀರುವಳಿಗೆ ಬಜೆಟ್‌ನ ಶೇ 17ರಷ್ಟು ಪಾಲನ್ನು ಮೀಸಲಿಟ್ಟಿದ್ದಾರೆ. ಆರ್ಥಿಕ ಶಿಸ್ತಿಗಿಂತ ವೋಟಿನ ಅಂಕಗಣಿತವೇ ಬಜೆಟ್‌ಗೆ ಮುಖ್ಯವಾಗಿರುವುದು ಸುಸ್ಪಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT