ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪ್ರಾದೇಶಿಕ ಸಾರಿಗೆ ಕಚೇರಿ ಸೇವೆಗಳು ಹೆಚ್ಚು ಜನಸ್ನೇಹಿಯಾಗಬೇಕಿದೆ

Last Updated 27 ಅಕ್ಟೋಬರ್ 2021, 19:32 IST
ಅಕ್ಷರ ಗಾತ್ರ

ಅತಿಯಾದ ಭ್ರಷ್ಟಾಚಾರಕ್ಕೆ ಹೆಸರಾಗಿರುವ ಸರ್ಕಾರಿ ಕಚೇರಿಗಳಲ್ಲಿ ಒಂದೆನಿಸಿರುವ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿನ (ಆರ್‌ಟಿಒ) ಲಂಚಗುಳಿತನ ಕಡಿಮೆ ಮಾಡಬೇಕು ಮತ್ತು ಈ ಕಚೇರಿಗಳನ್ನು ಜನಸ್ನೇಹಿ ಯಾಗಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳುಕೆಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿವೆ. ಲಂಚದ ಹಾವಳಿಯಿಂದ ಬೇಸತ್ತು ಹೋಗಿರುವ ನಾಗರಿಕರಲ್ಲಿ ತುಸು ವಿಶ್ವಾಸ ಮೂಡಿಸುವ ಉಪಕ್ರಮಗಳಂತೆ ಇವು ಕಾಣಿಸುತ್ತಿವೆ.

ಹೊಸ ವಾಹನ ಖರೀದಿಸಿದಾಗ ಅದನ್ನು ಆರ್‌ಟಿಒ ಕಚೇರಿಗೆ ಕೊಂಡೊಯ್ದು ನೋಂದಣಿ ಮಾಡಿಸಬೇಕಾಗಿತ್ತು. ಅದಕ್ಕೀಗ ವಿದಾಯ ಹಾಡಿದ್ದು, ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 1ರಿಂದ ಹೊಸ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಯಾಗಲಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮಾವಳಿಗೆ ತಂದಿರುವ ತಿದ್ದುಪಡಿ ಆಧರಿಸಿ ಈ ಹೊಸ ನಿಯಮ ಅನುಷ್ಠಾನಕ್ಕೆ ಬರಲಿದೆ. ಸೆಕೆಂಡ್‌ ಹ್ಯಾಂಡ್‌ (ಬಳಸಿದ) ವಾಹನಗಳ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುವ ಅಧಿಕಾರವನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಎಸ್‌ಸಿ ಇ–ಗವರ್ನೆನ್ಸ್‌ ಇಂಡಿಯಾ ಲಿಮಿಟೆಡ್‌ಗೆ (ಸಿಎಸ್‌ಸಿ ಎಸ್‌ಪಿವಿ) ನೀಡಲಾಗಿದೆ.ದೇಶದಾದ್ಯಂತ ಈ ಸೇವೆ ನೀಡಲು ಸಿಎಸ್‌ಸಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಜೊತೆ ಸಹಭಾಗಿತ್ವ ಹೊಂದಿದೆ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸಿದರೆ ವಾಹನ ಮಾಲೀಕತ್ವದ ವರ್ಗಾವಣೆಗೆ ಮುನ್ನ ಎನ್‌ಒಸಿ ಪಡೆಯುವುದು ಕಡ್ಡಾಯ.

ಆಯಾ ಜಿಲ್ಲೆಯೊಳಗೆ ವಾಹನದ ಕೈ ಬದಲಾವಣೆಯಾದರೆ ಮಾಲೀಕತ್ವದ ವರ್ಗಾವಣೆ ಸಲೀಸಾಗಿತ್ತು. ಪಕ್ಕದ ಜಿಲ್ಲೆ ಅಥವಾ ಬೇರೆ ರಾಜ್ಯದವರಿಗೆ ಮಾರಿದಲ್ಲಿ ಎನ್‌ಒಸಿ ಪಡೆಯುವುದು ಹರಸಾಹಸದ ಕೆಲಸವಾಗಿತ್ತು. ವಿಳಂಬ ಮತ್ತು ಲಂಚಕ್ಕೆ ದಾರಿ ಮಾಡಿಕೊಡುತ್ತಿತ್ತು. ಅದನ್ನು ತಪ್ಪಿಸಲು ಕೇಂದ್ರವು ಸಿಎಸ್‌ಸಿ ಮೂಲಕ ಹೊಸ ಉಪಕ್ರಮ ಕೈಗೊಂಡಿದೆ. ಹೊಸ ಪದ್ಧತಿ ಚಾಲ್ತಿಗೆ ತಂದಿರುವುದರಿಂದ ‌ಸೆಕೆಂಡ್ ಹ್ಯಾಂಡ್‌ ವಾಹನ ಖರೀದಿಸುವ ಗ್ರಾಹಕರು, ಆ ವಾಹನದ ಮೇಲೆ ಅಡಮಾನ ಸಾಲ ಇದೆಯೇ, ಅಪಘಾತದ ಮೊಕದ್ದಮೆಗಳು ಇವೆಯೇ ಎಂಬುದನ್ನು ಆನ್‌ಲೈನ್ ಮೂಲಕವೇ ಪರಿಶೀಲಿಸುವ ಅವಕಾಶವೂ ಇದರಿಂದ ಲಭ್ಯವಾಗಲಿದೆ.

‌ಆದರೆ, ಇಂತಹ ಸುಧಾರಣಾ ಕ್ರಮಗಳು ಅನೇಕ ಬಾರಿ ಜನಸಾಮಾನ್ಯರಿಗಿಂತ ವಾಹನ ಮಾರಾಟಗಾರರ ಹಿತಾಸಕ್ತಿಗೆ ಪೂರಕವಾಗಿವೆಯೇ ಎಂಬ ಸಂಶಯವೂ ಮೂಡುತ್ತದೆ. ಏಕೆಂದರೆ, ಹೊಸ ವಾಹನ ಖರೀದಿಸಿದವರು ನೋಂದಣಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ತಮ್ಮ ವಾಹನ ಕೊಂಡೊಯ್ದು ಅಲ್ಲಿ ಇನ್‌ಸ್ಪೆಕ್ಟರ್‌ ಸಹಿ ಪಡೆದ ಬಳಿಕವೇ ಅದನ್ನು ತಮ್ಮದಾಗಿಸಿಕೊಳ್ಳಬೇಕು ಎಂಬುದು ನಿಯಮ.

ವಾಹನ ಮಾರಾಟಗಾರ ಸಂಸ್ಥೆಗಳು ವಾಹನದ ಒಟ್ಟಾರೆ ಖರೀದಿ ಮೌಲ್ಯದಲ್ಲೇ ಆರ್‌ಟಿಒ ‘ಖರ್ಚು’ ಸೇರಿಸಿ ವಸೂಲಿ ಮಾಡುತ್ತಿವೆ. ಅಲ್ಲದೆ, ಸಾರಿಗೆ ಕಚೇರಿಗೆ ವಾಹನ ಕೊಂಡೊಯ್ಯದೇ ನೋಂದಣಿ ಪ್ರಕ್ರಿಯೆ ಪೂರೈಸಿಕೊಳ್ಳಲು ಬೇಕಾದ ‘ವ್ಯವಸ್ಥೆ’ಯನ್ನು ಕೆಲವು ಸಂಸ್ಥೆಗಳು ಮಾಡಿಕೊಂಡಿವೆ ಎಂಬ ಆರೋಪದಲ್ಲೂ ಹುರುಳಿಲ್ಲದೇ ಇಲ್ಲ. ಆನ್‌ಲೈನ್‌ ನೋಂದಣಿ ವ್ಯವಸ್ಥೆಯು ಮೇಲ್ನೋಟಕ್ಕೆ ಸುಧಾರಣೆ ಕ್ರಮ ಎನಿಸಿದರೂ ಇದರಿಂದ ಗ್ರಾಹಕರಿಗೆ ನೇರವಾಗಿ ಸಿಗು ವಂತಹದು ಏನೂ ಇಲ್ಲ.

ಆನ್‌ಲೈನ್ ಮೂಲಕವೇ ನೋಂದಣಿ ಪದ್ಧತಿ ಅನುಷ್ಠಾನ ಆದ ಬಳಿಕ ಸರ್ಕಾರಿ ಶುಲ್ಕವನ್ನು ಮಾತ್ರ ಹಿಡಿದುಕೊಂಡು ಆರ್‌ಟಿಒ ‘ಖರ್ಚನ್ನು’ ಗ್ರಾಹಕರಿಗೆ ಬಿಟ್ಟುಕೊಡಲು ವಾಹನ ಮಾರಾಟ ಮಾಡುವ ಸಂಸ್ಥೆಗಳು ಮುಂದಾದರೆ, ಆಗಷ್ಟೇ ಗ್ರಾಹಕರಿಗೆ ಲಾಭವಾದೀತು. ಇಂತಹ ಮೇಲ್ನೋಟದ ಸುಧಾರಣೆಗಿಂತ ಸಾರಿಗೆ ಕಚೇರಿಗಳಲ್ಲಿನ ಲಂಚದ ಹಾವಳಿಯನ್ನು ಕೊನೆಗಾಣಿಸ ಬೇಕಾದ ತುರ್ತು ಇದೆ.

ಕರ್ನಾಟಕದ ಯಾವುದೇ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋದರೂ ಅಕ್ಕಪಕ್ಕದಲ್ಲಿ ಮಧ್ಯವರ್ತಿಗಳ ಹತ್ತಾರು ಕಚೇರಿಗಳನ್ನು ಕಾಣಬಹುದು. ಕಲಿಕಾ ಪರವಾನಗಿ, ಚಾಲನಾ ಪರವಾನಗಿ (ಡಿಎಲ್‌) ಪಡೆಯಲು ಆನ್‌ಲೈನ್‌ನಲ್ಲೇ ಪರೀಕ್ಷೆ ಬರೆಯುವುದು, ಡಿಎಲ್‌ ಪಡೆಯಲು ಸಮಯ ನಿಗದಿ ಮಾಡುವುದನ್ನು ಆನ್‌ಲೈನ್‌ನಲ್ಲೇ ಮಾಡುವುದು ಕಡ್ಡಾಯ. ಅದಕ್ಕಾಗಿ ತಂತ್ರಾಂಶವನ್ನು ಸರ್ಕಾರ ಸಿದ್ಧಪಡಿಸಿದೆ.

ಆದರೆ, ಈ ನ್ಯಾಯ ಮಾರ್ಗದಲ್ಲಿ ಹೋದರೆ ಅಷ್ಟು ಸುಲಭವಾಗಿ ಡಿಎಲ್ ಸಿಗುವುದಿಲ್ಲ; ನೇರವಾಗಿ ಹೋದರೆ ಡಿಎಲ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮೂರ್ನಾಲ್ಕು ಬಾರಿಯಾದರೂ ಕಸರತ್ತು ಮಾಡಬೇಕಾಗುತ್ತದೆ. ಅದೇ ಮಧ್ಯವರ್ತಿಗಳ ಮೂಲಕ ಹೋದರೆ ಹನಿ ಬೆವರಿಳಿಸದೇ ಡಿಎಲ್‌ಗೆ ಸಂಬಂಧಿಸಿದ ಪ್ರಕ್ರಿಯೆ ಮುಗಿಸಿ ಹೊರ ಬರುವ ವ್ಯವಸ್ಥೆ ಇದೆ. ಇದರ ಜತೆಗೆ ಬಸ್‌, ಲಾರಿಗಳಂತಹ ವಾಹನಗಳಿಗೆ ದೃಢತೆ‍ಪ್ರಮಾಣ ಪತ್ರ (ಎಫ್‌ಸಿ), ರಹದಾರಿ ಪತ್ರ (ಪರ್ಮಿಟ್) ಪಡೆಯುವುದಂತೂ ಸಾಹಸವೇ ಸರಿ. ಇದೇ ವರ್ಷದ ಆಗಸ್ಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ‘ಆಪ್‌ಕಾ ಆರ್‌ಟಿಒ ಆಪ್‌ಕಾ ಘರ್‌’ ಹೆಸರಿನಲ್ಲಿ ಆನ್‌ಲೈನ್‌ ಸೇವೆ ಒದಗಿಸುವ ವ್ಯವಸ್ಥೆಗೆ ಚಾಲನೆ ನೀಡಿದರು.

ಪ್ರಾದೇಶಿಕ ಸಾರಿಗೆ ಕಚೇರಿಯ 33 ಸೇವೆಗಳನ್ನು ಇದರಡಿ ತಂದಿದ್ದು, ಶೇ 95ರಷ್ಟು ಅರ್ಜಿಗಳು ಆನ್‌ಲೈನ್‌ ಮೂಲಕವೇ ತ್ವರಿತವಾಗಿ ವಿಲೇವಾರಿಯಾಗುತ್ತಿವೆ ಎನ್ನುತ್ತವೆ ವರದಿಗಳು. ಡಿಎಲ್‌, ಆರ್‌ಸಿ, ಮಾಲೀಕತ್ವ ಅಥವಾ ವಿಳಾಸ ಬದಲಾವಣೆ ಇವೆಲ್ಲವನ್ನೂ ಕಚೇರಿಗೆ ಹೋಗದೇ ಕಂಪ್ಯೂಟರ್ ಅಥವಾ ಸೈಬರ್ ಕೆಫೆಯಲ್ಲಿ ಕುಳಿತು ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ದೆಹಲಿ ಸರ್ಕಾರ ಜಾರಿ ಮಾಡಿದೆ. ಕರ್ನಾಟಕ ಸರ್ಕಾರ ಕೂಡ ಸಾರಿಗೆ ಕಚೇರಿಯನ್ನು ಇನ್ನೂ ಹೆಚ್ಚು ಜನಸ್ನೇಹಿಯಾಗಿ ಮಾಡುವತ್ತ ದೃಢ ಹೆಜ್ಜೆ ಇಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವರ್ಗಾವಣೆ ಅಥವಾ ಅವರಿಗೆ ಆಯಕಟ್ಟಿನ ಜಾಗ ನೀಡುವಾಗ ಚಾಲ್ತಿಯಲ್ಲಿರುವ ‘ಜಾಲ’ವನ್ನು ಮೊದಲು ನಿಷ್ಕ್ರಿಯ ಗೊಳಿಸಿದರೆ ವ್ಯವಸ್ಥೆಯ ಸುಧಾರಣೆಯಲ್ಲಿ ಮೊದಲ ಹೆಜ್ಜೆ ಇಟ್ಟಂತಾಗುತ್ತದೆ. ಈ ದಿಕ್ಕಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT