ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ‘ಅಮೃತ ಮಹೋತ್ಸವ’ ಸಂದ‌ರ್ಭದಲ್ಲಿ ರಾಜಕಾರಣ– ಗೊಂದಲ ಸೃಷ್ಟಿ ಸಲ್ಲದು

Last Updated 27 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ ಜನವರಿ 1ರಿಂದ ಫೆಬ್ರುವರಿ 7ರವರೆಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಪದವಿಪೂರ್ವ ಶಿಕ್ಷಣ ಇಲಾಖೆಯ ಸೂಚನೆಯು ಅನಗತ್ಯ ಗೊಂದಲಕ್ಕೆ ಎಡೆ ಮಾಡಿಕೊಡುವಂತಹದ್ದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಪತ್ರ ಬರೆದಿದೆ. ಆ ಪತ್ರದ ಹಿನ್ನೆಲೆಯಲ್ಲಿ, ಪಿಯು ಮಕ್ಕಳಿಂದ ಸೂರ್ಯ ನಮಸ್ಕಾರ ಮಾಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸೂರ್ಯ ನಮಸ್ಕಾರ ಆರೋಗ್ಯಕ್ಕೆ ಪೂರಕ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಸೂರ್ಯ ನಮಸ್ಕಾರ ಚಟುವಟಿಕೆಗೆ ಸರ್ಕಾರ ನೀಡಿರುವ ಕಾರಣ ಬಾಲಿಶವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೂ ದೈಹಿಕ ಚಟುವಟಿಕೆಗೂ ಯಾವ ರೀತಿಯ ಸಂಬಂಧ ಎನ್ನುವುದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕು. ವಿದ್ಯಾರ್ಥಿ ಗಳಲ್ಲಿ ಸ್ವಾತಂತ್ರ್ಯ ಚಳವಳಿಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬಹುದಾಗಿದೆ. ಕಳೆದ ಏಳೂವರೆ ದಶಕಗಳಲ್ಲಿ ಸ್ವತಂತ್ರ ಭಾರತ ಎದುರಿಸಿದ ಸವಾಲುಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ದೇಶ ಮಾಡಿದ ಸಾಧನೆಗಳ ಬಗ್ಗೆ ಯುವ ಸಮೂಹಕ್ಕೆ ತಿಳಿವಳಿಕೆ ನೀಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಇಂಥ ಸೃಜನಶೀಲ ಕಾರ್ಯಕ್ರಮಗಳ ಬದಲು, ಅಮೃತ ಮಹೋತ್ಸವ ಆಚರಣೆಯನ್ನೇ ಕಸರತ್ತಿನ ಮಟ್ಟಕ್ಕೆ ಇಳಿಸಲು ಸರ್ಕಾರ ಹೊರಟಂತಿದೆ. ವಿದ್ಯಾರ್ಥಿಗಳ ಸೃಜನಶೀಲತೆ‌ಗೆ ಅಭಿವ್ಯಕ್ತಿ ದೊರಕಿಸಿಕೊಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲು ಅವಕಾಶ ಇದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಈಗಾಗಲೇ ಭಾಗವಹಿಸುತ್ತಿದ್ದಾರೆ. ಅದರ ಜೊತೆಗೆ ಹೆಚ್ಚುವರಿಯಾಗಿ ದೈಹಿಕ ಚಟುವಟಿಕೆಯನ್ನು ದಿಢೀರ್‌ ಹೇರಲು ಹೊರಟಿರುವುದನ್ನು ನೋಡಿದರೆ, ಶಿಕ್ಷಣ ಕ್ಷೇತ್ರದಲ್ಲಿ ರಚನಾತ್ಮಕ ಚಿಂತನೆಗಳಿಗೂ ಬರ ಬಂದಿದೆಯೇ ಎನ್ನುವ ಅನುಮಾನ ಮೂಡುವಂತಿದೆ.

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಏರುಪೇರಾಗಿವೆ. ಕೊರೊನಾ ರೂಪಾಂತರ ತಳಿ ಓಮೈಕ್ರಾನ್‌ ಆತಂಕ ಮೂಡಿಸಿದೆ. ಶಾಲಾ– ಕಾಲೇಜುಗಳಲ್ಲಿ ಪಠ್ಯಕ್ರಮ ಪೂರೈಸುವುದಕ್ಕೆ ಹರಸಾಹಸಪಡುವ ಸ್ಥಿತಿ ಉಂಟಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಗದಿತ ಪಠ್ಯವನ್ನು ಪೂರೈಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ. ಆದರೆ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್‌ ಫೆಡರೇಷನ್‌ನ ಅಪೇಕ್ಷೆಗೆ ಅನುಗುಣವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಮೇಲೆ ಹೇರಿರು ವುದು ಸರಿಯಲ್ಲ. ಪಿಯು ಹಂತ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವೂ ಆಗಿರುವುದರಿಂದ, ಚರ್ಚೆ–ಸಂವಾದಗಳಂಥ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಗ್ನರಾಗಬೇಕಾದ ವಿದ್ಯಾರ್ಥಿಗಳ ಗಮನವನ್ನು ಕಾಲೇಜಿನ ಅವಧಿಯಲ್ಲಿ ಬೇರೆಡೆಗೆ ತಿರುಗಿಸುವ ಪ್ರಯತ್ನವು ಶೈಕ್ಷಣಿಕ ಹಿತಾಸಕ್ತಿಗೆ ಪೂರಕವಾದ ಚಿಂತನೆಯಲ್ಲ. ಆಸಕ್ತ ವಿದ್ಯಾರ್ಥಿಗಳು ತಂತಮ್ಮ ಮನೆಗಳಲ್ಲಿ ವ್ಯಾಯಾಮ ಅಥವಾ ಯೋಗ ಮಾಡುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಕೋವಿಡ್ ಸೋಂಕಿನ ಮೂರನೇ ಅಲೆಯ ಆತಂಕ ಬೂದಿ ಮುಚ್ಚಿದ ಕೆಂಡದಂತಿರುವ ಸಂದರ್ಭದಲ್ಲಿ ಸರ್ಕಾರ‌ ತೆಗೆದುಕೊಂಡಿರುವ ಈ ನಿರ್ಧಾರ ಅಚ್ಚರಿ ಹುಟ್ಟಿಸುವಂತಿದೆ. ಕೊರೊನಾ ಸೋಂಕು ತೀವ್ರವಾಗಿದ್ದ ಸಮಯದಲ್ಲಿ ಉದ್ಯಾನ‌ ಹಾಗೂ ಜಿಮ್‌ಗಳ ಬಾಗಿಲು ಮುಚ್ಚಿಸಿದ್ದ ಸರ್ಕಾರವೇ ಈಗ ವಿದ್ಯಾರ್ಥಿಗಳ ಆರೋಗ್ಯದೊಂದಿಗೆ ಕಣ್ಣಾಮುಚ್ಚಾಲೆ ಆಡಲು ಹೊರಟಿದೆ. ಸೋಂಕಿನ ಆತಂಕದ ಸಮಯದಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಶಾಲಾ– ಕಾಲೇಜುಗಳನ್ನು ನಡೆಸುವುದೇ‌ ಕಷ್ಟವಾಗಿರುವಾಗ, ಹೆಚ್ಚುವರಿಯಾಗಿ ಮತ್ತೇನೋ ಪಠ್ಯೇತರ ಚಟುವಟಿಕೆ ಬಗ್ಗೆ ಯೋಚಿಸುತ್ತಿರುವ ಸರ್ಕಾರದ ನಡೆಯು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿಲ್ಲ ಎಂದೇ ಹೇಳಬೇಕಾಗುತ್ತದೆ.

ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ; ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿವೆ. ಇಂಥ ಆರೋಪಗಳಿಗೆ ಪುಷ್ಟಿ ನೀಡುವಂತೆ ಬಿಜೆಪಿ ನೇತೃತ್ವದ ಸರ್ಕಾರಗಳಿಂದ ‘ಸೂರ್ಯ ನಮಸ್ಕಾರ’ದ ಬಳಕೆಯಾಗುತ್ತಿದೆ. 2012ರಲ್ಲಿ ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿದ ಮಧ್ಯಪ್ರದೇಶ ಸರ್ಕಾರದ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು. ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಶಿಕ್ಷಣ ಕೇಸರೀಕರಣದ ಪ್ರಯತ್ನ ಎಂದು ಮುಸ್ಲಿಂ ಸಮುದಾಯದ ಕೆಲವರು ಆಪಾದಿಸಿದ್ದರು. ಯೋಗ ಮತ್ತು ಸೂರ್ಯ ನಮಸ್ಕಾರ ವಿರೋಧಿಸುವವರನ್ನು ಸಮುದ್ರಕ್ಕೆ ಎಸೆಯುವಂತೆ ಇಲ್ಲವೇ ಭಾರತದಿಂದ ಹೊರಹಾಕುವಂತೆ 2015ರಲ್ಲಿ ಬಿಜೆಪಿ ಸಂಸದರಾಗಿದ್ದ, ಉತ್ತರಪ್ರದೇಶದ ಇಂದಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿಕೆ ನೀಡಿದ್ದರು. 2015ರಲ್ಲಿ ರಾಜಸ್ಥಾನ ಸರ್ಕಾರ ಕೂಡ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಕಡ್ಡಾಯಗೊಳಿಸಿತ್ತು. ಇಂಥ ನಿರ್ಣಯ ಹಾಗೂ ಹೇಳಿಕೆಗಳ ಹಿಂದೆ ಮಕ್ಕಳ ಕಾಳಜಿಗಿಂತಲೂ ಹೆಚ್ಚಾಗಿ ಧಾರ್ಮಿಕ ರಾಜಕಾರಣವೇ ಎದ್ದುಕಾಣುತ್ತದೆ. ವಿದ್ಯಾರ್ಥಿಗಳು ಬಯಸಿದಲ್ಲಿ ಶಾಲೆಗಳಲ್ಲಿ ಭಗವದ್ಗೀತೆಯ ಬೋಧನೆಗೆ ರಾಜ್ಯ ಸರ್ಕಾರಗಳು ಅವಕಾಶ ಮಾಡಿಕೊಡಬಹುದು ಎಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಅವರು ಲೋಕಸಭೆಯಲ್ಲಿ ನೀಡಿರುವ ಹೇಳಿಕೆ ಕೂಡ ಓಲೈಕೆ ರಾಜಕಾರಣದ ಭಾಗವಾಗಿದೆ. ಸಮುದಾಯಗಳ ನಡುವೆ ಬಿರುಕು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ ಸಾಮರಸ್ಯ ಮೂಡಿಸುವ ದಿಸೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಶಿಕ್ಷಣ ಕ್ಷೇತ್ರವನ್ನೂ ಬಗ್ಗಡಗೊಳಿಸುವ ಕೆಲಸವು ಬಹುತ್ವದ ಕಟ್ಟಡವನ್ನು ತಳಪಾಯ ಮಟ್ಟದಲ್ಲೇ ಶಿಥಿಲಗೊಳಿಸುವ ಪ್ರಯತ್ನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT