ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕುಡಿಯುವ ನೀರಲ್ಲಿ ಯುರೇನಿಯಂ ಮರೀಚಿಕೆಯೇ ಶುದ್ಧ ಜೀವಜಲ?

ಪಾತಾಳದಿಂದ ಬಂದ ಯುರೇನಿಯಂ ಮಾಲಿನ್ಯಕ್ಕೆ ಆಕಾಶದಿಂದ ಬರುವ ನೀರಲ್ಲೇ ಔಷಧವಿದೆ
Last Updated 7 ಮಾರ್ಚ್ 2022, 18:47 IST
ಅಕ್ಷರ ಗಾತ್ರ

ನೀರಿಗಾಗಿ ಕೊಳವೆ ಬಾವಿಗಳನ್ನು ಆಳಕ್ಕೆ ಕೊರೆದಂತೆಲ್ಲ ಆರೋಗ್ಯಕ್ಕೆ ಮಾರಕವಾದ ಫ್ಲೋರೈಡ್‌, ಆರ್ಸೆನಿಕ್‌ ಮುಂತಾದ ವಿಷಕಾರಿ ಅಂಶಗಳು ಮೇಲಕ್ಕೆ ಬರುತ್ತಿರುತ್ತವೆ. ಕರ್ನಾಟಕದ ಪೂರ್ವಭಾಗದ ಕೆಲವು ಬರಪೀಡಿತ ಜಿಲ್ಲೆಗಳ ಕೊಳವೆ ಬಾವಿಗಳ ನೀರಿನಲ್ಲಿ ವಿಕಿರಣಪೂರಿತ ಯುರೇನಿಯಂ ಕೂಡ ಪತ್ತೆಯಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಜಲತಜ್ಞರು ಕೆಲವು ತಿಂಗಳ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ 48 ಗ್ರಾಮಗಳಲ್ಲಿ ಅಪಾಯದ ಮಟ್ಟ ಮೀರಿದ ಪ್ರಮಾಣದಲ್ಲಿ ಯುರೇನಿಯಂ ಅಂಶ ಇದೆಯೆಂದು ವರದಿ ಮಾಡಿದ್ದರು. ಇದು ‘ನಿಜಕ್ಕೂ ಆತಂಕಕಾರಿ’ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಮೊನ್ನೆ ಬೆಂಗಳೂರಿನಲ್ಲಿ ಹೇಳಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂತಲೂ ಹೇಳಿದ್ದಾರೆ.

ಸಚಿವ ಶೇಖಾವತ್‌ ಅವರ ತವರು ರಾಜ್ಯದಲ್ಲಿ (ರಾಜಸ್ಥಾನ) ಈ ಸಮಸ್ಯೆ ಹತ್ತಾರು ವರ್ಷಗಳಿಂದ ಇದೆ. ಅಮೆರಿಕದ ಡ್ಯೂಕ್‌ ವಿಶ್ವವಿದ್ಯಾಲಯದ ತಜ್ಞರು ನಾಲ್ಕು ವರ್ಷಗಳ ಹಿಂದೆಯೇ ಅಲ್ಲಿನ ಮತ್ತು ಪಕ್ಕದ ಗುಜರಾತ್‌ನ 324 ಕೊಳವೆ ಬಾವಿಗಳ ನೀರಲ್ಲಿ ಯುರೇನಿಯಂ ಪ್ರಮಾಣ ಅಪಾಯದ ಮಟ್ಟವನ್ನು ಮೀರಿದೆ ಎಂದು ವರದಿ ಮಾಡಿದ್ದರು. ಆ ರಾಜ್ಯಗಳಲ್ಲಿ ಯಾವ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಸಚಿವರು (ಮರಳಿ ಹೋದ ನಂತರವಾದರೂ) ಕರ್ನಾಟಕಕ್ಕೆ ತಿಳಿಸಿದ್ದರೆ ಅನುಕೂಲವಾಗುತ್ತಿತ್ತು.

ಕುಡಿಯುವ ನೀರಿನಲ್ಲಿ ಯುರೇನಿಯಂ ಪ್ರಮಾಣ ಜಾಸ್ತಿ ಇದ್ದರೆ ಅದರಿಂದ ಮೂತ್ರಪಿಂಡ ಕಾಯಿಲೆ, ಶಾರೀರಿಕ ಜಡತ್ವ, ಕ್ಯಾನ್ಸರ್‌ ಕೂಡ ಬರುತ್ತದೆ ಎಂದು ಆರೋಗ್ಯತಜ್ಞರು ಹೇಳುತ್ತಾರೆ. ಅದು ರೋಗನಿರೋಧಕ ಶಕ್ತಿಯನ್ನೇ ಕುಂದಿಸುವುದರಿಂದ ಯಾವ ಕಾಯಿಲೆಯೂ ಬರಬಹುದು. ಪ್ರತೀ ಲೀಟರ್‌ ನೀರಿನಲ್ಲಿ 30 ಮೈಕ್ರೊಗ್ರಾಮ್‌ಗಿಂತ ಹೆಚ್ಚಿಗೆ ಯುರೇನಿಯಂ ಇರಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅದು 60 ಮೈಕ್ರೊಗ್ರಾಮ್‌ವರೆಗೆ ಇದ್ದರೂ ಪರವಾಗಿಲ್ಲ, ಅದಕ್ಕಿಂತ ಹೆಚ್ಚಿರಬಾರದು ಎಂದು ಭಾರತೀಯ ಪರಮಾಣು ತಜ್ಞರು ನಮ್ಮವರಿಗಾಗಿ ಗರಿಷ್ಠ ಮಿತಿಯನ್ನು ಏರಿಸಿದ್ದಾರೆ.

ಮಾಲಿನ್ಯದ ವಿಷಯದಲ್ಲಿ ನಾವೇನೂ ಸುಧಾರಿತ ರಾಷ್ಟ್ರಗಳಷ್ಟು ಕಟ್ಟುನಿಟ್ಟಾಗಿ ಇರಬೇಕಾಗಿಲ್ಲ ಎಂಬ ಧೋರಣೆಯೇ ಸಮರ್ಥನೀಯವಲ್ಲ; ಅಂಥ ರಾಷ್ಟ್ರಗಳಿಂದ ಬರುವ ಭೋಗವಸ್ತುಗಳ ಗುಣಮಟ್ಟ ತುಸು ಕಳಪೆ ಇದ್ದರೂ ಪರವಾಗಿಲ್ಲ ಎಂಬ ಧೋರಣೆಯನ್ನು ತಳೆಯಲು ಸಾಧ್ಯವೇ? ಅದು ಹೇಗೂ ಇರಲಿ. ಕರ್ನಾಟಕದ 14 ಗ್ರಾಮಗಳಲ್ಲಿ (ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲೇ ಹೆಚ್ಚು) ಯುರೇನಿಯಂ ಪ್ರಮಾಣ 1,000 ಮೈಕ್ರೊಗ್ರಾಮ್‌ಗಿಂತ ಹೆಚ್ಚಿದೆ ಎಂದು ಬೆಂಗಳೂರಿನ ವಿಜ್ಞಾನಿಗಳು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಇದು ಆತಂಕಕಾರಿ ಅಷ್ಟೇ ಅಲ್ಲ, ಆಘಾತಕಾರಿ. ಇದು ಗೊತ್ತಾಗಿ ಮೂರು ತಿಂಗಳುಗಳೇ ಕಳೆದಿವೆಯಾದರೂ ಚಿಕ್ಕಬಳ್ಳಾಪುರದವರೇ ಆದ ನಮ್ಮ ಆರೋಗ್ಯ ಸಚಿವ ಡಾ. ಸುಧಾಕರ್‌ ಏನಾದರೂ ಕ್ರಮ ಕೈಗೊಂಡರೇ ಅಥವಾ ಕೇಂದ್ರ ಜಲ ಸಚಿವರ ಆಗಮನಕ್ಕೆ ಕಾಯುತ್ತಿದ್ದರೇ?

ಬಿಸಿಲ ಬೇಗೆ, ಜಲಸಾಕ್ಷರತೆಯ ಅಭಾವ, ಆರೋಗ್ಯ ಸೇವೆಗಳ ಅಲಭ್ಯತೆ ಮುಂತಾದ ಸಂಕಟಗಳಲ್ಲಿ ನಲುಗುತ್ತಿರುವ ಗ್ರಾಮೀಣ ಜನರ ಪಾಲಿಗೆ ಒಂದೆಡೆ ಅಂತರ್ಜಲ ಪಾತಾಳಕ್ಕೆ ಇಳಿಯುತ್ತಿದೆ. ಇನ್ನೊಂದೆಡೆ ಮೇಲೆತ್ತಿದ ನೀರೂ ಅಪಾಯಕಾರಿ ಆಗಿರುವಾಗ ವಿಧಿಯನ್ನು ಹಳಿಯುತ್ತ ಕೂರಲಾಗದು. ಯುರೇನಿಯಂ ಎಂಬುದು ನೈಸರ್ಗಿಕ ಮಾಲಿನ್ಯ ನಿಜ. ಆದರೆ ಕೆರೆಕಟ್ಟೆಗಳ ಕಡೆಗಣನೆ, ನೀರಿನ ದುಂದುಬಳಕೆ, ಮರಳು ಗಣಿಗಾರಿಕೆ, ನೆಡುತೋಪು ಮುಂತಾದ ಕಾರಣಗಳಿಂದಾಗಿ ನಿಸರ್ಗವನ್ನು ಬದಲಿಸಿದ್ದರಿಂದ ಅದು ನಾವೇ ಬರಮಾಡಿಕೊಂಡ ಆಪತ್ತು ಎಂಬುದನ್ನು ಮರೆಯುವಂತಿಲ್ಲ. ಪಾತಾಳದಿಂದೆದ್ದು ಬಂದ ಸಂಕಟದ ನಿವಾರಣೆಗೆ ಆಕಾಶದಲ್ಲೇ ಅತಿ ಸುಲಭದ ಉಪಾಯಗಳೂ ಇವೆ. ಕೋಲಾರ ಮತ್ತು ಆಸುಪಾಸಿನ ಜಿಲ್ಲೆಗಳಲ್ಲಿ ಸರಾಸರಿ 800 ಮಿಲಿಮೀಟರಿನಷ್ಟು ಮಳೆ ಬೀಳುತ್ತದೆ. ಅದನ್ನು ಹಿಡಿದಿಟ್ಟುಕೊಂಡರೆ ಪ್ರತೀ ಹೆಕ್ಟೇರಿಗೆ 80 ಲಕ್ಷ ಲೀಟರ್‌ ನೀರು ಲಭಿಸುತ್ತದೆ. ಅದನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಕುಡಿಯಲು ಪೂರೈಸಿದರೆ ಅದರಲ್ಲಿ ನೀರಿನ ಗಡಸುತನ, ಫ್ಲೋರೈಡ್‌, ಆರ್ಸೆನಿಕ್‌, ಯುರೇನಿಯಂ ಯಾವುದೂ ಇರಲಾರದು. ಐವತ್ತು ವರ್ಷಗಳಿಂದ ಗೊತ್ತಿರುವ ಈ ಸರಳ ವಿಧಾನವನ್ನು ಒಂದಾದರೂ ತಾಲ್ಲೂಕಿನ ಒಂದಾದರೂ ಗ್ರಾಮ ಹಾಗಿರಲಿ, ಸರ್ಕಾರಿ ಕಚೇರಿಯಲ್ಲಾದರೂ ಮಾದರಿ ಮಟ್ಟದಲ್ಲಿ ಕಾರ್ಯಗತ ಮಾಡಿದ ಉದಾಹರಣೆ ಇದೆಯೇ? ಮಾತೆತ್ತಿದರೆ ರಾಜಕಾರಣಿಗಳು ಎತ್ತಿನಹೊಳೆ, ಮೇಕೆದಾಟು, ಲಿಂಗನಮಕ್ಕಿಯಿಂದ ನೀರು ತರುತ್ತೇವೆಂದು ಹೇಳುತ್ತಾರೆ. ಚುನಾವಣೆ ಬಂದಾಗಲೆಲ್ಲ ಸಾವಿರಾರು ಕೋಟಿ ಅಂದಾಜುವೆಚ್ಚದ ಅಂಥ ಕನಸಿನ ಬಾಜಾಬಜಂತ್ರಿ ನಡೆಯುತ್ತದೆ.

ನೀರಿನಲ್ಲಿ ಯುರೇನಿಯಂ ಪ್ರಮಾಣ ಜಾಸ್ತಿ ಇರುವ ಪಂಜಾಬ್‌ನಲ್ಲಿ ರೋಗಿಗಳಿಗಾಗಿ ‘ಕ್ಯಾನ್ಸರ್‌ ಟ್ರೇನ್‌’ ಓಡುತ್ತಿದೆ ಎಂಬುದು ನೆನಪಾದರೆ ನಾಳೆ ನಮ್ಮಲ್ಲೂ ಕ್ಯಾನ್ಸರ್‌ ಟ್ರೇನ್‌, ಕಿಡ್ನಿ ಟ್ರೇನ್‌ಗಳನ್ನು ಆರಂಭಿಸುತ್ತೇವೆಂದು ಕೂಡ ಘೋಷಿಸಬಹುದು. ಅಂಥ ಬಿಸಿಲ್ಗುದುರೆಗಳ ಬದಲು, ಸುಲಭ, ತ್ವರಿತ ಜಾರಿಗೆ ಬರಬಹುದಾದ ಮಳೆನೀರು ಸಂಗ್ರಹದ ಸಣ್ಣಸಣ್ಣ ಕ್ರಮಗಳನ್ನು ಕೈಗೊಂಡರೆ ಸಮಾಜವನ್ನು ಕಾಡುವ ಅದೆಷ್ಟೋ ರೋಗಗಳಿಗೆ ಅದು ಮದ್ದಾಗಬಹುದು. ಕೋಲಾರವೇ ಮಾದರಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT