ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಸಿಬ್ಬಂದಿ ಅತ್ಯಗತ್ಯ

Last Updated 14 ಫೆಬ್ರುವರಿ 2023, 2:28 IST
ಅಕ್ಷರ ಗಾತ್ರ

ಬ್ಯಾಂಕ್‌ಗಳು ಸ್ಥಳೀಯ ಭಾಷೆಯಲ್ಲಿ ಮಾತನಾಡಬಲ್ಲ ಸಿಬ್ಬಂದಿಯನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೇಲಿಂದ ಮೇಲೆ ಹೇಳುತ್ತಲೇ ಬಂದಿದ್ದಾರೆ. ಆದರೆ, ಕರ್ನಾಟಕದ ಬ್ಯಾಂಕ್‌ಗಳ ಸ್ಥಿತಿ ಇದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮಾತ್ರವಲ್ಲದೆ ಖಾಸಗಿ ವಲಯದ ಬ್ಯಾಂಕ್‌ಗಳು ಕೂಡ ಕನ್ನಡ ಮಾತನಾಡಬಲ್ಲ ಸಿಬ್ಬಂದಿ ನೇಮಕಕ್ಕೆ ಆಸಕ್ತಿಯನ್ನು ತೋರುತ್ತಿಲ್ಲ. ಬ್ಯಾಂಕ್‌ನಲ್ಲಿ ಮಾಹಿತಿ ಭರ್ತಿಗೆ ಕೊಡುವ ಚಲನ್‌ ಮತ್ತು ಫಾರ್ಮ್‌ಗಳನ್ನು ಕನ್ನಡದಲ್ಲಿ ಮುದ್ರಿಸುವಲ್ಲಿಯೂ ಅವುಗಳು ಹಿಂದೆ ಬಿದ್ದಿವೆ. ಹೀಗಾಗಿ ಗ್ರಾಹಕರಿಗೆ, ಅದರಲ್ಲೂ ಗ್ರಾಮೀಣ ಭಾಗಗಳ ಗ್ರಾಹಕರಿಗೆ, ಬ್ಯಾಂಕ್‌ ಜತೆಗಿನ ಸಂವಹನ ಸುಲಭ ಸಾಧ್ಯವಾಗದೆ, ಸಾಲ ಇಲ್ಲವೆ ಬ್ಯಾಂಕ್‌ನ ಸೇವೆ ಪಡೆಯುವುದೇ ಕಷ್ಟವಾಗಿದೆ. ಆದ್ದರಿಂದಲೇ ರಾಜ್ಯ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಮತ್ತು ಬ್ಯಾಂಕ್‌ ನೀಡುವ ಸಾಲದ ಪ್ರಮಾಣದ ಅನುಪಾತ ಕರ್ನಾಟಕದಲ್ಲಿ ತುಂಬಾ ಕಡಿಮೆ ಇದೆ. ದೇಶದಲ್ಲಿ ಒಟ್ಟಾರೆ ಈ ಅನುಪಾತದ ಸರಾಸರಿ ಶೇ 56.7ರಷ್ಟಿದ್ದರೆ, ರಾಜ್ಯದಲ್ಲಿ ಅದರ ಪ್ರಮಾಣ ಶೇ 40.5ರಷ್ಟು ಮಾತ್ರ ಇದೆ. ಕರ್ನಾಟಕವು ಈ ಲೆಕ್ಕಾಚಾರದಲ್ಲಿ ತನ್ನ ಅಕ್ಕಪಕ್ಕದ ತೆಲಂಗಾಣ, ತಮಿಳುನಾಡು ರಾಜ್ಯಗಳಿಗಿಂತಲೂ ತುಂಬಾ ಹಿಂದೆ ಬಿದ್ದಿದೆ.

ಕೆಲವು ದಿನಗಳ ಹಿಂದೆ ನಡೆದಿದ್ದ ಭಾರತೀಯ ಬ್ಯಾಂಕ್‌ಗಳ 75ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್‌, ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿಯನ್ನು ಒಳಗೊಳ್ಳುವ ಅಗತ್ಯದ ಕುರಿತು ಬಲವಾಗಿ ಪ್ರತಿಪಾದಿಸಿದ್ದರು. ಸ್ಥಳೀಯ ಭಾಷೆ ಗೊತ್ತಿರದ ಸಿಬ್ಬಂದಿಯನ್ನು ಗ್ರಾಹಕರೊಂದಿಗೆ ನೇರವಾಗಿ ಸಂವಹನ ನಡೆಸುವ ಹುದ್ದೆಗಳಿಗೆ ನಿಯೋಜಿಸಲೇಬಾರದು ಎಂದೂ ಒತ್ತಾಯಿಸಿದ್ದರು. ‘ಸ್ಥಳೀಯ ಭಾಷೆ ಬಾರದ ಸಿಬ್ಬಂದಿಯನ್ನು ಶಾಖಾಮಟ್ಟದಲ್ಲಿ ಇಟ್ಟುಕೊಂಡು, ‘ಏನು ಸ್ವಾಮಿ, ನಿಮಗೆ ಹಿಂದಿ ಬರುವುದಿಲ್ಲವೇ? ಹಾಗಾದರೆ ನೀವು ಭಾರತೀಯರಲ್ಲ’ ಎನ್ನುವಂತಹ ದೇಶಭಕ್ತಿ ಮನೋಭಾವ ಪ್ರದರ್ಶಿಸುವುದು ಒಳ್ಳೆಯ ವ್ಯವಹಾರದ ಲಕ್ಷಣವಲ್ಲ’ ಎಂದೂ ಹೇಳಿದ್ದರು. ಬ್ಯಾಂಕ್‌ಗಳು ಕ್ರಿಯಾಶೀಲವಾಗಿರಬೇಕು. ತಮ್ಮೊಡನೆ ವ್ಯವಹಾರ ನಡೆಸುವ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಸದಾ ಸಿದ್ಧರಿರಬೇಕು ಎಂಬ ಸಲಹೆಯನ್ನು ಕೂಡ ಅವರು ನೀಡಿದ್ದರು. ಆದರೆ, ರಾಜ್ಯದ ಹಲವು ಭಾಗಗಳಲ್ಲಿ ಬ್ಯಾಂಕ್‌ಗಳು ಮತ್ತು ಗ್ರಾಹಕರ ಮಧ್ಯೆ ಸರಾಗ ಸಂವಹನವೇ ದೊಡ್ಡ ಅಡೆತಡೆ ಎನ್ನುವುದು ಎದ್ದು ಕಾಣುತ್ತಿರುವ ಸಂಗತಿ. ಇದರಿಂದ ಆಯಾ ಭಾಗಗಳ ಬೆಳೆ ಋತುಗಳು ಮತ್ತು ಅಲ್ಲಿನ ಕೃಷಿಕರ ಅಗತ್ಯಗಳನ್ನು ಗ್ರಹಿಸುವಲ್ಲಿ ಬ್ಯಾಂಕ್‌ ಸಿಬ್ಬಂದಿ ಸೋತಿದ್ದಾರೆ. ಅದರ ಪರಿಣಾಮ ಕೃಷಿಸಾಲ ನೀಡುವಲ್ಲಿ ಆಗಿರುವ ಹಿನ್ನಡೆಯಲ್ಲಿ ಪ್ರತಿಫಲನವಾಗಿದೆ. ಅಂತಿಮವಾಗಿ, ಬ್ಯಾಂಕ್‌ಗಳ ಒಟ್ಟಾರೆ ಸೇವಾಮಟ್ಟ ಮತ್ತು ಲಾಭ ಗಳಿಕೆಯ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ.

ಹಿಂದಿಯಲ್ಲಿಯೇ ಸಂವಹನ ನಡೆಸುವಂತೆ ಒತ್ತಾಯಿಸುವ ಬ್ಯಾಂಕ್‌ ಉದ್ಯೋಗಿಗಳು ಮತ್ತು ಕನ್ನಡ ಬಿಟ್ಟು ಬೇರೆ ಭಾಷೆ ಅರಿಯದ ಗ್ರಾಹಕರ ನಡುವೆ ಬ್ಯಾಂಕ್‌ಗಳಲ್ಲಿ ತಿಕ್ಕಾಟ ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕನ್ನಡ ಚಳವಳಿಗಾರರು ಮತ್ತು ಬ್ಯಾಂಕ್‌ ಉದ್ಯೋಗಿಗಳ ನಡುವೆಯೂ ಆಗಾಗ ವಾಗ್ವಾದಗಳು ನಡೆಯುತ್ತಲೇ ಇವೆ. ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಲು ಸೌಕರ್ಯ ಕಲ್ಪಿಸಬೇಕೆಂದು ರಾಜ್ಯ ಸರ್ಕಾರ ಸಹ ಬ್ಯಾಂಕ್‌ಗಳ ಪ್ರಾದೇಶಿಕ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಬ್ಯಾಂಕ್‌ಗಳ ಹಟಮಾರಿತನ ಧೋರಣೆ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರ್ಕಾರಕ್ಕೆ ದೂರನ್ನೂ ನೀಡಿದೆ. ಇಷ್ಟೆಲ್ಲ ಒತ್ತಾಯ, ಒತ್ತಡ ಬಂದರೂ ಬ್ಯಾಂಕ್‌ ಆಡಳಿತಗಳಿಗೆ ಮಾತ್ರ ಜಾಣಕಿವುಡು. ತಮ್ಮ ಬ್ಯಾಂಕ್‌ಗಳ ಜೀವಾಳ ಎನಿಸಿದ ಗ್ರಾಹಕರ ಅಗತ್ಯವನ್ನು ಪೂರೈಸುವುದೇ ತಮ್ಮ ಆದ್ಯತೆಯಾಗಬೇಕು ಎನ್ನುವ ಸಂಗತಿ ಅವುಗಳ ವ್ಯವಸ್ಥಾಪಕ ಮಂಡಳಿಗಳಿಗೆ ಹೊಳೆಯದಿರುವುದು ಆಶ್ಚರ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪದೇ ಪದೇ ಸೂಚನೆ ನೀಡಿದರೂ ಅದರ ಪಾಲನೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿಗಳು ಸ್ಪಷ್ಟವಾಗಿ ವಿಫಲವಾಗಿವೆ. ಅವುಗಳು ಸರಿದಾರಿಗೆ ಬರಲು ಸರ್ಕಾರ ಚಾಟಿ ಬೀಸುವುದೊಂದೇ ದಾರಿ ಎನ್ನುವಂತೆ ಭಾಸವಾಗುತ್ತಿದೆ. ಅದಕ್ಕೆ ಅವಕಾಶ ಕೊಡದೆ ತಮ್ಮ ಶಾಖೆಗಳಲ್ಲಿ ಪ್ರಾದೇಶಿಕ ಭಾಷೆಯಲ್ಲೇ ವ್ಯವಹಾರ ನಡೆಯುವಂತೆ ನೋಡಿಕೊಳ್ಳಲು ಎಲ್ಲ ಬ್ಯಾಂಕ್‌ಗಳಿಗೆ, ವಿಶೇಷವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT