ಭಾರತದ ಚುನಾವಣಾ ಆಯೋಗ (ಇಸಿಐ) ವಿನ್ಯಾಸಗೊಳಿಸಿ ಹಲವೆಡೆ ಜಾರಿಗೊಳಿಸಿರುವ ವಿವಾದಾತ್ಮಕ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿರಾಶಾದಾಯಕವಾದುದು. ತಾತ್ತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ ಪ್ರಜಾಸತ್ತಾತ್ಮಕವಲ್ಲದ ಮತ್ತು ‘ಹೊರಗಿಡುವ’ ಧೋರಣೆಯ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ತೀರ್ಪು ಮಾನ್ಯಗೊಳಿಸಿದೆ; ಆಯೋಗದ ಬಹುತೇಕ ನಿಲುವು ಮತ್ತು ವಾದಗಳನ್ನು ಸಮರ್ಥಿಸಿದೆ. ಈ ತೀರ್ಪನ್ನು ತಾನು ಜಾರಿಗೊಳಿಸಿದ ವಿವಾದಾತ್ಮಕ ಪ್ರಕ್ರಿಯೆಗಳಿಗೆ ದೊರೆತಿರುವ ಸಮರ್ಥನೆ ಎಂದು ಆಯೋಗ ಪರಿಗಣಿಸುವ ಸಾಧ್ಯತೆಯಿದೆ. ದೋಷಪೂರಿತ ಮತ್ತು ಸಮಸ್ಯಾತ್ಮಕ ಎಂದು ವ್ಯಾಪಕವಾಗಿ ಪರಿಗಣಿಸಲಾದ ಪ್ರಕ್ರಿಯೆಗೆ ಸಮ್ಮತಿಯ ಮುದ್ರೆ ಒತ್ತಿರುವ ನ್ಯಾಯಾಲಯವು, ಈ ಹಿಂದೆ ಹಲವು ಪ್ರಮುಖ ಪ್ರಕರಣಗಳಲ್ಲಿಯೂ ಇದೇ ರೀತಿ ತೀರ್ಪು ನೀಡಿತ್ತು. ಇದು ಅಚ್ಚರಿಯ ಬೆಳವಣಿಗೆಯೇನಲ್ಲ. ಏಕೆಂದರೆ, ವಿಚಾರಣೆಯ ಸಂದರ್ಭದಲ್ಲಿಯೇ ಎಸ್ಐಆರ್ನ ಮಾನ್ಯತೆಯನ್ನು ಪ್ರಶ್ನಿಸುವ ಮನೋಭಾವವನ್ನು ಕೋರ್ಟ್ ವ್ಯಕ್ತಪಡಿಸಲಿಲ್ಲ. ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳು ದೊರೆಯದೆ ಹೋದಾಗ ಹಾಗೂ ಸಲಹೆಗಳನ್ನು ಸಮರ್ಪಕವಾಗಿ ಜಾರಿಗೊಳಿಸದೆ ಇದ್ದಾಗಲೂ ಕೋರ್ಟ್ ಅದನ್ನು ತಿರಸ್ಕರಿಸಲಿಲ್ಲ. ಇದರ ಬದಲಾಗಿ, ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗದ ಅಧಿಕಾರಿಗಳನ್ನು ನೇಮಿಸುವ ಮತ್ತು ಮೇಲ್ಮನವಿ ನ್ಯಾಯಮಂಡಳಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿತು. ಇದೆಲ್ಲ ಗೊಂದಲದ ಪ್ರಕ್ರಿಯೆಗೆ ನ್ಯಾಯಾಲಯವೇ ಮಾರ್ಗದರ್ಶನ ಮಾಡಿದ್ದರಿಂದ, ಪ್ರಸ್ತುತ ಅದನ್ನು ತಪ್ಪೆಂದು ನಿರ್ಣಯಿಸುತ್ತದೆಂದು ನಿರೀಕ್ಷಿಸುವುದೂ ಸರಿಯಲ್ಲ.

ಎಸ್ಐಆರ್ ಪ್ರಕ್ರಿಯೆಯನ್ನು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೊಳ್ಳಲಾಗಿದ್ದು, ಕೆಲವು ಕಡೆಗಳಲ್ಲಿ ಚುನಾವಣೆಯೂ ನಡೆದಿದೆ. ಸುಮಾರು 5.9 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ದೇಶದ ಉಳಿದ ಭಾಗಗಳಲ್ಲೂ ಎಸ್ಐಆರ್ ನಡೆಸಲು ಇಸಿಐ ಉತ್ಸುಕ ವಾಗಿದೆ. ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಅಧಿಕಾರವಿದೆ; ಆಯೋಗ ಅನುಸರಿಸಿರುವ ವಿಧಾನವು 1950ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಹಾಗೂ 1960ರ ಮತದಾರರ ನೋಂದಣಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಮತದಾನದ ಹಕ್ಕು ಸಂಪೂರ್ಣವಾಗಿ ನಿರ್ಬಂಧರಹಿತ ಅಲ್ಲ ಹಾಗೂ ಅದನ್ನು ಕಾನೂನು ನಿಯಂತ್ರಣಗಳಿಗೆ ಒಳಪಡಿಸಬಹುದು ಎನ್ನುವ ನ್ಯಾಯಾಲಯದ ಎರಡು ನಿರ್ಣಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಚುನಾವಣಾ ಉದ್ದೇಶಗಳಿಗಾಗಿ, ಪೌರತ್ವಕ್ಕೆ ಸಂಬಂಧಿಸಿದಂತೆ ಸೀಮಿತ ಪರಿಶೀಲನೆಯ ಅಧಿಕಾರ ಆಯೋಗಕ್ಕಿದೆ ಎಂದೂ ಕೋರ್ಟ್ ಹೇಳಿದೆ. ಆದರೆ, ಈ ‘ಸೀಮಿತ’ ಎನ್ನುವ ಪದವು ಮತದಾರರ ಪಟ್ಟಿಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಯೋಗದ ನಿರ್ಧಾರಗಳನ್ನು ಯಾವುದೇ ರೀತಿಯಲ್ಲಿ ನಿಯಂತ್ರಿಸುವುದಿಲ್ಲ. ಪೌರತ್ವದ ಕುರಿತ ವಿವಾದಗಳ ಅಂತಿಮ ನಿರ್ಣಯವನ್ನು ಗೃಹ ವ್ಯವಹಾರಗಳ ಸಚಿವಾಲಯ ಕೈಗೊಳ್ಳುತ್ತದೆ ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಸಂದರ್ಭದಲ್ಲಿ, ಆಯೋಗದ ನಿರ್ಧಾರವನ್ನು ಸಂಬಂಧಿಸಿದವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದೂ ಹೇಳಿದೆ. ಆದರೆ, ಪೌರತ್ವ ಅಥವಾ ಇತರೆ ಕಾರಣಗಳಿಂದ ಮತದಾರರ ಪಟ್ಟಿಯಿಂದ ಅರ್ಧಚಂದ್ರ ಪ್ರಯೋಗಕ್ಕೊಳಗಾದ ಎಷ್ಟು ಜನ ಕೋರ್ಟ್ ಮೊರೆ ಹೋಗಲು ಸಾಧ್ಯವಿದೆ? ದೊಡ್ಡ ಸಂಖ್ಯೆಯ ಪ್ರಕರಣಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ನಿರ್ವಹಿಸುವ ವ್ಯವಸ್ಥೆ ಗೃಹ ವ್ಯವಹಾರಗಳ ಸಚಿವಾಲಯದಲ್ಲಿಯೇ ಇಲ್ಲ ಎಂದೂ ಕೋರ್ಟ್ ಹೇಳಿದೆ.

ಹೀಗೆ ವಿರೋಧಾಭಾಸದ ತತ್ತ್ವಗಳನ್ನು ಮುಂದಿರಿಸುವ ಮೂಲಕ, ಮತದಾರರು ಅಥವಾ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಅಧಿಕಾರವನ್ನು ಇಸಿಐಗೆ ಕೋರ್ಟ್ ನೀಡಿದೆ. ಪ್ರಜೆಗಳ ಕಾಳಜಿಯೇ ಮುಖ್ಯವಾಗಿ ಇರಬೇಕಾದ ಪ್ರಕ್ರಿಯೆಯು ಈಗ ಚುನಾವಣಾ ಆಯೋಗದ ನಿಯಂತ್ರಣಕ್ಕೆ ಒಳಪಟ್ಟಂತಾಗಿದೆ.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಎನ್ನುವ ಸಂವಿಧಾನಾತ್ಮಕ ಗುರಿಯೊಂದಿಗೆ ಎಸ್ಐಆರ್ನ ಉದ್ದೇಶ ಮತ್ತು ವಿನ್ಯಾಸವು ನೇರ ಸಂಬಂಧ ಹೊಂದಿರುವುದರ ಬಗ್ಗೆ ತನಗೆ ಮನವರಿಕೆಯಾಗಿದೆ ಎಂದು ಕೋರ್ಟ್ ಹೇಳಿರುವುದನ್ನು ಗಮನಿಸಿದರೆ, ಇದು ಪ್ರಕ್ರಿಯೆಯ ಆಯ್ದ ಅಂಶಗಳನ್ನಷ್ಟೇ ಗಮನಿಸಿರುವ ತೀರ್ಪು ಎಂದು ಭಾವಿಸಬಹುದಾಗಿದೆ. ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಪ್ರಕ್ರಿಯೆಯೊಂದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಉತ್ತೇಜನ ನೀಡುತ್ತದೆ ಎನ್ನುವುದನ್ನು ಊಹಿಸಿಕೊಳ್ಳುವುದೂ ಕಷ್ಟ.

ಇಸಿಐ ಗುರ್ತಿಸಿರುವ ಸಮಸ್ಯೆಯ ಪ್ರಮಾಣವು ವ್ಯವಸ್ಥೆಯಲ್ಲಿನ ದೀರ್ಘಕಾಲದ ಲೋಪಗಳಿಂದ ಉಂಟಾಗಿರುವುದನ್ನು ದಾಖಲೆಗಳು ಸೂಚಿಸುತ್ತಿವೆ; ಸಣ್ಣ ಪುಟ್ಟ ಪರಿಹಾರಗಳಿಗೆ ಬಗ್ಗದ ಈ ಸಮಸ್ಯೆಯನ್ನು ಪರಿಹರಿಸಲು ಎಸ್ಐಆರ್ ಅಗತ್ಯವಿತ್ತು ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ. ಕೋರ್ಟ್ನ ಈ ಎಲ್ಲ ಸಮರ್ಥನೆಯ ನಂತರವೂ ಪ್ರಶ್ನೆಗಳು ಉಳಿಯುತ್ತವೆ. ಬಹಳಷ್ಟು ರಾಜ್ಯಗಳಲ್ಲಿ ಚುನಾವಣೆ ಸನಿಹವಿದ್ದಾಗಲೇ ಈ ಪರಿಷ್ಕರಣೆಯನ್ನು ಏಕೆ ಕೈಗೊಳ್ಳಲಾಯಿತು? ಮತದಾರರ ಪಟ್ಟಿಗಳಿಂದ ದೊಡ್ಡ ಸಂಖ್ಯೆಯ ಮತದಾರರನ್ನು ಹೇಗೆ ಹೊರಗಿಡಲಾಯಿತು ಹಾಗೂ ತಿದ್ದುಪಡಿಗಳನ್ನು ಸಕಾಲಕ್ಕೆ ಮಾಡಲು ಏಕೆ ಸಾಧ್ಯವಾಗಲಿಲ್ಲ?

ಆರಂಭಿಕ ಹಂತದಲ್ಲಿ ಎಸ್ಐಆರ್ ಸಕಾರಣವಾಗಿಯೇ ಆತಂಕ ಉಂಟುಮಾಡಿದ್ದರೂ, ನ್ಯಾಯಾಲಯದ ನಿರಂತರ ಹಸ್ತಕ್ಷೇಪದ ಮೂಲಕ ಪ್ರಕ್ರಿಯೆಯಲ್ಲಿ ಸುರಕ್ಷತಾ ಕ್ರಮಗಳನ್ನು ಸೇರಿಸಲಾಯಿತು ಎಂದು ಕೋರ್ಟ್ ಹೇಳಿದೆ. ಆದರೆ, ಅಗತ್ಯ ದಾಖಲೆಗಳ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಕೋರ್ಟ್ ಆಯೋಗಕ್ಕೇ ನೀಡಿರುವುದನ್ನು ಗಮನಿಸಬೇಕು. ರಾಜ್ಯದಿಂದ ರಾಜ್ಯಕ್ಕೆ ಮುಂದುವರಿದಿರುವ ಎಸ್ಐಆರ್ ಪ್ರಕ್ರಿಯೆಯು ದೊಡ್ಡ ಸಂಖ್ಯೆಯ ಜನರ ಬಳಿ, ವಿಶೇಷವಾಗಿ ಬಡಜನರ ಬಳಿ ಅವರ ಗುರುತು ಮತ್ತು
ವಾಸಸ್ಥಳದ ವಿಳಾಸವನ್ನು ದೃಢೀಕರಿಸುವ ಪುರಾವೆಗಳು ಇಲ್ಲದಿರುವುದನ್ನು ಬಹಿರಂಗ ಗೊಳಿಸಿದೆ. ಅಂದರೆ, ಕೋರ್ಟ್ ಉಲ್ಲೇಖಿಸಿರುವ ಸುರಕ್ಷತಾ ಕ್ರಮಗಳು ವಾಸ್ತವದಲ್ಲಿ ಅನೇಕರ ನೆರವಿಗೆ ಬರುವಂತಿಲ್ಲ. ಎಸ್ಐಆರ್ ಪ್ರಕ್ರಿಯೆ ನಂತರ ಸಲ್ಲಿಸಲಾಗಿರುವ ದಾಖಲೆಗಳಲ್ಲಿ, ಸಂವಿಧಾನಾತ್ಮಕ ದೋಷವಿದೆ ಎನ್ನುವುದನ್ನು ತೋರಿಸುವಷ್ಟು ವ್ಯಾಪಕ ಪ್ರಮಾಣದಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವಿಕೆ ಕಂಡುಬಂದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ, ಈ ಹೇಳಿಕೆಯನ್ನು ತಪ್ಪೆಂದು ತೋರಿಸಲು ಕನಿಷ್ಠ 27 ಲಕ್ಷ ಕಾರಣ ಗಳಾದರೂ ಇವೆ. ಇಸಿಐ ಪರಿಣತಿ ಹೊಂದಿರುವ ಚಟುವಟಿಕೆಗಳ ಅನುಷ್ಠಾನದಲ್ಲಿ ತಾನು ತನ್ನದೇ ತೀರ್ಪು ನೀಡುವುದು ಸಾಧ್ಯವಿಲ್ಲ ಎಂದೂ ಕೋರ್ಟ್ ಹೇಳಿದೆ. ಆದರೆ, ಕೋರ್ಟ್ ಮುಂದಿದ್ದ ಪ್ರಶ್ನೆಯು, ಎಸ್ಐಆರ್ ಪ್ರಕ್ರಿಯೆಯಲ್ಲಿ ಆಯೋಗವು ತನ್ನ ಪರಿಣತಿ ಮತ್ತು ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಬಳಸಲಾಗಿದೆಯೇ ಎನ್ನುವುದಾಗಿತ್ತು. ಸಾಂಸ್ಥಿಕ ಪರಿಣತಿ ಹೊಂದಿರುವ ಕಾರಣಕ್ಕಾಗಿ ಇಸಿಐ ಕಾರ್ಯಾಚರಣೆಯನ್ನು ಪ್ರಶ್ನಿಸುವುದು ಸಾಧ್ಯವಿಲ್ಲ; ಹಾಗಾಗಿ, ಆಯೋಗದ ಕ್ರಮಗಳು ಸರಿಯಾಗಿವೆ ಎನ್ನುವ ಅರ್ಥವನ್ನು ಕೋರ್ಟ್ ತೀರ್ಪು ನೀಡುವಂತಿದೆ.

ಸುಪ್ರೀಂ ಕೋರ್ಟ್ ತೀರ್ಪು ಆಯೋಗಕ್ಕೆ ಮತ್ತಷ್ಟು ಶಕ್ತಿತುಂಬಿದೆ. ಮುಂದಿನ ದಿನಗಳಲ್ಲಿ ಎಸ್ಐಆರ್ ನಡೆಯಲಿರುವ ರಾಜ್ಯಗಳಲ್ಲಿ ಆಯೋಗದ ವಿವಾದಾತ್ಮಕ ಕಾರ್ಯಾಚರಣೆ ಇನ್ನಷ್ಟು ತುರುಸಿನಿಂದ ನಡೆಯಲಿದೆ. ತನ್ನ ಮೇಲಿನ ಎಲ್ಲ ದೂರು ಹಾಗೂ ಟೀಕೆಗಳನ್ನು ಆಧಾರರಹಿತ ಎಂದು ತಳ್ಳಿಹಾಕುವುದು ಆಯೋಗಕ್ಕೆ ಸಾಧ್ಯವಾಗಲಿದೆ. ನುಸುಳುಕೋರರು ಹಾಗೂ ಅಕ್ರಮ ವಲಸಿಗರಿಂದ ದೇಶವನ್ನು ರಕ್ಷಿಸುವ ಕಾನೂನುಬದ್ಧ ಮತ್ತು ನ್ಯಾಯಸಮ್ಮತ ಕ್ರಮ ಇದೆಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಎಸ್ಐಆರ್ ಬೆಂಬಲಕ್ಕೆ ನಿಲ್ಲಲಿವೆ. ಆದರೆ, ಎಸ್ಐಆರ್ ನಡೆದಿರುವ ಯಾವ ರಾಜ್ಯದಲ್ಲಿಯೂ ಇಲ್ಲಿಯವರೆಗೆ ಅಕ್ರಮ ವಲಸಿಗರನ್ನು ದೊಡ್ಡ ಪ್ರಮಾಣದಲ್ಲಿ ಗುರ್ತಿಸಲಾಗಿಲ್ಲ. ಮತದಾರರ ಪಟ್ಟಿಯ ಪರಿಷ್ಕರಣೆಗೆ ಯಾರ ವಿರೋಧವೂ ಇಲ್ಲ. ಪ್ರಶ್ನೆಗಳಿರುವುದು ಆ ಪ್ರಕ್ರಿಯೆಯ ಸ್ವರೂಪ, ಅದರ ಉದ್ದೇಶ ಹಾಗೂ ನಡೆಯುತ್ತಿರುವ ಸಮಯದ ಬಗ್ಗೆ. ತತ್ತ್ವದ ಹೆಸರಿನಲ್ಲಿ ಸಂಪೂರ್ಣ ದೋಷಯುಕ್ತ ಕಾರ್ಯಾಚರಣೆಯನ್ನು ಸಮರ್ಥಿಸುವ ಮೂಲಕ ದೇಶದ ಚುನಾವಣಾ ಪ್ರಜಾಸತ್ತೆಗೆ ಸೇವೆ ಸಲ್ಲಿಸುವ ಅವಕಾಶದಿಂದ ಸುಪ್ರೀಂ ಕೋರ್ಟ್ ವಿಮುಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.