ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಆತ್ಮಹತ್ಯೆಯ ಆರ್ಥಿಕ ಹೊರೆ: ಹೊಸ ಆಯಾಮ ವಿವರಿಸಿದ ವರದಿ

Published : 17 ಸೆಪ್ಟೆಂಬರ್ 2024, 22:43 IST
Last Updated : 17 ಸೆಪ್ಟೆಂಬರ್ 2024, 22:43 IST
ಫಾಲೋ ಮಾಡಿ
Comments

ಆತ್ಮಹತ್ಯೆಗಳಿಂದ ಆಗುವ ಆರ್ಥಿಕ ಹೊರೆಯು ತೀರಾ ಕಳವಳಕಾರಿ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 5ರಷ್ಟು ಪಾಲನ್ನು ಮಾತ್ರ ಹೊಂದಿರುವ ಕರ್ನಾಟಕವು ದೇಶದಲ್ಲಿ ಆತ್ಮಹತ್ಯೆಗಳಿಂದ ಉಂಟಾಗುವ ಆರ್ಥಿಕ ಹೊರೆಯಲ್ಲಿ ಐದನೆಯ ಒಂದರಷ್ಟು ಪಾಲು ಹೊಂದಿರುವುದು ಕಳವಳವನ್ನು ಇನ್ನಷ್ಟು ಹೆಚ್ಚಿಸುವ ಸಂಗತಿ. ಆತ್ಮಹತ್ಯೆ ಪ್ರಕರಣಗಳು ಸಂಬಂಧಪಟ್ಟ ವ್ಯಕ್ತಿಗಳನ್ನು, ಕುಟುಂಬಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಬಾಧಿಸುವುದಷ್ಟೇ ಅಲ್ಲ; ಅವು ದೇಶದ ಮೇಲೆ ಭಾರಿ ಪ್ರಮಾಣದ ಆರ್ಥಿಕ ಹೊರೆಯನ್ನು ಹೊರಿಸುತ್ತವೆ. ಅತ್ಯಂತ ಹೆಚ್ಚು ಉತ್ಪಾದಕತೆ ಹೊಂದಿರುವ ವಯೋಮಾನದವರು ಎಂದು ಪರಿಗಣಿತವಾಗಿರುವ 20ರಿಂದ 34 ವರ್ಷ ವಯಸ್ಸಿನವರು, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆತ್ಮಹತ್ಯೆಗಳಿಂದ ದೇಶದ ಮೇಲೆ ಆಗುವ ಆರ್ಥಿಕ ಹೊರೆಯಲ್ಲಿ ಈ ವರ್ಗದವರ ಆತ್ಮಹತ್ಯೆಯಿಂದ ಆಗುವ ಹೊರೆಯ ಪ್ರಮಾಣ ಶೇ 53ರಷ್ಟು. ಆತ್ಮಹತ್ಯೆಯಿಂದ ಉಂಟಾಗುವ ಆರ್ಥಿಕ ಹೊರೆಯಲ್ಲಿ ಕರ್ನಾಟಕದ ಪಾಲು ₹2.33 ಲಕ್ಷ ಕೋಟಿ. ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿನ ಆತ್ಮಹತ್ಯೆ ಪ್ರಕರಣಗಳು, ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳಿಂದ ಉಂಟಾಗುವ ಆರ್ಥಿಕ ಹೊರೆಯಲ್ಲಿ ಶೇ 45ರಷ್ಟು ಪಾಲು ಹೊಂದಿವೆ. ಇದು ದೇಶದ ಆರೋಗ್ಯ ಬಜೆಟ್‌ನ ಗಾತ್ರಕ್ಕಿಂತಲೂ ದೊಡ್ಡದು. ದೇಶದಾದ್ಯಂತ ನಡೆದಿರುವ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ, ದಿ ಲ್ಯಾನ್ಸೆಟ್ ನಿಯತ
ಕಾಲಿಕವು ಪ್ರಕಟಿಸಿರುವ ವರದಿಯಲ್ಲಿ ಈ ವಿವರಗಳು ಇವೆ. ಆತ್ಮಹತ್ಯೆಯಿಂದ ಉಂಟಾಗುವ ಆರ್ಥಿಕ ಹೊರೆಯ ಬಗ್ಗೆ ಹೆಚ್ಚಿನ ಗಮನ ಹರಿದಿಲ್ಲ. ಆ ಕಡೆ ಗಮನ ಸೆಳೆಯುವ ಕೆಲಸವನ್ನು ಈ ವರದಿ ಮಾಡಿದೆ.

ಬೇರೆ ಹಲವು ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಆತ್ಮಹತ್ಯೆಗಳು ನಡೆಯುತ್ತಿವೆ ಎಂಬುದು ತಿಳಿದಿರುವ ಸಂಗತಿ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿ–ಅಂಶಗಳ ಪ್ರಕಾರ, ದೇಶದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆಗಳು ವರದಿಯಾಗುವ ಮೊದಲ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. 2021ರಲ್ಲಿ ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಶೇ 8ರಷ್ಟು ಕರ್ನಾಟಕದಲ್ಲೇ ಆಗಿವೆ. ಕಳೆದ 15 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಅಂದಾಜು 1,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿವೆ. ಮಾನಸಿಕ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. 2021ರಲ್ಲಿ ಪ್ರತಿದಿನ 36 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ; ಇದಕ್ಕೆ ಕಾರಣ ಖಿನ್ನತೆ, ವ್ಯಸನ, ಮಾನಸಿಕ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆಗಳು ಎಂದು ವರದಿಗಳು ಹೇಳುತ್ತವೆ. ಕರ್ನಾಟಕದಲ್ಲಿ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣಗಳು ಏನು ಎಂಬುದನ್ನು ಗುರುತಿಸಲು ವಿಸ್ತೃತವಾದ ಅಧ್ಯಯನ, ತನಿಖೆಯ ಅಗತ್ಯ ಇದೆ. ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತವಾದ ಕಾರ್ಯಕ್ರಮವೊಂದನ್ನು ರೂಪಿಸುವ ಅಗತ್ಯವೂ ಇದೆ. ಸರ್ಕಾರ, ಸಮುದಾಯ ಮಟ್ಟದಲ್ಲಿ ಕೆಲಸ ಮಾಡುವ ಸಂಘಟನೆಗಳು, ಆರೋಗ್ಯ ಸೇವಾ ವಲಯದ ಸಂಘಟನೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿವಿಧ ಕಂಪನಿಗಳು ಆತ್ಮಹತ್ಯೆ ತಡೆಯುವ ಕಾರ್ಯದಲ್ಲಿ ಕೈಜೋಡಿಸಬಹುದು.

ಜಗತ್ತಿನ ಆತ್ಮಹತ್ಯೆ ಪ್ರಕರಣಗಳ ರಾಜಧಾನಿ ಎಂಬ ಕೆಟ್ಟ ಹೆಸರು ಭಾರತಕ್ಕೆ ಇದೆ. ಜಾಗತಿಕವಾಗಿ ಪ್ರತಿ ಒಂದು ಲಕ್ಷ ಮಂದಿಯಲ್ಲಿ 9 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಈ ಪ್ರಮಾಣ 14ರಷ್ಟಿದೆ. ರಾಷ್ಟ್ರೀಯ ಆತ್ಮಹತ್ಯಾ ತಡೆ ಕಾರ್ಯತಂತ್ರವು 2030ರ ಸುಮಾರಿಗೆ ದೇಶದಲ್ಲಿ ಆತ್ಮಹತ್ಯೆಯ ಪ್ರಮಾಣವನ್ನು ಶೇಕಡ 10ರಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಆದರೆ, ಮಾನಸಿಕ ಆರೋಗ್ಯ ಕುರಿತು ಹೆಚ್ಚಿನ ಗಮನ ನೀಡುತ್ತಿಲ್ಲ, ಈ ವಿಚಾರಕ್ಕೆ ಬಜೆಟ್‌ನಲ್ಲಿ ನಿಗದಿ ಮಾಡುವ ಮೊತ್ತ ಕೂಡ ಬಹಳ ಕಡಿಮೆ. ಆರೋಗ್ಯ ಬಜೆಟ್‌ನ ಶೇಕಡ 1ಕ್ಕಿಂತ ಕಡಿಮೆ ಮೊತ್ತವು ಈ ಉದ್ದೇಶಕ್ಕಾಗಿ ಸಿಗುತ್ತಿದೆ. ಆತ್ಮಹತ್ಯೆಗಳಿಂದ ಆಗುವ ಆರ್ಥಿಕ ಪರಿಣಾಮದ ಕುರಿತ ಅಧ್ಯಯನ ವರದಿಯು ಸಮಸ್ಯೆಯ ಹೊಸ ಆಯಾಮಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದೆ. ವರದಿಯಲ್ಲಿ ಇರುವ ಅಂಕಿ–ಅಂಶಗಳು, ವರದಿಯು ಕಂಡುಕೊಂಡಿರುವ ಸಂಗತಿಗಳು ಆತ್ಮಹತ್ಯೆಗಳನ್ನು ತಡೆಯಲು ಹೆಚ್ಚು ಪರಿಣಾಮಕಾರಿಯಾದ ಕ್ರಿಯಾಯೋಜನೆ ರೂಪಿಸಲು ಕಾರಣವಾಗಬೇಕು. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳ ಬಗ್ಗೆ ಹೆಚ್ಚು ಪರಿಶೀಲನೆ ನಡೆಯಬೇಕು. ಬಡತನ, ನಿರುದ್ಯೋಗ ಮತ್ತು ಅವುಗಳಿಗೆ ಸಂಬಂಧಿಸಿದ ಇತರ ಸಂಗತಿಗಳನ್ನು ಪರಿಗಣಿಸಿ, ಆತ್ಮಹತ್ಯೆ ತಡೆಯುವ ಕ್ರಿಯಾಯೋಜನೆಗಳನ್ನು ಪರಿಣಾಮಕಾರಿ ಆಗಿಸಬೇಕು. ಆತ್ಮಹತ್ಯೆಗೆ ಕಾರಣವಾಗುವ ಸಂಗತಿಗಳನ್ನು ಇಲ್ಲವಾಗಿಸುವುದು ಆಪ್ತಸಮಾಲೋಚನೆ ಹಾಗೂ ಇತರ ಕ್ರಮಗಳಷ್ಟೇ ಪರಿಣಾಮಕಾರಿ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT