ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಯುದ್ಧಕಾಲದ ಶಸ್ತ್ರಾಭ್ಯಾಸ ಬೇಡ ಮಳೆಗಾಲ ಎದುರಿಸಲು ಸಿದ್ಧರಾಗಿ

Last Updated 28 ಮೇ 2020, 19:45 IST
ಅಕ್ಷರ ಗಾತ್ರ

ಮುಂಗಾರಿನ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಮುಂಗಾರುಪೂರ್ವದ ಮಳೆಯಿಂದ ಬೆಂಗಳೂರಿನಲ್ಲಿ ಈಗಾಗಲೇ ಇಬ್ಬರು ಯುವತಿಯರು ದುರ್ಮರಣಕ್ಕೂ ಈಡಾಗಿದ್ದಾರೆ. ಪ್ರತಿವರ್ಷ ಮಳೆಗಾಲ ಬಂದಿತೆಂದರೆ ಸಾಕು, ಕೊಚ್ಚೆ ತುಂಬಿಕೊಂಡು ಉಕ್ಕಿ ಹರಿಯುವ ರಾಜಕಾಲುವೆಗಳು, ಹೊಳೆಯಂತಾಗುವ ರಸ್ತೆಗಳು, ನೀರು ತುಂಬಿಕೊಳ್ಳುವ ಮನೆಗಳು, ಮರಗಳು ಉರುಳಿಬಿದ್ದು ಸಂಭವಿಸುವ ಸಾವು ನೋವುಗಳು– ಇಂಥವೇ ಸುದ್ದಿಗಳು. ರಾಜ್ಯದ ಬಹುತೇಕ ನಗರಗಳಲ್ಲಿ ಇದೇ ದುಃಸ್ಥಿತಿ. ನಗರ ಮಹಾಪೂರದ ಸನ್ನಿವೇಶಗಳು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದ್ದು, ಅನಾಹುತಗಳು ಸಂಭವಿಸುತ್ತಲೇ ಇವೆ. ಆದರೆ, ಮಳೆಯಿಂದ ಸೃಷ್ಟಿಯಾಗುತ್ತಿರುವ ಅವಾಂತರವನ್ನು ನಗರಾಡಳಿತಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಹಾಗೇನಾದರೂ ಪರಿಗಣಿಸಿದ್ದರೆ
ಅವು ಮಳೆಗಾಲವನ್ನು ಎದುರಿಸಲು ಬೇಸಿಗೆ ಅವಧಿಯಲ್ಲಿಯೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದವು. ಈ ವರ್ಷ ಹೇಳಲಿಕ್ಕೆ ಕೊರೊನಾ ಕಾರ್ಯಭಾರದ ಒತ್ತಡದ ನೆಪವಿದೆ. ಇಷ್ಟು ವರ್ಷಗಳವರೆಗೆ ಬಿಬಿಎಂಪಿಯೂ ಸೇರಿದಂತೆ ಸ್ಥಳೀಯ ಆಡಳಿತಗಳು ಮಾಡಿದ್ದು ಅಷ್ಟರಲ್ಲಿಯೇ ಇದೆ. ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ, ರಾಜಕಾಲುವೆಗಳಲ್ಲಿ ಸಂಪೂರ್ಣವಾಗಿ ಹೂಳು ತುಂಬಿದೆ. ಕೆಲವೆಡೆ ರಾಜಕಾಲುವೆಗಳನ್ನೇ ಅತಿಕ್ರಮಿಸಲಾಗಿದೆ.

ಒಳಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು, ಯಾವ ಸಂಸ್ಕರಣೆಗೂ ಒಳಗಾಗದೆ ನೇರವಾಗಿ ಮಳೆ ನೀರಿನ ಕಾಲುವೆಗಳನ್ನು ಸೇರುತ್ತಿದೆ. ಪ್ಲಾಸ್ಟಿಕ್‌, ಬಟ್ಟೆ ಮತ್ತಿತರ ತ್ಯಾಜ್ಯವು ಕಾಲುವೆಗಳಲ್ಲಿ ಸಿಲುಕಿಕೊಂಡು ‘ಕೃತಕ ಒಡ್ಡು’ಗಳನ್ನು ಸೃಷ್ಟಿಸುತ್ತಿದೆ. ಇದರಿಂದ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದ್ದು, ಮಹಾಪೂರದಂತಹ ಸನ್ನಿವೇಶಗಳು ಹೆಚ್ಚುತ್ತಲೇ ಇವೆ. ಮನಸೋಇಚ್ಛೆ ನಡೆದಿರುವ ನಗರೀಕರಣ, ವಿಪರೀತ ಕಾಂಕ್ರಿಟೀಕರಣದಿಂದ ಮಳೆನೀರನ್ನು ಭೂಮಿಯೊಳಗೆ ಇಂಗಿಸುವ ಅವಕಾಶ ಸಹ ಇಲ್ಲವಾಗಿದೆ. ರಾಜಕಾಲುವೆಗಳ ದುರಸ್ತಿ, ಮಳೆಗಾಲದ ಸಿದ್ಧತೆ ಹೆಸರಿನಲ್ಲಿ ಸ್ಥಳೀಯ ಆಡಳಿತಗಳು ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯಯಿಸುತ್ತವೆ. ಹೀಗಿದ್ದೂ ಮಳೆ ಅವಾಂತರಗಳು ನಿರಂತರವಾಗಿ ಸಂಭವಿಸುತ್ತಲೇ ಇವೆ. ಹಾಗಾದರೆ ಇಷ್ಟೊಂದು ಹಣ ವ್ಯಯವಾಗಿ ಪರಿಸ್ಥಿತಿ ಸುಧಾರಿಸಿದ್ದಾದರೂ ಎಲ್ಲಿ ಎಂದು ಹುಡುಕಲು ಹೊರಟರೆ ಹಗರಣಗಳ ಗಬ್ಬುವಾಸನೆ ಬಡಿಯುತ್ತದೆ. ಬೆಂಗಳೂರಿನ ಮಲ್ಲೇಶ್ವರ, ಗಾಂಧಿನಗರ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉದಾಹರಣೆಯನ್ನೇ ತೆಗೆದುಕೊಂಡರೆ, ಅಲ್ಲಿನ ರಾಜಕಾಲುವೆಗಳಲ್ಲಿ ದುರಸ್ತಿ ಹೆಸರಿನಲ್ಲಿ ಈ ಹಿಂದೆ ಕೋಟ್ಯಂತರ ರೂಪಾಯಿ ಹರಿದಿದೆ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯೂ ನಡೆದಿದೆ. ಆದರೆ, ಆರೋಪ ಹೊತ್ತವರು ಮಾತ್ರ ನಿರುಮ್ಮಳವಾಗಿದ್ದಾರೆ.

ನಗರ ಪ್ರವಾಹದಂತಹ ಅನಾಹುತಗಳು ಸಂಭವಿಸದಂತೆ ಮಾಡಲು ರಾಜಕಾಲುವೆಗಳ ಒತ್ತುವರಿಯನ್ನು ಆದ್ಯತೆಯ ಮೇರೆಗೆ ತೆರವುಗೊಳಿಸಬೇಕು. ಬೆಂಗಳೂರಿನಲ್ಲಿ ಈ ಹಿಂದೆ ಬಲು ಅಬ್ಬರದಿಂದ ಶುರುಮಾಡಿದ್ದ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಪ್ರಭಾವಿಗಳ ಒತ್ತಡದಿಂದಾಗಿಯೇ ಸ್ಥಗಿತಗೊಳಿಸಲಾಯಿತು ಎಂಬ ಆರೋಪಗಳಿವೆ. ನಿಶ್ಚಿತ ಗುರಿ ತಲುಪದೇ ಕಾರ್ಯಾಚರಣೆ ಮೊಟಕುಗೊಂಡಿದ್ದನ್ನು ನೋಡಿದರೆ, ಆ ಆರೋಪಗಳಲ್ಲಿ ಹುರುಳಿರಬಹುದು ಎನಿಸುತ್ತದೆ. ಅಂತಹ ಪ್ರಭಾವ ಕೆಲಸ ಮಾಡಿಲ್ಲ ಎನ್ನುವುದಾದರೆ, ಬಿಬಿಎಂಪಿಗೆ ಅತಿಕ್ರಮಣ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲು ಏನು ಅಡ್ಡಿ? ಹೂಳು ತೆಗೆಯುವ ಪ್ರಕ್ರಿಯೆ ಕಾಗದದಲ್ಲಷ್ಟೇ ನಡೆದರೆ ಸಾಲದು; ನಗರದ ಎಲ್ಲ ರಾಜಕಾಲುವೆಗಳೂ ತ್ಯಾಜ್ಯಮುಕ್ತವಾಗಿರುವುದು ನಾಗರಿಕರಿಗೆ ಕಾಣಬೇಕು.

ಶಿಥಿಲಾವಸ್ಥೆಯಲ್ಲಿರುವ ಕಾಲುವೆಗಳ ದುರಸ್ತಿ ಕಾರ್ಯವೂ ನಡೆಯಬೇಕು. ಒಣಗಿರುವ, ಟೊಳ್ಳಾಗಿರುವ ಮರಗಳು, ಭಾರ ಹೆಚ್ಚಾಗಿ ಬಾಗಿರುವ ಹಾಗೂ ಒಣಗಿದ ಕೊಂಬೆಗಳು ಮಳೆ– ಗಾಳಿಯಿಂದ ಉರುಳಿಬಿದ್ದು ಜೀವಹಾನಿಗೆ ಕಾರಣವಾಗುವುದು ಸಾಮಾನ್ಯ. ಈ ಹಿಂದೆ ಅಂತಹ ಮರಗಳ ಸಮೀಕ್ಷೆ ನಡೆಸಿ, ಮಳೆ ಶುರುವಾಗುವ ಮುನ್ನವೇ ತೆರವುಗೊಳಿಸಲಾಗುತ್ತಿತ್ತು. ಆ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಬೇಕು. ಕೊರೊನಾ ಸೋಂಕಿನ ಕಾರಣಕ್ಕಾಗಿ ಘೋಷಿಸಿದ ಲಾಕ್‌ಡೌನ್‌ ಪರಿಣಾಮ, ಎರಡು ತಿಂಗಳವರೆಗೆ ರಸ್ತೆಗಳು ‘ಭಾರ’ದಿಂದ ಮುಕ್ತವಾಗಿ, ಗುಂಡಿಗಳು ಹೆಚ್ಚಾಗಿ ಬಿದ್ದಿಲ್ಲ. ಆದರೆ, ಇರುವ ಗುಂಡಿಗಳನ್ನು ಮುಚ್ಚುವ ಕೆಲಸ ಆಗಬೇಕು. ಮಳೆನೀರು ಸಂಗ್ರಹ, ಇಂಗುಗುಂಡಿ ನಿರ್ಮಾಣದಂತಹ ಪ್ರವಾಹಕ್ಕೆ ತಡೆಯೊಡ್ಡುವ ಯೋಜನೆಗಳಿಗೂ ಆದ್ಯತೆ ನೀಡಬೇಕು. ಎಲ್ಲಕ್ಕಿಂತ ಮೊದಲು ‘ಯುದ್ಧಕಾಲದ ಶಸ್ತ್ರಾಭ್ಯಾಸ’ದ ಮನಃಸ್ಥಿತಿಗೆ ಇತಿಶ್ರೀ ಹಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT