ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಒಪ್ಪಿತ ಮೌಲ್ಯಗಳ ಕಡೆಗಣನೆ: ಉನ್ನತ ಹುದ್ದೆಯಲ್ಲಿ ಇರುವವರಿಗೆ ಶೋಭೆಯಲ್ಲ

Last Updated 26 ಡಿಸೆಂಬರ್ 2021, 20:29 IST
ಅಕ್ಷರ ಗಾತ್ರ

ಸರ್ಕಾರ ಮತ್ತು ಪಕ್ಷ, ರಾಜಕೀಯ ಮತ್ತು ಧರ್ಮ, ಸಾರ್ವಜನಿಕ ಜೀವನದಲ್ಲಿ ಸ್ವೀಕಾರಾರ್ಹವಾಗುವ ನಡವಳಿಕೆ ಯಾವುದು ಮತ್ತು ಯಾವುದು ಅಂತಹ ನಡವಳಿಕೆ ಅಲ್ಲ, ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುವುದು ಹಾಗೂ ಕಾನೂನೇ ಇಲ್ಲ ಎಂಬಂತೆ ವರ್ತಿಸುವುದು... ಇಂಥವುಗಳ ನಡುವಿನ ವ್ಯತ್ಯಾಸಗಳು ಮರೆಯಾಗುತ್ತಿರುವ ಕಾಲಘಟ್ಟ ಇದು. ಒಪ್ಪಿತ ಪ್ರಜಾತಾಂತ್ರಿಕ ಮೌಲ್ಯಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುವ, ಅಂತಹ ದಾಳಿಗಳಿಗೆ ಸಾರ್ವಜನಿಕ ಸ್ವೀಕೃತಿ ಕೊಡಿಸಲು ಒಂದು ವರ್ಗದಿಂದ ವ್ಯವಸ್ಥಿತ ಯತ್ನಗಳು ನಡೆಯುತ್ತಿರುವ ಕಾಲಘಟ್ಟವೂ ಹೌದು. ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿ ನಿಭಾಯಿಸುವ ಪಾತ್ರಗಳು ಅದಲುಬದಲು ಆದಾಗ, ಪ್ರಜಾತಂತ್ರ ವ್ಯವಸ್ಥೆಯು ಕಾರ್ಯ ನಿರ್ವಹಿಸಬೇಕಾದ ವಿಧಾನದ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ. ಋಜುತ್ವ, ನ್ಯಾಯಸಮ್ಮತ, ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳು, ಕಾನೂನಿಗೆ ಬದ್ಧವಾದ ನಡವಳಿಕೆ ಎಂಬ ಮೌಲ್ಯಗಳ ಆಧಾರ ದಲ್ಲಿ ಮುನ್ನಡೆಯಬೇಕಿರುವ ವ್ಯವಸ್ಥೆಗೆ ಆಗ ಧಕ್ಕೆ ಒದಗುತ್ತದೆ. ಈ ಬಗೆಯ ಮೌಲ್ಯಗಳನ್ನು ಪಾಲಿಸುವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಸರ್ಕಾರವನ್ನು ರಚಿಸಿರುವ ರಾಜಕೀಯ ಪಕ್ಷ ಬೇರೆ ಬೇರೆಯಾಗಿ ಇರಬೇಕಾಗುತ್ತದೆ. ಪ್ರಧಾನಿ ಹುದ್ದೆಯಲ್ಲಿ ಇರುವ ವ್ಯಕ್ತಿ ರಾಜಕಾರಣಿಯಂತೆ ನಡೆದುಕೊಳ್ಳಲು ಆಗುವುದಿಲ್ಲ. ರಾಜಕಾರಣವನ್ನು ಅದರದೇ ಆದ ನಿಯಮಗಳಿಗೆ ಅನುಗುಣವಾಗಿ ಮಾಡಬೇಕಾಗುತ್ತದೆ. ಸಮಾಜ ಜೀವನದ ಇತರ ಕ್ಷೇತ್ರಗಳಲ್ಲಿ ರಾಜಕಾರಣ ಪ್ರವೇಶಿ ಸುವುದಕ್ಕೆ ಅವಕಾಶ ಕೊಡಲು ಆಗುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ವಿಚಾರದಲ್ಲಿ ಕಾನೂನು ಮತ್ತು ಸಂಪ್ರದಾಯದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಗಡಿಗಳನ್ನು ಮೀರಲು ಆಗುವುದಿಲ್ಲ. ಆದರೆ, ಇಂದಿನ ದಿನಗಳಲ್ಲಿ ಸರಹದ್ದುಗಳನ್ನು ದಾಟುವುದೇ ಸಹಜ ಎಂಬಂತೆ ಆಗು ತ್ತಿದೆ. ದೇಶದ ಅತ್ಯುನ್ನತ ಹುದ್ದೆಯಲ್ಲಿ ಆಸೀನರಾಗಿರುವ ವ್ಯಕ್ತಿಗಳೇ ಈ ಗಡಿಗಳನ್ನು ದಾಟುತ್ತಿರುವಂತೆ ಕಾಣಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ವಾರಗಳಿಂದ ಉತ್ತರಪ್ರದೇಶದಲ್ಲಿ ಒಂದಾದ ನಂತರ ಇನ್ನೊಂದರಂತೆ ಹೊಸ ಯೋಜನೆಗಳನ್ನು ಉದ್ಘಾಟಿಸುತ್ತಿದ್ದಾರೆ, ಪೂರ್ಣಗೊಂಡ ಯೋಜನೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಹೊಸದಾಗಿ ನಿರ್ಮಿಸಲಾಗಿರುವ ಹೆದ್ದಾರಿಗೆ ಭಾರತೀಯ ವಾಯುಪಡೆಯ ವಿಮಾನದಿಂದ ಬಂದಿಳಿದು, ಮೋದಿ ಅವರು ಚುನಾವಣಾ ಭಾಷಣ ಮಾಡಿದರು; ವಿಮಾನ ನಿಲ್ದಾಣವೊಂದರ ಶಂಕುಸ್ಥಾಪನೆ ನೆರವೇರಿಸಿ ರಾಜಕೀಯ ಭಾಷಣ ಮಾಡಿದರು; ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿ, ಆ ಕಾರ್ಯಕ್ರಮವನ್ನು ತಮ್ಮ ಹಿಂದುತ್ವ ರಾಜಕೀಯದ ಪ್ರದರ್ಶನಕ್ಕೆ ಬಳಸಿಕೊಂಡರು. ಈ ಯೋಜನೆಗಳೆಲ್ಲ ರಾಷ್ಟ್ರದ ಯೋಜನೆಗಳು, ದೇಶದ ತೆರಿಗೆದಾರರ ಹಣವನ್ನು ಇವಕ್ಕೆ ಬಳಸಿಕೊಳ್ಳಲಾಗಿದೆ. ಈ ಯೋಜನೆಗಳನ್ನು ಒಂದು ರಾಜಕೀಯ ಪಕ್ಷ, ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಜೊತೆ ಸಮೀಕರಿಸಿ, ಇವು ಆ ಪಕ್ಷದಿಂದ ಅಥವಾ ಆ ವ್ಯಕ್ತಿಗಳಿಂದ ಬಂದ ಉಡುಗೊರೆ ಎಂಬಂತೆ ಬಿಂಬಿಸುವುದು ತಪ್ಪು. ಪ್ರಧಾನಿ ಸ್ಥಾನದಲ್ಲಿ ಇರುವವರು ಸಾರ್ವಜನಿಕರಿಗೆ ಪ್ರಯೋಜನವಾಗುವ ಯೋಜನೆಗಳ ಮಾರಾಟದ ಪ್ರತಿನಿಧಿಯ ಮಟ್ಟಕ್ಕೆ ತಮ್ಮನ್ನು ತಾವು ಇಳಿಸಿಕೊಳ್ಳಬಾರದು. ಇಂತಹ ಯೋಜನೆಗಳಿಂದ ರಾಜಕೀಯ ಲಾಭವನ್ನು ಹೆಚ್ಚಿಸಿಕೊಳ್ಳುವ ಯತ್ನವನ್ನೂ ನಡೆಸಬಾರದು. ಈ ರೀತಿಯ ಕೆಲಸವನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು, ಇತರ ಪಕ್ಷಗಳಿಗೆ ಸೇರಿದ ಸಚಿವರು ಕೂಡ ಮಾಡುತ್ತಾರೆ ಎಂಬುದು ನಿಜ. ಆದರೆ, ದೇಶದ ಅತ್ಯುನ್ನತ ಹುದ್ದೆಯೊಂದರಲ್ಲಿ ಇರುವ ವ್ಯಕ್ತಿಯ ಸಾರ್ವಜನಿಕ ನಡವಳಿಕೆ ಕೂಡ ಅತ್ಯುನ್ನತ ಮಟ್ಟದಲ್ಲಿಯೇ ಇರಬೇಕು ಅಲ್ಲವೇ?

ಉತ್ತರಪ್ರದೇಶದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಹೇಗಾದರೂ ಮಾಡಿ ಜಯ ಸಾಧಿಸಬೇಕು ಎಂದು ಪ್ರಧಾನಿ ನಡೆಸುತ್ತಿರುವ ಯತ್ನದಲ್ಲಿ ರಾಜಕಾರಣ ಮತ್ತು ಧರ್ಮದ ನಡುವೆ ಇರಬೇಕಿರುವ ಅಂತರವು ತಗ್ಗಿದೆ. ಖಾಸಗಿ ನಂಬಿಕೆಗಳು ಹಾಗೂ ಸಾರ್ವಜನಿಕ ನಡವಳಿಕೆಗಳು ಒಂದರ ಮೇಲೆ ಒಂದು ಪ್ರಭಾವ ಬೀರುವುದನ್ನು ತಡೆಯಬೇಕಿದ್ದ ರೇಖೆಯೂ ಮಸುಕಾಗಿದೆ. ಪ್ರಧಾನಿಯವರು ತಮ್ಮ ನಂಬಿಕೆಗಳನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇಡುವುದು ಮತ್ತು ಅದನ್ನು ರಾಜಕೀಯ ವ್ಯವಹಾರಕ್ಕೆ ಬಳಸಿಕೊಳ್ಳುವುದು ತೀರಾ ಅನುಚಿತ. ಅವರು ಎಲ್ಲ ಧರ್ಮಗಳ ಜನರು ಇರುವ ದೇಶದ ಪ್ರಧಾನಿ. ತಮ್ಮ ಧಾರ್ಮಿಕ ನಂಬಿಕೆಗಳನ್ನು ಅವರು ಸಾರ್ವಜನಿಕವಾಗಿ ಪ್ರದರ್ಶಿಸಬಾರದು. ಅಯೋಧ್ಯೆಯಲ್ಲಿ ಅಥವಾ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಧಾನಿಯವರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾಗಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದೆ. ಖಾವಿ ಧರಿಸಿರುವ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದರೂ, ಆ ರಾಜ್ಯದಲ್ಲಿ ಪ್ರಧಾನಿಯವರು ಧಾರ್ಮಿಕ ಕಾರ್ಯಕ್ರಮದ ಮುಖ್ಯಸ್ಥನ ಸ್ಥಾನದಲ್ಲಿ ಕುಳಿತು ಕೊಳ್ಳುವುದರಿಂದ, ಪ್ರಜಾತಂತ್ರ ವ್ಯವಸ್ಥೆಗೆ ಅಗತ್ಯವಿರುವ ಕೆಲವು ಗಡಿರೇಖೆಗಳು ಮಸುಕಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT