ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಹೊಸ ಆಶಯ ಅನುಷ್ಠಾನದ ಸವಾಲು ಮುಂದಿದೆ

ಸಂಪಾದಕೀಯ
Last Updated 15 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಕೆಂಪುಕೋಟೆಯಿಂದ ಸತತ ಆರನೇ ವರ್ಷ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.ಹೀಗೆ ಸತತ ಆರು ಸಲ ಭಾಷಣ ಮಾಡುವ ಅವಕಾಶವು ಕಾಂಗ್ರೆಸ್ಸೇತರ ಪಕ್ಷಗಳ ಪ್ರಧಾನಿಗಳಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಮಾತ್ರ ದೊರೆತಿತ್ತು. ಆ ಸಾಲಿಗೆ ಈಗ ಮೋದಿ ಅವರೂ ಸೇರಿದ್ದಾರೆ. 2014ರಲ್ಲಿ ಮೊದಲ ಸಲ ಇಲ್ಲಿಂದ ಭಾಷಣ ಮಾಡಿದಾಗ, ತಮ್ಮನ್ನು ದೇಶದ ‘ಪ್ರಧಾನ ಸೇವಕ’ ಎಂದು ಕರೆದುಕೊಂಡಿದ್ದರು. ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸುವಂತಹ ಪ್ರಮುಖ ನಿರ್ಧಾರವೂ ಆ ಸಂದರ್ಭದಲ್ಲೇ ಪ್ರಕಟವಾಗಿತ್ತು. ಆ ನಂತರದ ವರ್ಷಗಳಲ್ಲಿ ಸರ್ಕಾರದ ಸಾಧನೆಗಳನ್ನು ಸ್ಮರಿಸುವುದರೊಂದಿಗೆ ಆಕರ್ಷಕ ನುಡಿಗಟ್ಟುಗಳಿಂದ ಕೂಡಿದ ಹೊಸ ಯೋಜನೆಗಳೂ ಪ್ರಕಟವಾಗಿವೆ. ಮೋದಿ ಅವರ ಈ ಸಲದ ಭಾಷಣವೂ ಈ ಜಾಡಿಗೆ ಹೊರತಲ್ಲ. ಅದೇ ಆಕರ್ಷಕ ಮಾತುಗಾರಿಕೆ ಮತ್ತು ಮೋಡಿ ಮಾಡುವ ಹಾವಭಾವ. ಸೇನಾ ಪಡೆಗಳ ನಡುವೆ ಇನ್ನೂ ಹೆಚ್ಚಿನ ಸಮನ್ವಯ ಸಾಧಿಸುವ ಸಲುವಾಗಿ ‘ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌’ ಎಂಬ ಹೊಸ ಹುದ್ದೆ ಸೃಷ್ಟಿಸುವ ಘೋಷಣೆ ಹೊರಬಿದ್ದಿದೆ.

ಇದು, ಎರಡು ದಶಕಗಳಷ್ಟು ಹಿಂದಿನ ಪ್ರಸ್ತಾವ. ಈಗ ಸಾಕಾರಗೊಳ್ಳುತ್ತಿದೆ. ಜನರ ಬದುಕನ್ನು ಸುಗಮಗೊಳಿಸುವುದು ಸರ್ಕಾರದ ಆದ್ಯತೆ. ಅದಕ್ಕಾಗಿ ಜನರ ಜೀವನದಲ್ಲಿ ಸರ್ಕಾರದ ಪಾತ್ರವನ್ನು ಕನಿಷ್ಠಗೊಳಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಇಟ್ಟಿದ್ದಾರೆ. ಭ್ರಷ್ಟಾಚಾರ ಮತ್ತು ಕಪ್ಪುಹಣ ತೊಲಗಿಸುವ ಪ್ರತೀ ಪ್ರಯತ್ನ ಸ್ವಾಗತಾರ್ಹ ಎಂದು ಪುನರುಚ್ಚರಿಸಿದ್ದಾರೆ. ಜನಸಂಖ್ಯಾ ಸ್ಫೋಟ ತಂದೊಡ್ಡಬಹುದಾದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜಲ ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಪ್ರವಾಹ ಪರಿಸ್ಥಿತಿ ಕುರಿತು ಮರುಕಪಟ್ಟಿದ್ದಾರೆ. ಪ್ಲಾಸ್ಟಿಕ್‌ಮುಕ್ತ ಭಾರತ ರೂಪಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಭಾಷಣದ ವ್ಯಾಪ್ತಿಯು ಹೀಗೆ ಬೇರೆ ಬೇರೆ ವಲಯಗಳಿಗೆ ಚಾಚಿಕೊಂಡಿತ್ತು.

ಸರ್ಕಾರದ ಪಾತ್ರವನ್ನು ಕನಿಷ್ಠಗೊಳಿಸುವುದಕ್ಕೆ ಸಂಬಂಧಿಸಿ ಪ್ರಧಾನಿ ಎತ್ತಿರುವ ಪ್ರಶ್ನೆಯು ಹಲವು ಆಯಾಮಗಳನ್ನು ಒಳಗೊಂಡಿದೆ. ದುರ್ಬಲರ ಹಿತರಕ್ಷಣೆಗಾಗಿ ಮತ್ತು ಅವರ ಸಬಲೀಕರಣಕ್ಕಾಗಿ ಅವರ ಜೀವನದಲ್ಲಿ ಸರ್ಕಾರವು ಹೆಚ್ಚಿನ ಪಾತ್ರ ವಹಿಸಬೇಕಿದೆ. ಉಳಿದಂತೆ ಸರ್ಕಾರದ ಪಾತ್ರವು ಕನಿಷ್ಠ ಇದ್ದಷ್ಟೂ ಒಳ್ಳೆಯದು. ‘ಕನಿಷ್ಠ ಸರ್ಕಾರ...’ ಹೆಸರಿನಲ್ಲಿ ಈ ಹಿಂದೆಯೂ ಪ್ರಧಾನಿಯವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರಾದರೂ ನಿರೀಕ್ಷಿತ ಪರಿಣಾಮ ಕಾಣಸಿಗಲಿಲ್ಲ. ಅದನ್ನೇ ಈಗ ಬೇರೊಂದು ಬಗೆಯಲ್ಲಿ ಹೇಳಿದಂತಿದೆ. ಸಂಪತ್ತು ಸೃಷ್ಟಿಸುವವರು ದೇಶದ ಸಂಪತ್ತು. ಅವರನ್ನು ಗೌರವಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಈ ಮಾತು ಒ‌ಪ್ಪುವಂತಹುದು. ಆದರೆ,ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ‘ಕಿರುಕುಳ’ದ ಬಗ್ಗೆ ಕೆಲವು ಉದ್ಯಮಿಗಳಿಂದಲೇ ಇತ್ತೀಚೆಗೆ ಸಿಟ್ಟು ವ್ಯಕ್ತವಾಗಿದೆ. ಇದು ಒಂದು ನಿದರ್ಶನ ಮಾತ್ರ. ಈ ಬಗೆಯ ‘ಕಿರುಕುಳ’ಗಳನ್ನು ಇಲ್ಲವಾಗಿಸುವ ನೆಲೆಯಲ್ಲಿ ಪ್ರಧಾನಿಯವರು ದೃಢ ಹೆಜ್ಜೆ ಇಡಬೇಕು. ಜನಸಂಖ್ಯೆ ಹೆಚ್ಚಳದಿಂದ ಆಗಬಹುದಾದ ಪರಿಣಾಮಗಳ ಕುರಿತು ಪ್ರಧಾನಿ ಪ್ರಸ್ತಾಪಿಸಿದ್ದಾರೆ.

ಈ ವಿಷಯ ಬಹಳ ಹಳತು. ಅಭಿವೃದ್ಧಿಯ ಚರ್ಚೆಗಳಲ್ಲಿ ಈಗಾಗಲೇ ಬಳಸಿ ಬಿಟ್ಟಿರುವ ವಿಚಾರ. ನಿಯಂತ್ರಣ ಅಗತ್ಯವಾದರೂ ಅದನ್ನು ಈಗ ಮತ್ತೆ ಮುನ್ನೆಲೆಗೆ ತಂದಿರುವುದರ ಮರ್ಮವನ್ನು ಅವರೇ ಬಿಡಿಸಿಡಬೇಕು. ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿ ಪ್ರಧಾನಿಯವರು ವಿರೋಧ ಪಕ್ಷಗಳಿಗೆ ಕೆಲವು ಪ್ರಶ್ನೆಗಳನ್ನು ಹಾಕಿದ್ದಾರೆ. ತರ್ಕ ಮುಂದಿಟ್ಟು ರಾಜಕೀಯ ವಿರೋಧಿಗಳನ್ನು ಬಲೆಗೆ ಕೆಡಹುವ ಮತ್ತು ಜನರನ್ನು ಒಲಿಸಿಕೊಳ್ಳುವ ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರಕ್ಕಿಂತ, ಇಂತಹದ್ದೊಂದು ದಿಟ್ಟ ನಿರ್ಧಾರಕ್ಕೆ ಅನುಸರಿಸಿದ ಮಾರ್ಗ ಸರಿಯೇ ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯ.ಆರ್ಥಿಕತೆ ವಿಚಾರದಲ್ಲಿ ಮೋದಿ ಅವರು ವಸ್ತುಸ್ಥಿತಿಯನ್ನು ಜನರ ಮುಂದೆ ಇಡಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ. ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳನ್ನು ಜನರಿಂದ ಬಹಳ ದಿನ ಮುಚ್ಚಿಡಲು ಸಾಧ್ಯವೇ ಇಲ್ಲ ಎಂಬುದನ್ನು ಅಧಿಕಾರಸ್ಥರು ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT