ಸರ್ಕಾರಿ ಶಾಲೆಗಳ ಸಮಸ್ಯೆಗೆ ಇಚ್ಛಾಶಕ್ತಿ ಕೊರತೆಯೇ ಕಾರಣ

7

ಸರ್ಕಾರಿ ಶಾಲೆಗಳ ಸಮಸ್ಯೆಗೆ ಇಚ್ಛಾಶಕ್ತಿ ಕೊರತೆಯೇ ಕಾರಣ

Published:
Updated:
Deccan Herald

ಕರ್ನಾಟಕ ರಾಜ್ಯದ 5,272 ಗ್ರಾಮಗಳಲ್ಲಿ ಶಾಲೆಯೇ ಇಲ್ಲ ಎಂಬ ವಿಷಯವನ್ನು ಶಿಕ್ಷಣ ಇಲಾಖೆಯ ಉಪಗ್ರಹ ಆಧಾರಿತ ಮ್ಯಾಪಿಂಗ್ ಬಹಿರಂಗಪಡಿಸಿದೆ. ಒಂದೂವರೆ ಕಿಲೋಮೀಟರ್ ವ್ಯಾಪ್ತಿಯೊಳಗೆ ಶಾಲೆಯಿಲ್ಲದೇ ಇರುವ ಈ ಗ್ರಾಮಗಳ ಸಂಖ್ಯೆ ಬಹಳ ದೊಡ್ಡದೇ. ಆದರೆ ಇದಕ್ಕೆ ಭಾವುಕವಾದ ಪ್ರತಿಕ್ರಿಯೆ ಅಗತ್ಯವಿಲ್ಲ. ಸಮಸ್ಯೆಯನ್ನು ಸೂಕ್ಷ್ಮವಾಗಿ ಮತ್ತು ಚಿಕಿತ್ಸಕ ದೃಷ್ಟಿಕೋನದಿಂದ ಅರ್ಥ ಮಾಡಿ
ಕೊಳ್ಳಬೇಕಾಗಿದೆ. ಈ ಸಮಸ್ಯೆ ಕೇವಲ ಇಲ್ಲದಿರುವ ಶಾಲೆಗಳದ್ದಷ್ಟೇ ಅಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪ್ರಾಥಮಿಕ ಶಿಕ್ಷಣಕ್ಕಾಗಿಯೇ ರೂಪಿಸಿದ ಹಲವು ವಿಶೇಷ ಯೋಜನೆಗಳ ನಂತರವೂ ಇಲ್ಲಿ ಶಾಲೆಗಳಿಲ್ಲದಂತೆ ಆಗಿರುವುದರ ಕಾರಣಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಅಷ್ಟೇ ಮುಖ್ಯವಾಗಿ ಈ ಹಳ್ಳಿಗಳಲ್ಲಿ ಇರುವ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಮತ್ತು ಅದರಲ್ಲಿ ಶಾಲೆಗೆ ಹೋಗದೆಯೇ ಉಳಿದಿರುವ ಮಕ್ಕಳೆಷ್ಟು ಎಂಬುದನ್ನು ಅರಿಯಬೇಕು. 2011ರಲ್ಲಿ 3000ಕ್ಕೂ ಹೆಚ್ಚು ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯನ್ನು ಮುಂದಿಟ್ಟುಕೊಂಡು ವಿಲೀನಗೊಳಿಸಲಾಯಿತು.

ಈಗ ಶಾಲೆಗಳಿಲ್ಲ ಎಂದು ಹೇಳುತ್ತಿರುವ ಗ್ರಾಮಗಳಲ್ಲಿ 2011ಕ್ಕೆ ಮುನ್ನ ಶಾಲೆಗಳಿದ್ದವೇ ಎಂಬ ಅಂಶವನ್ನೂ ಗಮನಿಸಬೇಕಾಗಿದೆ. ಈ ಎಲ್ಲಾ ಅಂಕಿ ಅಂಶಗಳನ್ನು ಸರಿಯಾಗಿ ಸಂಗ್ರಹಿಸಿದರೂ ಸಮಸ್ಯೆಗೆ ಏಕಮೂಲಿಕೆಯಂಥ ಪರಿಹಾರವಿಲ್ಲ. ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಇರುವ ಕಾರಣಗಳು ಸಂಕೀರ್ಣ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣ
ಮಟ್ಟದ ಶಿಕ್ಷಣ ದೊರೆಯುವುದಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುವ ಸರ್ಕಾರಿ ಶಾಲೆಗಳಿಲ್ಲ ಎಂಬುದು ಪಾಲಕರ ಸಾಮಾನ್ಯ ದೂರು. ಈ ದೂರು ಅರ್ಧ ಸತ್ಯ ಮಾತ್ರ. ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಗಳಲ್ಲಿ ಇರುವಂತೆ ಖಾಸಗಿ ಶಾಲೆಗಳಲ್ಲಿಯೂ ಸಮಸ್ಯೆಗಳಿವೆ. ಇಂಗ್ಲಿಷ್ ಮಾಧ್ಯಮದ ವಿಷಯದಲ್ಲಿ ಪಾಲಕರ ಅಳಲು ಸರಿಯಾಗಿಯೇ ಇದೆ. ಅಂದರೆ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸಿದ ತಕ್ಷಣ ಸಮಸ್ಯೆ ಪರಿಹಾರವಾಗುತ್ತದೆ ಎಂದಲ್ಲ. ಆದರೆ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುವ ಸರ್ಕಾರಿ ಶಾಲೆಗಳು ಸಾಕಷ್ಟು ಇಲ್ಲ ಎಂಬುದು ವಾಸ್ತವ.

ಮಕ್ಕಳು ಖಾಸಗಿ ಶಾಲೆಯಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬೇಕು ಎಂದು ಬಯಸುವ ವರ್ಗಕ್ಕೆ ಸೇರಿದ ಬಹುತೇಕರು ಸರ್ಕಾರಿ ಶಾಲೆಗಳಲ್ಲಿ ಕಲಿತು ಬಂದವರು. ಇವರಲ್ಲಿ ಹೆಚ್ಚಿನವರು ಆರ್ಥಿಕವಾಗಿ ಮಧ್ಯಮ ಮತ್ತು ಕೆಳ ಮಧ್ಯಮವರ್ಗಕ್ಕೆ ಸೇರಿದವರು. ಇಂಗ್ಲಿಷ್ ಮಾಧ್ಯಮ ತಮ್ಮ ಮಕ್ಕಳ ಭವಿಷ್ಯಕ್ಕೆ ಅಗತ್ಯ ಎಂದು ಅವರು ಭಾವಿಸುತ್ತಿರುವುದಕ್ಕೂ ನಮ್ಮ ಆರ್ಥಿಕತೆ ಬಯಸುತ್ತಿರುವ ಇಂಗ್ಲಿಷ್ ಕೌಶಲಕ್ಕೂ ಸಂಬಂಧವಿದೆ. ಹಳ್ಳಿಗಾಡಿನ ಜನರೂ ತಮ್ಮ ಮಕ್ಕಳನ್ನು ಹತ್ತಿರದ ಪಟ್ಟಣಗಳಲ್ಲಿರುವ ‘ಕಾನ್ವೆಂಟ್ ಶಾಲೆ’ಗಳಿಗೆ ಕಳುಹಿಸುವ ಅಗತ್ಯ ಉದ್ಭವಿಸಿರುವುದಕ್ಕೂ ಸರ್ಕಾರ ನಡೆಸುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಹೇಳಿಕೊಡುವ ಇಂಗ್ಲಿಷ್‌ನ ಪ್ರಮಾಣಕ್ಕೂ ಸಂಬಂಧವಿದೆ.

ಇದೆಲ್ಲವನ್ನೂ ಪರಿಗಣಿಸಿಯೇ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಶಾಲೆಗಳಿಗೆ ಭೌಗೋಳಿಕ ವ್ಯಾಪ್ತಿಯನ್ನು ನಿಗದಿಪಡಿಸಿ ಆ ಪ್ರದೇಶದ ಮಕ್ಕಳು ಅದೇ ಶಾಲೆಗೆ ಹೋಗುವುದನ್ನು ಕಡ್ಡಾಯಗೊಳಿಸದ ಹೊರತು ಈ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿಲ್ಲ. ಶಿಕ್ಷಣ ಹಕ್ಕು ಕಾಯ್ದೆ ಅದಕ್ಕೆ ಬೇಕಿರುವ ಕಾನೂನಿನ ಬಲವನ್ನೂ ಕೊಡುತ್ತದೆ. ಆದರೆ ಅದಕ್ಕೆ ಬೇಕಿರುವ ಇಚ್ಛಾಶಕ್ತಿ ರಾಜಕಾರಣಿಗಳಿಗೆ ಇದೆಯೇ ಎಂಬುದು ಇಲ್ಲಿರುವ ಪ್ರಶ್ನೆ.

ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಿರುವ ಅನೇಕರು ಒಂದೋ ತಮ್ಮದೇ ಖಾಸಗಿ ಶಾಲೆಯನ್ನು ಹೊಂದಿದ್ದಾರೆ ಇಲ್ಲವೇ ಈ ಬಗೆಯ ಶಾಲೆಗಳ ಮಾಲೀಕತ್ವದೊಂದಿಗೆ ಸಂಬಂಧವಿಟ್ಟುಕೊಂಡಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರಲ್ಲಿ ಇರುವುದಕ್ಕಿಂತ ಹೆಚ್ಚಿನ ಅರ್ಹತೆ ಇರುವ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಅವರ ಮುಖ್ಯ ಕೆಲಸ ಬೋಧನೆಯಾಗುವಂತೆ ನೋಡಿಕೊಂಡರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ. ಇವೆಲ್ಲವೂ ಸರಳ ಮತ್ತು ಅನುಷ್ಠಾನಯೋಗ್ಯ ಉಪಾಯಗಳು. ದುರದೃಷ್ಟವಶಾತ್ ಸರ್ಕಾರಕ್ಕೆ ಈ ತನಕ ಇವ್ಯಾವೂ ಸಾಧ್ಯವಾಗಿಲ್ಲ. ಸದ್ಯೋಭವಿಷ್ಯದಲ್ಲಿ ಸಾಧ್ಯವಾಗುತ್ತದೆ ಎಂಬ ಆಶಾಭಾವವನ್ನು ಇಟ್ಟುಕೊಳ್ಳಲೂ ಸಾಧ್ಯವಿಲ್ಲ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !