ಗುರುವಾರ , ಅಕ್ಟೋಬರ್ 17, 2019
21 °C

ಸದನದ ಕಲಾಪವು ಗೋಪ್ಯವಲ್ಲ ಪಾರದರ್ಶಕ ನೀತಿ ಅನುಸರಿಸಿ

Published:
Updated:
Prajavani

ವಿಧಾನಸಭೆಯ ಕಲಾಪವನ್ನು ವರದಿ ಮಾಡುವ ಮಾಧ್ಯಮಗಳಿಗೆ ಇದೇ ಮೊದಲ ಬಾರಿಗೆ ನಿರ್ಬಂಧಗಳನ್ನು ಹೇರಲಾಗಿದೆ. ಕಲಾಪವನ್ನು ಗ್ಯಾಲರಿಯಿಂದ ನೇರವಾಗಿ ಸೆರೆಹಿಡಿದು ಪ್ರಸಾರ ಮಾಡುತ್ತಿದ್ದ ಖಾಸಗಿ ಟಿ.ವಿ. ವಾಹಿನಿಗಳಿಗೆ ಗೇಟ್‌ಪಾಸ್‌ ಕೊಡಲಾಗಿದೆ. ಪತ್ರಿಕಾ ಛಾಯಾಗ್ರಾಹಕರಿಗೂ ಇನ್ನು ಮುಂದೆ ವಿಧಾನಸಭೆಯ ಕಲಾಪದ ದೃಶ್ಯಗಳನ್ನು ಸೆರೆಹಿಡಿಯುವ ಅವಕಾಶ ಇಲ್ಲ.

ಸಭಾಧ್ಯಕ್ಷರ ಎಡಭಾಗದ ಗ್ಯಾಲರಿಗೆ ಪತ್ರಕರ್ತರಿಗೆ ಇರುವ ಪ್ರವೇಶ ಅವಕಾಶವನ್ನು ಉಳಿಸಿಕೊಳ್ಳಲಾಗಿದೆ. ಆದರೆ, ಪತ್ರಕರ್ತರು ಅಲ್ಲಿಗೆ ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ನಂತಹ ಸಂಪರ್ಕ ಸಾಧನಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಇನ್ನು ಮುಂದೆ ಖಾಸಗಿ ಟಿ.ವಿ. ವಾಹಿನಿಗಳು ಸರ್ಕಾರಿ ಸ್ವಾಮ್ಯದ ದೂರದರ್ಶನ ಸೆರೆಹಿಡಿದ ದೃಶ್ಯಗಳನ್ನು ಮಾತ್ರ ಪ್ರಸಾರ ಮಾಡಬಹುದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಛಾಯಾಗ್ರಾಹಕರು ತೆಗೆದ ಫೋಟೊಗಳನ್ನಷ್ಟೇ ಪತ್ರಿಕೆಗಳು ಪ್ರಕಟಿಸಬಹುದು.

ಮಾಧ್ಯಮ ಪ್ರತಿನಿಧಿಗಳಿಗೆ ಈ ನಿರ್ಬಂಧಗಳನ್ನು ವಿಧಿಸುವ ಮೂಲಕ, ವಿಧಾನಸಭೆ ಸಚಿವಾಲಯವು ‘ವಿಧಾನಸಭೆಯ ಕಲಾಪ ಗೋಪ್ಯವಾದದ್ದು ಮತ್ತು ಪಾರದರ್ಶಕವಲ್ಲ’ ಎನ್ನುವ ಸಂದೇಶವನ್ನು ಜನರಿಗೆ ತಲುಪಿಸಿದೆ. ವಿಧಾನಸಭೆಯಲ್ಲಿ ನಡೆಯುವ ಪ್ರಶ್ನೋತ್ತರದ ಚಕಮಕಿ, ಮಸೂದೆಗಳ ಕುರಿತ ವಾಗ್ವಾದ, ಧರಣಿನಿರತರ ಆಕ್ರೋಶ, ಚರ್ಚೆಯ ನಡುವೆ ಕೆಲವು ಸದಸ್ಯರ ವಿಭಿನ್ನ ಭಾವಭಂಗಿಗಳ ಚಿತ್ರಣ– ಎಲ್ಲವೂ ಇನ್ನು ಮುಂದೆ ಸರ್ಕಾರದ ಕೃಪಾಕಟಾಕ್ಷ ಇದ್ದರೆ ಮಾತ್ರ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗಲಿವೆ. ಸರ್ಕಾರಿ ಸ್ವಾಮ್ಯದ ದೂರದರ್ಶನವು ಸಹಜವಾಗಿ ಸರ್ಕಾರದ ತುತ್ತೂರಿಯನ್ನೇ ಊದುವುದರಿಂದ, ಇನ್ನು ಮುಂದೆ ಕಲಾಪಗಳ ಪ್ರಸಾರ ಸೆನ್ಸಾರ್‌ ಆಗಲಿದ್ದು, ಸರ್ಕಾರದ ಪರವಾದ ವಿವರಗಳಷ್ಟೇ ಹೆಚ್ಚಾಗಿ ಜನರ ಗಮನಕ್ಕೆ ಬರಲಿವೆ.

ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ವಿಧಾನಸಭೆ ಸಚಿವಾಲಯಕ್ಕೆ ಮಾಧ್ಯಮಗಳ ಮೇಲೆ ಇಷ್ಟೊಂದು ಸಿಟ್ಟು ಬಂದಿರುವುದು ಏಕೆ ಎನ್ನುವುದು ಇಲ್ಲಿ ಜನರನ್ನು ಕಾಡುವ ಸಹಜ ಪ್ರಶ್ನೆ. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕಲಾಪದ ಸಮಯದಲ್ಲಿ ಕೆಲವು ಸಚಿವರು ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದ್ದನ್ನು ಖಾಸಗಿ ಟಿ.ವಿ. ವಾಹಿನಿಗಳು ಬಹಿರಂಗಪಡಿಸಿದ್ದವು. ಅದರಿಂದ, ದೊಡ್ಡ ಕೋಲಾಹಲವೇ ಉಂಟಾಗಿತ್ತು. ಆಗ, ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೇಮಾರ್‌ ಅವರು ವಿರೋಧ ಪಕ್ಷ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಹಿಂದೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು ಸದನದಲ್ಲಿ ಮೊಬೈಲ್‌ನಲ್ಲಿ ಚಿತ್ರವೊಂದನ್ನು ನೋಡುತ್ತಿದ್ದ ದೃಶ್ಯ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗಿ ಕೊನೆಗೆ ಅವರು ಕ್ಷಮೆ ಯಾಚಿಸಬೇಕಾಯಿತು. ಆಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಲಕ್ಷ್ಮಣ ಸವದಿ ಈಗ ಉಪಮುಖ್ಯಮಂತ್ರಿಯಾಗಿದ್ದರೆ, ಸಿ.ಸಿ.ಪಾಟೀಲ ಮತ್ತೆ ಸಚಿವರಾಗಿದ್ದಾರೆ. ಪ್ರಭು ಚವ್ಹಾಣ್‌ ಅವರೂ ಈಗ ಮಂತ್ರಿಯಾಗಿದ್ದಾರೆ. ಸಚಿವರ, ಶಾಸಕರ ಇಂತಹ ‘ಚಟುವಟಿಕೆ’ಗಳು ಮತದಾರರ ಕಣ್ಣಿಗೆ ಬೀಳಬಾರದು ಎನ್ನುವ ಉದ್ದೇಶದಿಂದಲೇ  ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

‘ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ಮಾತ್ರ ಕಲಾಪದ ನೇರಪ್ರಸಾರಕ್ಕೆ ಅವಕಾಶವಿದ್ದು ಅದೇ ರೀತಿಯಲ್ಲಿ ರಾಜ್ಯದಲ್ಲೂ ನಿಯಮ ಜಾರಿಗೆ ತರಲಾಗಿದೆ’ ಎಂದು ಅಧಿಕಾರಸ್ಥರು ವಾದಿಸುತ್ತಿದ್ದಾರೆ. ‘ನಮ್ಮ ಸರ್ಕಾರ, ಮಾಧ್ಯಮಗಳ ಸ್ವಾತಂತ್ರ್ಯವನ್ನು ನಿರ್ಬಂಧಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್‌ ಮಾಡಿದ್ದರು. ಮಾಧ್ಯಮಗಳ ನಿರ್ಬಂಧ ಕುರಿತ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಮಾಡಿದ ಮನವಿಯನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಒಪ್ಪಿಲ್ಲ. ಆ ಬಳಿಕ ಯುಡಿಯೂರಪ್ಪ ತಮ್ಮ ಟ್ವೀಟನ್ನು ಅಳಿಸಿಹಾಕಿದ್ದಾರೆ. ಇದರ ಅರ್ಥ ಸ್ಪಷ್ಟವಾಗಿದೆ.

ಇನ್ನು ಮುಂದೆ ವಿಧಾನಸಭೆಯ ಕಲಾಪಗಳು ಪೂರ್ಣವಾಗಿ, ಪಾರದರ್ಶಕವಾಗಿ ಜನರ ಕಣ್ಣಿಗೆ ಕಾಣಸಿಗುವುದಿಲ್ಲ. ಕಲಾಪದಲ್ಲಿ ಜನಪ್ರತಿನಿಧಿಗಳು ಎಷ್ಟು ಕ್ರಿಯಾತ್ಮಕವಾಗಿ ಪಾಲ್ಗೊಂಡಿದ್ದಾರೆ ಎನ್ನುವುದು ಜನರ ಗಮನಕ್ಕೆ ದೃಶ್ಯದ ಮೂಲಕ ಗೊತ್ತಾಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನಸಭೆಯೊಂದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ನೇರವಾಗಿ ನೋಡುವ ಅವಕಾಶದಿಂದ ಸಾರ್ವಜನಿಕರು ವಂಚಿತರಾಗುವುದು ಜನತಂತ್ರದ ಆಶಯಕ್ಕೆ ವಿರುದ್ಧವಾದುದು. ಸರ್ಕಾರವು ಹೆಚ್ಚು ಪಾರದರ್ಶಕವಾಗಿ ಕೆಲಸ ಮಾಡುವ ಮೂಲಕ ಜನರ ಸಮೀಪಕ್ಕೆ ಆಡಳಿತವನ್ನು ಒಯ್ಯಬೇಕು ಎನ್ನುವ ಸದಾಶಯ ಇಲ್ಲವಾಗಿ, ಎಲ್ಲವೂ ಗೋಪ್ಯ ವ್ಯವಹಾರ ಎನ್ನುವಂತಾಗುವುದು ಸರಿಯಲ್ಲ. ಸ್ಪೀಕರ್‌ ತಮ್ಮ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಕಲಾಪಗಳನ್ನು ನೇರವಾಗಿ ವೀಕ್ಷಿಸುವ ಜನರ ಹಕ್ಕನ್ನು ರಕ್ಷಿಸಲು ಮುಂದಾಗಬೇಕು. ಇದು, ಮಾಧ್ಯಮಗಳ ಮೇಲಿನ ನಿರ್ಬಂಧ ಮಾತ್ರವಲ್ಲ, ಜನರ ಹಕ್ಕುಗಳನ್ನು ಕಿತ್ತುಕೊಂಡು ಪ್ರಜಾಪ್ರಭುತ್ವದ ಕತ್ತು ಹಿಸುಕುವ ದುಷ್ಟತನವೂ ಹೌದು.

Post Comments (+)