ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜೂಜು ನಿಷೇಧಿಸುವ ಅನಿವಾರ್ಯ; ಉದ್ಯಮದ ಹಿತ ಕಾಯುವ ಅಗತ್ಯ

Last Updated 22 ಸೆಪ್ಟೆಂಬರ್ 2021, 19:21 IST
ಅಕ್ಷರ ಗಾತ್ರ

ಆನ್‌ಲೈನ್‌ ಮೂಲಕ ನಡೆಯುವ ಜೂಜು ನಿಷೇಧಿಸುವ ಉದ್ದೇಶದ ‘ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ– 2021’ಕ್ಕೆ ರಾಜ್ಯ ವಿಧಾನಸಭೆ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಆನ್‌ಲೈನ್‌ ಜೂಜು ನಿಷೇಧ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಅವರು ಗೃಹಸಚಿವ ಆಗಿದ್ದಾಗ ಹೇಳಿದ್ದರು. ಆ ಮಾತು ಈಗ ಕ್ರಿಯಾರೂಪಕ್ಕೆ ಬರುತ್ತಿದೆ.

‘ಹಣವನ್ನು ಕಟ್ಟಿ ಜೂಜಿನ ರೀತಿಯಲ್ಲಿ ಆಡುವ ಆನ್‌ಲೈನ್‌ ಆಟಗಳಿಗೆ ಕರ್ನಾಟಕದಲ್ಲಿ ನಿಷೇಧ ಹೇರುವ ಕುರಿತು ಚಿಂತನೆ ನಡೆದಿದೆ, ಇದಕ್ಕಾಗಿ ಕಾನೂನು ರೂಪಿಸಲಾಗುವುದು’ ಎಂದು ಬೊಮ್ಮಾಯಿ ಹೇಳಿದ್ದಾಗಿ ಈ ಹಿಂದೆ ವರದಿಯಾಗಿತ್ತು. ಜೂಜಿನ ರೂಪದ ಆಟಗಳಲ್ಲಿ ಹಣ ತೊಡಗಿಸಿದ ಹಲವರು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡಿರುವ ಬಗ್ಗೆ ತಮಗೆ ಮಾಹಿತಿ ಬಂದಿರುವುದಾಗಿಯೂ, ಕೆಲವರ ಪಾಲಿಗೆ ಈ ಆಟಗಳು ದುಶ್ಚಟಗಳಂತೆ ಪರಿಣಮಿಸಿವೆ ಎಂದೂ ಅವರು ಹೇಳಿದ್ದರು. ವಾಸ್ತವದಲ್ಲಿ, ಜೂಜು ತಪ್ಪು ಎಂಬ ಮಾತನ್ನು ಭಾರತೀಯರಿಗೆ ಕಾನೂನಿನ ಮೂಲಕ ಹೇಳುವ ಅಗತ್ಯ ಇಲ್ಲ.

ಆಧುನಿಕ ಆಡಳಿತ ವ್ಯವಸ್ಥೆ, ಆಧುನಿಕ ಕಾನೂನುಗಳು ರೂಪುಗೊಳ್ಳುವ ಮೊದಲೇ, ಜೂಜು ತಪ್ಪು ಎನ್ನುವ ಮಾತನ್ನು ಮಹಾಕಾವ್ಯವೊಂದರ ಮೂಲಕ ಹೇಳಿದ ನಿದರ್ಶನ ಭಾರತದಲ್ಲಿ ಇದೆ. ಜೂಜಾಡುವುದು ಸರಿ ಎಂದಾಗಿದ್ದರೆ ಬಹುಶಃ ಮಹಾಭಾರತ ಕಾವ್ಯವೇ ಹುಟ್ಟಿಕೊಳ್ಳುತ್ತಿರಲಿಲ್ಲವೇನೋ. ಜೂಜು ಬೇಡ ಎನ್ನುವುದು ಭಾರತದ ಮಟ್ಟಿಗೆ ಒಂದು ಅನುಕರಣೀಯ ಜೀವನಮೌಲ್ಯವೂ ಹೌದು. ಜೂಜಾಟದ ದುಷ್ಪರಿಣಾಮಗಳು ವರ್ತಮಾನದಲ್ಲಿಯೂ ಕಣ್ಣಿಗೆ ರಾಚುವಂತೆ ಇವೆ.

ದೇಶದಲ್ಲಿ ಇಂಟರ್ನೆಟ್‌ ಬಳಕೆ ಮಾಡುತ್ತಿರುವ ವ್ಯಕ್ತಿಗಳ ಪೈಕಿ ಶೇಕಡ 46ರಷ್ಟು ಮಂದಿ ಆನ್‌ಲೈನ್‌ ಮೂಲಕ ಒಂದಲ್ಲ ಒಂದು ಬಗೆಯ ಆಟವನ್ನು ಆಡುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ದೇಶದಲ್ಲಿ ಆನ್‌ಲೈನ್‌ ಆಟಗಳನ್ನು ಒದಗಿಸುವ ಉದ್ಯಮ ಬೃಹತ್ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಆನ್‌ಲೈನ್‌ ಮೂಲಕ ಆಡುವ ಆಟಗಳನ್ನು ಅಭಿವೃದ್ಧಿಪಡಿಸುವ ಕೆಲವು ಕಂಪನಿಗಳು ತಮ್ಮ ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಮುಕ್ತವಾಗಿಸಿವೆ, ಅಲ್ಲಿ ಲಕ್ಷಾಂತರ ಮಂದಿ ಸಣ್ಣ ಹೂಡಿಕೆದಾರರು ಹಣ ತೊಡಗಿಸಿದ್ದಾರೆ, ಈ ಕಂಪನಿಗಳ ಷೇರುಗಳು ಈಗ ಷೇರು ಮಾರುಕಟ್ಟೆಗಳಲ್ಲಿ ಮುಕ್ತವಾಗಿ ಮಾರಾಟ–ಖರೀದಿ ಆಗುತ್ತಿವೆ.

ಆನ್‌ಲೈನ್‌ ಮೂಲಕ ಆಡುವ ಆಟಗಳನ್ನು ಅಭಿವೃದ್ಧಿಪಡಿಸುವ ಉದ್ಯಮವು 2024ರ ವೇಳೆಗೆ ₹ 27 ಸಾವಿರ ಕೋಟಿ ಮೌಲ್ಯದ್ದಾಗಬಹುದು ಎನ್ನುತ್ತದೆ ಒಂದು ಅಂದಾಜು. 2014ರಿಂದ 2020ರ ನಡುವಿನ ಅವಧಿಯಲ್ಲಿ ಈ ಉದ್ಯಮವು ಸರಿಸುಮಾರು ₹ 2,500 ಕೋಟಿ ಬಂಡವಾಳ ಆಕರ್ಷಿಸಿದೆ ಎಂಬ ಅಂದಾಜು ಕೂಡ ಇದೆ. ಉದ್ಯಮವು ವಾರ್ಷಿಕ ಶೇಕಡ 22ರಷ್ಟು ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಮೇಪಲ್ ಕ್ಯಾಪಿಟಲ್ ಅಡ್ವೈಸರ್ಸ್ ವರದಿ ಹೇಳಿದೆ. ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಆಕರ್ಷಿಸಿರುವ, ಮುಂದೆ ಒಳ್ಳೆಯ ಬೆಳವಣಿಗೆ ಕಾಣುವ ಸಾಮರ್ಥ್ಯವನ್ನು ಹೊಂದಿರುವ ಈ ಉದ್ದಿಮೆಯು ನೂರಾರು ಕುಟುಂಬಗಳಿಗೆ ಆಸರೆ ಎಂಬುದರಲ್ಲಿ ಅನುಮಾನ ಇಲ್ಲ.

ಆನ್‌ಲೈನ್‌ ಮೂಲಕ ಆಡುವ, ಹಣವನ್ನು ಗೆಲ್ಲಬಹುದಾದ ಆಟಗಳಲ್ಲಿ ಎರಡು ವಿಧ. ಅದೃಷ್ಟದ ಮೂಲಕವೇ ಹಣವನ್ನು ಗೆದ್ದುಕೊಳ್ಳಲು ಅವಕಾಶ ಕಲ್ಪಿಸುವ ಆಟಗಳು ಒಂದು ಬಗೆಯದ್ದಾದರೆ, ಆಡುವವರ ಸಾಮರ್ಥ್ಯದ ಆಧಾರದಲ್ಲಿ ಹಣ ಗೆದ್ದುಕೊಳ್ಳಲು ಅವಕಾಶ ಕಲ್ಪಿಸುವ ಆಟಗಳು ಇನ್ನೊಂದು ಬಗೆಯವು. ಈಗ ವಿಧಾನಸಭೆಯು ಅನುಮೋದನೆ ನೀಡಿರುವ ತಿದ್ದುಪಡಿ ಮಸೂದೆಯು ಮೊದಲ ವರ್ಗದಲ್ಲಿ ಬರುವ ಆಟಗಳನ್ನು ಮಾತ್ರವೇ ನಿಷೇಧಿಸುತ್ತದೆ.

ವ್ಯಕ್ತಿಯು ತನ್ನ ಕೌಶಲದ ಆಧಾರದಲ್ಲಿ ಹಣ ಗೆದ್ದುಕೊಳ್ಳಲು ಅವಕಾಶ ಮಾಡಿಕೊಡುವ ಆನ್‌ಲೈನ್‌ ಆಟಗಳನ್ನು ಇದು ನಿಷೇಧ ಮಾಡುವುದಿಲ್ಲ ಎಂದು ಸರ್ಕಾರವು ವಿವರಣೆ ನೀಡಿದೆ. ಆದರೆ, ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರದಲ್ಲಿ ಕೌಶಲ ಆಧಾರಿತ ಆನ್‌ಲೈನ್‌ ಆಟಗಳೂ ನಿರ್ಬಂಧಕ್ಕೆ ಗುರಿಯಾಗಬಹುದು ಎನ್ನುವ ಆತಂಕವು ಕೆಲವು ಶಾಸಕರಿಂದಲೂ ಉದ್ಯಮ ವಲಯದಿಂದಲೂ ವ್ಯಕ್ತವಾಗಿದೆ. ಇಡೀ ಮಸೂದೆಯ ಯಶಸ್ಸು ಅಥವಾ ಸೋಲು ಈ ಆತಂಕವನ್ನು ಆತುಕೊಂಡಿದೆ. ಜೂಜನ್ನು ನಿಷೇಧಿಸುವ ಭರದಲ್ಲಿ ವ್ಯಕ್ತಿಯ ಕೌಶಲದ ಆಧಾರದಲ್ಲಿ ಮುನ್ನಡೆಯುವ ಆನ್‌ಲೈನ್‌ ಆಟಗಳೂ ನಿಷೇಧಗೊಂಡರೆ ಎರಡು ಬಗೆಯ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಅದುವರೆಗೆ ಸ್ಮಾರ್ಟ್‌ಫೋನ್‌ ಅಥವಾ ಕಂಪ್ಯೂಟರ್‌ ಮೂಲಕ ತನ್ನ ಪಾಡಿಗೆ ತಾನು ಆಟ ಆಡಿಕೊಂಡು ಇರುತ್ತಿದ್ದ ‘ನಿರಪರಾಧಿ’ ವ್ಯಕ್ತಿ ಇದ್ದಕ್ಕಿದ್ದಂತೆ ‘ಅಪರಾಧಿ’ ಆಗುತ್ತಾನೆ. ಇಂತಹ ಆಟಗಳನ್ನು ಅಭಿವೃದ್ಧಿಪಡಿಸುವ ಉದ್ಯಮ ಸೊರಗುತ್ತದೆ, ಆ ಉದ್ಯಮವನ್ನು ನೆಚ್ಚಿಕೊಂಡವರು ಕಷ್ಟ ಅನುಭವಿಸಬೇಕಾಗುತ್ತದೆ. ನಿರ್ಬಂಧಗಳ ಉದ್ದೇಶ ಒಳ್ಳೆಯದಾಗಿದ್ದರೂ ಅವುಗಳ ಪರಿಣಾಮವು ಕೆಟ್ಟದ್ದಾಗುತ್ತದೆ.

ಸರ್ಕಾರವು ಆನ್‌ಲೈನ್‌ ಆಟಗಳಲ್ಲಿ ಅದೃಷ್ಟದ ಬಲದಲ್ಲಿ ನಡೆಯುವಂಥವು ಯಾವುವು, ಕೌಶಲವನ್ನು ಆಧರಿಸಿ ನಡೆಯುವಂಥವು ಯಾವುವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು. ‘ಇದನ್ನು ಗುರುತಿಸುವ ಕೆಲಸ ಸರಿಯಾಗಿ ಆಗಿಲ್ಲ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಸರ್ಕಾರವು ಉದ್ಯಮದ ಪ್ರತಿನಿಧಿಗಳು, ಐ.ಟಿ. ತಜ್ಞರು ಹಾಗೂ ಕಾನೂನು ತಜ್ಞರು ಇರುವ ಸಮಿತಿಯನ್ನು ರಚಿಸಿ, ಆಟಗಳನ್ನು ಸ್ಪಷ್ಟವಾಗಿ ವರ್ಗೀಕರಿಸುವ ಕೆಲಸವನ್ನು ಮಾಡಬಹುದು. ಈ ಕಾರ್ಯದಲ್ಲಿ ಎಡವಿದರೆ ಒಂದು ಉದ್ಯಮ ಸೊರಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT