ಫಲಿತಾಂಶ ಏರಿಕೆ ಆಶಾದಾಯಕ; ಅನುತ್ತೀರ್ಣರು ಎದೆಗುಂದಬೇಕಿಲ್ಲ

ಮಂಗಳವಾರ, ಏಪ್ರಿಲ್ 23, 2019
27 °C
ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕೆಲವು ಜಿಲ್ಲೆಗಳು ಶೈಕ್ಷಣಿಕ ಸಾಧನೆಯಲ್ಲೂ ಹಿನ್ನಡೆ ಸಾಧಿಸಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಗಮನಿಸಬೇಕು

ಫಲಿತಾಂಶ ಏರಿಕೆ ಆಶಾದಾಯಕ; ಅನುತ್ತೀರ್ಣರು ಎದೆಗುಂದಬೇಕಿಲ್ಲ

Published:
Updated:
Prajavani

ಪಿಯು ಪರೀಕ್ಷೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಯಾವುದೇ ಗಂಭೀರ ತೊಡಕಿಗೆ ಆಸ್ಪದ ಕಲ್ಪಿಸದೆ, ಪರೀಕ್ಷೆ ನಡೆಸಿದ ಒಂದು ತಿಂಗಳ ಅವಧಿಯಲ್ಲೇ ಫಲಿತಾಂಶವನ್ನೂ ಪ್ರಕಟಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯಕ್ಷಮತೆ ಸ್ತುತ್ಯರ್ಹ. 6.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ 61.73ರ ಫಲಿತಾಂಶದ ಸಾಧನೆಯೂ ಆಶಾದಾಯಕ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ 2.17ರಷ್ಟು ಏರಿಕೆಯಾಗಿದೆ. ಹಿಂದಿನ ವರ್ಷಗಳ ಫಲಿತಾಂಶಕ್ಕೆ ಹೋಲಿಸಿದರೆ ಉತ್ತಮ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳ ಪೈಕಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ಉಡುಪಿ (ಶೇ 92.2), ದಕ್ಷಿಣ ಕನ್ನಡ (ಶೇ 90.91), ಕೊಡಗು (ಶೇ 83.31) ಹಾಗೂ ಉತ್ತರ ಕನ್ನಡ (ಶೇ 79.59) ಜಿಲ್ಲೆಗಳು ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಅಚ್ಚರಿ ಎನ್ನಬಹುದಾದ ಫಲಿತಾಂಶ ಎಂದರೆ, ಕಳೆದ ಬಾರಿ 26ನೇ ಸ್ಥಾನದಲ್ಲಿದ್ದ ವಿಜಯಪುರ ಈ ಬಾರಿ 14ನೇ ಸ್ಥಾನಕ್ಕೇರಿರುವುದು ಹಾಗೂ ಬಾಗಲಕೋಟೆ ಜಿಲ್ಲೆ 11ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿರುವುದು. ಹಿಂದಿನ ವರ್ಷ ಕೊನೆಯಲ್ಲಿದ್ದ ಚಿಕ್ಕೋಡಿ ಜಿಲ್ಲೆ ಈ ಬಾರಿ 25ನೇ ಸ್ಥಾನದಲ್ಲಿರುವುದೂ ಸಮಾಧಾನಕರ. ಶೇ 51.42 ಫಲಿತಾಂಶ ಸಾಧನೆಯ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಯಾದಗಿರಿ, ಬೀದರ್‌, ಕಲಬುರ್ಗಿ, ಬೆಳಗಾವಿ, ರಾಯಚೂರು, ಗದಗ ಜಿಲ್ಲೆಗಳು ಕೂಡ ನಿರಾಶಾದಾಯಕ ಸಾಧನೆಯೊಂದಿಗೆ ಪಟ್ಟಿಯಲ್ಲಿ ಕೊನೆಯಲ್ಲಿವೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಈ ಜಿಲ್ಲೆಗಳು ಶೈಕ್ಷಣಿಕ ಸಾಧನೆಯಲ್ಲೂ ಹಿನ್ನಡೆ ಸಾಧಿಸಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಗಮನಿಸಬೇಕು. ಬಾಲಕಿಯರು ಎಂದಿನಂತೆ ಹುಡುಗರಿಗಿಂತ ಬಹಳಷ್ಟು ಮುಂದಿದ್ದಾರೆ. ಬಾಲಕರ ಯಶಸ್ಸಿನ ಪ್ರಮಾಣ ಶೇ 55.29ರಷ್ಟಿದ್ದರೆ, ಶೇ 68.24ರಷ್ಟು ಹುಡುಗಿಯರು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿರುವುದು ಗಮನಾರ್ಹ. ಆದರೆ, ಸಾಮಾನ್ಯ ವರ್ಗದ ಶೇ 68.01ರ ಫಲಿತಾಂಶಕ್ಕೆ ಹೋಲಿಸಿದರೆ, ಪರಿಶಿಷ್ಟ ಜಾತಿ (ಶೇ 51.97) ಮತ್ತು ಪರಿಶಿಷ್ಟ ಪಂಗಡಗಳ (ಶೇ 53.34) ಸಾಧನೆ ಕಡಿಮೆಯಿರುವುದು ಕಳವಳಕಾರಿ. ಶೇ 100ರ ಫಲಿತಾಂಶದ ಸಾಧನೆ ಮಾಡಿರುವ 80 ಕಾಲೇಜುಗಳ ಸಾಧನೆಗಿಂತಲೂ, 94 ಕಾಲೇಜುಗಳ ಶೂನ್ಯ ಫಲಿತಾಂಶವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು.

ಪ್ರತಿವರ್ಷದ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಫಲಿತಾಂಶದ ಜೊತೆಗೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಎದೆಗುಂದುವ ಪ್ರಸಂಗಗಳೂ ವರದಿಯಾಗುತ್ತವೆ. ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ತಮ್ಮ ಭವಿಷ್ಯಕ್ಕೆ ಬರೆದ ಭಾಷ್ಯ ಎಂದು ಭಾವಿಸಿ ಖಿನ್ನರಾಗುತ್ತಾರೆ. ಇಂಥ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕಿದೆ. ಪರೀಕ್ಷೆಯ ಆಚೆಗೂ ಬದುಕಲಿಕ್ಕೆ ಬಹಳಷ್ಟು ಆಯ್ಕೆಗಳಿರುವುದನ್ನು ಮನದಟ್ಟು ಮಾಡಿಕೊಡುವ ಮೂಲಕ, ಕೈಚೆಲ್ಲಿ ಕೂತ ವಿದ್ಯಾರ್ಥಿಗಳನ್ನು ಹೊಸ ಸವಾಲುಗಳಿಗೆ ಸಜ್ಜುಗೊಳಿಸುವುದು ಅಗತ್ಯ. ಅನುತ್ತೀರ್ಣರಾದ ಅಥವಾ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಹಾನುಭೂತಿಯಿಂದ ಕಂಡು, ಹಿನ್ನಡೆಗೆ ಕಾರಣಗಳನ್ನು ಹುಡುಕಿ, ಪರಿಹಾರ ಹುಡುಕಿಕೊಡುವುದು ಆರೋಗ್ಯಕರ ಸಮಾಜದ ಕರ್ತವ್ಯವಾಗಿದೆ. ಸಿಇಟಿ ಹಾಗೂ ನೀಟ್‌ ಪರೀಕ್ಷೆಗಳು ನಡೆಯುವ ಮೊದಲೇ ಪಿಯು ಫಲಿತಾಂಶವನ್ನು ಪ್ರಕಟಿಸುವ ಪರಿಪಾಟ ಕೂಡ ಪರಾಮರ್ಶೆಗೆ ಒಳಗಾಗಬೇಕಾಗಿದೆ. ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡದ ವಿದ್ಯಾರ್ಥಿಗಳು ಸಹಜವಾಗಿ ನೀಟ್‌–ಸಿಇಟಿ ಪರೀಕ್ಷೆಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಮೇ 5ರಂದು ನಡೆಯುವ ನೀಟ್‌ ಪರೀಕ್ಷೆಗೆ 15 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್‌ 29–30ರಂದು ನಡೆಯುವ ಸಿಇಟಿ ಪರೀಕ್ಷೆಗೆ 1.90 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಈಗ ಪಿಯು ಫಲಿತಾಂಶ ಪ್ರಕಟವಾಗಿರುವುದರಿಂದ ಎಂಜಿನಿಯರಿಂಗ್‌, ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ಬರೆಯುವವರ ಸಂಖ್ಯೆ ಕುಸಿಯುವ ಸಾಧ್ಯತೆಯಿದೆ. ಹಾಗಾದಲ್ಲಿ ಅದರ ಲಾಭವನ್ನು ನೆರೆ ರಾಜ್ಯಗಳ ವಿದ್ಯಾರ್ಥಿಗಳು ಪಡೆಯಲಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ಸಿಇಟಿ–ನೀಟ್‌ ಪರೀಕ್ಷೆಗೆ ಮೊದಲೇ ಪಿಯು ಫಲಿತಾಂಶ ಪ್ರಕಟಿಸುವ  ಕ್ರಮದ ಸಾಧಕಬಾಧಕ ಕುರಿತು ಹೆಚ್ಚಿನ ಚರ್ಚೆ ನಡೆಯಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !