ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಂಜಯ್ ರಾವತ್‌ಗೆ ಜಾಮೀನು; ಇ.ಡಿ. ವರ್ತನೆಗೆ ತಪರಾಕಿ

Last Updated 16 ನವೆಂಬರ್ 2022, 19:17 IST
ಅಕ್ಷರ ಗಾತ್ರ

ಶಿವಸೇನಾ (ಉದ್ಧವ್ ಠಾಕ್ರೆ) ನಾಯಕ ಸಂಜಯ್ ರಾವತ್ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ. ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಧೀಶರು ಆಡಿರುವ ಮಾತು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಜಾರಿ ನಿರ್ದೇಶನಾಲಯದ (ಇ.ಡಿ) ವಿರುದ್ಧ ದೋಷಾರೋಪ ನಿಗದಿ ಮಾಡುವುದಕ್ಕೆ ಸಮನಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾವತ್ ಅವರನ್ನು ಆಗಸ್ಟ್‌ 1ರ ಮಧ್ಯರಾತ್ರಿ ಬಂಧಿಸಿದರು. ಇದಕ್ಕೂ ಮೊದಲು ರಾವತ್ ಅವರ ಮನೆ ಹಾಗೂ ಇತರ ಕೆಲವು ಜಾಗಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದರು. ರಾವತ್ ಅವರ ಬಂಧನವು ‘ಅಕ್ರಮ’ ಎಂದು ಕೋರ್ಟ್ ಹೇಳಿದೆ. ‘ಬಂಧನಕ್ಕೆ ಕಾರಣಗಳು ಇರಲಿಲ್ಲ, ಮೇಲ್ನೋಟಕ್ಕೆ ಇದು ಸೇಡಿನ ಕ್ರಮದಂತಿದೆ’ ಎಂದು ಕೂಡ ಅದು ಹೇಳಿದೆ. ಹಣದ ಅಕ್ರಮ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾವತ್ ಅವರನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ರಾವತ್ ಅವರೂ ಭಾಗಿಯಾಗಿದ್ದಾರೆ ಎಂದು ಇ.ಡಿ. ಹೇಳಿತ್ತು. ಜಾಮೀನು ಅರ್ಜಿಯನ್ನು ಮಾತ್ರ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕಾರಣ ಕೋರ್ಟ್‌, ಈ ಪ್ರಕರಣದ ಪೂರ್ವಾಪರಗಳ ಪರಿಶೀಲನೆಗೆ ಮುಂದಾಗಿಲ್ಲ. ಹೀಗಿದ್ದರೂ, ಅವರ ವಿರುದ್ಧದ ಆರೋಪಗಳು ಅವೆಷ್ಟು ದುರ್ಬಲವಾಗಿವೆ ಎಂಬುದನ್ನು ಕೋರ್ಟ್‌ನ ಮಾತುಗಳು ತೋರಿಸುತ್ತಿವೆ.

ವಿರೋಧ ಪಕ್ಷಗಳ ನಾಯಕರಿಗೆ ಕಿರುಕುಳ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವನ್ನು ಮತ್ತೆ ಮತ್ತೆ ಮಾಡಲಾಗುತ್ತಿದೆ. ರಾವತ್ ಪ್ರಕರಣವು ಈ ಆರೋಪವನ್ನು ಪುಷ್ಟೀಕರಿಸುವ ರೀತಿಯಲ್ಲಿ ಇದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತರ್ಕದ ನೆಲೆಯಲ್ಲಿ ಆಲೋಚಿಸಿದಂತೆ ಕಾಣುತ್ತಿಲ್ಲ. ಬದಲಿಗೆ, ರಾವತ್ ಅವರ ಮೇಲೆ ತಪ್ಪು ಹೊರಿಸುವ ಉದ್ದೇಶವು ಇ.ಡಿ. ಅಧಿಕಾರಿಗಳಿಗೆ ಇತ್ತು ಎಂಬುದನ್ನು ಆದೇಶದಲ್ಲಿ ಕೋರ್ಟ್‌ ಉಲ್ಲೇಖಿಸಿರುವ ಅಂಶಗಳು ಹೇಳುತ್ತಿವೆ. ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾವತ್ ಅವರಿಗೆ ಒಂದಿಷ್ಟು ಹಣ ಸಂದಾಯವಾಗಿದೆ ಎಂಬ ಆರೋಪ ಇದೆ. ಆದರೆ ಪ್ರಕರಣದಲ್ಲಿ ರಾವತ್ ಅವರ ಪಾತ್ರ ಏನಿತ್ತು ಎಂಬ ಬಗ್ಗೆ ಇ.ಡಿ. ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ರಾವತ್ ಅವರ ಒಡನಾಡಿ ಪ್ರವೀಣ್ ರಾವತ್ ಅವರನ್ನು ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಕೂಡ ಕೋರ್ಟ್ ಹೇಳಿದೆ.

ಪ್ರಕರಣವನ್ನು ಹಣಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ದಾಖಲಿಸಿಕೊಳ್ಳಬೇಕಾದ ಅಗತ್ಯವೇ ಇರಲಿಲ್ಲ. ಪ್ರಕರಣದಲ್ಲಿ ಉಲ್ಲೇಖವಾಗಿರುವ ಹಣವನ್ನು ಅಕ್ರಮವಾಗಿ ಗಳಿಸಿದ್ದು ಎನ್ನುವುದಕ್ಕೆ ಆಧಾರ ಇಲ್ಲ ಎಂದು ಕೂಡ ಅದು ಹೇಳಿದೆ. ಜಾರಿ ನಿರ್ದೇಶನಾಲಯವು ತನ್ನ ಅಧಿಕಾರವನ್ನು ಮಿತಿಮೀರಿ ಬಳಕೆ ಮಾಡಿಕೊಂಡಿದೆ. ಪ್ರಮುಖ ಆರೋಪಿಗೆ ತಪ್ಪಿಸಿಕೊಂಡು ತಿರುಗಲು ಅವಕಾಶ ಕಲ್ಪಿಸಿ, ಇತರ ಕೆಲವರನ್ನು ಇ.ಡಿ. ಬಂಧಿಸಿದೆ ಎಂದು ನ್ಯಾಯಾಲಯ ಹೇಳಿದೆ. ಅಕ್ರಮ ಬಂಧನಗಳು, ‘ಕೆಲವು ಹೆಸರುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ನೀತಿ’ಯ ಪರಿಣಾಮ ಎಂದು ಅದು ಹೇಳಿರುವುದು ಇ.ಡಿ. ಇದುವರೆಗೆ ಅನುಸರಿಸಿಕೊಂಡು ಬಂದ ಧೋರಣೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದಂತಿದೆ. ಸಂಜಯ್ ರಾವತ್ ಅವರನ್ನು ಜೈಲಿನಲ್ಲಿ ಇರಿಸಿದ್ದ ರೀತಿಯು ಅವರ ಆರೋಗ್ಯ ಸ್ಥಿತಿಗೆ ಸರಿಹೊಂದುವಂತೆ ಇರಲಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಬಂಧಿಸುವ ವಿಚಾರದಲ್ಲಿ ಬಹಳ ಮುತುವರ್ಜಿ ತೋರಿದ ಇ.ಡಿ., ವಿಚಾರಣೆಯಲ್ಲಿ ಅಷ್ಟೊಂದು ಆತುರ ತೋರಲಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇಂತಹ ಬಂಧನಗಳು ವ್ಯಕ್ತಿಗೆ ಕಿರುಕುಳ ನೀಡುವ ಉದ್ದೇಶದಿಂದ ಆಗಿರುತ್ತವೆಯೇ ವಿನಾ ಯಾವುದೋ ಅಪರಾಧದ ಕಾರಣಕ್ಕಾಗಿ ಆಗಿರುವುದಿಲ್ಲ ಎಂಬ ಆರೋಪಗಳನ್ನು ಪುಷ್ಟೀಕರಿಸುವಂತೆ ಇವೆ ಈ ಮಾತುಗಳು. ಕೆಲವು ‘ಪ್ರಕರಣ’ಗಳಲ್ಲಿ ವಾಸ್ತವದಲ್ಲಿ ಯಾವುದೇ ಅಪರಾಧ ನಡೆದಿರುವುದೇ ಇಲ್ಲ. ಇ.ಡಿ. ದಾಖಲಿಸುವ ಪ್ರಕರಣಗಳ ಪೈಕಿ ಅಪರಾಧಿಗಳಿಗೆ ಶಿಕ್ಷೆ ಆಗಿರುವುದು ಶೇಕಡ 0.5ರಷ್ಟು ಪ್ರಕರಣಗಳಲ್ಲಿ ಮಾತ್ರ. ಇದು ಇ.ಡಿ. ಕೆಲಸ ಮಾಡುತ್ತಿರುವ ರೀತಿ ಹೇಗಿದೆ ಎಂಬುದನ್ನೂ ತಿಳಿಸುತ್ತಿದೆ. ಇ.ಡಿ. ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರು ಕೋರ್ಟ್‌ ಆಡಿರುವ ಕಟು ಮಾತುಗಳಿಗೆ ನೇರವಾಗಿ ಉತ್ತರದಾಯಿ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT