ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್‌ ಮೂಡಿಸುವ ಪ್ರಶ್ನೆಗಳು ಅನುಮಾನ ಪರಿಹರಿಸುವ ಕೆಲಸವಾಗಲಿ

Last Updated 4 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2017ರಲ್ಲಿ ಅತ್ಯಾಧುನಿಕ ಯುದ್ಧ ಸಲಕರಣೆಗಳ ಖರೀದಿ ಒಪ್ಪಂದದ ಭಾಗವಾಗಿಇಸ್ರೇಲಿನ ಗೂಢಚರ್ಯೆ ಕುತಂತ್ರಾಂಶ ಪೆಗಾಸಸ್‌ ಅನ್ನು ಖರೀದಿಸಿತ್ತು. ಇಡೀ ಒಪ್ಪಂದದ ಒಟ್ಟು ಮೊತ್ತವು 2 ಬಿಲಿಯನ್ ಡಾಲರ್ (₹ 14.93 ಸಾವಿರ ಕೋಟಿ) ಎಂದು ಈಚೆಗೆ ಪ್ರಕಟವಾಗಿರುವ ಕೆಲವು ಮಾಧ್ಯಮ ವರದಿಗಳು ಹೇಳಿವೆ. ಈ ವರದಿಗಳು, ಅಕ್ರಮ ಗೂಢಚರ್ಯೆಗೆ ಸಂಬಂಧಿಸಿದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ. 2017ರಲ್ಲಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದಾಗ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ವರದಿಗಳು ಹೇಳಿವೆ. ಪೆಗಾಸಸ್ ಕುತಂತ್ರಾಂಶವನ್ನು ಬಳಸಿ ದೇಶದ ಕೆಲವು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ನ್ಯಾಯಮೂರ್ತಿಗಳು ಹಾಗೂ ಪತ್ರಕರ್ತರ ಮೇಲೆ ಕಳ್ಳಗಿವಿ ಇರಿಸಲಾಗಿತ್ತು ಎಂದು ತನಿಖಾ ಪತ್ರಕರ್ತರ ಒಕ್ಕೂಟವೊಂದು ಹಿಂದಿನ ವರ್ಷ ಬಹಿರಂಗಪಡಿಸಿದ ನಂತರದಲ್ಲಿ, ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ಪ್ರಶ್ನೆಗಳು ಮೂಡಿವೆ. ಪೆಗಾಸಸ್ ಕುತಂತ್ರಾಂಶವನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ಆ ಕುತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಸ್ಪಷ್ಟಪಡಿಸಿದೆ. ಹೀಗಿದ್ದರೂ, ಕೇಂದ್ರ ಸರ್ಕಾರವು ಈ ವಿವಾದದಲ್ಲಿ ತನ್ನ ಪಾತ್ರ ಏನು, ತನ್ನ ನಿಲುವು ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ತಾನು ಈ ತಂತ್ರಾಂಶವನ್ನು ಖರೀದಿಸಿದ್ದು ನಿಜವೇ, ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಮೋದಿ ನೇತೃತ್ವದ ಸರ್ಕಾರದ ಸಿದ್ಧಾಂತವನ್ನು, ನೀತಿಗಳನ್ನು ಹಾಗೂ ಕ್ರಿಯೆಗಳನ್ನು ವಿರೋಧಿಸುತ್ತಿರುವ ಹಲವು ನಾಗರಿಕರ ಮೊಬೈಲ್‌ ಫೋನ್‌ಗಳ ಮೇಲೆ ಅಕ್ರಮವಾಗಿ ಕಣ್ಣಿಡಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು. ಇದು ದೇಶದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಕಳ್ಳಗಣ್ಣು ಇರಿಸಲಾಗಿದ್ದ ಕೆಲವರ ಹೆಸರು ಬಹಿರಂಗ ವಾಗಿತ್ತು ಕೂಡ. ಇಂಥವರಲ್ಲಿ ಕೆಲವರು ತಮ್ಮ ಸ್ಮಾರ್ಟ್‌ ಫೋನ್‌ ಅನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದರಲ್ಲಿ ಪೆಗಾಸಸ್‌ ಕುತಂತ್ರಾಂಶ ಹೊಕ್ಕಿದ್ದಕ್ಕೆ ಸಾಕ್ಷ್ಯ ಲಭಿಸಿತ್ತು.

ಈಗ, ಕೇಂದ್ರ ಸರ್ಕಾರವು ಈ ಕುತಂತ್ರಾಂಶವನ್ನು ಖರೀದಿ ಮಾಡಿತ್ತು ಎಂದು ದಿ ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆಯು ವರದಿ ಮಾಡಿರುವುದು ಹಳೆಯ ಆರೋಪಗಳನ್ನು ಮತ್ತೊಮ್ಮೆ ಹೇಳಿದಂತೆ ಮಾತ್ರವೇ ಆಗುವುದಿಲ್ಲ. ಸಮಾಧಾನಕರ ಉತ್ತರ ಬಯಸುವ ಹಲವು ಪ್ರಶ್ನೆಗಳು ಆ ವರದಿಯಲ್ಲಿ ಇವೆ. ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ತಾನು ಶುದ್ಧಹಸ್ತ ಎಂಬುದನ್ನು ಸಾಬೀತು ಮಾಡಬೇಕು. ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಆಡಿರುವ ಮಾತು ಸೇರಿದಂತೆ, ಈವರೆಗಿನ ವಿವರಣೆಗಳು ವಿಶ್ವಾಸಾರ್ಹ ಆಗಿ ಉಳಿದಿಲ್ಲ. ಪೆಗಾಸಸ್‌ ಕುತಂತ್ರಾಂಶವನ್ನು ದೇಶದ ಪ್ರಜೆಗಳ ಮೇಲೆ ಕಣ್ಗಾವಲು ಇರಿಸಲು ಬಳಸಲಾಗಿದೆಯೇ ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾದ ಒಂದು ಅರ್ಜಿಯ ವಿಚಾರಣೆ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರವು ಸ್ಪಷ್ಟ ಉತ್ತರ ನೀಡಲಿಲ್ಲ. ಕೇಂದ್ರ ಸರ್ಕಾರದ ಉತ್ತರಗಳು ತೃಪ್ತಿಕರವಾಗಿ ಇಲ್ಲ, ಆ ಉತ್ತರಗಳನ್ನು ಒಪ್ಪಿಕೊಳ್ಳಲು ಆಗದು ಎಂದು ನ್ಯಾಯಾಲಯ ಹೇಳಿತು. ಸರ್ಕಾರವು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪ್ರತಿಬಾರಿಯೂ ನುಣುಚಿಕೊಳ್ಳಲು ಆಗದು, ದೇಶದ ಪ್ರಜೆಗಳ ವಿರುದ್ಧ ಪೆಗಾಸಸ್ ಕುತಂತ್ರಾಂಶವನ್ನು ಬಳಸಿಕೊಳ್ಳಲಾಗಿತ್ತೇ ಎಂಬುದನ್ನು ತಿಳಿಯುವ ಹಕ್ಕು ನಾಗರಿಕರಿಗೆ ಇದೆ ಎಂದು ನ್ಯಾಯಾಲಯ ಹೇಳಿತ್ತು. ನ್ಯಾಯಾಲಯವು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿ, ಕೇಂದ್ರ ಸರ್ಕಾರವು ಪೆಗಾಸಸ್‌ ಬಳಕೆ ಮಾಡಿಕೊಂಡಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದೆ. ಆದರೆ, ಹೀಗೆ ಸಮಿತಿಯೊಂದು ತನಿಖೆ ನಡೆಸುತ್ತಿದೆ ಎನ್ನುವುದು ಕೇಂದ್ರ ಸರ್ಕಾರಕ್ಕೆ ಸಾರ್ವಜನಿಕರಿಂದ ಮಾಹಿತಿ ಮುಚ್ಚಿಡಲು ಒಂದು ನೆವ ಆಗಬಾರದು.

ಮಿಲಿಟರಿ ಬಳಕೆಗೆ ಯೋಗ್ಯವಾದ ತಂತ್ರಜ್ಞಾನವನ್ನು ಬಳಸಿ ಪೆಗಾಸಸ್ ಕುತಂತ್ರಾಂಶ ರೂಪಿಸಲಾಗಿದೆ. ಈ ಕುತಂತ್ರಾಂಶ ಬಳಸಿ, ದೇಶದ ಗಡಿಯಾಚೆಗಿನ ಅಪಾಯಕಾರಿ ವ್ಯಕ್ತಿಗಳ ಮೇಲೆ ನಿಗಾ ಇರಿಸಲು ಸಾಧ್ಯ ಎಂಬ ಮಾತು ಇದೆ. ವ್ಯಕ್ತಿಗಳು ದಿನನಿತ್ಯ ಬಳಸುವ ಸ್ಮಾರ್ಟ್‌ಫೋನ್‌ ಅಥವಾ ಕಂಪ್ಯೂಟರ್‌ ಮೂಲಕವೇ ಆ ವ್ಯಕ್ತಿಯು ಪಠ್ಯದ ಮೂಲಕ, ಧ್ವನಿಯ ಮೂಲಕ ಹಾಗೂ ವಿಡಿಯೊ ಮೂಲಕ ನಡೆಸುವ ಸಂಭಾಷಣೆಗಳ ಮೇಲೆ ಕಳ್ಳಗಣ್ಣು ಇರಿಸಲು ಸಾಧ್ಯವಿದೆ. ಅಷ್ಟೇ ಅಲ್ಲದೆ, ಆ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ ಮೇಲೆ ನಿಯಂತ್ರಣ ಸಾಧಿಸಿ, ಅಲ್ಲಿ ಕೆಲವು ಡಿಜಿಟಲ್ ಕಡತಗಳನ್ನು ತೂರಿಸಲು ಸಾಧ್ಯವಿದೆ; ಅಲ್ಲಿರುವ ಕಡತಗಳನ್ನು ತಿರುಚಲು ಕೂಡ ಸಾಧ್ಯವಿದೆ ಎಂಬ ಅಭಿಪ್ರಾಯಗಳು ಇವೆ. ಇಂತಹ ಕುತಂತ್ರಾಂಶಗಳನ್ನು ಗೂಢಚರ್ಯೆ ಸಂಸ್ಥೆಗಳು ಬಳಕೆ ಮಾಡುವುದು ಸಹಜ ಆಗಿರಬಹುದು. ಆದರೆ, ಇಂತಹ ಕುತಂತ್ರಾಂಶಗಳನ್ನು ದೇಶದ ನಾಗರಿಕರ ವಿರುದ್ಧ ಬಳಸಿಕೊಳ್ಳುವುದು ಸ್ವೀಕಾರಾರ್ಹ ಅಲ್ಲ. ಆದರೆ, ಇದನ್ನು ದೇಶದ ಪ್ರಜೆಗಳ ವಿರುದ್ಧ ಬಳಕೆ ಮಾಡಲಾಗಿದೆ ಎಂಬ ಅನುಮಾನ ವ್ಯಾಪಕವಾಗಿರುವು
ದಂತೂ ನಿಜ. ಹಾಗೆ ಬಳಕೆ ಮಾಡಿಕೊಂಡಿದ್ದು ನಿಜವೇ ಆಗಿದ್ದರೆ, ಈಗಿನ ಆಡಳಿತಾರೂಢರು ಅಧಿಕಾರ ದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಉಳಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಪೆಗಾಸಸ್‌ ಸುತ್ತ ಸೃಷ್ಟಿಯಾಗಿರುವ ವಿವಾದಕ್ಕೆ ಅಷ್ಟು ಮಹತ್ವ ಇದೆ. ಹೀಗಾಗಿ, ಇಡೀ ಪ್ರಕರಣದ ವಿಚಾರ ವಾಗಿ ತಾನು ಶುದ್ಧಹಸ್ತ ಎಂಬುದನ್ನು ದೇಶಕ್ಕೆ ತೋರಿಸಬೇಕಾದುದು ಕೇಂದ್ರ ಸರ್ಕಾರದ ಹೊಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT