ಶುಕ್ರವಾರ, ಮೇ 29, 2020
27 °C

ರಫೇಲ್ ಖರೀದಿ ವಿವಾದ ಮುಗಿಯದ ಕತೆ

ಎಡಿಟ್‌ Updated:

ಅಕ್ಷರ ಗಾತ್ರ : | |

Prajavani

ರಫೇಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರ ಕುರಿತು ಮಹಾಲೇಖಪಾಲರ (ಸಿಎಜಿ) ಬಹು ನಿರೀಕ್ಷಿತ ವರದಿ ಕಡೆಗೂ ಕೆಲ ದಿನಗಳ ಹಿಂದೆ ಹೊರಬಿದ್ದಿತು. 16ನೇ ಲೋಕಸಭೆಯ ಅವಧಿ ತೀರಿದ ದಿನ (ಫೆ. 13) ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಸದನಗಳಲ್ಲಿ ಚರ್ಚೆಗೆ ಅವಕಾಶವೇ ಉಳಿಯಲಿಲ್ಲ. ಆಡಳಿತ ಪಕ್ಷಕ್ಕೆ ಅನುಕೂಲಕರ ಎಂದು ಮೇಲ್ನೋಟಕ್ಕೆ ಕಾಣುವ ಈ ವರದಿ ಹಲವು ಸುಡು ಸುಡು ಪ್ರಶ್ನೆಗಳನ್ನು ಚಾಪೆಯ ಕೆಳಗೆ ತಳ್ಳಿಬಿಟ್ಟಿದೆ ಎಂಬ ಸಂದೇಹಗಳಿಗೆ ಎಡೆಮಾಡಿದೆ. ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು ಎಂಬ ಭಾವನೆಗೆ ಇಂಬು ನೀಡಿದೆ. ರಫೇಲ್ ಖರೀದಿ ಮತ್ತು ನೋಟು ರದ್ದತಿ ಕುರಿತು ಸಿಎಜಿ ವರದಿ ನೀಡಿಕೆಯಲ್ಲಿ ‘ನೀತಿರಹಿತ ಮತ್ತು ಅಸಮರ್ಥನೀಯ ವಿಳಂಬ’ ಆಗಿದೆ ಎಂದು ಆಪಾದಿಸಿ ಅಖಿಲ ಭಾರತ ಸೇವೆಗಳ 60 ಮಂದಿ ನಿವೃತ್ತ ಹಿರಿಯ ಅಧಿಕಾರಿಗಳು ಕಳೆದ ನವೆಂಬರ್ ತಿಂಗಳಿನಲ್ಲಿ ಬಹಿರಂಗ ಪತ್ರ ಬರೆದಿದ್ದ ವಿರಳ ವಿದ್ಯಮಾನವನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುವುದು ಅಪ್ರಸ್ತುತ ಅಲ್ಲ.

ಈ ಹಿಂದೆ ರಾಜೀವ್‌ ಗಾಂಧಿ ಅವರ ಆಡಳಿತಾವಧಿಯ ಬೊಫೋರ್ಸ್ ಫಿರಂಗಿ ಖರೀದಿ ವ್ಯವಹಾರದ ಅಕ್ರಮಗಳ ಮೇಲೆ ಬೆಳಕು ಚೆಲ್ಲುವ ವರದಿಗಳ ಸರಣಿಯನ್ನೇ ಇಂಗ್ಲಿಷ್ ದಿನಪತ್ರಿಕೆಯೊಂದು ಪ್ರಕಟಿಸಿತ್ತು. ಅದೇ ಪತ್ರಿಕೆ ಇದೀಗ ರಫೇಲ್ ಖರೀದಿ ವ್ಯವಹಾರ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ರಫೇಲ್ ಖರೀದಿ ಕುದುರಿಸುವ ಅಂತಿಮ ಒಪ್ಪಂದದಲ್ಲಿನ ಹಲವು ದೋಷಗಳ ಕುರಿತು ಅಸಮ್ಮತಿಗಳು ಹೊರಬಿದ್ದಿವೆ. ರಫೇಲ್ ಖರೀದಿ ದರಕ್ಕೆ ಸಂಬಂಧಿಸಿದ ಗೊಂದಲದ ಜೊತೆಗೆ ಈ ‘ಆಫ್‌ಸೆಟ್’ ಪಾಲುದಾರಿಕೆಯನ್ನು ಅನಿಲ್‌ ಅಂಬಾನಿ ಕಂಪನಿಗೆ ನೀಡಿರುವ ಕ್ರಮವೂ ಭಾರಿ ವಿವಾದ ಎಬ್ಬಿಸಿದೆ. ಈ ಅಂಶಗಳನ್ನು ಸಿಎಜಿ ವರದಿ ಗಣನೆಗೆ ತೆಗೆದುಕೊಂಡಿಲ್ಲ. ಹಾಲಿ ಎನ್‌ಡಿಎ ಸರ್ಕಾರದ ರಫೇಲ್ ಖರೀದಿ ಒಡಂಬಡಿಕೆ 2012ರ ಯುಪಿಎ ಒಪ್ಪಂದಕ್ಕಿಂತ ಒಟ್ಟಾರೆ ಶೇ 2.86ರಷ್ಟು ಅಗ್ಗ ಎಂದು ಸಿಎಜಿ ವರದಿ ಹೇಳಿದೆ. ಚುನಾವಣೆಯ ಹೊಸ್ತಿಲಲ್ಲಿ ಈ ಅಂಶ ಮೋದಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ನೆಮ್ಮದಿ ನೀಡಿದೆ. ಆದರೆ, ಯುಪಿಎ ಒಡಂಬಡಿಕೆಗಿಂತ ತನ್ನ ಒಪ್ಪಂದವು ಶೇ 9ರಷ್ಟು ಅಗ್ಗ ಎಂಬುದು ಸರ್ಕಾರದ ಪ್ರತಿಪಾದನೆಯಾಗಿತ್ತು. ಸಿಎಜಿ ವರದಿಯು ಈ ವ್ಯವಹಾರದ ಇತರ ಹಲವು ಸಂದೇಹಗಳನ್ನು ನಿವಾರಿಸಿಲ್ಲ.

ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಒಪ್ಪಿಸುವ ಇಂದಿನ ಎನ್‌ಡಿಎ ಮತ್ತು ಅಂದಿನ ಯುಪಿಎ ‘ಬಟವಾಡೆ ವೇಳಾಪಟ್ಟಿ’ಗಳ ನಡುವಣ ಅಂತರ ಒಂದು ತಿಂಗಳು ಮಾತ್ರ. ವಿಮಾನಗಳನ್ನು ಒದಗಿಸುವ ಡಾಸೋ ಏವಿಯೇಷನ್ ಕಂಪನಿಗೆ ‘ಬ್ಯಾಂಕ್ ಗ್ಯಾರಂಟಿ’ಯ ವಿನಾಯಿತಿ ನೀಡಿಕೆಯನ್ನು ವರದಿಯು ಪ್ರಶ್ನಿಸಿಲ್ಲ. ಈ ವಿನಾಯಿತಿಯ ಲಾಭವನ್ನು ಇಡಿಯಾಗಿ ಆ ಕಂಪನಿಯೇ ಅನುಭವಿಸಿದೆ. ಈ ‘ಲಾಭ’ವನ್ನು ಭಾರತದ ರಕ್ಷಣಾ ಸಚಿವಾಲಯಕ್ಕೆ ನೀಡಬೇಕಿತ್ತೆಂದು ಸಿಎಜಿ ವರದಿ ಹೇಳುತ್ತದೆ. ಆದರೆ ಈ ‘ಲಾಭ’ ಎಷ್ಟು ಎಂಬುದನ್ನು ನಗದು ಮೊತ್ತಕ್ಕೆ ಪರಿವರ್ತಿಸಿ ತನ್ನ ವರದಿಯಲ್ಲಿ ನಮೂದಿಸಿಲ್ಲ. ಯುಪಿಎ ಅವಧಿಯ ಒಡಂಬಡಿಕೆ ಪ್ರಕಾರ ಡಾಸೋ ಕಂಪನಿ ಬ್ಯಾಂಕ್ ಶುಲ್ಕಗಳನ್ನು ನೀಡಬೇಕಿತ್ತು. ಹಾಲಿ ಒಪ್ಪಂದ ಈ ಶುಲ್ಕಗಳಿಂದ ಮುಕ್ತವಾಗಿದೆ. ಹಾಗಿದ್ದಲ್ಲಿ ಹಾಲಿ ಒಪ್ಪಂದವು ಯುಪಿಎ ಒಪ್ಪಂದಕ್ಕಿಂತ ಶೇ 2.86ಕ್ಕಿಂತ ಇನ್ನೂ ಹೆಚ್ಚು ಅಗ್ಗವಾಗಬೇಕಿತ್ತು ಎಂಬ ವಾದವಿದೆ. ಯುಪಿಎ ಒಪ್ಪಂದದ ಪ್ರಕಾರ, ಒಟ್ಟು 126 ಯುದ್ಧ ವಿಮಾನಗಳನ್ನು ಖರೀದಿಸುವ ಉದ್ದೇಶವಿತ್ತು. ಈ ಸಂಖ್ಯೆಯನ್ನು ಹಾಲಿ ಒಪ್ಪಂದವು ಏಕಾಏಕಿ 36ಕ್ಕೆ ಇಳಿಸಿದ ಕುರಿತು ಸಿಎಜಿ ವರದಿ ಮೌನ ವಹಿಸಿರುವುದು ಕುತೂಹಲಕರ. ಬಿಡ್‌ ಸಲ್ಲಿಕೆಯ ಕೊನೆಯ ದಿನಾಂಕ ತೀರಿದ ನಂತರವೂ ಡಾಸೋ ಕಂಪನಿಯು ಒಪ್ಪಿಸಿದ ಹೆಚ್ಚುವರಿ ವಾಣಿಜ್ಯ ಪ್ರಸ್ತಾವಗಳನ್ನು ಅಂಗೀಕರಿಸಿರುವುದು ಆರ್ಥಿಕ ಕಟ್ಟಲೆಗಳ ಔಚಿತ್ಯದ ನಿಚ್ಚಳ ಉಲ್ಲಂಘನೆ. ಸಮಾಧಾನ ದೊರೆಯದ ಶಂಕೆಗಳು ಮತ್ತು ಪ್ರಶ್ನೆಗಳ ಪಟ್ಟಿ ದೊಡ್ಡದು. ಸಮರ ವಿಮಾನ ಖರೀದಿ ಕುರಿತ ರಾಜಕೀಯ ಸಮರ ಇಲ್ಲಿಗೇ ನಿಲ್ಲುವ ಸೂಚನೆಗಳು ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು