ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌: ಮಾಧ್ಯಮದ ಮಹತ್ವ ಎತ್ತಿಹಿಡಿದ ‘ಸುಪ್ರೀಂ’ ತೀರ್ಪು

Last Updated 11 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪಿನ ಮರುಪರಿಶೀಲನೆಯನ್ನು ನಿರ್ಧರಿಸುವ ಹಾದಿಯಲ್ಲಿ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದೆ. ರಫೇಲ್ ಖರೀದಿಯಲ್ಲಿ ನಡೆದಿರಬಹುದಾದ ಅವ್ಯವಹಾರದತ್ತ ಬೊಟ್ಟು ಮಾಡುವ ಕೆಲವು ದಾಖಲೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಇದೇ ಆಧಾರದ ಮೇಲೆ, ರಫೇಲ್ ಖರೀದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಲಾಗಿತ್ತು. ಇದನ್ನು ವಿರೋಧಿಸಿದ್ದ ಸಾಲಿಸಿಟರ್ ಜನರಲ್ ‘ಮಾಧ್ಯಮಗಳಲ್ಲಿ ಪ್ರಕಟವಾದ ದಾಖಲೆಗಳನ್ನು ಸಾಕ್ಷ್ಯವೆಂದು ಪರಿಗಣಿಸಬಾರದು. ಅವು ಕಳವು ಮಾಡಲಾದ ದಾಖಲೆಗಳು’ ಎಂಬ ಅಸಂಬದ್ಧ ವಾದ ಮಂಡಿಸಿದ್ದರು. ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಅಲ್ಲಗಳೆದಿದ್ದು, ಮಾಧ್ಯಮಗಳಲ್ಲಿ ಪ್ರಕಟವಾದ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದು ಮಾಧ್ಯಮ ಸ್ವಾತಂತ್ರ್ಯದ ಮಟ್ಟಿಗೆ ಒಂದು ಮಹತ್ವದ ತೀರ್ಪು. ರಫೇಲ್ ವಿಮಾನ ಖರೀದಿ ವ್ಯವಹಾರದಲ್ಲಿ ಅಕ್ರಮ ನಡೆದಿದೆಯೇ ಇಲ್ಲವೇ ಎಂಬುದನ್ನು ತನಿಖೆಯೊಂದು ಸಾಬೀತು ಮಾಡಬೇಕು. ಆದರೆ ಕೇಂದ್ರ ಸರ್ಕಾರ ಈ ತನಕ ವರ್ತಿಸಿರುವ ಬಗೆಯನ್ನು ನೋಡಿದಾಗ, ಈ ಖರೀದಿ ವ್ಯವಹಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಂತೂ ಸ್ಪಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರನ್ನೂ ಒಳಗೊಂಡು ಕೇಂದ್ರ ಸರ್ಕಾರ ಸತತವಾಗಿ ತಪ್ಪು ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ ಎಂದು ಹೇಳುತ್ತಲೇ ಅನೇಕ ದಾಖಲೆಗಳನ್ನು ಒದಗಿಸಿರಲಿಲ್ಲ. ಮಾಧ್ಯಮಗಳಲ್ಲಿ ಇವು ಪ್ರಕಟವಾದಾಗಲೂ ಅದು ಬೇರೆಯೇ ವಾದಗಳನ್ನು ಮಂಡಿಸಿತು. ಅದರಲ್ಲಿ ಬಹುಮುಖ್ಯವಾದುದು ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ತೊಡಗಿದ್ದು. ಅಷ್ಟು ಸಾಲದು ಎಂಬಂತೆ ಈಗ ಅಪ್ರಸ್ತುತವಾಗಿರುವ ‘ಅಧಿಕೃತ ರಹಸ್ಯ ಕಾಯ್ದೆ’ಯನ್ನು ಬಳಸಿಕೊಂಡು ಕೇಸು ದಾಖಲಿಸುತ್ತೇನೆ ಎಂಬ ಬೆದರಿಕೆಯನ್ನೂ ಒಡ್ಡಿತು. ರಫೇಲ್ ಖರೀದಿ ವ್ಯವಹಾರದಲ್ಲಿ ಸರ್ಕಾರಕ್ಕೆ ಮುಚ್ಚಿಡುವಂಥದ್ದೇನೂ ಇಲ್ಲದಿದ್ದರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದರಲ್ಲಿ ಅದೇಕೆ ಸೋತಿತು? ರಫೇಲ್‌ ಖರೀದಿಯಲ್ಲಿ ಅಕ್ರಮ ಆಗಿಲ್ಲ ಎಂಬುದನ್ನು ಸಂಶಯಾತೀತವಾಗಿ ಸಾಬೀತು ಮಾಡಬೇಕಿದ್ದ ಸರ್ಕಾರ, ಅದರ ಬದಲಿಗೆ ಪ್ರಶ್ನಿಸಿದವರ ಮೇಲೇ ಸತತ ದಾಳಿ ನಡೆಸಿತು. ಪರಿಣಾಮವಾಗಿ ಅಕ್ರಮದ ಕುರಿತು ಸಂಶಯ ಹೆಚ್ಚುತ್ತಲೇ ಹೋಯಿತು.

ಸುಪ್ರೀಂ ಕೋರ್ಟ್‌ನ ಸದ್ಯದ ತೀರ್ಪು ರಫೇಲ್ ಖರೀದಿಯ ಸುತ್ತ ಹರಡಿರುವ ನಿಗೂಢವನ್ನೇನೂ ನಿವಾರಿಸಿಲ್ಲ. ಈ ತೀರ್ಪಿನ ಮಹತ್ವವಿರುವುದು ಮಾಧ್ಯಮಗಳಲ್ಲಿ ಪ್ರಕಟವಾದ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಿರುವುದರಲ್ಲಿ. ಸರ್ಕಾರ ಸತತವಾಗಿ ಪ್ರತಿಪಾದಿಸುತ್ತಾ ಬಂದ ಹಲವು ವಿಚಾರಗಳು ಸುಳ್ಳು ಎಂಬುದನ್ನು ಈ ದಾಖಲೆಗಳು ಸಾಬೀತು ಪಡಿಸುತ್ತವೆ. ಮೊದಲನೆಯದ್ದು, ರಫೇಲ್ ಖರೀದಿಯ ಚರ್ಚೆಯಲ್ಲಿ ಅಧಿಕೃತ ಚರ್ಚಾತಂಡದ ಹೊರತು ಬೇರಾರೂ ಮಧ್ಯಪ್ರವೇಶಿಸಿಲ್ಲ ಎಂಬುದು ಸರ್ಕಾರದ ವಾದವಾಗಿತ್ತು. ಆದರೆ ರಕ್ಷಣಾ ಇಲಾಖೆಯ ಅಧಿಕೃತ ಖರೀದಿ ವ್ಯವಹಾರ ತಂಡ ತನ್ನ ಕೆಲಸದಲ್ಲಿ ಪ್ರಧಾನಿ ಕಚೇರಿ ಮಧ್ಯಪ್ರವೇಶಿಸಿದ್ದನ್ನು ದಾಖಲಿಸಿದೆ. ಎರಡನೆಯದ್ದು, ರಕ್ಷಣಾ ಸಲಹೆಗಾರ ಅಜಿತ್ ಡೊಭಾಲ್‌ ಅವರ ಪಾತ್ರ ಈ ವ್ಯವಹಾರದಲ್ಲಿ ಇರುವುದಕ್ಕೂ ದಾಖಲೆಗಳಿವೆ. ಈ ಮಧ್ಯಪ್ರವೇಶದ ನಂತರವೇ ಒಪ್ಪಂದಕ್ಕೆ ಫ್ರಾನ್ಸ್ ಸರ್ಕಾರದಿಂದಖಾತರಿ ಮತ್ತು ಬ್ಯಾಂಕ್ ಖಾತರಿಗಳ ಷರತ್ತನ್ನು ತೆಗೆದುಹಾಕಲಾಯಿತು ಎಂದು ಮಾಧ್ಯಮ ವರದಿಗಳು ಹೇಳಿದ್ದವು. ಅಂದರೆ ಈ ತನಕ ಕೇಂದ್ರ ಸರ್ಕಾರವು ಸಾರ್ವಜನಿಕರು ಮತ್ತು ನ್ಯಾಯಾಲಯವನ್ನು ಸತತವಾಗಿ ತಪ್ಪುದಾರಿಗೆಳೆಯುತ್ತಲೇ ಇತ್ತು ಎಂದರ್ಥವಲ್ಲವೇ? ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನಗಿಂತ ದೊಡ್ಡ ದೇಶಭಕ್ತರುಂಟೇ ಎಂಬ ಭಾವುಕ ಪ್ರಶ್ನೆಗಳನ್ನು ಕೇಳುತ್ತಿತ್ತೇ ಹೊರತು, ಅಕ್ರಮ ನಡೆದಿಲ್ಲ ಎಂದು ಸಂಶಯಾತೀತವಾಗಿ ಪ್ರತಿಪಾದಿಸಿರಲಿಲ್ಲ. ಸಾಲಿಸಿಟರ್ ಜನರಲ್ ಅವರ ವಾದವೂ ಹೆಚ್ಚುಕಡಿಮೆ ಇದನ್ನೇ ಹೋಲುತ್ತಿತ್ತು. ಚುನಾವಣೆಗಳ ಸಂದರ್ಭದಲ್ಲಿ ಮೋದಿ ಮತ್ತು ಬಿಜೆಪಿಯ ಮಟ್ಟಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ನಕಾರಾತ್ಮಕವೇ ಸರಿ. ಆದರೆ ಇದನ್ನು ಅವರೇ ಆಹ್ವಾನಿಸಿಕೊಂಡರು ಎಂಬುದು ಹೆಚ್ಚು ನಿಜ. ಮಾಧ್ಯಮ ಸ್ವಾತಂತ್ರ್ಯ ಮತ್ತು ಸಾಕ್ಷ್ಯಗಳ ಪರಿಗಣನೆಯಲ್ಲಿ ತಾಂತ್ರಿಕ ಸಮರ್ಪಕತೆಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯ ಎಂಬುದನ್ನು ಎತ್ತಿ ಹಿಡಿಯುವ ಮೂಲಕ ನ್ಯಾಯಾಲಯವು ಪ್ರಜಾಪ್ರಭುತ್ವವನ್ನು ಬಲಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT