ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌ ವಿವಾದ: ಸಂಶಯ ನಿವಾರಿಸಿ ಮಾಧ್ಯಮ ಹಣಿಯುವ ಕೆಲಸ ಬೇಡ

Last Updated 4 ಮೇ 2019, 14:05 IST
ಅಕ್ಷರ ಗಾತ್ರ

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ. ಇಲ್ಲಿಯತನಕ ರಕ್ಷಣಾ ಇಲಾಖೆಯ ಖರೀದಿ ನಿಯಮಾವಳಿಗಳ ಪರಿಧಿಯೊಳಗಿದ್ದ ವಿವಾದ ಈಗ ಮಾಧ್ಯಮ ಸ್ವಾತಂತ್ರ್ಯದ ವ್ಯಾಪ್ತಿಗೂ ಬಂದು ತಲುಪಿದೆ. ‘ರಾಷ್ಟ್ರೀಯ ಭದ್ರತೆ’ ಎಂಬ ಗುರಾಣಿಯನ್ನು ಬಳಸಿಕೊಂಡು ಆಡಳಿತಾರೂಢರು ಏನೇನು ಮಾಡಬಹುದು ಎಂಬುದಕ್ಕೆ ನಿದರ್ಶನವಾಗುವಂತೆ ಸರ್ಕಾರದ ವಾದಗಳಿವೆ.

ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ ಮುಂದೆ ಗುರುವಾರ ವಾದ ಮಂಡಿಸಿದ ಅಟಾರ್ನಿ ಜನರಲ್ ‘ದ ಹಿಂದೂ ಮತ್ತು ಸುದ್ದಿ ಸಂಸ್ಥೆ ಎಎನ್ಐ ಬಹಿರಂಗಪಡಿಸಿರುವ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿರುವ ದಾಖಲೆಗಳು. ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿದೆ’ ಎಂದಿದ್ದಾರೆ. ರಫೇಲ್ ಖರೀದಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಈ ವಾದದ ಮೂಲಕ ಸರ್ಕಾರ ಪರೋಕ್ಷವಾಗಿ ಒಪ್ಪಿಕೊಂಡಿದೆ. ರಫೇಲ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆ ಆರಂಭದಿಂದಲೂ ವಿವಾದಾಸ್ಪದವಾಗಿತ್ತು. ಆದರೆ ರಕ್ಷಣಾ ಉಪಕರಣಗಳಿಗೆ ಸಂಬಂಧಿಸಿದ ಖರೀದಿಯಾಗಿರುವುದರಿಂದ ಪೂರ್ಣ ವಿವರಗಳನ್ನು ಬಹಿರಂಗವಾಗಿ ನೀಡುವುದು ಯಾವುದೇ ಸರ್ಕಾರಕ್ಕೂ ಕಷ್ಟಸಾಧ್ಯವೆಂಬ ನೆಲೆಯಲ್ಲಿ ಇದನ್ನು ಒಪ್ಪಿಕೊಳ್ಳಬಹುದಾಗಿತ್ತು.

ಖರೀದಿಯ ಕುರಿತಂತೆ ತನಿಖೆಗೆ ಆಗ್ರಹಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೂಡಾ ಇದೇ ನಿಲುವು ತಳೆದಿತ್ತು. ಆದರೆ ಸರ್ಕಾರ ಮುಚ್ಚಿಟ್ಟಿದ್ದ ಅನೇಕ ವಿವರಗಳು ದಿನಗಳು ಉರುಳಿದಂತೆ ಹೊರಬಂದವು. ಬಹಳ ಮುಖ್ಯವಾದುದು ಖರೀದಿಯ ವಿಚಾರದಲ್ಲಿ ಪ್ರಧಾನಿ ಕಚೇರಿಯ ಮಧ್ಯಪ್ರವೇಶದ ಸಂಗತಿ. ಇದನ್ನು ರಕ್ಷಣಾ ಸಚಿವಾಲಯದ ಅಧಿಕಾರಿಗಳೇ ಆಕ್ಷೇಪಿಸಿದ್ದರು. ಇದಕ್ಕೆ ಸಂಬಂಧಿಸಿದ ರಕ್ಷಣಾ ಸಚಿವರ ಟಿಪ್ಪಣಿ ಕೂಡಾ ಪ್ರಧಾನಿ ಕಚೇರಿಯ ಮಧ್ಯಪ್ರವೇಶವನ್ನೇನೂ ಅಲ್ಲಗಳೆದಿರಲಿಲ್ಲ. ಆದರೆ ಈ ವಿಚಾರವನ್ನು ಸುಪ್ರೀಂ ಕೋರ್ಟ್‌ನಿಂದಲೂ ಸರ್ಕಾರ ಮುಚ್ಚಿಟ್ಟಿತ್ತು. ಬೆಲೆ, ಬ್ಯಾಂಕ್ ಖಾತರಿ, ಫ್ರಾನ್ಸ್ ಸರ್ಕಾರದ ಖಾತರಿಯ ವಿಷಯದಲ್ಲಿ ಸರ್ಕಾರ ಸತ್ಯ ನುಡಿಯುತ್ತಿಲ್ಲ ಎಂಬುದನ್ನು ‘ದ ಹಿಂದೂ’ ಪ್ರಕಟಿಸಿದ ತನಿಖಾ ವರದಿಗಳು ಬಹಿರಂಗಪಡಿಸಿದವು.

ರಕ್ಷಣಾ ಉಪಕರಣಗಳ ಖರೀದಿಯೊಂದು ವಿವಾದಾತ್ಮಕವಾದಾಗ ಅದನ್ನು ಸ್ಪಷ್ಟವಾಗಿ ವಿವರಿಸುವ ಹೊಣೆಗಾರಿಕೆಯನ್ನು ಸರ್ಕಾರ ತೋರಿಸಬೇಕಿತ್ತು. ಗೋಪ್ಯವಾಗಿರುವ ವಿಚಾರಗಳನ್ನು ವಿರೋಧ ಪಕ್ಷಗಳೊಂದಿಗೆ ಅಧಿಕೃತವಾಗಿ ಹಂಚಿಕೊಳ್ಳುವುದಕ್ಕೂ ನಿಯಮಬದ್ಧವಾದ ಅವಕಾಶಗಳಿವೆ. ಅದನ್ನು ಬಳಸಿಕೊಂಡು, ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂಬುದನ್ನು ವಿರೋಧ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರ ಇದ್ಯಾವುದನ್ನೂ ಮಾಡಲಿಲ್ಲ. ತನಿಖಾ ವರದಿ ಪ್ರಕಟಿಸಿದ ಪತ್ರಿಕೆಯು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದರಲ್ಲಿ ಮಾಧ್ಯಮ ಪಾಲಿಸಬೇಕಾದ ಧರ್ಮವನ್ನು ನಿರ್ವಹಿಸಿದೆ. ‘ಅಧಿಕೃತ ರಹಸ್ಯ ಕಾಯ್ದೆ’ಯನ್ನು ಬಳಸಿ ಮಾಧ್ಯಮ ಸ್ವಾತಂತ್ರ್ಯವನ್ನು ಹಣಿಯುವುದಕ್ಕೆ ಹೊರಟಿರುವುದು ಖಂಡನೀಯ. ರಕ್ಷಣಾ ಉಪಕರಣಗಳ ಖರೀದಿಯಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದಿಂದ ಪಾರಾಗಲು ‘ದೇಶ ರಕ್ಷಣೆ’ ಎಂಬ ಗುರಾಣಿ ಬಳಸಲು ಅವಕಾಶವಿರಬಾರದು.

ರಫೇಲ್ ಕುರಿತ ತನಿಖಾ ವರದಿಗಳು ಪ್ರಕಟವಾಗಲು ಆರಂಭಿಸಿ ತಿಂಗಳೇ ಉರುಳಿತು. ಈ ಅವಧಿಯಲ್ಲೆಂದೂ ದಾಖಲೆಗಳ ಕಳವಿನ ಬಗ್ಗೆ ಮಾತನಾಡದೇ ಇದ್ದ ಸರ್ಕಾರ, ಸುಪ್ರೀಂ ಕೋರ್ಟ್‌ ಎದುರು ಅದನ್ನು ಈಗ ಪ್ರಸ್ತಾಪಿಸಿರುವುದೇ ಅದರ ನಡೆಯ ಕುರಿತು ಸಂಶಯ ಹುಟ್ಟಿಸುತ್ತಿದೆ. ಬೊಫೋರ್ಸ್ ಖರೀದಿಯಲ್ಲಿ ನಡೆದ ಹಗರಣವೂ ಬಯಲಿಗೆ ಬಂದದ್ದು ಮಾಧ್ಯಮ ತನಿಖಾ ವರದಿಯಿಂದಲೇ ಎಂಬುದನ್ನು ಆಡಳಿತಾರೂಢರು ಮರೆಯಬಾರದು. ಪ್ರಧಾನಿ ನರೇಂದ್ರ ಮೋದಿಯವರಾದಿಯಾಗಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರೂ ಈಗಲೂ ಮತ್ತೆ ಮತ್ತೆ ಬೊಫೋರ್ಸ್ ಹಗರಣದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಆದರೆ ಸಂಶಯದ ಬೆರಳು ತಮ್ಮತ್ತಲೇ ಚಾಚಿದಾಗ ಮಾತ್ರ ಮಾಧ್ಯಮವನ್ನು ಹಣಿಯುವ ಮಾರ್ಗಗಳನ್ನು ಹುಡುಕುತ್ತಾರೆಂಬುದನ್ನು ಈ ಪ್ರಕರಣ ಸಾಬೀತು ಮಾಡುತ್ತಿದೆ. ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುವ ಈ ಬಗೆಯ ಕಾಯ್ದೆಗಳ ಬಗ್ಗೆಯೇ ಮರುಚಿಂತನೆ ನಡೆಸಲು ಕಾಲ ಪಕ್ವವಾಗಿದೆ ಎಂಬುದನ್ನೂ ಈ ಬೆಳವಣಿಗೆಗಳು ಸೂಚಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT