ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ದುರಂತ: ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

Last Updated 21 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಸುಮಾರು 60 ಜನರ ಸಾವಿಗೆ ಕಾರಣವಾದ ಅಮೃತಸರದ ರೈಲು ದುರಂತ, ತಪ್ಪಿಸಬಹುದಾಗಿದ್ದ ಅವಘಡ. ಕೆಲವೇ ಸೆಕೆಂಡುಗಳಲ್ಲಿ ಜರುಗಿ ಹೋದ ಈ ದುರಂತ ಬೆಚ್ಚಿಬೀಳಿಸುವಂತಹದ್ದು. ಒಂದಿಷ್ಟು ಎಚ್ಚರ ಹಾಗೂ ಕರ್ತವ್ಯ ಪ್ರಜ್ಞೆ ಮೆರೆದಿದ್ದರೆ ಇಷ್ಟು ಜನರ ಸಾವು ನೋವುಗಳು ತಪ್ಪಬಹುದಿತ್ತು. ಅದೂ ದಸರಾ ಹಬ್ಬದ ಸಂಭ್ರಮದ ಪ್ರತೀಕವಾಗಿ ರಾವಣನ ಪ್ರತಿಕೃತಿ ದಹನದ ವೇಳೆ, ಸಿಡಿದ ಪಟಾಕಿಗಳ ಶಬ್ದದ ನಡುವೆ ಎರಗಿ ಬಂದ ರೈಲಿನ ಶಬ್ಬ ಕೇಳಿಸದೇ ರೈಲಿಗೆ ಸಿಲುಕಿ ಜನರು ಛಿದ್ರಗೊಂಡಿದ್ದು ಭೀಕರವಾದದ್ದು. ದಸರಾ ಸಂಭ್ರಮವು ಸತ್ತವರ ಬಂಧುಗಳ ಪಾಲಿಗೆ ಸೂತಕವಾಗಿ ಪರಿಣಮಿಸಿದ್ದು ದೊಡ್ಡ ದುರಂತ. ಆದರೆ ಈ ದುರಂತದ ಹೊಣೆ ಹೊರಬೇಕಾದವರು ಯಾರು? ರೈಲು ಹಳಿಗಳ ಬಳಿ ನಿಂತು ಕಾರ್ಯಕ್ರಮ ವೀಕ್ಷಿಸಿದ ಜನರು ತಮ್ಮ ವೈಯಕ್ತಿಕ ಸುರಕ್ಷತೆಗೆ ನೀಡಬೇಕಾಗಿದ್ದ ಗಮನ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುವ ಅಂಶ. ಆದರೆ, ಇಂತಹದೊಂದು ದುರಂತ ಸಂಭವಿಸಬಹುದಾದ ಸಾಧ್ಯತೆ ಇದೆ ಎಂಬುದನ್ನು ಮನಗಾಣದೇ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿದ ಕಾರ್ಯಕ್ರಮ ಆಯೋಜಕರ ನಿರ್ಲಕ್ಷ್ಯವನ್ನಂತೂ ಎಷ್ಟು ಕಠಿಣ ಮಾತುಗಳಲ್ಲಿ ಖಂಡಿಸಿದರೂ ಸಾಲದು. ಕಾರ್ಯಕ್ರಮಕ್ಕೆ ಅನುಮತಿ ನೀಡುವ ಮೊದಲು ಸ್ಥಳ ಪರಿಶೀಲನೆ ನಡೆಸದ ಸ್ಥಳೀಯ ಆಡಳಿತ ವ್ಯವಸ್ಥೆಯ ಅಸಡ್ಡೆ ಎದ್ದು ಕಾಣಿಸುವಂತಹದ್ದು. ಇನ್ನು, ‘ಕಾರ್ಯಕ್ರಮದ ಬಗ್ಗೆ ರೈಲ್ವೆ ಇಲಾಖೆಗೆ ಯಾವುದೇ ಮಾಹಿತಿ ಇರಲಿಲ್ಲ. ಇದರಲ್ಲಿ ರೈಲ್ವೆ ಇಲಾಖೆಯ ಲೋಪವಿಲ್ಲ. ಇಲಾಖೆ ಈ ಅವಘಡದ ಹೊಣೆ ಹೊರುವುದಿಲ್ಲ’ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಈ ಹೇಳಿಕೆಯನ್ನು ಎಷ್ಟರಮಟ್ಟಿಗೆ ಒಪ್ಪಿಕೊಳ್ಳಬಹುದು. ರೈಲ್ವೆ ಹಳಿಗಳ ಬಳಿಯೇ ಸಾರ್ವಜನಿಕ ಕಾರ್ಯಕ್ರಮ ನಡೆಯುವ ವಿಚಾರದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದುದು ಎಷ್ಟು ಸರಿ? ಗುಂಪನ್ನು ನಿಯಂತ್ರಿಸುವಲ್ಲಿ ಯಾವುದೇ ನಿಗಾ ವ್ಯವಸ್ಥೆ ಇಲ್ಲದಿದ್ದುದು ಖಂಡನೀಯ. ರೈಲ್ವೆ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣಿಸುವಂತಹದ್ದು. ಈ ಕಾರ್ಯಕ್ರಮದ ಬಗ್ಗೆ ರೈಲ್ವೆ ಆಡಳಿತಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ ಎಂಬುದು ಸರಿ. ಆದರೆ, ರೈಲು ಹಳಿಗಳ ಪಕ್ಕದಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾರ್ಯಕ್ರಮದ ಬಗ್ಗೆ ಅಧಿಕೃತ ಮಾಹಿತಿ ಇರಲಿಲ್ಲ ಎಂದು ರೈಲ್ವೆ ಇಲಾಖೆ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಸಾಧ್ಯವೇ? ರೈಲ್ವೆ ಇಲಾಖೆ, ಅಮೃತಸರ ನಗರಪಾಲಿಕೆ ಮತ್ತು ಕಾರ್ಯಕ್ರಮ ಆಯೋಜಕರ ನಡುವೆ ಆರೋಪ ಪ್ರತ್ಯಾರೋಪಗಳ ಭರಾಟೆಗೆ ಈ ಅವಘಡ ಈಗ ಕಾರಣವಾಗಿದೆ. ಒಟ್ಟಾರೆ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಆಯೋಜಿಸುವ ಸಂದರ್ಭದಲ್ಲಿ ಸುರಕ್ಷತೆಯ ಬಗ್ಗೆ ಎಷ್ಟರಮಟ್ಟಿಗೆ ನಮ್ಮ ಆಡಳಿತ ವ್ಯವಸ್ಥೆ ಕಾಳಜಿ ವಹಿಸುತ್ತದೆ ಎಂಬುದಕ್ಕೆ ಈ ದುರಂತ ಪ್ರತ್ಯಕ್ಷ ಸಾಕ್ಷಿ. ಸ್ಥಳೀಯ ಆಡಳಿತ ಹಾಗೂ ರೈಲ್ವೆ ಇಲಾಖೆ ಮಧ್ಯೆ ಯಾವುದೇ ಸಮನ್ವಯ ಇಲ್ಲದಿದ್ದುದು ಈ ಮಹಾದುರಂತದಲ್ಲಿ ಅಂತ್ಯ ಕಂಡಿದೆ. ಸಾಮಾಜಿಕ ಹಾಗೂ ಧಾರ್ಮಿಕ ಸಮಾವೇಶಗಳನ್ನು ನಡೆಸುವ ಸಂದರ್ಭದಲ್ಲಿ ನಿಯಮಾವಳಿಗಳನ್ನು ಎಗ್ಗಿಲ್ಲದೆ ಉಲ್ಲಂಘಿಸಲು ರಾಜಕೀಯ ಪ್ರಭಾವಗಳನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳುವಂತಹ ‘ಪ್ರತಿಷ್ಠೆ’ ಎಂಬ ಕಾಯಿಲೆಯೂ ನಮ್ಮ ಸಮಾಜದಲ್ಲಿ ದೊಡ್ಡದಾಗಿಯೇ ಇದೆ. ಈ ಕಾರ್ಯಕ್ರಮವನ್ನು ಆಯೋಜಿಸಿದವರು ಕಾಂಗ್ರೆಸ್ ಕೌನ್ಸಿಲರ್ ಒಬ್ಬರ ಪತಿ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಅಪಘಾತ ನಡೆಯುತ್ತಿದ್ದಂತೆ ಸಂತ್ರಸ್ತರ ನೆರವಿಗೆ ಧಾವಿಸದೆ ಅಲ್ಲಿಂದ ಓಡಿ ಹೋದರು ಎಂಬಂಥ ಆರೋಪ ಪ್ರತ್ಯಾರೋಪಗಳ ರಾಜಕೀಯವೂ ಈಗ ತೀವ್ರತೆ ಪಡೆದುಕೊಂಡಿದೆ.

ಹತ್ತಕ್ಕಿಂತ ಹೆಚ್ಚು ವ್ಯಕ್ತಿಗಳು ಸತ್ತಲ್ಲಿ ಅದನ್ನು ದೊಡ್ಡ ಅಪಘಾತ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ದುರಂತದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ರೈಲ್ವೆ ಇಲಾಖೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. ರೈಲ್ವೆ ಸುರಕ್ಷತೆಗೆ ಸಂಬಂಧಿಸಿದಂತೆ ರೈಲ್ವೆ ಸುರಕ್ಷತಾ ಆಯೋಗ ಇದೆ. ರೈಲ್ವೆ ಸುರಕ್ಷತೆಗಾಗಿ ಈ ಹಿಂದೆ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಸಮಿತಿ ಹಲವು ಶಿಫಾರಸುಗಳನ್ನು ಮಾಡಿತ್ತು. ಆದರೆ ಈ ಶಿಫಾರಸುಗಳನ್ನು ಮೂಲೆಗುಂಪು ಮಾಡಲಾಗಿದೆ. ಸಂಸತ್‍ಗೆ ನೀಡಲಾಗಿರುವ ಅಂಕಿಅಂಶಗಳ ಪ್ರಕಾರ, 2015 ಹಾಗೂ 2017ರ ಮಧ್ಯೆ ಸುಮಾರು 50 ಸಾವಿರ ಜನರು ರೈಲುಗಳಿಗೆ ಸಿಕ್ಕಿ ಸತ್ತಿದ್ದಾರೆ. ರೈಲು ಹಳಿಗಳನ್ನು ದಾಟುವಾಗ ಜನರ ಅಸಡ್ಡೆಯೂ ಸಾವುಗಳಿಗೆ ಕಾರಣವಾಗಿದೆ. ರೈಲು ಹಾದಿಗಳಲ್ಲಿ ಅತಿಕ್ರಮಿಸಿ ಓಡಾಡುವುದು ಕ್ರಿಮಿನಲ್ ಅಪರಾಧ. ಇದಕ್ಕೆ ಸಂಬಂಧಿಸಿದಂತೆ 2017ರಲ್ಲಿ ಸುಮಾರು 1.75 ಲಕ್ಷ ಜನರ ಮೇಲೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಈಗ ಅಮೃತಸರ ರೈಲು ದುರಂತದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಪಂಜಾಬ್ ಸರ್ಕಾರ ಆದೇಶಿಸಿದೆ. ಎಲ್ಲಾ ಕೋನಗಳಿಂದಲೂ ಈ ದುರಂತದ ತನಿಖೆ ನಡೆಯಬೇಕು. ತಪ್ಪಿಸಬಹುದಾಗಿದ್ದ ಇಂತಹ ದುರಂತಗಳು ಮರುಕಳಿಸದಂತೆ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯ. ಆಡಳಿತ ಲೋಪಗಳಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಸುರಕ್ಷತೆ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT