ಶುಕ್ರವಾರ, ಫೆಬ್ರವರಿ 26, 2021
20 °C

ಸಂಪಾದಕೀಯ: ರಾಜಕೀಯ ಪಕ್ಷ ಸ್ಥಾಪನೆಗೆ ಬೆನ್ನು: ವಸ್ತುಸ್ಥಿತಿಗೆ ಓಗೊಟ್ಟ ರಜನಿಕಾಂತ್

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಹೊಸ ವರ್ಷದ ಆರಂಭದೊಂದಿಗೆ ರಾಜಕೀಯ ಪಕ್ಷ ಘೋಷಣೆ ಮಾಡಬೇಕಿದ್ದ ನಟ ರಜನಿಕಾಂತ್‌ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ, ಅವರ ರಾಜಕೀಯ ಪ್ರವೇಶದ ಬಗ್ಗೆ ಹಲವು ವರ್ಷಗಳಿಂದ ಇದ್ದ ವದಂತಿಗಳು ಕೊನೆಗೊಂಡಿವೆ. ಡಿಸೆಂಬರ್‌ 31ರಂದು ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡುವುದಾಗಿ ಪ್ರಕಟಿಸಿದ್ದ ಅವರು, ಅನಾರೋಗ್ಯದ ಕಾರಣದಿಂದಾಗಿ ಹೊಸ ಪಕ್ಷ ಆರಂಭಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ರಜನಿಕಾಂತ್‌ ನಿರ್ಧಾರವು ಅವರ ಆರೋಗ್ಯದ ದೃಷ್ಟಿಯಿಂದ ಹಾಗೂ ತಮಿಳುನಾಡಿನ ರಾಜಕಾರಣದ ದೃಷ್ಟಿಯಿಂದಲೂ ಮುಖ್ಯವಾದುದು. ವಯೋಸಹಜ ದಣಿವಿನೊಂದಿಗೆ ಅನಾರೋಗ್ಯದಿಂದಲೂ ಬಳಲುತ್ತಿರುವ ಅವರು, ಚುನಾವಣಾ ರಾಜಕಾರಣ ಬಯಸುವ ದೈಹಿಕ ದೃಢತೆಯನ್ನು ಹೊಂದಿಲ್ಲ. ಎಪ್ಪತ್ತನೇ ವಯಸ್ಸಿನಲ್ಲಿ ಜನರೊಂದಿಗೆ ಒಡನಾಡಿ ಪಕ್ಷವನ್ನು ಸಂಘಟಿಸುವುದು ಸುಲಭವಲ್ಲ.

ಕೊರೊನಾ ವೈರಸ್‌ ಆತಂಕ ವ್ಯಾಪಕವಾಗಿರುವ ಸಂದರ್ಭದಲ್ಲಿ ದೈಹಿಕ ಕ್ಷಮತೆ ಹೊಂದಿಲ್ಲದ ವ್ಯಕ್ತಿ ಜನರ ನಡುವೆ ಓಡಾಡುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ತಮ್ಮ ದೇಹಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ರಜನಿಕಾಂತ್‌ ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಅನಾರೋಗ್ಯವನ್ನು ಲೆಕ್ಕಿಸದೆ ಪಕ್ಷ ಕಟ್ಟಿ, ಚುನಾವಣೆ ಎದುರಿಸುವ ದುಸ್ಸಾಹಸಕ್ಕೆ ಕೈಹಾಕದಿರುವ ಮೂಲಕ ತಾವು ಪರಿಸ್ಥಿತಿಯ ಕೈಗೊಂಬೆ ಆಗಬಹುದಾದ ಅಪಾಯವನ್ನು ತಪ್ಪಿಸಿಕೊಂಡಿದ್ದಾರೆ.

ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಒಲವು ವ್ಯಕ್ತಪಡಿಸುತ್ತಲೇ ಬಂದಿರುವ ಅವರು, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುವ ಬಗ್ಗೆ ಅಳುಕನ್ನೂ ಪ್ರದರ್ಶಿಸಿದ್ದಾರೆ. ಜನಪ್ರಿಯತೆಯ ಉತ್ತುಂಗದ ಸಮಯದಲ್ಲಿ ಡೋಲಾಯಮಾನ ಮನಃಸ್ಥಿತಿ ಪ್ರದರ್ಶಿಸಿ, ಅನಾರೋಗ್ಯದ ಸಂದರ್ಭದಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಮಾತನಾಡಿದ್ದರೂ, ಕೊನೆಗೂ ಅವರಿಗೆ ವಸ್ತುಸ್ಥಿತಿ ಅರ್ಥವಾದಂತಿದೆ.

ಪಕ್ಷ ಸ್ಥಾಪನೆಯ ಮೂಲಕ ಅವರು ಅಧಿಕಾರಕ್ಕೆ ಬರಬಹುದಾದ ಸಾಧ್ಯತೆಗಳನ್ನು ಊಹಿಸುವುದು ಕಷ್ಟವಾದರೂ, ತಮಿಳುನಾಡಿನ ರಾಜಕೀಯ ಸಮೀಕರಣದಲ್ಲಿ ವ್ಯತ್ಯಾಸ ಉಂಟುಮಾಡುವ ಸಾಮರ್ಥ್ಯವಂತೂ ಅವರಿಗಿತ್ತು. ಮತವಿಭಜನೆಯ ಮೂಲಕ ಯಾರಿಗೋ ಅನುಕೂಲ ಅಥವಾ ಅನನುಕೂಲ ಉಂಟುಮಾಡಬಹುದಿತ್ತು. ಆ ಮೂಲಕ ರಜನಿಕಾಂತ್‌ ಯಾರ ಪಾಲಿಗೋ ಆಪದ್ಬಾಂಧವ ಅಥವಾ ಖಳನಾಯಕ ಆಗಬಹುದಿತ್ತು. ಅಂಥ ಸಾಧ್ಯತೆಗಳಿಗೆ ಅವಕಾಶ ಕಲ್ಪಿಸದಿರುವ ಮೂಲಕ, ತಮಿಳುನಾಡಿನ ಇತಿಹಾಸದಲ್ಲಿ ರಜನಿಕಾಂತ್‌  ಓರ್ವ ಕಲಾವಿದನಾಗಿ ಉಳಿಯಲಿದ್ದಾರೆ.

ರಜನಿಕಾಂತ್ ಅವ‌ರಂತೆ ರಾಜಕೀಯ ಆಕಾಂಕ್ಷೆಗಳನ್ನು ಹೊಂದಿರುವ ಸಿನಿಮಾ ಕಲಾವಿದರು ಬಹಳಷ್ಟು ಮಂದಿಯಿದ್ದಾರೆ. ಇಂಥ ಕಲಾವಿದರು, ಜನಸೇವೆ ಮಾಡಲಿಕ್ಕೆ ರಾಜಕಾರಣವೊಂದೇ ಮಾರ್ಗವಲ್ಲ ಎನ್ನುವುದನ್ನು ಮನಗಾಣಬೇಕಿದೆ. ಯಾವುದೇ ಕ್ಷೇತ್ರದಲ್ಲಿದ್ದರೂ, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು ಸಮಾಜಕ್ಕೆ ಉಪಯುಕ್ತವಾದುದೇ ಆಗಿದೆ. ಅಂಥ ಅವಕಾಶ ಸಾಮಾನ್ಯ ಜನರಿಗಿಂತಲೂ ಜನಪ್ರಿಯ ಸಿನಿಮಾ ನಟರಿಗೆ ಹೆಚ್ಚಾಗಿದೆ.

ಜನಪ್ರಿಯತೆಯ ಜೊತೆಗೆ ಜನಪರ ಸಿನಿಮಾಗಳಲ್ಲಿ ನಟಿಸುವುದು ಹಾಗೂ ಸಾರ್ವಜನಿಕ ಜೀವನದಲ್ಲಿನ ಉತ್ತಮ ನಡವಳಿಕೆಯ ಮೂಲಕ ಪ್ರೇಕ್ಷಕರಲ್ಲಿ ಅಭಿರುಚಿ ರೂಪಿಸುವ ಅವಕಾಶ ಕಲಾವಿದರಿಗಿದೆ. ಆದರೆ, ತಮಗೆ ಜನಮನ್ನಣೆ ದೊರಕಿಸಿಕೊಟ್ಟ ಮಾಧ್ಯಮವನ್ನು ಸಾಮಾಜಿಕ ಹೊಣೆಗಾರಿಕೆಯಿಂದ ಬಳಸಿಕೊಳ್ಳಲು ಮನಸ್ಸು ಮಾಡದ ಅವರು, ಸಮಾಜಸೇವೆ ಕಾರಣಕ್ಕಾಗಿ ರಾಜಕಾರಣಕ್ಕೆ ಬರುವ ಮಾತನಾಡುತ್ತಾರೆ.

ಸಿನಿಮಾ ಕಲಾವಿದರು ರಾಜಕೀಯ ಕ್ಷೇತ್ರದಲ್ಲಿ ಗುರ್ತಿಸಿಕೊಳ್ಳುವುದು ತಪ್ಪೇನಲ್ಲ. ಆದರೆ, ಅಂಥ ರಾಜಕೀಯ ಆಕಾಂಕ್ಷೆಗೆ ತಾತ್ವಿಕ ತಳಹದಿ ಇರಬೇಕಾದುದು ಅಗತ್ಯ. ಯಾವುದೇ ಸ್ಪಷ್ಟ ಸಿದ್ಧಾಂತವಿಲ್ಲದೆ, ಸಾಮಾಜಿಕ ರಚನೆ ಮತ್ತು ಸಮಸ್ಯೆಗಳ ಅರಿವಿಲ್ಲದೆ ರಾಜಕೀಯಕ್ಕೆ ಬರುವುದರಿಂದ ಜನರ ಹಿತಸಾಧನೆಯಾಗುವುದಿಲ್ಲ. ಸಿನಿಮಾದಲ್ಲಿನ ಜನಪ್ರಿಯತೆಯನ್ನು ಬಳಸಿಕೊಂಡು ರಾಜಕೀಯ ಅಧಿಕಾರವನ್ನು ಗಳಿಸಿದ ಕಲಾವಿದರು, ಜನಪ್ರತಿನಿಧಿಗಳಾದ ನಂತರವೂ ಚಲನಚಿತ್ರದ ದಂತಗೋಪುರದಲ್ಲಿಯೇ ಉಳಿದ ಉದಾಹರಣೆಗಳಿವೆ. ಅಂಥ ವಿಫಲ ರಾಜಕಾರಣಿಗಳ ಸಾಲಿನಲ್ಲಿ ಗುರ್ತಿಸಿಕೊಳ್ಳುವ ಬದಲು ಕಲಾವಿದರಾಗಿಯೇ ಉಳಿಯುವುದು ಜನರಿಗೆ ಸಲ್ಲಿಸುವ ಗೌರವವೂ ಆಗಿದೆ. ಈ ಕಾರಣದಿಂದಲೂ ಕಲಾವಿದನಾಗಿಯೇ ಉಳಿಯುವ ರಜನಿಕಾಂತ್‌ ನಿರ್ಧಾರ ಸರಿಯಾಗಿದೆ, ವಿವೇಕದಿಂದ ಕೂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು