ಎನ್‍ಡಿಎ ಅಭ್ಯರ್ಥಿ ಗೆಲುವು ಪ್ರತಿಪಕ್ಷಗಳಿಗೆ ದೊಡ್ಡ ಪಾಠ

7

ಎನ್‍ಡಿಎ ಅಭ್ಯರ್ಥಿ ಗೆಲುವು ಪ್ರತಿಪಕ್ಷಗಳಿಗೆ ದೊಡ್ಡ ಪಾಠ

Published:
Updated:
Deccan Herald

ರಾಜ್ಯಸಭೆಯ ಉಪಸಭಾಪತಿ ಚುನಾವಣೆ, ಸಾಮಾನ್ಯವಾಗಿ ದೊಡ್ಡ ಸುದ್ದಿಯಲ್ಲ. ಆದರೆ ಈ ಬಾರಿ ಇದು ಪ್ರತಿಪಕ್ಷಗಳ ಏಕತೆಯ ಬಲದ ಪರೀಕ್ಷೆಯಾಗಿ ಪರಿಣಮಿಸಿತ್ತು. ಈ ಸ್ಪರ್ಧಾತ್ಮಕ ಹೋರಾಟದಲ್ಲಿ ಪ್ರತಿಪಕ್ಷಗಳ ಏಕತೆಯ ದನಿಗೆ ಪೆಟ್ಟು ಬಿದ್ದಿದೆ. ಸರಿಯಾದ ಕಾರ್ಯತಂತ್ರ ಇಲ್ಲದ ಹೋರಾಟ ಫಲ ನೀಡದು ಎಂಬ ಸಂದೇಶವನ್ನು ಇದು ಪ್ರತಿಪಕ್ಷಗಳಿಗೆ ನೀಡಿದೆ. ಕೇಂದ್ರದ ಆಡಳಿತ ‍ಪಕ್ಷ ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ.

ಹೀಗಾಗಿ, ಅನೇಕ ಮಸೂದೆಗಳು ರಾಜ್ಯಸಭೆಯಲ್ಲಿ ಸೋಲುಂಡಿವೆ. ಹೀಗಿದ್ದೂ ಎನ್‌ಡಿಎ ಅಭ್ಯರ್ಥಿ ಜೆಡಿಯುನ ಹರಿವಂಶ ಸಿಂಗ್ ಅವರು ರಾಜ್ಯಸಭೆ ಉಪಸಭಾಪತಿಯಾಗಿ ಆಯ್ಕೆಯಾಗಿರುವುದು ಅಚ್ಚರಿಯ ಸಾಧನೆ. ಎನ್‌ಡಿಎ ಅಭ್ಯರ್ಥಿ ಹಾಗೂ ಸೋಲುಂಡ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಗಳಿಸಿರುವ ಮತಗಳ ಅಂತರವೂ ಹೆಚ್ಚಾಗಿದೆ. ಬಿಜೆಪಿಯ ಸಂಘಟನಾ ಚಾತುರ್ಯಕ್ಕೆ ದ್ಯೋತಕ ಇದು.

ಕಾಂಗ್ರೆಸ್ ಅಭ್ಯರ್ಥಿಯ ಸೋಲು, ಅದಿನ್ನೂ ಕಲಿಯಬೇಕಾಗಿರುವ ಪಾಠಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಹಲವು ಭಾವಗಳನ್ನು ಸ್ಫುರಿಸುವ ರಾಜಕೀಯ ಕ್ಷಣ ಇದು. ಅನೇಕ ನೆಲೆಗಳಲ್ಲಿ ರಾಜಕೀಯ ಪಕ್ಷಗಳ ಕಣ್ತೆರೆಸುವಂತಹದ್ದು ಈ ಬೆಳವಣಿಗೆ. 2014ರ ಸಾರ್ವತ್ರಿಕ ಚುನಾವಣೆ ನಂತರ ಲೋಕಸಭೆಯಲ್ಲಿ ಬಿಜೆಪಿ ಸಾರ್ವಭೌಮತ್ವ ಪ್ರತಿಷ್ಠಾಪಿಸಿದ್ದರೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ದನಿ ಕ್ಷೀಣಿಸಿರಲಿಲ್ಲ.

ಎನ್‍ಡಿಎಗೆ ಬಹುಮತವಿಲ್ಲದ ಸದನದಲ್ಲಿ ಪ್ರತಿಪಕ್ಷಗಳ ದನಿಗೆ ಬೆಲೆ ಇತ್ತು‌. ಇಂತಹ ಸನ್ನಿವೇಶ ಇದ್ದರೂ ಈಗಿನ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಸರಿಯಾಗಿ ನಿರ್ವಹಿಸಲಿಲ್ಲ ಎಂಬುದು ಮೇಲ್ನೋಟಕ್ಕೇ ವ್ಯಕ್ತವಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಪ್ರತಿಯೊಂದು ಚುನಾವಣೆಯನ್ನೂ ಬಿಜೆಪಿ ತೀವ್ರವಾಗಿ ಪರಿಗಣಿಸುತ್ತದೆ ಎಂಬುದು ಮತ್ತೊಮ್ಮೆ ಈ ಪ್ರಕ್ರಿಯೆಯಲ್ಲಿ ಗೋಚರವಾಗಿದೆ.

ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಜೆಡಿಯು ಅಭ್ಯರ್ಥಿಯನ್ನು ಆಯ್ಕೆಮಾಡಿದ್ದು ಬಿಜೆಪಿಯ ಅತ್ಯಂತ ಜಾಣ್ಮೆಯ ನಡೆ. ಇತ್ತೀಚಿನ ದಿನಗಳಲ್ಲಿ ಹದಗೆಟ್ಟಂತಿದ್ದ ನಿತೀಶ್ ಕುಮಾರ್ ಜೊತೆಗಿನ ಸ್ನೇಹವನ್ನು ಈ ಮೂಲಕ ಬಿಜೆಪಿ ಬಲಪಡಿಸಿಕೊಂಡಿತು. ಜೊತೆಗೆ ಬಿಜೆಡಿ ಬೆಂಬಲ ಗಳಿಸಿಕೊಳ್ಳುವುದೂ ಸಾಧ್ಯವಾಯಿತು.

ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಬೆಂಬಲ ಪಡೆದುಕೊಂಡರು. ಆದರೆ, ‘ಜೆಪಿ ಚಳವಳಿ ಕಾಲದಿಂದಲೂ ಜೆಡಿಯು ಜೊತೆಗಿನ ಸೈದ್ಧಾಂತಿಕ ಸಮಾನ ಅಂಶಗಳ ಕಾರಣದಿಂದಾಗಿ ಜೆಡಿಯು ಅಭ್ಯರ್ಥಿಯನ್ನು ಬೆಂಬಲಿಸಲಾಯಿತು’ ಎಂದು ಒಡಿಶಾದೊಳಗೆ ರಾಜ್ಯ ಮಟ್ಟದಲ್ಲಿ ಬಿಜೆಪಿಗೆ ಕಡು ವಿರೋಧಿಯಾಗಿರುವ ಬಿಜೆಡಿ ನಂತರ ಹೇಳಿಕೆ ನೀಡಿದೆ.

ಆದರೆ, ಬಿಜೆಡಿ ಸೇರಿದಂತೆ ಅನೇಕ ಪ್ರಮುಖ ಪ್ರತಿಪಕ್ಷಗಳನ್ನು ಸಂಪರ್ಕಿಸಿ ಬೆಂಬಲ ಗಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿರುವುದು ಇಲ್ಲಿ ಎದ್ದು ಕಾಣುವ ಅಂಶ. ಒಂದು ಹಂತದಲ್ಲಿ ಪ್ರಧಾನಿ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಂಡು, ಬೆಂಬಲ ಸಿಗದೆ ಇದ್ದಾಗ ಹಿಂದೆ ಸರಿದ ರಾಹುಲ್‌ ಗಾಂಧಿ ಅವರ ನಾಯಕತ್ವ ನಿರ್ವಹಣೆಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿತ್ತು.

ಹೀಗಿದ್ದೂ ಬಿಜೆಪಿಯ ಸ್ಪರ್ಧೆ ಎದುರಿಸಲು ಸಮರ್ಪಕವಾದ ಕಾರ್ಯತಂತ್ರವನ್ನು ಪ್ರತಿಪಕ್ಷಗಳು ರೂಪಿಸಲೇ ಇಲ್ಲ. ಆದರೆ, ಬಿಜೆಪಿಗೆ ಸಾರ್ವಜನಿಕವಾಗಿ ಪ್ರತಿರೋಧ ತೋರುತ್ತಲೇ ಬರುತ್ತಿರುವ ತನ್ನ ಮಿತ್ರಪಕ್ಷಗಳಾದ ಶಿವಸೇನೆ ಹಾಗೂ ಅಕಾಲಿದಳದ ಬೆಂಬಲವನ್ನೂ ಎನ್‍ಡಿಎ ಗಳಿಸಿಕೊಂಡಿದೆ. ಕಳೆದ ತಿಂಗಳಷ್ಟೇ ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮತ ಹಾಕದೆ ಶಿವಸೇನೆ ದೂರ ಉಳಿದಿತ್ತು.

ಎನ್‍ಡಿಎ ಜೊತೆಗೆ ಟಿಡಿಪಿ ಸಂಬಂಧ ಹಳಸಿದೆ. ಇಂತಹ ಸನ್ನಿವೇಶದಲ್ಲಿ ಟಿಆರ್‌ಎಸ್‌ ಮತಗಳನ್ನು ತನ್ನೆಡೆಗೆ ಗಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.  ಬೆಂಬಲ ಕೋರಿ ಒಂದು ಫೋನ್‌ ಕರೆ ಮಾಡುವ ಸೌಜನ್ಯವನ್ನೂ ಕಾಂಗ್ರೆಸ್‌ ಪ್ರದರ್ಶಿಸಲಿಲ್ಲ ಎಂದು ದೂರಿರುವ ಎಎಪಿ, ಮತದಾನದಿಂದ ದೂರ ಉಳಿದಿತ್ತು. 2019ರ ಸಾರ್ವತ್ರಿಕ ಚುನಾವಣೆ ಎದುರಿಸಲು ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಇರುವ ಅನೇಕ ಸವಾಲುಗಳನ್ನಂತೂ ಈ ಚುನಾವಣೆ ಪ್ರದರ್ಶಿಸಿದೆ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !