ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಆಂದೋಲನನೇಪಥ್ಯಕ್ಕೆ ಸರಿದದ್ದು ಸ್ವಾಗತಾರ್ಹ

Last Updated 10 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸುವ ಆಂದೋಲನವನ್ನು ಲೋಕಸಭಾ ಚುನಾವಣೆ ಮುಗಿಯುವ ತನಕ ಸ್ಥಗಿತಗೊಳಿಸುವುದಾಗಿ ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಇತ್ತೀಚೆಗೆ ಅನಿರೀಕ್ಷಿತವಾಗಿ ಪ್ರಕಟಿಸಿವೆ.

ಮಂದಿರ ನಿರ್ಮಾಣದ ಜ್ವರವನ್ನು ಬಡಿದೆಬ್ಬಿಸುವ ಪ್ರಯತ್ನದಲ್ಲಿ ಈ ಎರಡೂ ಸಂಘಟನೆಗಳು ಕಳೆದ ಕೆಲವು ತಿಂಗಳಿಂದ ನಿರತವಾಗಿದ್ದವು. ವಿವಾದಿತ ಜಮೀನು ಯಾರಿಗೆ ಸೇರಬೇಕೆಂಬ ವ್ಯಾಜ್ಯ ಸುಪ್ರೀಂ ಕೋರ್ಟ್ ಮುಂದಿದೆ.ಈ ವಿಚಾರಣೆಯನ್ನು ಚುರುಕಾಗಿ ಮುಗಿಸುವ ಬದಲು ವಿಳಂಬ ತಂತ್ರ ಅನುಸರಿಸಿದೆ ಎಂದು ಮಂದಿರವಾದಿಗಳು ನ್ಯಾಯಾಲಯವನ್ನೇ
ಟೀಕಿಸಿದ್ದುಂಟು. ‘ನಾವೇ ಆರಿಸಿದ ಸರ್ಕಾರ ದೇಶವನ್ನು ಆಳುತ್ತಿದ್ದರೂ ರಾಮಮಂದಿರವನ್ನು ಯಾಕೆ ನಿರ್ಮಿಸಿಲ್ಲ ಎಂದು ಜನ ಕೇಳುತ್ತಿದ್ದಾರೆ.

ಈ ವೇಳೆಗಾಗಲೇ ಮಂದಿರ ನಿರ್ಮಾಣ ಪೂರ್ಣಗೊಂಡಿರಬೇಕಿತ್ತು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಲ್ಕು ತಿಂಗಳ ಹಿಂದೆ ವಿಜಯದಶಮಿ ಭಾಷಣದಲ್ಲಿ ದನಿ ಏರಿಸಿದ್ದರು.ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಅವರ ಆಗ್ರಹ ಸಂಘಪರಿವಾರದಲ್ಲಿ ಸರ್ವತ್ರ ಅನುರಣಿಸಿತ್ತು.ಲೋಕಸಭಾ ಚುನಾವಣೆಗೆ ಮುನ್ನ ಸಂಸತ್ತಿನಲ್ಲಿ ರಾಮಮಂದಿರದ ಪರ ಯಾವ ಪಕ್ಷಗಳಿವೆ ಮತ್ತು ವಿರೋಧಿಸುವ ಪಕ್ಷಗಳು ಯಾವುವು ಎಂಬುದು ದೇಶಕ್ಕೆ ಗೊತ್ತಾಗಿಬಿಡಲಿ ಎಂಬ ಅಭಿಪ್ರಾಯ ಬಿಜೆಪಿಯ ಒಳಗೂ ಕೇಳಿಬಂದಿತ್ತು.ಆದರೆ, ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಪಂದ್ಯ ಎಂಬಂತೆ ಬಿಂಬಿಸಲಾದ ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆ ಫಲಿತಾಂಶ ಈ ಕೂಗಿನ ಮೇಲೆ ತಣ್ಣೀರು ಎರಚಿತು.

ರಾಮಮಂದಿರದ ವಿಷಯ ಬಿಜೆಪಿಯ ನೆರವಿಗೆ ಬರಲಿಲ್ಲ.ಹಿಂದಿ ಹೃದಯಭಾಗದ ಈ ಮೂರೂ ರಾಜ್ಯಗಳು ಬಿಜೆಪಿಯ ಕೈ ತಪ್ಪಿದವು. 2019ರ ಲೋಕಸಭಾ ಚುನಾವಣೆಯನ್ನು ಮಿತ್ರಪಕ್ಷಗಳ ನೆರವಿಲ್ಲದೆಯೂ ಗೆಲ್ಲಬಲ್ಲೆವು ಎಂಬ ಬಿಜೆಪಿಯ ಎರಡು ವರ್ಷಗಳ ಹಿಂದಿನ ವಿಶ್ವಾಸ ಪೆಟ್ಟು ತಿಂದಿತು.ನ್ಯಾಯಾಂಗವನ್ನು ಬದಿಗೊತ್ತಿ, ಸುಗ್ರೀವಾಜ್ಞೆ ತಂದು ಮಂದಿರ ನಿರ್ಮಾಣಕ್ಕೆ ಮುಂದಾಗುವ ನಡೆ ಜೆಡಿಯುನಂತಹ ಕೆಲವು ಮಿತ್ರಪಕ್ಷಗಳಿಗೆ ಒಪ್ಪಿಗೆಯಿಲ್ಲ.ಒಂದು ವೇಳೆ ಸುಗ್ರೀವಾಜ್ಞೆ ಹೊರಡಿಸಿದರೂ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸುವುದನ್ನು ತಡೆಯಲಾಗದು.

ಪ್ರಶ್ನಿಸದಿದ್ದರೂ ಅಯೋಧ್ಯೆಯ ವಿವಾದಿತ ಜಮೀನಿನ ಒಡೆತನ ಕುರಿತ ತೀರ್ಪು ಹೊರಬಿದ್ದಿತೆಂದರೆ ಸುಗ್ರೀವಾಜ್ಞೆ ತಂತಾನೇ ಅಪ್ರಸ್ತುತ ಆಗುತ್ತದೆ.

ಹೊಸ ವರ್ಷದ ಮೊದಲ ದಿನ ನೀಡಿದ ಸಂದರ್ಶನವೊಂದರಲ್ಲಿ ಸುಗ್ರೀವಾಜ್ಞೆಯ ಸಾಧ್ಯತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಳ್ಳಿ ಹಾಕಿದರು. ‘ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ರಾಮಮಂದಿರ ಕುರಿತ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ.ಆನಂತರ ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲಿದೆ.ಎಲ್ಲ ಪ್ರಯತ್ನಗಳಿಗೂ ನಾವು ತಯಾರು. ವಕೀಲರಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನಾಯಕರು ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ನಡೆಯದಂತೆ ಅಡಚಣೆಗಳನ್ನು ಸೃಷ್ಟಿಸುತ್ತಿದ್ದಾರೆ.

ಸಂವಿಧಾನದ ವ್ಯಾಪ್ತಿಯಲ್ಲೇ ಪರಿಹಾರ ಕಂಡು ಹಿಡಿಯಲಾಗುವುದು’ ಎಂದು ಸಾರಿದರು. ವಿವಾದಿತ ಜಮೀನಿನ ಒಡೆತನದ ವ್ಯಾಜ್ಯದ ವಿಚಾರಣೆಯು ಜನವರಿ ಅಂತ್ಯದಲ್ಲಿ ಪುನಃ ಮುಂದಕ್ಕೆ ಹೋಯಿತು.ಇದೇ ಸಂದರ್ಭದಲ್ಲಿ ಮಂದಿರ ಸಮರ್ಥಕ ವಲಯದಲ್ಲಿ ಮೂಡಿದ ನಿರಾಶೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಅನುಸರಿಸಿದ ಪರೋಕ್ಷ ತಂತ್ರ ಕೂಡ ಫಲ ನೀಡಲಿಲ್ಲ.ವಿವಾದಿತ ಜಮೀನಿನ ಸುತ್ತಮುತ್ತಲ ಹೆಚ್ಚುವರಿ ಜಮೀನನ್ನು ಅದರ ಮೂಲ ಒಡೆತನ ಹೊಂದಿದ ರಾಮಜನ್ಮಭೂಮಿ ನ್ಯಾಸಕ್ಕೆ ಬಿಟ್ಟುಕೊಡಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು.ನ್ಯಾಯಾಲಯ ಈ ಅರ್ಜಿಯನ್ನು ಇತರೆ ಅರ್ಜಿಗಳೊಂದಿಗೆ ಲಗತ್ತಿಸಿತು. ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸಮೀಪವಿರುವವರು.

ಪ್ರಯಾಗರಾಜ್‌ದಲ್ಲಿ ಅರ್ಧಕುಂಭ ಮೇಳದ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆ ಸಂಘಪರಿವಾರವನ್ನು ವಿಚಲಿತಗೊಳಿಸಿತ್ತು. ಅಯೋಧ್ಯೆಗೆ ಯಾತ್ರೆ ಹೊರಟು ಇದೇ ಫೆಬ್ರುವರಿ 21ರಂದು ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇರಿಸುವುದಾಗಿ ಸಾರಿದರು.ಮಂದಿರ ನಿರ್ಮಾಣದ ಮುಂದಾಳತ್ವ ಯಾವುದೇ ರೀತಿಯಲ್ಲಿ ತನ್ನ ಕೈತಪ್ಪುವುದನ್ನು ಸಂಘಪರಿವಾರ ಬಯಸುವುದಿಲ್ಲ. ಈ ಎಲ್ಲ ಹಿನ್ನಡೆಗಳಿಂದಾಗಿ ಸಂಘಪರಿವಾರ, ಮಂದಿರದ ವಿಷಯವನ್ನು ಸದ್ಯಕ್ಕೆ ಮುನ್ನೆಲೆಯಿಂದ ಹಿನ್ನೆಲೆಗೆ ತಳ್ಳಿದೆ.ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ– ರಾಜಕೀಯ ಧ್ರುವೀಕರಣ ಹದ್ದು ಮೀರಿದೆ.ಕಾರಣಗಳು ಏನೇ ಇರಲಿ,ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಧಾರ್ಮಿಕ ಧ್ರುವೀಕರಣದ ವಿಷಯವೊಂದು ತೆರೆಯ ಹಿಂದೆ ಸರಿದದ್ದು ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT