ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಕಡಿತ: ಆರ್ಥಿಕ ವೃದ್ಧಿಗೆ ಪೂರಕ ಕ್ರಮ ಅಗತ್ಯ

Last Updated 7 ಜೂನ್ 2019, 20:00 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಮೂರನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ನೀತಿ ನಿರೂಪಣೆಯ ಬಡ್ಡಿ ದರಗಳನ್ನು (ರೆಪೊ) ಮತ್ತೆ ಶೇ 0.25ರಷ್ಟು ಕಡಿತ ಮಾಡಿದೆ. ಮಂದಗತಿಯಲ್ಲಿರುವ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇದಾಗಿದೆ. ಅರ್ಥವ್ಯವಸ್ಥೆಯ ಹಲವು ಭಾಗೀದಾರರ ಮೊರೆಗೆ ಕಿವಿಗೊಟ್ಟು ಆರ್‌ಬಿಐ ಈ ರೀತಿಯಲ್ಲಿ ಸ್ಪಂದಿಸಿದೆ. ಹಣದುಬ್ಬರವು ನಿಯಂತ್ರಣದಲ್ಲಿ ಇರುವುದರಿಂದ ಆರ್ಥಿಕ ಪ್ರಗತಿ ಉತ್ತೇಜಿಸಲು ಕೇಂದ್ರೀಯ ಬ್ಯಾಂಕ್ ಈಗ ಗಮನ ಕೇಂದ್ರೀಕರಿಸಿರುವುದನ್ನು ಈ ನಿರ್ಧಾರ ಪುಷ್ಟೀಕರಿಸುತ್ತದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಣದ ಪೂರೈಕೆ ಹೆಚ್ಚಿಸುವುದೂ ತಮ್ಮ ಆದ್ಯತೆ ಆಗಿರುವುದನ್ನು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣಕ್ಕೆ, ಮುಂದೆಯೂ ಬಡ್ಡಿ ದರ ಕಡಿತದ ನಿರ್ಧಾರವನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ. ಸರಕು ಮತ್ತು ಸೇವೆಗಳ ಬಳಕೆ ಹೆಚ್ಚಳ ಆಧಾರಿತ ಬೆಳವಣಿಗೆಗೆ ಉತ್ತೇಜನ ನೀಡುವ ನಿರ್ಧಾರ ಇದಾಗಿದೆ. ಉದ್ದಿಮೆದಾರರು ಮತ್ತು ಗ್ರಾಹಕರ ಆತ್ಮವಿಶ್ವಾಸ ಹೆಚ್ಚಿಸಲೂ ಈ ಧೋರಣೆ ನೆರವಾಗಲಿದೆ. ನಾಲ್ಕು ತಿಂಗಳಲ್ಲಿ ಸತತ ಮೂರನೇ ಬಾರಿಗೆ ಬಡ್ಡಿ ದರ ಕಡಿತ (ಒಟ್ಟು ಶೇ 0.75) ಮಾಡಿದ್ದರೂ ವಾಣಿಜ್ಯ ಬ್ಯಾಂಕ್‌ಗಳು ಅದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಹಾಗಾಗಿ ಗೃಹ, ವಾಹನ ಖರೀದಿ, ವೈಯಕ್ತಿಕ ಮತ್ತು ಉದ್ದಿಮೆ ವಹಿವಾಟಿನ ಉದ್ದೇಶದ ಸಾಲದ ಬಡ್ಡಿ ದರ ಇಲ್ಲಿಯವರೆಗೂ ಗಣನೀಯವಾಗಿ ಕಡಿಮೆ ಆಗಿಲ್ಲ. ಈ ಹಿಂದಿನ ಶೇ 0.50ರಷ್ಟು ಬಡ್ಡಿ ಕಡಿತದಲ್ಲಿ ಬ್ಯಾಂಕ್‌ಗಳು ಶೇ 0.21ರಷ್ಟನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಿವೆ. ನಗದು ಲಭ್ಯತೆ ಸಮಸ್ಯೆ ಇದ್ದ ಕಾರಣಕ್ಕೆ ಬ್ಯಾಂಕ್‌ಗಳು ಬಡ್ಡಿ ದರ ಕಡಿತ ಮಾಡಿರಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದೆ. ಬ್ಯಾಂಕ್‌ಗಳು ಈಗ ಯಾವುದೇ ಕುಂಟು ನೆಪ ಹೇಳುವಂತಿಲ್ಲ. ಬಡ್ಡಿ ದರ ಕಡಿತದ ಪ್ರಯೋಜನವು ಗ್ರಾಹಕರಿಗೆ, ಸಾಲಗಾರರಿಗೆ ತ್ವರಿತವಾಗಿ ವರ್ಗಾವಣೆಗೊಂಡರೆ ಮಾತ್ರ ಆರ್ಥಿಕ ಚೇತರಿಕೆ ವೇಗ ಪಡೆಯಲಿದೆ.

ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು ದಿನೇ ದಿನೇ ಬೃಹದಾಕಾರ ತಾಳುತ್ತಿದೆ. ಇದರಿಂದ ಹೂಡಿಕೆದಾರರ ವಿಶ್ವಾಸಕ್ಕೆ ತೀವ್ರ ಧಕ್ಕೆ ಒದಗಿದೆ. ಈ ಗಂಭೀರ ಸ್ವರೂಪದ ಸಮಸ್ಯೆಗೆ ಆರ್‌ಬಿಐ ತಕ್ಷಣಕ್ಕೆ ಪರಿಹಾರ ಕಂಡುಕೊಂಡರೆ ಮಾತ್ರ ಬಡ್ಡಿ ದರ ಕಡಿತ ನಿರ್ಧಾರಕ್ಕೆ ಹೆಚ್ಚಿನ ಬಲ ಬರಲಿದೆ. ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸುವ ಡಿಜಿಟಲ್‌ ವಹಿವಾಟುಗಳಾದ ಆರ್‌ಟಿಜಿಎಸ್‌ ಮತ್ತು ಎನ್‌ಇಎಫ್‌ಟಿ ಶುಲ್ಕವನ್ನೂ ಆರ್‌ಬಿಐ ರದ್ದು ಮಾಡಿದೆ. ನಗದುರಹಿತ ವಹಿವಾಟು ಉತ್ತೇಜಿಸುವ ಈ ನಿರ್ಧಾರವೂ ಸ್ವಾಗತಾರ್ಹ. ಇದರ ಲಾಭವನ್ನೂ ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಬೇಕಾಗಿದೆ. ಮಂದಗತಿಯ ಆರ್ಥಿಕತೆಗೆ ಚೇತರಿಕೆ ನೀಡಲು ಬ್ಯಾಂಕ್‌ ಬಡ್ಡಿ ದರ ಕಡಿತವೊಂದೇ ಮದ್ದಾಗದು. ಆರ್‌ಬಿಐ ತನ್ನ ಕೆಲಸ ಮಾಡಿದೆ. ಕೇಂದ್ರ ಸರ್ಕಾರವು ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ಹೂಡಿಕೆ ಬಗ್ಗೆ ಗಮನ ಕೇಂದ್ರೀಕರಿಸಲು ಸಚಿವ ಸಂಪುಟದ ಸಮಿತಿಗಳ ರಚನೆ ಸ್ವಾಗತಾರ್ಹ.ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತ ಪಡೆದು ಕೇಂದ್ರದಲ್ಲಿ ಪುನಃ ಗದ್ದುಗೆ ಏರಿದೆ. ಹೊಸ ಸರ್ಕಾರವುಅರ್ಥ ವ್ಯವಸ್ಥೆಗೆಹುರುಪು ತುಂಬಲು ದಿಟ್ಟ ನಿರ್ಧಾರ ಕೈಗೊಳ್ಳಬಹುದು ಎಂದು ಜನರು ನಿರೀಕ್ಷಿಸಿದ್ದಾರೆ. ಆರ್ಥಿಕ ಚಟುವಟಿಕೆಗಳು ವೇಗ ಪಡೆಯಲು ಅಗತ್ಯವಾದ ಶಕ್ತಿವರ್ಧಕವು ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಸಿಗಬಹುದು ಎಂಬ ವಿಶ್ವಾಸ ಇದೆ. ಹಣಕಾಸು ಮತ್ತು ವಿತ್ತೀಯ ಕ್ರಮಗಳು ಸಮನ್ವಯದಿಂದ ಸಾಗಿದರೆ ಮಾತ್ರ ಆರ್ಥಿಕತೆಯು ಅಭಿವೃದ್ಧಿಯ ಹಳಿಗೆ ಮರಳೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT