ಗುರುವಾರ , ಅಕ್ಟೋಬರ್ 17, 2019
22 °C

ಆರ್ಥಿಕ ಪುನಶ್ಚೇತನಕ್ಕೆ ರೆಪೊ ಕಡಿತವೊಂದೇ ಪರಿಹಾರವಲ್ಲ

Published:
Updated:
Repo rate

ಅಲ್ಪಾವಧಿ ಬಡ್ಡಿ (ರೆಪೊ) ದರಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಸತತ ಐದನೇ ಬಾರಿಗೆ ಇಳಿಸಿದೆ. ಆರ್ಥಿಕ ಚೇತರಿಕೆಗೆ ಒತ್ತು ನೀಡಲು ಈ ನಿರ್ಧಾರ ತೆಗೆದುಕೊಂಡಿದೆ. ವಾಣಿಜ್ಯ ಬ್ಯಾಂಕ್‌ಗಳಿಗೆ ಕೇಂದ್ರೀಯ ಬ್ಯಾಂಕ್‌ ನೀಡುವ ಸಾಲದ ಬಡ್ಡಿ ದರ (ರೆಪೊ) ಫೆಬ್ರುವರಿಯಿಂದ ಈಚೆಗೆ ಶೇ 1.35ರಷ್ಟು ಅಗ್ಗವಾಗಿದೆ. ಶೇ 5.15ರ ರೆಪೊ ದರವು ದಶಕದಲ್ಲಿಯೇ ಕಡಿಮೆ ಮಟ್ಟದ್ದು. ಆಗಸ್ಟ್‌ ತಿಂಗಳಲ್ಲಿ ರೆಪೊ ದರವನ್ನು ಶೇ 0.35ರಷ್ಟು ಕಡಿತಗೊಳಿಸಿ ಆರ್‌ಬಿಐ ಅಚ್ಚರಿ ಮೂಡಿಸಿತ್ತು. ಈಗ ಬಡ್ಡಿ ದರವನ್ನು ಮತ್ತೆ ಶೇ 0.25ರಷ್ಟು ಕಡಿತ ಮಾಡಲಾಗಿದೆ. ಆರ್ಥಿಕ ಚಟುವಟಿಕೆಯ ವೇಗ ಹೆಚ್ಚಳಕ್ಕೆ ಬಡ್ಡಿ ದರ ಇಳಿಸುವುದೇ ‘ರಾಮಬಾಣ’ ಎಂದು ಆರ್‌ಬಿಐ ಭಾವಿಸಿದಂತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ವಾಣಿಜ್ಯ ವಲಯಕ್ಕೆ ಹರಿದು ಬಂದಿರುವ ಸಾಲದ ಪ್ರಮಾಣ ಸುಮಾರು ₹ 90 ಸಾವಿರ ಕೋಟಿ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಈ ಪ್ರಮಾಣವು ₹ 7.6 ಲಕ್ಷ ಕೋಟಿಗಳಷ್ಟಿತ್ತು. ಬಡ್ಡಿ ದರವನ್ನು ಸತತವಾಗಿ ಕಡಿತಗೊಳಿಸುತ್ತಿರುವುದು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಿ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಶೇ 0.80ರಷ್ಟು ಕಡಿಮೆಯಾಗಲಿದೆ (ಶೇ 6.9ರಿಂದ ಶೇ 6.1) ಎಂದು ಅಂದಾಜಿಸಲಾಗಿದೆ. ಆರ್ಥಿಕ ಬೆಳವಣಿಗೆಯು ಉತ್ತೇಜನಕಾರಿಯಾಗಿಲ್ಲ ಎಂಬ ಅಂಶವು ಕೇಂದ್ರೀಯ ಬ್ಯಾಂಕ್‌ಗೆ ಮನವರಿಕೆಯಾಗಿರುವುದನ್ನು ಇದು ಧ್ವನಿಸುತ್ತದೆ. ಆರ್‌ಬಿಐ ಅಂದಾಜು ಮಾಡಿದ ಮಟ್ಟದಲ್ಲಿ ಜಿಡಿಪಿ ಬೆಳವಣಿಗೆ ಆಗಬಹುದು ಎಂಬುದನ್ನು ಸಮರ್ಥಿಸು ವಂತಹ ಬೆಳವಣಿಗೆಗಳೂ ಕಂಡುಬರುತ್ತಿಲ್ಲ. ಈ ಗುರಿ ಮುಟ್ಟಬೇಕಾದರೆ ಹಣಕಾಸು ವರ್ಷದ ದ್ವಿತೀಯಾ ರ್ಧದಲ್ಲಿ ವೃದ್ಧಿ ದರವು ಶೇ 7ರಷ್ಟು ಇರಬೇಕು. ಸದ್ಯದ ಸಂದರ್ಭದಲ್ಲಿ ಅಂತಹ ಸಾಧ್ಯತೆ ಕಡಿಮೆ. ಹಾಗಾಗಿ, ಆರ್ಥಿಕ ಪ್ರಗತಿಯಲ್ಲಿನ ಮಂದಗತಿಯು ಇನ್ನಷ್ಟು ಕಾಲ ಮುಂದುವರಿಯಬಹುದು. ಅರ್ಥ ವ್ಯವಸ್ಥೆಯ ಚೇತರಿಕೆಗೆ ಆರ್‌ಬಿಐ ತನ್ನಿಂದಾಗುವ ಪ್ರಯತ್ನಗಳನ್ನೆಲ್ಲ ಮಾಡಿದೆ. ಅಗತ್ಯ ಬಿದ್ದರೆ ಮುಂಬರುವ ದಿನಗಳಲ್ಲೂ ಬಡ್ಡಿ ದರ ಕಡಿತ ಮಾಡುವ ಇಂಗಿತ ವ್ಯಕ್ತಪಡಿಸಿದೆ. ರೆಪೊ ದರವುಶೇ 4.75ರ ವರೆಗೆ ಇಳಿಯಬಹುದು ಎಂದೂ ವಿಶ್ಲೇಷಿಸಲಾಗಿದೆ.

ಅರ್ಥವ್ಯವಸ್ಥೆಯಲ್ಲಿ ಸರಕು–ಸೇವೆ ಬೇಡಿಕೆ ಕುಗ್ಗಿದೆ. ಗ್ರಾಹಕರಲ್ಲಿ ಅಭದ್ರ ಭಾವ, ನಿರುತ್ಸಾಹ ಮನೆ ಮಾಡಿದೆ. ಇಂತಹ ನಿರುತ್ತೇಜಕ ಪರಿಸರದಲ್ಲಿ ಸುಲಭ ಸಾಲದ ಹಣಕಾಸು ನೀತಿಯು ಬೀರಬಹುದಾದ ಪರಿಣಾಮಗಳಿಗೆ ಅದರದ್ದೇ ಆದ ಮಿತಿಗಳಿರುತ್ತವೆ. ಅಗ್ಗದ ಬಡ್ಡಿ ದರ ಮತ್ತು ತೆರಿಗೆ ಕಡಿತದ ನಿರ್ಧಾರಗಳು ಎಲ್ಲ ಸಂದರ್ಭಗಳಲ್ಲೂ ಉದ್ದೇಶಿತ ಫಲಿತಾಂಶ ನೀಡುತ್ತವೆ ಎಂದು ಖಚಿತವಾಗಿ ಹೇಳಲಾಗದು. ಬ್ಯಾಂಕ್‌ಗಳು ಅಗ್ಗದ ಬಡ್ಡಿ ದರದಲ್ಲಿ ಸಾಲ ನೀಡಲು ಬೇಕಾದಂತಹ ಸ್ಥಿತಿಯನ್ನು ಆರ್‌ಬಿಐ ಸೃಷ್ಟಿಸಿದೆ. ಆದರೆ, ಸಾಲ ಪಡೆದು, ಅದನ್ನು ತಯಾರಿಕಾ ಚಟುವಟಿಕೆಗಳಿಗೆ ಬಳಸುವಂತೆ ಒತ್ತಾಯಿಸಲು ಅದರಿಂದ ಸಾಧ್ಯವಿಲ್ಲ. ಉದ್ಯಮ ವಲಯಕ್ಕೆ ಕೇಂದ್ರ ಸರ್ಕಾರ ಈಗಾಗಲೇ ₹ 1.45 ಲಕ್ಷ ಕೋಟಿ ಮೊತ್ತದ ವಿನಾಯಿತಿ ಘೋಷಿಸಿದೆ. ಉದ್ಯಮಗಳು ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಲಿ ಎಂಬುದು ಸರ್ಕಾರದ ಉದ್ದೇಶ. ಆದರೆ, ಸರ್ಕಾರದ ಈ ನಿರ್ಧಾರದಿಂದಾಗಿ ವಿತ್ತೀಯ ಕೊರತೆ ಮತ್ತು ಸಾಲದ ಹೊರೆ ಹೆಚ್ಚಲಿದೆ ಎನ್ನುವ ಆತಂಕ ಷೇರುಪೇಟೆಯಲ್ಲಿ ಮನೆ ಮಾಡಿದೆ. ರೆಪೊ ದರ ಕಡಿತಕ್ಕೆ ಷೇರುಪೇಟೆಯಲ್ಲಿ ಉತ್ಸಾಹದ ಪ್ರತಿಕ್ರಿಯೆ ಸಿಗದಿರುವುದಕ್ಕೆ ಇದೇ ಪ್ರಮುಖ ಕಾರಣ. ಹಬ್ಬದ ದಿನಗಳಲ್ಲಿನ ಬೇಡಿಕೆ ಹೆಚ್ಚಳ ಮತ್ತು ಉತ್ತಮ ಮುಂಗಾರಿನ ಫಲಶ್ರುತಿಯಾಗಿ ಕೃಷಿ ಕ್ಷೇತ್ರ ಚೇತರಿಕೆ ಕಂಡರೆ ಮಾತ್ರ ಆರ್ಥಿಕ ಹಿಂಜರಿತದ ಕಾರ್ಮೋಡಗಳು ದೂರವಾಗಬಹುದು. ಸರ್ಕಾರದ ಉಪಕ್ರಮಗಳು ಬಡ್ಡಿ ದರ ಕಡಿತ ಮತ್ತು ತೆರಿಗೆ ವಿಯಾಯಿತಿಗಷ್ಟೇ ಸೀಮಿತವಾಗಬಾರದು. ಮೂಲ ಸೌಕರ್ಯ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯಡಿ ಅಭಿವೃದ್ಧಿ ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಗತಗೊಳ್ಳಬೇಕು.

Post Comments (+)