ಮಂಗಳವಾರ, ಡಿಸೆಂಬರ್ 10, 2019
26 °C

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಚ್ಚರಿ ಮೂಡಿಸಿದ ನಿರ್ಧಾರ

Published:
Updated:
Deccan Herald

ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಅಚ್ಚರಿ ಮೂಡಿಸಿದೆ. ಕನಿಷ್ಠ ಶೇ 0.25ರಷ್ಟು ಬಡ್ಡಿ ದರ ಹೆಚ್ಚಳಗೊಳ್ಳಲಿದೆ ಎನ್ನುವ ನಿರೀಕ್ಷೆಯನ್ನು ತಲೆಕೆಳಗು ಮಾಡಿದೆ. ಈ ಹಿಂದೆ ಸತತ ಎರಡು ಬಾರಿ ದರ ಹೆಚ್ಚಿಸಿದ್ದ ಆರ್‌ಬಿಐ, ಹಠಾತ್ತಾಗಿ ತನ್ನ ನಿಲುವು ಬದಲಿಸಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಈ ಅನಿರೀಕ್ಷಿತ ನಡೆಗೆ ಷೇರುಪೇಟೆಯ ಸೂಚ್ಯಂಕ ತೀವ್ರವಾಗಿ ಕುಸಿದಿದೆ. ಹಾಗೆಯೇ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಬೆಲೆ ದಾಖಲೆ ಮಟ್ಟದಲ್ಲಿ ಪತನಗೊಂಡಿದೆ. ಡಾಲರ್‌ ಎದುರು ರೂಪಾಯಿ ಬೆಲೆ ನಿರಂತರವಾಗಿ ಕುಸಿಯುತ್ತಿರುವುದನ್ನು ತಡೆಯಲು ಬಡ್ಡಿ ದರ ಹೆಚ್ಚಳವು ಸಹಜ ಕ್ರಮವಾಗಿತ್ತು. ರೂಪಾಯಿ ದರ ಕುಸಿತದ ಬಗ್ಗೆ ಆರ್‌ಬಿಐ ನಿಷ್ಕಾಳಜಿ ತೋರಿರುವುದು ಇಲ್ಲಿ ವ್ಯಕ್ತ.

ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿಯ ನಿರಂತರ ಕುಸಿತ, ಸಾಲ ಮರುಪಾವತಿಸದ ಬಿಕ್ಕಟ್ಟಿಗೆ ಸಿಲುಕಿರುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಅಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ನಿಂದ (ಐಎಲ್&ಎಫ್‌ಎಸ್) ಬಾಂಡ್‌ ಮಾರುಕಟ್ಟೆಯಲ್ಲಿ ಉದ್ಭವಿಸಿರುವ ತಲ್ಲಣಗಳ ಕಾರಣಕ್ಕೆ, ಬಡ್ಡಿ ದರ ಹೆಚ್ಚಿಸಿ ಪೇಟೆಯ ನೆರವಿಗೆ ಆರ್‌ಬಿಐ ಧಾವಿಸಲಿದೆ ಎಂಬಂತಹ ನಿರೀಕ್ಷೆ ದೊಡ್ಡಮಟ್ಟದಲ್ಲಿತ್ತು. ಆದರೆ, ಮಾರುಕಟ್ಟೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಶಮನಕ್ಕೆ ಮುಂದಾಗಲಿದೆ ಎನ್ನುವ ಆಶಾಸೌಧ ಈಗ ಮುರಿದುಬಿದ್ದಿದೆ.

ಹಣದುಬ್ಬರವು ತಗ್ಗಲಿದೆ ಎಂಬಂತಹ ನಿರೀಕ್ಷೆ ಇಟ್ಟುಕೊಂಡಿರುವ ಕೇಂದ್ರೀಯ ಬ್ಯಾಂಕ್, ರೂಪಾಯಿ ಬೆಲೆ ನಿರ್ವಹಣೆಯಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದಿದೆ. ಮಾರುಕಟ್ಟೆಗಳಲ್ಲಿ ವ್ಯವಹರಿಸುವವರೇ ತಮ್ಮ ಧೋರಣೆ ಬದಲಿಸಿಕೊಳ್ಳಬೇಕು ಎನ್ನುವ ಸಂದೇಶ ರವಾನಿಸಿದೆ. ಆರ್‌ಬಿಐನ ಮುನ್ನೋಟ ಮತ್ತು ಹಣಕಾಸು ಮಾರುಕಟ್ಟೆಯಲ್ಲಿನ ಇತ್ತೀಚಿನ ವಿದ್ಯಮಾನಗಳ ಮಧ್ಯೆ ತಾಳಮೇಳ ಇಲ್ಲದಿರುವುದು ಕಂಡುಬರುತ್ತದೆ. ಡಾಲರ್‌ ಎದುರು ರೂಪಾಯಿ ವಿನಿಮಯ ದರ ದಾಖಲೆ ಮಟ್ಟದಲ್ಲಿ ಕುಸಿಯುತ್ತಲೇ ಇದೆ.

ಷೇರುಪೇಟೆಯ ಹಿಂದಿನ ವಾರದ ವಹಿವಾಟು 31 ತಿಂಗಳಲ್ಲಿಯೇ ಗರಿಷ್ಠ ಕುಸಿತ ದಾಖಲಿಸಿತ್ತು. ಈ ಬೆಳವಣಿಗೆಗಳ ಹೊರತಾಗಿಯೂ, ಬಡ್ಡಿ ದರ ಹೆಚ್ಚಳಗೊಂಡಿಲ್ಲ. ಆದರೆ, ‘ಹಣದುಬ್ಬರ ಮಟ್ಟ ಹಿತಕಾರಿ ಮಟ್ಟದಲ್ಲಿ ಇರಲಿದೆ. ಆರ್ಥಿಕ ವೃದ್ಧಿ ದರವು
ಶೇ 7.4ರಷ್ಟು ಇರಲಿದೆ. ದೇಶಿ ವಿದ್ಯಮಾನಗಳು ನಿಯಂತ್ರಣದಲ್ಲಿ ಇವೆ. ಬಾಹ್ಯ ವಿದ್ಯಮಾನಗಳೇ ದೇಶಿ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತಿವೆ’ ಎಂದೆಲ್ಲ ಅಂದಾಜಿಸಿರುವ ಆರ್‌ಬಿಐ, ಜಾಗತಿಕ ವಾಣಿಜ್ಯ ಸಮರದ ಉದ್ವಿಗ್ನತೆ ಹೆಚ್ಚಳ, ಅಮೆರಿಕದಲ್ಲಿ ಬಡ್ಡಿ ದರಗಳ ಏರಿಕೆ, ಕರೆನ್ಸಿ ಮಾರುಕಟ್ಟೆಯಲ್ಲಿನ ತಲ್ಲಣಗಳ ಬಗ್ಗೆ ಸದ್ಯಕ್ಕೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಐಎಲ್&ಎಫ್‌ಎಸ್ ಬಿಕ್ಕಟ್ಟು ಈಗಾಗಲೇ ಕಾರ್ಪೊರೇಟ್‌ ಸಂಸ್ಥೆಗಳಿಗೆ ಸಾಲದ ಲಭ್ಯತೆಯನ್ನು ಬಿಗಿಗೊಳಿಸಿದೆ. ಇಂತಹ ಸಂದರ್ಭದಲ್ಲಿ ಬಡ್ಡಿ ದರ ಹೆಚ್ಚಿಸಿದರೆ ಸಾಲ ನೀಡಿಕೆ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವುದನ್ನು ಅಲ್ಲಗಳೆಯಲಿಕ್ಕಾಗದು. ಈ ಕಾರಣಕ್ಕೆ ಬಡ್ಡಿ ದರ ಹೆಚ್ಚಿಸದಿರುವುದು ಸರಿಯಾದ ನಿಲುವಾಗಿದೆ ಎಂದೂ ಅರ್ಥೈಸಬಹುದು.

ಆರ್‌ಬಿಐನ ಈ ನಿಲುವು, ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಬಡ್ಡಿ ದರ ಹೆಚ್ಚಳದ ಅನಿಶ್ಚಿತತೆಗೂ ಎಡೆಮಾಡಿಕೊಟ್ಟಿದೆ. ಹಾಗೆಯೇ ಆಮದು ಮಾಡಿಕೊಳ್ಳಲಾಗುವ ಭಾರಿ ಯಂತ್ರೋಪಕರಣ ಮತ್ತು ಇತರ ಕಚ್ಚಾ ಸರಕುಗಳ ವೆಚ್ಚವನ್ನೂ ದುರ್ಬಲ ರೂಪಾಯಿಯು ಹೆಚ್ಚಿಸಲಿದೆ. ಹಣಕಾಸು ನೀತಿ ಸಮಿತಿಯ (ಎಂಪಿಸಿ) ಬಹುಮತದ ನಿರ್ಧಾರವು ವ್ಯಾವಹಾರಿಕವಾಗಿದೆ. ಆದರೆ, ಬಾಹ್ಯ ವಿದ್ಯಮಾನಗಳ ಕುರಿತ ಆರ್‌ಬಿಐನ ಆಶಾವಾದವು ಮಾತ್ರ ಕಳವಳಕ್ಕೆ ಎಡೆಮಾಡಿಕೊಟ್ಟಿದೆ.

ಜಾಗತಿಕ ವಿದ್ಯಮಾನಗಳು ಅದರ ಕೈ ಕಟ್ಟಿ ಹಾಕಿರಬಹುದೇ ಅಥವಾ ಕಂಡೂ ಕಾಣದಂತೆ ನಿರ್ಲಕ್ಷಿಸುವ ಧೋರಣೆ ತಳೆದಿದೆಯೇ ಎನ್ನುವ ಅನುಮಾನ ಮೂಡಿಸುತ್ತದೆ. ಹೀಗಿದ್ದೂ ಬಡ್ಡಿ ದರ ಹೆಚ್ಚಳದ ಸಾಧ್ಯತೆಯನ್ನು ಮುಕ್ತವಾಗಿ ಇರಿಸಿಕೊಂಡಿರುವುದು ಸಮಾಧಾನಕರ. ವಿತ್ತೀಯ, ಹಣಕಾಸು ಮತ್ತು ಬಂಡವಾಳದ ಹರಿವು ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ನಿರ್ಧರಿಸುತ್ತಿರುವ ಸದ್ಯದ ಜಾಗತೀಕರಣದ ಸಂದರ್ಭದಲ್ಲಿ ಆರ್‌ಬಿಐ ನಡೆ ಇನ್ನಷ್ಟು ಅನಿಶ್ಚಿತತೆಗೆ ಎಡೆಮಾಡಿಕೊಡದಿರಲಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು