ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿ ಲೋಪ ಸರಿಪಡಿಸುವ ಕೆಲಸ ತಕ್ಷಣ ಆಗಲಿ

Last Updated 20 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೋಧನೆ ಮತ್ತು ಸಂಶೋಧನೆಯ ಮೂಲಕ ಶಿಕ್ಷಣದಲ್ಲಿ ಉತ್ಕೃಷ್ಟತೆ ಮೂಡಿಸಬೇಕಾದ ವಿಶ್ವವಿದ್ಯಾಲಯ ಗಳು ಕೆಟ್ಟ ಕಾರಣಗಳಿಗಾಗಿ ಸುದ್ದಿ ಆಗುತ್ತಿವೆ.ಇಂತಹ ವರದಿಗಳಿಗೆ ಪುಷ್ಟಿ ಕೊಡುವ ರೀತಿಯಲ್ಲಿವಿಶ್ವವಿದ್ಯಾಲಯವೊಂದರ ಕುಲಪತಿ ನೇಮಕವನ್ನು ಕರ್ನಾಟಕ ಹೈಕೋರ್ಟ್ ಬಹುಶಃ ಇದೇ ಮೊದಲ ಬಾರಿಗೆ ರದ್ದುಪಡಿಸಿದೆ.

ಇದು, ಕುಲಪತಿ ನೇಮಕ ಪ್ರಕ್ರಿಯೆಯ ಬಗ್ಗೆಯೇ ಪ್ರಶ್ನೆಗಳನ್ನು ಮೂಡಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಪ್ರೊ. ಕೆ.ಆರ್.ವೇಣುಗೋಪಾಲ್ ಅವರನ್ನು ನೇಮಕ ಮಾಡಿದ್ದನ್ನು ಏಕಸದಸ್ಯ ಪೀಠವು 2019ರಲ್ಲಿ ರದ್ದುಪಡಿಸಿತ್ತು. ನೇಮಕವನ್ನು ಪ್ರಶ್ನಿಸಿ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರೊ. ಸಂಗಮೇಶ ಪಾಟೀಲ ಅರ್ಜಿ ಸಲ್ಲಿಸಿದ್ದರು. ಅವರೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಸ್ಥಾನದ ಆಕಾಂಕ್ಷಿಯಾಗಿದ್ದರು.

ವಜುಭಾಯಿ ವಾಲಾ ಅವರು ರಾಜ್ಯಪಾಲರಾಗಿದ್ದಾಗ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ಸೆಕ್ಷನ್ 14(4) ಉಲ್ಲಂಘಿಸಿ, ರಾಜ್ಯ ಸರ್ಕಾರದ ಸಹಮತ ಇಲ್ಲದೆಯೇ ವೇಣುಗೋಪಾಲ್ ಅವರನ್ನು ಏಕಪಕ್ಷೀಯವಾಗಿ ನೇಮಿಸಿದ್ದಾರೆ ಎಂದು ಪಾಟೀಲ ಆರೋಪಿಸಿದ್ದರು. ರಾಜ್ಯಪಾಲರು ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಹೌದು. ಏಕಸದಸ್ಯ ‍ಪೀಠದ ಆದೇಶದ ಜಾರಿಗೆ ಈ ಹಿಂದೆ ತಡೆಯಾಜ್ಞೆ ನೀಡಿದ್ದ ವಿಭಾಗೀಯ ಪೀಠ ಈಗ ಆದೇಶವನ್ನು ಎತ್ತಿಹಿಡಿದಿದೆ.

ವೇಣುಗೋಪಾಲ್‌ ಅವರ ನೇಮಕವನ್ನು ಸರ್ಕಾರವು ನಂತರದಲ್ಲಿ ಅನುಮೋದಿಸಿತ್ತು. ಆದರೆ, ‘ಕೆಲವು ಕೆಲಸಗಳನ್ನು ನಿರ್ದಿಷ್ಟ ರೀತಿಯಲ್ಲಿ ಮಾಡಬೇಕು ಎಂದು ಕಾನೂನು ಹೇಳಿರುವಾಗ, ಅದನ್ನು ಹಾಗೆಯೇ ಮಾಡಬೇಕು. ಇನ್ನೊಂದು ಬಗೆಯಲ್ಲಿ ಆ ಕೆಲಸ ಮಾಡಲು ಅವಕಾಶವಿಲ್ಲ. ಇದು ಒಪ್ಪಿತ ತತ್ವ’ ಎಂದು ಹೇಳಿರುವ ಹೈಕೋರ್ಟ್, ಸರ್ಕಾರ ಸಮ್ಮತಿ ನೀಡಿದ್ದು ಅಸಿಂಧು ಎಂದು ಹೇಳಿದೆ. ಉನ್ನತ ಕಲಿಕಾ ಕೇಂದ್ರಗಳ ಪಾವಿತ್ರ್ಯವನ್ನು ಕಾಯುವ ಉದ್ದೇಶದಿಂದ ರಾಜ್ಯಪಾಲರನ್ನು ವಿಶ್ವವಿದ್ಯಾಲಯಗಳ ಕುಲಾಧಿಪತಿಯನ್ನಾಗಿಸಲಾಗಿದೆ. ಆದರೆ, ಆ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ವಾಲಾ ಅವರು ವಿಫಲರಾಗಿರುವುದನ್ನು ಅವರ ಅಧಿಕಾರ ಅವಧಿಯಲ್ಲಿ ನಡೆದ ಕೆಲವು ನೇಮಕಾತಿಗಳ ಸುತ್ತ ಇರುವ ವಿವಾದವು ಸ್ಪಷ್ಟಪಡಿಸುತ್ತದೆ. ಖಾಸಗಿ ದಂತವೈದ್ಯಕೀಯ ಕಾಲೇಜೊಂದರ ಪ್ರೊಫೆಸರ್‌ ಒಬ್ಬರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯನ್ನಾಗಿ ಸರ್ಕಾರದ ಜೊತೆ ಸಮಾಲೋಚನೆ ನಡೆಸದೆಯೇ ನೇಮಕ ಮಾಡಲು ಮುಂದಾಗಿದ್ದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸಿದ್ದರು.

ವಿಶ್ವವಿದ್ಯಾಲಯಗಳು ಲೋಕೋಪಯೋಗಿ ಇಲಾಖೆಯ ಶಾಖೆಗಳಂತೆ ವರ್ತಿಸುತ್ತಿರುವಂತಿದೆ, ದೊಡ್ಡ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿವೆ ಎಂಬ ಮಾತು ಈ ಹಿಂದಿನ ವಾರ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪವಾಗಿತ್ತು. ಸಮಂಜಸವಲ್ಲದ ನೇಮಕಾತಿಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಂಡುಬಂದಿರುವ ಗುಣಮಟ್ಟ ಕುಸಿತದ ನಡುವಿನ ನಂಟು ಕಣ್ಣಿಗೆ ರಾಚುವಂತೆ ಇದೆ. ಕುಲಪತಿಯಾಗಿ ನೇಮಕ ಆಗುವುದಕ್ಕೆ ₹ 8 ಕೋಟಿಯಿಂದ ₹ 10 ಕೋಟಿವರೆಗೆ ಲಂಚ ಕೊಡಬೇಕು ಎಂಬ ಮಾತು ಅಕಡೆಮಿಕ್ ವಲಯದಲ್ಲಿ ಇದೆ.

ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನಲ್ಲಿ ಆರಂಭಿಸುವ ಕಟ್ಟಡ ನಿರ್ಮಾಣ ಕಾಮಗಾರಿಗಳು ಈ ಹಣವನ್ನು ಹೊಂದಿಸುವುದಕ್ಕೆ ಅಥವಾ ಮಾಡಿರುವ ‘ಹೂಡಿಕೆ’ಯನ್ನು ಹಿಂದಕ್ಕೆ ಪಡೆಯಲು ನೆರವಾಗುತ್ತಿವೆ ಎಂಬ ಮಾತುಗಳೂ ಇವೆ. ತಪ್ಪು ಎಲ್ಲಿ ಆಗಿದೆ ಎಂದು ಶಾಸನಸಭೆಗಳ ಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಗೊತ್ತಿದೆ. ಸರಿಪಡಿಸಲು ಅವರು ಏಕೆ ಕ್ರಮ ಕೈಗೊಳ್ಳಲಿಲ್ಲ? ನೇಮಕಾತಿಗಳ ಗುಣಮಟ್ಟ ಸುಧಾರಣೆಗೆ ಹಿರಿಯ, ತಜ್ಞರ ಹೆಸರುಗಳ ಪಟ್ಟಿ ಮಾಡಲಾಗುವುದು, ಕುಲಪತಿಗಳು ಹಾಗೂ ಇತರ ಅಕಡೆಮಿಕ್ ನೇಮಕಗಳನ್ನು ಆ ಪಟ್ಟಿಯಿಂದ ಸೂಕ್ತ ಹೆಸರು ಆಯ್ಕೆ ಮಾಡಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥ ನಾರಾಯಣ ಅವರು ಕೆಲವು ಸಮಯದ ಹಿಂದೆ ಭರವಸೆ ನೀಡಿದ್ದರು. ಆದರೆ ಅವರ ಮಾತುಗಳು ಕಾಗದದ ಮೇಲೆ ಮಾತ್ರವೇ ಉಳಿದಿವೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮೂಡಿರುವ ಕೊಳಕನ್ನು ನಿವಾರಿಸಲು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಕ್ಷಣ ಕ್ರಮ ಕೈಗೊಳ್ಳಬೇಕು. ಅದನ್ನು ಮಾಡಲು ಅವರು ಮೊದಲ ಹೆಜ್ಜೆಯಾಗಿ, ನೇಮಕಾತಿಗಳಿಗೆ ವಿಶ್ವಾಸಾರ್ಹತೆ ಬರುವಂತೆ ನೋಡಿಕೊಳ್ಳಬೇಕು. ಸಾಮರ್ಥ್ಯ ಮತ್ತು ಅರ್ಹತೆಯನ್ನು ಮಾತ್ರ ಅಳತೆಗೋಲಾಗಿ ಇರಿಸಿಕೊಳ್ಳಬೇಕು. ನೇಮಕಾತಿಗಳ ಸಂದರ್ಭದಲ್ಲಿ ಪಾಲಿಸಬೇಕಾದ ಪ್ರಕ್ರಿಯೆಯಲ್ಲಿ ಲೋಪವಾಗದಂತೆ ನಿಗಾ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT