ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೋವಿಡ್‌: ಮನೆ ಮುಂದೆ ಕೆಂ‍ಪು ಪಟ್ಟಿ ಕಟ್ಟುವ ಔಚಿತ್ಯವೇನು?

Last Updated 30 ಮೇ 2021, 20:30 IST
ಅಕ್ಷರ ಗಾತ್ರ

ರಾಜ್ಯದ ರಾಜಧಾನಿ ಬೆಂಗಳೂರಿನ ಜನ ಕೋವಿಡ್‌ನಿಂದ ತತ್ತರಿಸಿದ್ದಾರೆ. ನಗರದಲ್ಲಿ ಇದುವರೆಗೆ 11.59 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದು, 13,105 ಮಂದಿ ಪ್ರಾಣ ಕಳೆದುಕೊಂಡಿ
ದ್ದಾರೆ. ನಗರದಲ್ಲಿ ಈಗಲೂ 1.62 ಲಕ್ಷದಷ್ಟು ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ ಶೇಕಡ 90ಕ್ಕೂ ಹೆಚ್ಚು ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಮನೆಗಳಲ್ಲಿ ನಾಲ್ಕೈದು ಮಂದಿ ಏಕಕಾಲದಲ್ಲಿ ಸೋಂಕಿನಿಂದ ಬಳಲುತ್ತಿದ್ದಾರೆ. ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದೆ. ಇದು ಅನಿವಾರ್ಯ ಆಗಿತ್ತಾದರೂ ಇದರಿಂದ ಜನ ಹೈರಾಣಾಗಿದ್ದಾರೆ ಎಂಬುದು ಕೂಡ ದಿಟ. ಈ ನಡುವೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು‘ಅಪಾಯ’ ಎಂಬ ಬರಹಗಳಿರುವ ಕೆಂಪು ಪಟ್ಟಿಯನ್ನು ಕೋವಿಡ್‌ ಸೋಂಕಿಗೆ ಒಳಗಾಗಿ ಮನೆ ಆರೈಕೆಯಲ್ಲಿರುವವರ ನಿವಾಸದ ಮುಂದೆ ಕಟ್ಟುವ ಅಮಾನವೀಯ ತೀರ್ಮಾನವನ್ನು ಕೈಗೊಂಡಿದೆ. ಕೋವಿಡ್‌ ಮೊದಲ ಅಲೆಯ ಆರಂಭದಲ್ಲಿ ನಗರದಲ್ಲಿ ಸೋಂಕಿತರು ಕಡಿಮೆ ಸಂಖ್ಯೆಯಲ್ಲಿದ್ದರು. ಸೋಂಕು ಬೇರೆ ಕಡೆ ಹರಡುವುದನ್ನು ನಿಯಂತ್ರಿಸಲು ಬಿಬಿಎಂಪಿ ಕಂಟೈನ್ಮೆಂಟ್‌ ವಲಯಗಳನ್ನು ಗುರುತಿಸಿ, ಸೋಂಕಿತರ ಮನೆಯ 100 ಮೀಟರ್‌ ವ್ಯಾಪ್ತಿಯ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡುತ್ತಿತ್ತು. ಈ ಪ್ರದೇಶದಿಂದ ಒಬ್ಬರೂ ಆಚೆ ಹೋಗದಂತೆ ಹಾಗೂ ಹೊರಗಿನವರು ಅಲ್ಲಿಗೆ ಬರದಂತೆ ಮಾಡಲು ನಿಗಾ ಇರಿಸಿತ್ತು. ಕಂಟೈನ್‌ಮೆಂಟ್‌ ಪ್ರದೇಶದ ಅಷ್ಟೂ ಮನೆಗಳಿಗೆ ಅಗತ್ಯ ಸಾಮಗ್ರಿ ಪೂರೈಕೆಗೆ ವ್ಯವಸ್ಥೆ ಮಾಡಿತ್ತು. ಸೀಲ್‌ಡೌನ್‌ ಮಾಡಲಾದ ಪ್ರದೇಶಗಳ ನಿವಾಸಿಗಳು ಹಾಗೂ ಸೋಂಕು ದೃಢಪಟ್ಟವರ ಮನೆ ಮಂದಿ ಅನುಭವಿಸುವ ಮಾನಸಿಕ ಯಾತನೆ ಬಗ್ಗೆ ಬಿಬಿಎಂಪಿ ಕೌನ್ಸಿಲ್‌ ಸಭೆಗಳಲ್ಲಿ ತಾಸುಗಟ್ಟಲೆ ಚರ್ಚೆಗಳು ನಡೆದಿವೆ. ಇಂತಹ ಉಪಕ್ರಮಗಳಿಂದ ಆಗುವ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ತಜ್ಞರು ಕೂಡಾ ಎಚ್ಚರಿಸಿದ್ದಾರೆ. ಟೀಕೆಗಳು ವ್ಯಕ್ತವಾದ ಬಳಿಕ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸುವ ಹಾಗೂ ಮನೆಗಳನ್ನು ಸೀಲ್‌ಡೌನ್‌ ಮಾಡುವ ಪರಿಪಾಟವನ್ನು ಬಿಬಿಎಂಪಿ ಕೈಬಿಟ್ಟಿತ್ತು. ಅವೈಜ್ಞಾನಿಕ ಎಂಬ ಕಾರಣಕ್ಕೆ ಕೈಬಿಟ್ಟ ಪದ್ಧತಿಯನ್ನು ಮನೆ ಬಳಿ ಕೆಂಪು ಪಟ್ಟಿ ಕಟ್ಟುವ ಮೂಲಕ ಬಿಬಿಎಂಪಿ ಮತ್ತೆ ಬೇರೆ ರೂಪದಲ್ಲಿ ಈಗ ಜಾರಿಗೊಳಿಸಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಮುಖ್ಯ ಆಯುಕ್ತ ಗೌರವ ಗುಪ್ತ ಅವರ ಮೌಖಿಕ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಂಕಿತರ ಮನೆ ಮುಂದೆ ಕೆಂಪು ಪಟ್ಟಿ ಕಟ್ಟುವ ಔಚಿತ್ಯವೇ ಅರ್ಥವಾಗುತ್ತಿಲ್ಲ.ಸೋಂಕಿತರ ಮನೆಗಳನ್ನು ಗುರುತಿಸಿ ಜಾಹೀರುಗೊಳಿಸುವುದರಿಂದ ಆ ಮನೆ ಮಂದಿಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಬಿಬಿಎಂಪಿ ಕಿಂಚಿತ್ತೂ ಯೋಚನೆ ಮಾಡಿದಂತಿಲ್ಲ. ‘ಸೋಂಕಿತರು ಮನೆಯಿಂದ ಹೊರಗಡೆ ಬಂದು ತಿರುಗಾಡುವುದನ್ನು ತಡೆಯಲು ಈ ರೀತಿ ಮಾಡಲಾಗುತ್ತಿದೆ’ ಎಂಬುದು ಬಿಬಿಎಂಪಿ ಅಧಿಕಾರಿಗಳು ನೀಡುತ್ತಿರುವ ಸಮಜಾಯಿಷಿ. ಕೋವಿಡ್‌ ರೋಗಿಗಳನ್ನು ಮಾನವೀಯವಾಗಿ ನಡೆಸಿಕೊಂಡು, ಎಲ್ಲ ರೀತಿಯ ನೆರವು ನೀಡಬೇಕಾದ ಆಡಳಿತ ವ್ಯವಸ್ಥೆಯೇ ಅವರನ್ನು ಕೀಳಾಗಿ ನೋಡಲು ಕಾರಣವಾಗುವಂತೆ ಮಾಡುತ್ತಿರುವುದು ಒಪ್ಪತಕ್ಕ ಕ್ರಮ ಅಲ್ಲ. ಸೋಂಕಿತರ ನೆರವಿಗೆ ಬರುವುದಕ್ಕೆ ಜನರು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಅವರ ಮನೆಗೆ ಕೆಂಪು ಪಟ್ಟಿ ಅಂಟಿಸುವ ಕ್ರಮವು ಸೋಂಕಿತರನ್ನು ಮತ್ತಷ್ಟು ಅಸಹಾಯಕತೆಗೆ ದೂಡುವ ಸಾಧ್ಯತೆ ಇದೆ. ಕುಟುಂಬದಲ್ಲಿನ ಸೋಂಕಿತರಲ್ಲದ ಸದಸ್ಯರೂ ಅಗತ್ಯ ವಸ್ತುಗಳ ಖರೀದಿಗೆ ಹೊರಗೆ ಬರುವುದಕ್ಕೆ ಈ ಕ್ರಮ ತಡೆಯೊಡ್ಡುತ್ತದೆ. ಕೋವಿಡ್‌ ರೋಗಿಗಳಲ್ಲಿ ಧೈರ್ಯ ತುಂಬಿ, ನೆರವು ನೀಡಬೇಕಾದ ಸಂದರ್ಭದಲ್ಲಿ ಕೆಂಪು ಪಟ್ಟಿಯ ಮೂಲಕ ಸಮಾಜದಿಂದ ಅವರನ್ನು ಪ್ರತ್ಯೇಕಿಸುವ ಕ್ರಮಗಳಿಂದ ಯಾವ ಪ್ರಯೋಜನವೂ ಆಗದು. ಅವೈಜ್ಞಾನಿಕವಾದ ಇಂತಹ ಕ್ರಮವನ್ನು ಕೈಬಿಟ್ಟು, ಸೋಂಕಿತರಿಗೆ ಅಗತ್ಯ ನೆರವು ಒದಗಿಸುವುದು ಮತ್ತು ಹೊರಗೆ ಓಡಾಡದಂತೆ ಮನವೊಲಿಸುವ, ಅರಿವು ಮೂಡಿಸುವ ಕೆಲಸವನ್ನು ಬಿಬಿಎಂಪಿ ಆಡಳಿತ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT