ಮುಂಬೈ ಮಳೆ ಹಾವಳಿ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಿ

7

ಮುಂಬೈ ಮಳೆ ಹಾವಳಿ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಿ

Published:
Updated:

30 ಮಿ.ಮೀ. ಮಳೆಯನ್ನು ತಾಳಿಕೊಳ್ಳುವುದೇ ಮುಂಬೈಗೆ ಕಷ್ಟ. ಇನ್ನು ಕಳೆದ ಭಾನುವಾರ, ಸೋಮವಾರ ಸುರಿದಂತಹ ಭಾರಿ ಮಳೆಗೆ ಸಹಜವಾಗಿಯೇ ಮುಂಬೈ ತತ್ತರಿಸಿದೆ. ಭಾನುವಾರ ಮುಂಬೈನಲ್ಲಿ 150 ಮಿ.ಮೀ.ಗಿಂತ ಹೆಚ್ಚಿನ ಮಳೆ ಬಿದ್ದಿದೆ. ಇದು ಮಾಮೂಲು ಬೀಳುವ ಮಳೆಗಿಂತ ಐದು ಪಟ್ಟು ಹೆಚ್ಚು. ಸೋಮವಾರ ಇನ್ನೂ ಹೆಚ್ಚಾಯಿತು. 24 ಗಂಟೆಗಳ ಅವಧಿಯಲ್ಲಿ 230ಕ್ಕೂ ಹೆಚ್ಚು ಮಿಲಿಮೀಟರ್‌ಗಳಷ್ಟು ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಯಿತು. ಜೀವಗಳ ಹಾನಿಯಷ್ಟೇ ಅಲ್ಲ ಕಟ್ಟಡಗಳ ಬಿರುಕು, ಹರಿದುಹೋಗದ ನೀರಿನಿಂದಾಗಿ ಆದ ಅವಾಂತರಗಳೂ ದೊಡ್ಡವು. ವಾಹನ ಸಂಚಾರ ಹಾಗೂ ರೈಲ್ವೆ ಸೇವೆಗಳಿಗೂ ಧಕ್ಕೆಯಾಯಿತು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಇದೇ ರೀತಿ ಬಿದ್ದ ಮಳೆ, ಮುಂಬೈ ರಸ್ತೆಗಳನ್ನು ನದಿಗಳಾಗಿಸಿತ್ತು. ಇನ್ನು, 2005ರ ಜುಲೈ ತಿಂಗಳಲ್ಲಿ ಬಿದ್ದ ಮಹಾಮಳೆಯ ನೆನಪು ಮುಂಬೈವಾಸಿಗಳಿಗೆ ಇದ್ದೇ ಇದೆ. 24 ಗಂಟೆಗಳಲ್ಲಿ 944 ಮಿ.ಮೀ. ಸುರಿದ ಮಳೆಯಿಂದಾಗಿ ಆಗ 500ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು. ಈ ಬಗೆಯ ಭಾರಿ ಮಳೆಯಿಂದಾಗುವ ಹಾವಳಿಯ ನಿರ್ವಹಣೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯೂ ಮುಖ್ಯ. ರಾಷ್ಟ್ರದ ಆರ್ಥಿಕ ರಾಜಧಾನಿ ಎನಿಸಿದ ಮುಂಬೈ, ಭಾರಿ ಮಳೆಯಿಂದಾಗಿ ನಲುಗಿಹೋಗಬಾರದು. ಮಳೆಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಚರಂಡಿ ವ್ಯವಸ್ಥೆ ಸರಿಪಡಿಸಬೇಕಿದೆ. ಇದಕ್ಕಾಗಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿರಬೇಕು. ಮುಂಬೈನಲ್ಲಿ ಮೊನ್ನೆ ಭಾನುವಾರ ಬಿದ್ದ ಭಾರಿ ಮಳೆಗೆ ಒಂದು ದಿನ ಮುಂಚೆಯಷ್ಟೇ ಮುಂಬೈ ನಗರದದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬಂದಿದೆ. ಕ್ಯಾರಿಬ್ಯಾಗ್, ಥರ್ಮಾಕೋಲ್ ಸೇರಿದಂತೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಈಗ ಮಹಾರಾಷ್ಟ್ರದಲ್ಲಿ ಶಿಕ್ಷಾರ್ಹ ಅಪರಾಧವಾಗಿಸಲಾಗಿದೆ. ಆದರೆ ಈ ಕಾನೂನನ್ನು ಎಷ್ಟರಮಟ್ಟಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ ಎಂಬುದು ಇಲ್ಲಿ ಮುಖ್ಯ. 

ಈಗಾಗಲೇ ರಾಷ್ಟ್ರದ 17 ರಾಜ್ಯಗಳಲ್ಲಿ ಪ್ಲಾಸ್ಟಿಕ್ ನಿಷೇಧ ಇದೆ. ಕರ್ನಾಟಕದಲ್ಲೂ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಪ್ರಬಲ ಕಾನೂನು ಇದೆ. ಹೀಗಿದ್ದೂ ಇದರ ನಿಯಂತ್ರಣ ಕ್ಲಿಷ್ಟವಾಗಿದೆ ಎಂಬುದು ವಸ್ತುಸ್ಥಿತಿ. ‘ಪ್ಲಾಸ್ಟಿಕ್ ಪೂರ್ಣ ನಿಷೇಧಿಸಿರುವ ರಾಜ್ಯಗಳಲ್ಲೇ ವಿವೇಚನಾರಹಿತವಾಗಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ಅವ್ಯಾಹತವಾಗಿ ನಡೆದಿದೆ’ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ 2016ರ ವರದಿಯೂ ಹೇಳಿದೆ. ಹೀಗಾಗಿ, 2011ರಲ್ಲಿ ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ್ದಂತಹ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳನ್ನು ರಾಜ್ಯಗಳು ಅನುಷ್ಠಾನಕ್ಕೆ ತರುವುದು ಒಳ್ಳೆಯದು ಎಂದೂ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಹೇಳಿತ್ತು. ರಾಷ್ಟ್ರದಾದ್ಯಂತ ಪ್ಲಾಸ್ಟಿಕ್‌ಗೆ ಸಂಪೂರ್ಣ ನಿಷೇಧ ಹೇರುವುದು ಅಸಾಧ್ಯದ ಸಂಗತಿ ಎಂದು ಆಗ ಈ ನಿಯಮಾವಳಿಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಆಗಿನ ಪರಿಸರ ಸಚಿವ ಜೈರಾಂ ರಮೇಶ್ ಹೇಳಿದ್ದರು. ಪ್ಲಾಸ್ಟಿಕ್ ತ್ಯಾಜ್ಯ ಪ್ರತ್ಯೇಕಗೊಳಿಸಿ ಅದನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಇಲ್ಲಿ ಮುಖ್ಯವಾಗುತ್ತದೆ. ಪ್ಲಾಸ್ಟಿಕ್‌ಗೆ ಅಗ್ಗದ ಬೆಲೆಯಲ್ಲಿ ಪರ್ಯಾಯಗಳೂ ಮಾರುಕಟ್ಟೆಯಲ್ಲಿ ಸಿಗುವಂತಾಗಬೇಕು. ಇಂತಹ ಸುಸ್ಥಿರ ಪರ್ಯಾಯ ವಸ್ತುಗಳನ್ನು ಜನಪ್ರಿಯಗೊಳಿಸಲು ಈ ಉತ್ಪನ್ನಗಳ ಮಾರಾಟ ವ್ಯವಸ್ಥೆಗೆ ಬೆಂಬಲ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ಯಾಕೇಜಿಂಗ್ ವಿಧಾನಗಳನ್ನು ಬದಲಿಸಲು ಹೊಸ ಪರಿಕಲ್ಪನೆಗಳನ್ನು ಹುಟ್ಟುಹಾಕಬೇಕು. ಇದಕ್ಕೆ ದೊಡ್ಡ ಉದ್ಯಮ ಸಂಸ್ಥೆಗಳು ಕೈಜೋಡಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಪ್ಲಾಸ್ಟಿಕ್ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಹಾಗೂ ಮರುಬಳಕೆಯ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಿರಂತರವಾಗಿರಬೇಕು. ಇದಕ್ಕಾಗಿ ಪ್ಲಾಸ್ಟಿಕ್ ತಡೆ ವಿಚಾರವು ರಾಷ್ಟ್ರೀಯ ಆದ್ಯತೆಯ ಸಂಗತಿಯಾಗಬೇಕು.      

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !