ಗುರುವಾರ , ಡಿಸೆಂಬರ್ 5, 2019
19 °C

ಬಡ್ಡಿ ದರ ಹೆಚ್ಚಳ; ಹಣದುಬ್ಬರನಿಯಂತ್ರಣದ ಕಾಳಜಿ

Published:
Updated:
Deccan Herald

ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಸತತವಾಗಿ ಎರಡನೇ ಬಾರಿಗೆ ಶೇ 0.25ರಷ್ಟು ಹೆಚ್ಚಿಸಿದೆ. ಹಣದುಬ್ಬರ ಗುಮ್ಮ ಮತ್ತು ಆರ್ಥಿಕ ಬೆಳವಣಿಗೆ ಸಂಬಂಧಿಸಿದಂತೆ ಎಚ್ಚರಿಕೆ ಸ್ವರೂಪದ ನಿರ್ಧಾರವಾಗಿದೆ ಇದು. ಬೆಲೆಗಳ ಏರಿಕೆಗೆ ಸಂಬಂಧಿಸಿದ ಹಲವಾರು ಅನಿಶ್ಚಯಗಳು ಈ ನಿರ್ಧಾರದ ಹಿಂದಿರುವುದು ಸ್ಪಷ್ಟ. ಗೃಹ, ಕಾರು ಮತ್ತು ವೈಯಕ್ತಿಕ ಸಾಲ ಪಡೆಯುವವರ ಪಾಲಿಗೆ ಇದು ಕಹಿ ಸುದ್ದಿ. ರಿಯಲ್‌ ಎಸ್ಟೇಟ್‌ ವಹಿವಾಟಿನ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದರೆ, ಒಟ್ಟಾರೆ ದೇಶಿ ಆರ್ಥಿಕತೆಯ ಹಿತರಕ್ಷಣೆಗಾಗಿ ಈ ಕಠಿಣ ತೀರ್ಮಾನಕ್ಕೆ ಬಂದಿರುವುದು ವಿವೇಕಯುತ ಧೋರಣೆಯಾಗಿದೆ. ವಿದೇಶಗಳ ಸ್ವಹಿತಾಸಕ್ತಿಯ ವ್ಯಾಪಾರ ಸಂರಕ್ಷಣೆ ನೀತಿಯಿಂದಾಗಿ ಕರೆನ್ಸಿ ಸಮರ ನಡೆಯುವ ಸಾಧ್ಯತೆ ಕಾರಣಕ್ಕೆ ಆರ್‌ಬಿಐನ ಕಾಳಜಿ ಸಮರ್ಥನೀಯವಾಗಿದೆ. ಹಣದುಬ್ಬರವು ಬಡವರ ಮೇಲಿನ ಮರೆಮಾಚಿದ ತೆರಿಗೆ ಎಂದೇ ಪರಿಗಣಿತವಾಗಿರುವಾಗ, ಅದಕ್ಕೆ ಮೂಗುದಾರ ಹಾಕುವ ಪ್ರಯತ್ನಗಳು ಸದಾ ಸ್ವಾಗತಾರ್ಹವಾಗಿರುತ್ತವೆ. ಸದ್ಯಕ್ಕೆ ಎಲ್ಲ ಬಗೆಯ ಸರಕುಗಳ ಬೆಲೆಗಳು ಏರುಗತಿಯಲ್ಲಿ ಇವೆ.  ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತಗೊಂಡಷ್ಟೂ ಆಮದು ದುಬಾರಿಯಾಗಲಿದೆ. ಹಣದುಬ್ಬರ ಒತ್ತಡ ಹೆಚ್ಚಲಿದೆ. ಇದು ವ್ಯಾಪಾರ ಕೊರತೆ ಹೆಚ್ಚಳಕ್ಕೂ ಕಾರಣವಾಗಲಿದೆ. ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಏರಿಳಿತ, ಚುನಾವಣೆ ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿತ್ತೀಯ ಕೊರತೆ ಹೆಚ್ಚಳ ಸಾಧ್ಯತೆಯನ್ನೂ ಇಲ್ಲಿ ಪರಿಗಣನೆಗೆ ತೆಗೆದುಕೊಂಡಿರುವುದು ಎದ್ದುಕಾಣಿಸುತ್ತದೆ. ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಿರುವುದು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪುಷ್ಟಿ ನೀಡಲಿದೆ. ವಿತ್ತೀಯ ಕೊರತೆ ಹೆಚ್ಚಿಸುವ ಕೃಷಿ ಸಾಲ ಮನ್ನಾ ನಿರ್ಧಾರವೂ ಹಣದುಬ್ಬರಕ್ಕೆ ನೀರೆರೆಯುತ್ತಿದೆ. ಏರುತ್ತಲೇ ಇರುವ ಕಚ್ಚಾ ತೈಲ ಬೆಲೆ, ಅಮೆರಿಕ ಮತ್ತು ಚೀನಾದ ಮಧ್ಯೆ ಹೆಚ್ಚುತ್ತಿರುವ ವಾಣಿಜ್ಯ ಸಮರದಿಂದ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಅನಿಶ್ಚಯ ಕಂಡು ಬರಲಿದೆ. ಈ ಎಲ್ಲ ವಿದ್ಯಮಾನಗಳೂ ಸ್ಥಳೀಯವಾಗಿ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಲಿವೆ. ಈ ಬಾಹ್ಯ ಬೆಳವಣಿಗೆಗಳ ಮೇಲೆ ಆರ್‌ಬಿಐಗೆ ಯಾವುದೇ ನಿಯಂತ್ರಣ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಇಂತಹ ಕಠಿಣ ನಿರ್ಧಾರಕ್ಕೆ ಬರಲಾಗಿದೆ. ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಶೇ 4.8 ಮತ್ತು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 5ರಷ್ಟಕ್ಕೆ ಹಣದುಬ್ಬರ ಏರಿಕೆಯಾಗಲಿದೆ ಎಂಬ ಅಂದಾಜೂ ಇದೆ. ಜತೆಗೆ, ವಿತ್ತೀಯ ಕೊರತೆ ಹೆಚ್ಚಳಗೊಳ್ಳುತ್ತಿರುವುದೂ ಕಳವಳಕಾರಿ.

 ಆರ್ಥಿಕ ವೃದ್ಧಿ ದರ ಕುರಿತ ಮುನ್ನೋಟ (ಶೇ 7.4) ಗಮನಿಸಿದರೆ, ಹಿಂದಿನ ವರ್ಷದ ಮಂದಗತಿಯ ಚಟುವಟಿಕೆಯು ಈಗ ಚುರುಕಾಗಿದೆ. ವಿತ್ತೀಯ ಕೊರತೆಗೆ ಕಡಿವಾಣ ಹಾಕಿ ಆರ್ಥಿಕತೆಯನ್ನು ರಕ್ಷಿಸುವ ಹೊಣೆಗಾರಿಕೆ ನಿಭಾಯಿಸಲು ಆರ್‌ಬಿಐ ಈ ಎಲ್ಲ ಕಸರತ್ತು ಮಾಡುತ್ತಿದೆ. ಎಕ್ಸೈಸ್‌ ಡ್ಯೂಟಿ ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಮನಸ್ಸು ಮಾಡದಿರುವುದು ಹಣದುಬ್ಬರಕ್ಕೆ ಇನ್ನೊಂದು ಕಾರಣ ಎನ್ನುವುದನ್ನೂ  ನಿರ್ಲಕ್ಷಿಸಲಿಕ್ಕಾಗದು. ಹಣದುಬ್ಬರದ ಸವಾಲು ಎದುರಿಸುವುದಕ್ಕಾಗಿ ಚೇತರಿಕೆ ಹಾದಿಯಲ್ಲಿ ಇರುವ ಆರ್ಥಿಕತೆಯನ್ನು ಪ್ರತಿ ಬಾರಿಯೂ ಹಗುರವಾಗಿ ಪರಿಗಣಿಸಬಾರದು. ದೇಶಿ ಆರ್ಥಿಕತೆಯು ಚೇತರಿಕೆಯ ಲಕ್ಷಣ ತೋರುತ್ತಿರುವಾಗ ಗರಿಷ್ಠ ಬಡ್ಡಿ ದರಗಳು ಸಹಜವಾಗಿಯೇ ಉತ್ಪಾದನೆ ಮತ್ತು ಬೇಡಿಕೆಯನ್ನು ಕುಂಠಿತಗೊಳಿಸುತ್ತವೆ. ಈ ಕಾರಣಕ್ಕೆ, 6 ಸದಸ್ಯರ ಹಣಕಾಸು ನೀತಿ ಸಮಿತಿಯು(ಎಂಪಿಸಿ) ಬಡ್ಡಿ ದರಗಳ ಬಗ್ಗೆ ಗೊಂದಲದಲ್ಲಿ ಇರುವ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಪ್ರತಿಕೂಲಕರವಾದ ಜಾಗತಿಕ ಮತ್ತು ಸ್ಥಳೀಯ ವಿದ್ಯಮಾನಗಳ ಈ ದಿನಗಳಲ್ಲಿ, ಆರ್ಥಿಕತೆಯಲ್ಲಿ ಸ್ಥಿರತೆ ತರಲು ಬಡ್ಡಿ ದರವನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುವುದಕ್ಕೆ ಕೆಲ ಮಿತಿಗಳೂ ಇವೆ ಎನ್ನುವುದೂ ಆರ್‌ಬಿಐಗೆ ಮನವರಿಕೆಯಾಗಬೇಕಾಗಿದೆ. ಆರ್ಥಿಕ ಬೆಳವಣಿಗೆ ಮೇಲೆ ಹಣದುಬ್ಬರ ಬೀರುವ ವ್ಯತಿರಿಕ್ತ ಪರಿಣಾಮಗಳಿಗೆ ಕಡಿವಾಣ ಹಾಕುವ ಇತರ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸಲೂ ಇದು ಸಕಾಲವಾಗಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು