ರಷ್ಯಾ ಜೊತೆ ರಕ್ಷಣಾ ಒಪ್ಪಂದಬಾಂಧವ್ಯ ವೃದ್ಧಿಗೆ ಬಲ

7

ರಷ್ಯಾ ಜೊತೆ ರಕ್ಷಣಾ ಒಪ್ಪಂದಬಾಂಧವ್ಯ ವೃದ್ಧಿಗೆ ಬಲ

Published:
Updated:
Deccan Herald

ಸ್ವತಂತ್ರ ನೆಲೆಯ ವಿದೇಶಾಂಗ ನೀತಿಯನ್ನು ಭಾರತ ಅನುಸರಿಸಲಿದೆ ಎಂಬಂತಹ ಸಂದೇಶವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ನೀಡಿದ ಎರಡು ದಿನಗಳ ಭೇಟಿ ಸಂದರ್ಭದಲ್ಲಿ ಮತ್ತೊಮ್ಮೆ ಸಾರಿದಂತಾಗಿದೆ. ಪುಟಿನ್ ಅವರು ಕಳೆದ ವಾರ ನವದೆಹಲಿಯಲ್ಲಿ ನಡೆದ ಭಾರತ– ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ, ಉನ್ನತ ತಂತ್ರಜ್ಞಾನದ ಎಸ್–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆಗಳ ಖರೀದಿಗಾಗಿ ರಷ್ಯಾದೊಂದಿಗೆ ₹ 40 ಸಾವಿರ ಕೋಟಿ ವೆಚ್ಚದ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಅಮೆರಿಕದ ದಿಗ್ಬಂಧನದ ಬೆದರಿಕೆ ನಡುವೆಯೂ ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಇಲ್ಲಿ ಮುಖ್ಯವಾದದ್ದು. ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಜೊತೆ ಗಡಿ ಸಂಘರ್ಷಗಳು ಸಾಮಾನ್ಯವಾಗಿಬಿಟ್ಟಿರುವಾಗ ಭಾರತದ ರಕ್ಷಣಾ
ವ್ಯವಸ್ಥೆಯನ್ನು ಬಲಪಡಿಸುವುದು ಪ್ರಾಮುಖ್ಯ ಗಳಿಸಿಕೊಳ್ಳುತ್ತದೆ. ಆದರೆ, ಈ ಒಪ್ಪಂದವನ್ನು ಅಮೆರಿಕ ಹೇಗೆ ಪರಿಗಣಿಸುತ್ತದೆ ಎಂಬುದು ಪ್ರಶ್ನೆ. ಏಕೆಂದರೆ, ನಿರ್ಬಂಧಗಳನ್ನು ಹೇರುವ ಮೂಲಕ ಅಮೆರಿಕ, ವಿರೋಧಿಗಳನ್ನು ಪ್ರತಿರೋಧಿಸುವಂತಹ ‘ಕಾಟ್ಸಾ’ ಕಾಯ್ದೆಯನ್ನು (Countering America's Adversaries Through Sanctions Act) ಟ್ರಂಪ್ ಆಡಳಿತ ಜಾರಿಮಾಡಿದೆ. ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಳ್ಳುವ ದೇಶಗಳ ವಿರುದ್ಧ ಈ ಕಾಯ್ದೆಯಡಿ ದಿಗ್ಬಂಧನವನ್ನು ಅಮೆರಿಕ ವಿಧಿಸುತ್ತದೆ. ಎಸ್–400 ಸೇರಿದಂತೆ ರಷ್ಯಾ ಮಿಲಿಟರಿ ಉಪಕರಣಗಳನ್ನು ಖರೀದಿಸಿದ ಚೀನಾ ವಿರುದ್ಧ ಈ ಕಾಯ್ದೆಯಡಿ ಕಳೆದ ತಿಂಗಳಷ್ಟೇ ದಿಗ್ಬಂಧನವನ್ನು ಟ್ರಂಪ್ ಆಡಳಿತ ವಿಧಿಸಿದೆ. ಇಂತಹ ಅನಿಶ್ಚಯದ ನಡುವೆಯೂ ರಷ್ಯಾ ಜೊತೆ ರಕ್ಷಣಾ ಉಪಕರಣ ಖರೀದಿಗೆ ಭಾರತ ಮುಂದಾಗಿದೆ.

ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳೆಸಿಕೊಂಡ ವೈಯಕ್ತಿಕ ನೆಲೆಯ ಸಮೀಕರಣದ ನಂತರ, ಕಳೆದ ಕೆಲವು ವರ್ಷಗಳಿಂದ ಭಾರತ ಹಾಗೂ ಅಮೆರಿಕ ಬಾಂಧವ್ಯದಲ್ಲಿ ಸಕಾರಾತ್ಮಕ ಸ್ಪಂದನಗಳಿವೆ ಎಂಬುದು ನಿಜ. ಕಳೆದ ತಿಂಗಳಷ್ಟೇ ಭಾರತ ಹಾಗೂ ಅಮೆರಿಕಗಳ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಮಧ್ಯೆ 2+2 ಮಾತುಕತೆ ನಡೆದಿತ್ತು. ಆಗ, ಭಾರತ– ರಷ್ಯಾ ಮಧ್ಯದ ಸುದೀರ್ಘ ಮಿಲಿಟರಿ ಸಹಕಾರವನ್ನು ಅರ್ಥ ಮಾಡಿಕೊಳ್ಳುವುದಾಗಿ ಅಮೆರಿಕ ಹೇಳಿದುದಾಗಿ ವರದಿಯಾಗಿತ್ತು. ಆದರೆ ಈ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮೂಡಿಲ್ಲ. ಆದರೆ, ‘ಬೇರೆ ರಾಷ್ಟ್ರಗಳೊಂದಿಗಿನ ಬಾಂಧವ್ಯದಲ್ಲಿ ಭಾರತ ತನ್ನ ಸ್ವಾಯತ್ತ ನೆಲೆಯನ್ನು ಯಾವಾಗಲೂ ಪ್ರತಿಪಾದಿಸಿಕೊಂಡಿದೆ.
ಈ ನೀತಿಯನ್ನು ಕಾಪಾಡಿಕೊಳ್ಳಲಾಗುವುದು’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈಗ ಪುನರುಚ್ಚರಿಸಿದ್ದಾರೆ. ಹೀಗಾಗಿ, ಸ್ವತಂತ್ರ ವಿದೇಶಾಂಗ ನೀತಿಗೆ ಅಂಟಿಕೊಂಡಿರುವ ಭಾರತದ ನಿಲುವಿಗೆ ಇದೊಂದು ಹೊಸ ಸವಾಲು ಎನ್ನಬಹುದು. ಜೊತೆಗೆ ಚೀನಾ ಜೊತೆಗೆ ಇತ್ತೀಚೆಗೆ ಹೆಚ್ಚುತ್ತಿರುವ ರಷ್ಯಾ ಬಾಂಧವ್ಯದ ಹಿನ್ನೆಲೆಯಲ್ಲಿ ಭಾರತ– ರಷ್ಯಾ ಬಾಂಧವ್ಯದ ಸತ್ವಪರೀಕ್ಷೆಯೂ ಆಗಲಿದೆ. ಇದೂ ಸೇರಿ ಒಟ್ಟು 8 ಒಪ್ಪಂದಗಳಿಗೆ ಭಾರತ– ರಷ್ಯಾ ಸಹಿ ಹಾಕಿವೆ. ರೈಲ್ವೆ, ಸಾರಿಗೆ, ನಾಗರಿಕ ಪರಮಾಣು ಇಂಧನ, ಕೃಷಿ, ಸಣ್ಣ ಕೈಗಾರಿಕೆಯಂತಹ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಒಪ್ಪಂದಗಳಿವೆ.

 ಸೋಚಿಯಲ್ಲಿ ಕಳೆದ ಮೇ ತಿಂಗಳಲ್ಲಿ ನರೇಂದ್ರ ಮೋದಿ ಹಾಗೂ ಪುಟಿನ್ ಮಧ್ಯೆ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಆ ನಂತರ ಮತ್ತೊಮ್ಮೆ ಈಗ ಮೋದಿ– ‍ಪುಟಿನ್ ಸಭೆ ನಡೆದಿದೆ. ದ್ವಿಪಕ್ಷೀಯ ಬಾಂಧವ್ಯವನ್ನು ಮರು ವ್ಯಾಖ್ಯಾನಿಸಲು ಹಾಗೂ ವೃದ್ಧಿ ಮಾಡುವಲ್ಲಿ ಇದು ಮತ್ತೊಂದು ಮುಖ್ಯ ಹೆಜ್ಜೆ ಎನ್ನಬಹುದು. ‘ಮುಕ್ತ, ಪಾರದರ್ಶಕ, ತಾರತಮ್ಯವಿಲ್ಲದ, ಎಲ್ಲರನ್ನೂ ಒಳಗೊಳ್ಳುವ ಹಾಗೂ ನಿಯಮಗಳನ್ನಾಧರಿಸಿದ ಬಹುರಾಷ್ಟ್ರೀಯ ವಾಣಿಜ್ಯ ವ್ಯವಸ್ಥೆಯನ್ನು ಬಲಪಡಿಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಾಗತಿಕ ವಾಣಿಜ್ಯ ಸಂಬಂಧಗಳಲ್ಲಿ ಉಂಟಾಗುವ ಸಂಘರ್ಷ ತಡೆಯುವ ಅಗತ್ಯವಿದೆ’ ಎಂದು ಜಂಟಿ ಹೇಳಿಕೆಯಲ್ಲಿ ಉಭಯ ನಾಯಕರು ಹೇಳಿದ್ದಾರೆ. ಸದ್ಯದ ಜಾಗತಿಕ ರಾಜಕೀಯ ಸಂದರ್ಭದಲ್ಲಿ ದೀರ್ಘಕಾಲೀನ ಬಾಂಧವ್ಯ ಹೊಂದಿರುವ ಭಾರತ ಮತ್ತು ರಷ್ಯಾ ಹೇಳಿರುವ ಈ ಮಾತು ಮಹತ್ವದ್ದು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !