ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕಾಲೇಜುಗಳಲ್ಲಿ ಕೋಚಿಂಗ್‌ ಹೊರೆ ಮಾನವೀಯಗೊಳಿಸಲು ಸಕಾಲ

Last Updated 29 ಮೇ 2022, 19:30 IST
ಅಕ್ಷರ ಗಾತ್ರ

ನಿಗದಿತ ಪಠ್ಯ ಬೋಧನೆಯ ಜೊತೆಜೊತೆಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿ
ಗಳನ್ನು ಸಜ್ಜುಗೊಳಿಸಲು ಬಹುತೇಕ ಖಾಸಗಿ ಪದವಿಪೂರ್ವ ಕಾಲೇಜುಗಳು ‘ಇಂಟಿಗ್ರೇಟೆಡ್‌ ಕೋಚಿಂಗ್‌’ ಪದ್ಧತಿ ಅಳವಡಿಸಿಕೊಂಡಿವೆ. ವಿದ್ಯಾರ್ಥಿಗಳ ಹಿತಾಸಕ್ತಿಗೆ ಪೂರಕವಾಗಬೇಕಿದ್ದ ಈ ಪದ್ಧತಿಯು ಲಾಭದಾಯಕ ಚಟುವಟಿಕೆಯಾಗಿ ರೂಪುಗೊಂಡಿರುವುದು ಕಳವಳ ಹುಟ್ಟಿಸುವ ಸಂಗತಿ. ರಾಜ್ಯ ಸರ್ಕಾರ ನಿಗದಿಪಡಿಸಿದ ಪಠ್ಯಕ್ರಮವನ್ನಷ್ಟೇ ಕಾಲೇಜುಗಳಲ್ಲಿ ಬೋಧಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯು ನಿಯಮಾವಳಿ ರೂಪಿಸಿದೆ. ಅದರ ಪ್ರಕಾರ, ಪ್ರಸ್ತುತ ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿರುವ ಸಂಯೋಜಿತ ತರಬೇತಿಗೆ ಅವಕಾಶವಿಲ್ಲ. ಆದರೆ, ಅನೇಕ ಖಾಸಗಿ ಕಾಲೇಜುಗಳು ರಾಜಾರೋಷವಾಗಿ ‘ಇಂಟಿಗ್ರೇಟೆಡ್‌ ಕೋಚಿಂಗ್‌’ ನಡೆಸುತ್ತಿವೆ.ನಿಗದಿತ ಪಠ್ಯದೊಂದಿಗೆ ನೀಟ್‌, ಜೆಇಇ ಮತ್ತು ಸಿಇಟಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದು, ಪ್ಯಾಕೇಜ್‌ ಮಾದರಿಯಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುತ್ತಿವೆ. ಕೆಲವು ಕಾಲೇಜುಗಳು ‘ಇಂಟಿಗ್ರೇಟೆಡ್‌ ಕೋಚಿಂಗ್’ಗೆ ಸೇರ್ಪಡೆಯಾಗುವುದನ್ನು ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿವೆ. ಇದರಿಂದಾಗಿ, ಸರ್ಕಾರ ನಿಗದಿಪಡಿಸಿರುವ ಪಠ್ಯದ ಬೋಧನೆಯನ್ನಷ್ಟೇ
ಬಯಸುವ ವಿದ್ಯಾರ್ಥಿಗಳು ಬೇರೆ ದಾರಿಯಿಲ್ಲದೆ ಕೋಚಿಂಗ್‌ಗೆ ಸೇರಿಕೊಳ್ಳುವಂತಾಗಿದೆ. ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಾಲೇಜುಗಳೂ ಇವೆ. ಖಾಸಗಿ ಕಾಲೇಜುಗಳಲ್ಲಿ ಓದಿದರಷ್ಟೇ ಪ್ರತಿಷ್ಠಿತ ಎಂಜಿನಿಯರಿಂ‌ಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯ ಎನ್ನುವ ಭಾವನೆ ಹಲವರಲ್ಲಿ ಅಚ್ಚೊತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿಯಮಾವಳಿ ಅಡಿಯಲ್ಲಿಯೇ ಬೋಧನೆ ನಡೆಯುತ್ತದೆ. ಶುಲ್ಕ ಕೂಡ ಪೋಷಕರ ಕೈಗೆಟುಕುವಂತಿದೆ. ಆದರೆ, ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ಇದೆ. ಪಠ್ಯದ ಬೋಧನೆಯೊಂದಿಗೆ, ಪ್ರವೇಶ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಾದ ಒತ್ತಡವನ್ನು ಸರ್ಕಾರಿ ಕಾಲೇಜುಗಳ ಅಧ್ಯಾಪಕರು ಎದುರಿಸುತ್ತಿದ್ದಾರೆ. ಸರ್ಕಾರಿ ಕಾಲೇಜು
ಗಳಲ್ಲಿನ ಮೂಲ ಸೌಕರ್ಯಗಳೂ ಅಷ್ಟಕ್ಕಷ್ಟೇ. ಇವೆಲ್ಲದರ ಪರಿಣಾಮದಿಂದಾಗಿ ಉತ್ತಮ ಫಲಿತಾಂಶ ಸಾಧನೆಯಲ್ಲಿ ಸರ್ಕಾರಿ ಕಾಲೇಜುಗಳು ಹಿಂದುಳಿಯುತ್ತಿವೆ.

‘ಇಂಟಿಗ್ರೇಟೆಡ್‌ ಕೋಚಿಂಗ್‌’ ಪದ್ಧತಿಯು ಪದವಿಪೂರ್ವ ಶಿಕ್ಷಣ ಇಲಾಖೆಯ ನಿಯಮಾವಳಿಗೆ ವಿರುದ್ಧವಾದುದು ಎನ್ನುವುದರ ಜೊತೆಗೆ, ಶೈಕ್ಷಣಿಕ ವಲಯದಲ್ಲಿ ಅನಾರೋಗ್ಯಕರ ಪರಿಣಾಮಗಳನ್ನು ಉಂಟುಮಾಡುತ್ತಿರುವುದನ್ನೂ ಗಮನಿಸಬೇಕು. ಲಕ್ಷಾಂತರ ರೂಪಾಯಿ ಶುಲ್ಕವನ್ನು ಭರಿಸುವುದು ಪೋಷಕರಲ್ಲಿ ಹೆಚ್ಚಿನವರಿಗೆ ಹೊರೆಯಾದರೆ, ಬೆಳಗಿನಿಂದ ಸಂಜೆಯವರೆಗೆ ಬಿಡುವೇ ಇಲ್ಲದೆ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ವಿದ್ಯಾರ್ಥಿಗಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೈರಾಣಾಗಿಸುತ್ತದೆ. ಪದವಿಪೂರ್ವ ಶಿಕ್ಷಣದ ಹಂತ ವಿದ್ಯಾರ್ಥಿ ಜೀವನದಲ್ಲಿ ಬಹು ಮುಖ್ಯವಾದುದು. ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗಾಗಿ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಬೇಕಾದ ಕಾಲಘಟ್ಟವಿದು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಮನಸ್ಸಿಗೆ ಉಲ್ಲಾಸ ತುಂಬುವ ಮೂಲಕ ಪಠ್ಯದ ಕಲಿಕೆಗೂ ಪೂರಕ ವಾತಾವರಣ ಸೃಷ್ಟಿಸುತ್ತವೆ. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯದಾಚೆಗೆ ಮಕ್ಕಳ ಗಮನ ಹರಿಯುವಂತಹ ಅವಕಾಶಗಳು ಕಡಿಮೆಯಾಗಿವೆ. ಮಕ್ಕಳ ಸಂವೇದನೆಯನ್ನು ಹರಿತಗೊಳಿಸದ ಶಿಕ್ಷಣ ವ್ಯವಸ್ಥೆ ಆರೋಗ್ಯಕರ ತಲೆಮಾರನ್ನು ರೂಪಿಸುತ್ತದೆಂದು ನಿರೀಕ್ಷಿಸಲಾಗದು.

‘ಇಂಟಿಗ್ರೇಟೆಡ್‌ ಕೋಚಿಂಗ್‌’ ದುಬಾರಿ ಬಾಬತ್ತಾಗಿ ರೂಪುಗೊಂಡಿರುವುದಕ್ಕೆ ಖಾಸಗಿ ಕಾಲೇಜುಗಳನ್ನಷ್ಟೇ ಏಕಪಕ್ಷೀಯವಾಗಿ ದೂರುವುದು ಸಾಧ್ಯವಿಲ್ಲ. ಓಟದ ಸ್ಪರ್ಧೆಗೆ ನಿಂತಿರುವ ಕುದುರೆಗಳಂತೆ ಮಕ್ಕಳನ್ನು ನೋಡುವ ಪೋಷಕರ ಮನಃಸ್ಥಿತಿಯೂ ಶೈಕ್ಷಣಿಕ ವ್ಯವಸ್ಥೆಯ ವ್ಯಾಪಾರೀಕರಣಕ್ಕೆ ಕಾರಣವಾಗಿದೆ. ನಿರ್ದಿಷ್ಟ ಕಾಲೇಜಿಗೆ ಸೇರಿಸುವುದು ಹಾಗೂ ಅದರ ಶುಲ್ಕ ತುಂಬುವಷ್ಟಕ್ಕೆ ಪೋಷಕರ ಕರ್ತವ್ಯ ಮುಗಿಯುವುದಿಲ್ಲ. ಕಲಿಕೆಯ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಉಂಟಾಗದಂತೆ ನೋಡಿಕೊಳ್ಳುವುದು ಕೂಡ ಪೋಷಕರ ಹೊಣೆಗಾರಿಕೆಯೇ ಆಗಿದೆ.ಸದ್ಯದ ಸ್ಪರ್ಧಾತ್ಮಕ ಯುಗದಲ್ಲಿ, ‘ಇಂಟಿಗ್ರೇಟೆಡ್‌ ಕೋಚಿಂಗ್‌’ ಬೇಡವೇ ಬೇಡ ಎನ್ನಲು ಸಾಧ್ಯವಾಗದಂತಹ ಸ್ಥಿತಿ ಇದೆ. ಹಾಗಾಗಿ, ಖಾಸಗಿ ಕಾಲೇಜುಗಳು ನಿಗದಿತ ಪಠ್ಯಕ್ರಮದೊಂದಿಗೆ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಚಟುವಟಿಕೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಅವಕಾಶ ಕಲ್ಪಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು. ಆದರೆ, ಆ ಚಟುವಟಿಕೆಗಳು ಪೋಷಕರನ್ನು ಸುಲಿಯಲು ಕಾರಣವಾಗಬಾರದು. ವಿದ್ಯಾರ್ಥಿಗಳನ್ನು ಕಲಿಕೆಯ ಯಂತ್ರಗಳಂತೆ ಭಾವಿಸಬಾರದು. ಪಠ್ಯೇತರ ಚಟುವಟಿಕೆಗಳಿಗೂ ಅವಕಾಶವಿರುವ ಕಲಿಕೆ ಸಾಧ್ಯವಾಗಬೇಕು.ವೈಜ್ಞಾನಿಕ ನೆಲೆಗಟ್ಟಿನಲ್ಲಿ ‘ಇಂಟಿಗ್ರೇಟೆಡ್‌ ಕೋಚಿಂಗ್’ಗೆ ಅವಕಾಶ ಕಲ್ಪಿಸುವ ದಿಸೆಯಲ್ಲಿ ಸರ್ಕಾರ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬಹುದು ಹಾಗೂ ಅವು ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಕ್ರಮ ಕೈಗೊಳ್ಳಬಹುದು. ಅಧ್ಯಾಪಕರ ಕೊರತೆಯನ್ನು ನೀಗಿಸುವುದು ಹಾಗೂ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಕಾಲೇಜುಗಳನ್ನು ಬಲಪಡಿಸುವ ಕೆಲಸವೂ ನಡೆಯಬೇಕು. ವಿದ್ಯಾರ್ಥಿಗಳಿಗೆ ಕಲಿಕೆಯು ಶಿಕ್ಷೆಯಾಗಿ ಪರಿಣಮಿಸದಂತೆ ನೋಡಿಕೊಳ್ಳುವ ದಿಸೆಯಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT