ಗಾಯಾಳುಗಳ ನೆರವಿಗೆ ಇನ್ನು ಭಯ ಬೇಡ

7

ಗಾಯಾಳುಗಳ ನೆರವಿಗೆ ಇನ್ನು ಭಯ ಬೇಡ

Published:
Updated:
Deccan Herald

ಓಬೀರಾಯನ ಕಾಲದಿಂದ ಪೊಲೀಸ್‌ ವ್ಯವಸ್ಥೆಯು ಉಳಿಸಿಕೊಂಡು ಬಂದಿರುವ ಕೆಲವು ಕಟ್ಟಳೆಗಳು ಮಾನವೀಯತೆಯ ಒರತೆಯನ್ನೇ ಬತ್ತುವಂತೆ ಮಾಡಿವೆ. ರಸ್ತೆ ಅಪಘಾತಗಳ ಸಂದರ್ಭದಲ್ಲಿ ನಡೆಯುವ ವಿದ್ಯಮಾನಗಳು ಈ ಮಾತಿಗೆ ಅತ್ಯುತ್ತಮ ನಿದರ್ಶನಗಳು. ರಕ್ತದ ಮಡುವಿನಲ್ಲಿ ಸಂತ್ರಸ್ತರು ಬಿದ್ದು ಹೊರಳಾಡುತ್ತಿದ್ದರೂ ನೋಡಿಯೂ ನೋಡದಂತೆ ಜನ ಮುಂದೆ ಹೋಗಲು, ನಂತರದ ದಿನಗಳಲ್ಲಿ ತನಿಖೆಯ ಹೆಸರಿನಲ್ಲಿ ಎದುರಿಸಬೇಕಾದ ಕಿರುಕುಳವೇ ಕಾರಣ. ಮತ್ತೊಬ್ಬರ ಸಹಾಯಕ್ಕೆ ಹೋಗಿ, ಸುಖಾಸುಮ್ಮನೆ ನಾವೇಕೆ ಕೋರ್ಟ್‌ಗೆ ಎಡತಾಕಬೇಕು ಎನ್ನುವ ಜನಸಾಮಾನ್ಯರ ಧೋರಣೆ ಸಹಜವಾದುದೇ. ಗಾಯಾಳುಗಳಿಗೆ ತುರ್ತು ಚಿಕಿತ್ಸೆಯೇನಾದರೂ ಸಿಗಬೇಕಾದರೆ ಪರೋಪಕಾರಿಗಳಿಗೆ ಕಾನೂನಿನ ರಕ್ಷಣೆ ಒದಗಿಸಬೇಕು ಎನ್ನುವ ಅಗತ್ಯವನ್ನು ಮನಗಂಡ ರಾಜ್ಯ ಸರ್ಕಾರ, ಎರಡು ವರ್ಷಗಳ ಹಿಂದೆಯೇ ‘ಕರ್ನಾಟಕ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತರ ಮಸೂದೆ’ಯನ್ನು ರೂಪಿಸಿತ್ತು. ಅಪರಾಧ ಪ್ರಕ್ರಿಯೆ ಸಂಹಿತೆಯಲ್ಲಿ (ಸಿಆರ್‌ಪಿಸಿ) ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗಿದ್ದರಿಂದ ಮಸೂದೆಗೆ ರಾಷ್ಟ್ರಪತಿ ಅವರಿಂದ ಒಪ್ಪಿಗೆ ಪಡೆಯುವುದು ಅಗತ್ಯವಾಗಿತ್ತು. ಈಗ ಅವರಿಂದ ಅಂಕಿತದ ಮುದ್ರೆ ಬಿದ್ದಿರುವ ಕಾರಣ ಪರೋಪಕಾರಿಗಳಿಗೆ ಕಾನೂನಿನ ರಕ್ಷಣೆಯನ್ನು ಒದಗಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

2016ರಲ್ಲಿ ದೇಶದಾದ್ಯಂತ 1.50 ಲಕ್ಷ ಜನ ರಸ್ತೆ ಅಪಘಾತಗಳಿಗೆ ಬಲಿ ಆಗಿದ್ದಾರೆ. ಗಾಯಾಳುಗಳಿಗೆ ಒಂದುವೇಳೆ ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಶೇ 50ರಷ್ಟು ಸಾವುಗಳನ್ನು ತಪ್ಪಿಸಬಹುದಾಗಿತ್ತು ಎಂದು ಕಾನೂನು ಆಯೋಗವೇ ಹೇಳಿದೆ. ಆದರೆ, ಅಂತಹ ಜೀವಗಳನ್ನು ಹೇಗೆ ಉಳಿಸುವುದು ಎಂಬ ಸಂಗತಿಯತ್ತ ಕೇಂದ್ರ ಇಲ್ಲವೆ ರಾಜ್ಯ ಸರ್ಕಾರಗಳು ಇತ್ತೀಚಿನವರೆಗೆ ಯೋಚಿಸಿಯೇ ಇರಲಿಲ್ಲ. ಸಂತ್ರಸ್ತರಿಗೆ ಚಿಕಿತ್ಸೆ ಕೊಡಿಸಿದವರನ್ನು, ಅಪಘಾತದ ಸುದ್ದಿ ಮುಟ್ಟಿಸಿದವರನ್ನು ಪೊಲೀಸರು ಹಣ್ಣುಗಾಯಿ ನೀರುಗಾಯಿ ಮಾಡುವುದು ರೂಢಿಯಾಗಿತ್ತು. ಹೀಗಾಗಿ ‘ನಮಗೇಕೆಬೇಕು ಇಲ್ಲದ ಉಸಾಬರಿ’ ಎಂದು ಜನ ಕೂಡ ಅಪಘಾತಗಳತ್ತ ತಾತ್ಸಾರದಿಂದ ನೋಡುವಂತಾಗಿತ್ತು. ‘ಪರೋಪಕಾರಿಗಳಿಗೆ ಕಾನೂನಿನ ರಕ್ಷಣೆ ಒದಗಿಸುವುದು ಸರ್ಕಾರಗಳ ಕರ್ತವ್ಯ’ ಎಂದು ಸ್ವತಃ ಸುಪ್ರೀಂ ಕೋರ್ಟ್‌ ಬುದ್ಧಿವಾದ ಹೇಳಿದ ಮೇಲೆ ಕೇಂದ್ರ ಸರ್ಕಾರ ಮಾರ್ಗಸೂಚಿಯೊಂದನ್ನು ಹೊರಡಿಸಿತು. ಆದರೆ, ಕಾಯ್ದೆಯನ್ನೇನೂ ಮಾಡಲಿಲ್ಲ. ಹಲವು ರಾಜ್ಯಗಳಲ್ಲಿ ಮಸೂದೆ ರೂಪಿಸುವ ಪ್ರಯತ್ನಗಳು ಆ ಸಂದರ್ಭದಲ್ಲೇ ಶುರುವಾದವು. ಮಸೂದೆ ರೂಪಿಸಿದ್ದಲ್ಲದೆ ಅದನ್ನು ಕಾನೂನಾಗಿ ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಸರ್ಕಾರ ಕ್ರಿಯಾಶೀಲತೆ ಮೆರೆದಿದೆ. ಈ ಕಾರ್ಯದಲ್ಲಿ ಪಾಲ್ಗೊಂಡವರೆಲ್ಲ ಅಭಿನಂದನೀಯರು. ಸಂತ್ರಸ್ತರ ನೆರವಿಗೆ ಧಾವಿಸಲು ಹೊಸ ಕಾಯ್ದೆಯಿಂದ ಜನರಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ. ಏಕೆಂದರೆ, ನೆರವಿಗೆ ಹೋದ ವ್ಯಕ್ತಿಗಳು ಇನ್ನುಮುಂದೆ ಹೆಸರು, ದೂರವಾಣಿ ಸಂಖ್ಯೆ, ವಿಳಾಸವನ್ನು ಕೊಡುವುದು ಕಡ್ಡಾಯವಲ್ಲ. ಅವರಿಗೆ ಪೊಲೀಸರಿಂದ ಕಿರುಕುಳ ಉಂಟಾಗದಂತೆ ರಕ್ಷಣೆ ಸಹ ಇದೆ. ತನಿಖಾಧಿಕಾರಿಗಳಿಂದ ಬೆದರಿಕೆ ಬಂದರೆ ಅವರ ವಿರುದ್ಧ ದೂರು ದಾಖಲಿಸಲು ಅವಕಾಶವನ್ನು ಒದಗಿಸಲಾಗಿದೆ. ಕೋರ್ಟ್‌ ಇಲ್ಲವೆ ಪೊಲೀಸ್‌ ಠಾಣೆಗೆ ಹಾಜರಾಗುವ ಪ್ರಕ್ರಿಯೆಯಿಂದಲೂ ವಿನಾಯಿತಿ ನೀಡಲಾಗಿದೆ. ಕೋರ್ಟ್‌ಗೆ ಹಾಜರಾಗುವುದು ಒಂದುವೇಳೆ ಅನಿವಾರ್ಯವಾದರೆ ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಯಾವುದೇ ಭಯವಿಲ್ಲದೆ ಸಂತ್ರಸ್ತರ ನೆರವಿಗೆ ಧಾವಿಸಲು ಬೇಕಾದ ಎಲ್ಲ ರಕ್ಷಣೆಯನ್ನೂ ಈಗ ಕಾನೂನು ಕೊಟ್ಟಿದೆ. ರಸ್ತೆ ಅಪಘಾತದಿಂದ ಸಾವಿನ ದವಡೆಗೆ ಸಿಲುಕಿದವರಿಗೆ ಇನ್ನು ಮುಂದಾದರೂ ಸಕಾಲಕ್ಕೆ ವೈದ್ಯಕೀಯ ನೆರವು ಸಿಗಲಿ ಎಂದು ಆಶಿಸೋಣ.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !