ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ- ಅಪಘಾತ ಪ್ರಕರಣ: ಸರ್ಕಾರದ ಕಣ್ತೆರೆಸುವ ಕಟುವಾಸ್ತವ ವರದಿ

Last Updated 22 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್‌ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಹತ್ತು ಹಲವು ಹೊಸ ಆಯಾಮಗಳ ಮೇಲೆ ಬೆಳಕು ಚೆಲ್ಲಿದೆ. ಅಪಘಾತ ಪ್ರಕರಣಗಳು ಬೀರುತ್ತಿರುವ ಸಾಮಾಜಿಕ ಪರಿಣಾಮಗಳ ತೀವ್ರತೆಯನ್ನು ಗ್ರಹಿಸುವಲ್ಲಿ ಸರ್ಕಾರಗಳು ವಿಫಲವಾಗಿರುವುದನ್ನೂ ಆ ವರದಿ ಎತ್ತಿತೋರಿದೆ. ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳು ಎಂತಹ ಕಲ್ಲು ಹೃದಯವನ್ನೂ ಕರಗಿಸುವಷ್ಟು ಭಯಾನಕ. ಉದಾಹರಣೆಗೆ ಹೇಳುವುದಾದರೆ, ದೇಶದಲ್ಲಿ ಪ್ರತೀ ಗಂಟೆಗೆ 53 ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದ ಅಪಘಾತಗಳು ಸಂಭವಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 2019ರಲ್ಲಿ ನಮ್ಮ ದೇಶದಲ್ಲಿ ಸಂಭವಿಸಿದ ಅಪಘಾತಗಳು 1.5 ಲಕ್ಷ ಸಾವುಗಳಿಗೆ ಕಾರಣವಾಗಿವೆ. ಜಗತ್ತಿನಲ್ಲಿರುವ ಒಟ್ಟು ವಾಹನಗಳಿಗೆ ಹೋಲಿಸಿದರೆ ಭಾರತದಲ್ಲಿರುವ ವಾಹನಗಳ ಪ್ರಮಾಣ ಶೇಕಡ 1ರಷ್ಟು ಮಾತ್ರ. ಆದರೆ, ಜಾಗತಿಕ ರಸ್ತೆ ಅಪಘಾತಗಳ ಪ್ರಮಾಣದಲ್ಲಿ ಶೇ 6ರಷ್ಟು ಹಾಗೂ ಅದರಿಂದ ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ಶೇ 11ರಷ್ಟು ಭಾರತದಲ್ಲೇ ಸಂಭವಿಸುತ್ತಿರುವುದು ಬಹುದೊಡ್ಡ ದುರಂತ. ಕಳೆದ ಕೆಲವು ವರ್ಷಗಳಲ್ಲಿ, ರಸ್ತೆಗೆ ಇಳಿಯುತ್ತಿರುವ ವಾಹನಗಳ ಪ್ರಮಾಣ ವಿಪರೀತ ಎನಿಸುವಷ್ಟು ಹೆಚ್ಚಾಗಿದೆ. ಅರ್ಥ ಚಟುವಟಿಕೆಗಳಿಗೆ ಉತ್ತೇಜನ ನೀಡಲು ರಸ್ತೆ ಜಾಲವನ್ನೂ ಹೆಚ್ಚಿಸಲಾಗಿದೆ. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ದಿಸೆಯಲ್ಲಿ ರಸ್ತೆ ಜಾಲವನ್ನು ವಿಸ್ತರಿಸುವುದು ಅಗತ್ಯ ಕೂಡ. ಆದರೆ, ರಸ್ತೆಜಾಲ ಹೆಚ್ಚಿದಂತೆ, ವಾಹನಗಳ ಓಡಾಟ ಹೆಚ್ಚಿದಂತೆ ಅಪಘಾತ ಪ್ರಕರಣಗಳು ಕೂಡ ಹೆಚ್ಚುತ್ತಿರುವುದು ವಿಷಾದಕರ.

ವಿಶ್ವಬ್ಯಾಂಕ್‌ ವರದಿಯಲ್ಲಿ ಮಾನವೀಯ ಅಂತಃಕರಣವನ್ನೇ ಕಲಕುವಂತಹ ಹಲವು ವಿವರಗಳಿವೆ. ಅಪಘಾತಗಳಿಂದ ಹೆಚ್ಚಿನ ಹೊಡೆತ ತಿಂದು ತತ್ತರಿಸಿದ್ದು ಕಡಿಮೆ ಆದಾಯದ ಬಡಕುಟುಂಬಗಳು. ಬಹುತೇಕ ಎಲ್ಲ ದುರಂತಗಳಲ್ಲಿ ಮೊದಲು ಬಲಿಪಶುವಾಗುವುದು ಬಡವರೇ ಅಲ್ಲವೆ? ಹೆಚ್ಚಿನ ಆದಾಯದ ಕುಟುಂಬಗಳಿಗಿಂತ ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆ ಆದಾಯದ ಕುಟುಂಬಗಳು ಜೀವಗಳನ್ನು ಕಳೆದುಕೊಂಡಿವೆ. ಅಪಘಾತಗಳ ಬಳಿಕ ಬಾಧಿತ ಶ್ರೀಮಂತ ಕುಟುಂಬಗಳ ಶೇ 54ರಷ್ಟು ಆದಾಯಕ್ಕೆ ಹೊಡೆತ ಬಿದ್ದರೆ, ಬಡಕುಟುಂಬಗಳು ಶೇ 75ರಷ್ಟು ಆದಾಯದ ಕೊರತೆ ಅನುಭವಿಸಿವೆ. ಅಂಗವೈಕಲ್ಯಕ್ಕೆ ತುತ್ತಾಗುವವರ ಪ್ರಮಾಣದಲ್ಲೂ ಬಡವರ ಸಂಖ್ಯೆಯೇ ಹೆಚ್ಚಾಗಿದೆ. ವೈದ್ಯಕೀಯ ವೆಚ್ಚ ಭರಿಸಲಾಗದೆ ಸೂಕ್ತ ಚಿಕಿತ್ಸೆ ದೊರಕದಿರುವುದೂ ಇದಕ್ಕೆ ಕಾರಣವಾಗಿದೆ. ಬಾಧಿತ ಕುಟುಂಬದ ನಿರ್ವಹಣೆಯ ಹೆಚ್ಚುವರಿ ಹೊಣೆಯು ಬಹುತೇಕ ಮಹಿಳೆಯರ ಮೇಲೆಯೇ ಬಿದ್ದಿರುವುದು ಸುಸ್ಪಷ್ಟ. ಪ್ರಾಣಹಾನಿಗೆ ಕಾರಣವಾಗುತ್ತಿರುವ ಅಪಘಾತಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಊಹಿಸಲು ಸಾಧ್ಯವಾಗದಷ್ಟು ಪ್ರತಿಕೂಲ ಪರಿಣಾಮವನ್ನೂ ಬೀರುತ್ತವೆ. ಬಾಧಿತ ಕುಟುಂಬಗಳು, ಅದರಲ್ಲೂ ಬಡಕುಟುಂಬಗಳು ಇಂತಹ ಸನ್ನಿವೇಶಗಳಿಂದ ನಲುಗಿ ಹೋಗುತ್ತಿವೆ. ರಸ್ತೆ ಅಪಘಾತಗಳಿಗೆ ಕಾರಣಗಳು ಅನೇಕ. ನಮ್ಮ ದೇಶದಲ್ಲಿ ಸಂಪೂರ್ಣವಾಗಿ ಸುಸ್ಥಿತಿಯಲ್ಲಿರುವ ರಸ್ತೆಗಳು ಸಿಗುವುದೇ ಅಪರೂಪ. ಗುಂಡಿಬಿದ್ದ ರಸ್ತೆ, ಹದಗೆಟ್ಟ ವಾಹನ, ಅಜಾಗರೂಕತೆಯ ಚಾಲನೆ, ನಿಯಮಗಳ ಉಲ್ಲಂಘನೆ... ಹೀಗೆ ಅಪಘಾತಗಳು ಯಾವುದರಿಂದಲೂ ಸಂಭವಿಸಬಹುದು. ಅಪಘಾತ ಪ್ರಕರಣಗಳನ್ನು ತಹಬಂದಿಗೆ ತರಲು ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ಪ್ರಮಾಣದ ದಂಡ ವಿಧಿಸುವ ಕಾಯ್ದೆಯನ್ನು ರೂಪಿಸಿ, ಕೈಕಟ್ಟಿ ಕುಳಿತರೆ ಸಾಲದು. ರಸ್ತೆಗಳು ಸದಾ ಸುಸ್ಥಿತಿಯಲ್ಲಿ ಇರುವಂತೆಯೂ ನೋಡಿಕೊಳ್ಳಬೇಕು. ಚಾಲಕರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಅದರೊಟ್ಟಿಗೆ ಅಪಘಾತಗಳಿಂದ ಬಾಧಿತವಾದ ಕುಟುಂಬಗಳ ನೆರವಿಗೆ ಧಾವಿಸುವುದು ಕೂಡ ಅಷ್ಟೇ ಮುಖ್ಯ. ಇಂತಹ ಕುಟುಂಬಗಳು ಸಾಲದ ಸುಳಿಗೆ ಸಿಲುಕಿ, ಮಾನಸಿಕ ಸಮಸ್ಯೆಯಿಂದ ನರಳುವುದೇ ಹೆಚ್ಚು. ಅಪಘಾತಗಳಿಂದ ನೊಂದ ಕುಟುಂಬಗಳ, ಅದರಲ್ಲೂ ಬಡಕುಟುಂಬಗಳ ಕಣ್ಣೀರು ಒರೆಸುವುದು ಸರ್ಕಾರದ ಆದ್ಯತೆ ಆಗಬೇಕು. ಆ ದಿಸೆಯಲ್ಲಿ ಸಾಧ್ಯಾಸಾಧ್ಯತೆಗಳ ಕುರಿತು ಚಿಂತಿಸಿ, ಕಾರ್ಯಪ್ರವೃತ್ತರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT