ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ: ಇನ್ನಷ್ಟು ಬಲ ಬೇಕು– ತಿದ್ದುಪಡಿಯ ಉದ್ದೇಶ ಪ್ರಶ್ನಾರ್ಹ

Last Updated 25 ಜುಲೈ 2019, 9:00 IST
ಅಕ್ಷರ ಗಾತ್ರ

‘ಸಾರ್ವಜನಿಕ ಸೇವಕರಿಂದ ಸಾರ್ವಜನಿಕವಾಗಿ ನಡೆಯುವ ಎಲ್ಲ ಚಟುವಟಿಕೆಗಳ ಬಗ್ಗೆ ತಿಳಿದು ಕೊಳ್ಳುವ ಹಕ್ಕು ದೇಶದ ಜನರಿಗೆ ಇದೆ’ ಎಂದು ಸುಪ್ರೀಂ ಕೋರ್ಟ್‌, 1975ರಲ್ಲಿಉತ್ತರಪ್ರದೇಶ ಸರ್ಕಾರ ಮತ್ತು ರಾಜ್‌ ನಾರಾಯಣ್‌ ನಡುವಿನ ಪ್ರಕರಣದಲ್ಲಿ ಹೇಳಿದೆ. ‘ಮುಕ್ತ ಸರ್ಕಾರದ ಪರಿಕಲ್ಪನೆ ಮೂಡಿರುವುದು ಅರಿಯುವ ಹಕ್ಕಿನಿಂದ. ಈ ಹಕ್ಕು, ಸಂವಿಧಾನದ 19(1)(ಎ) ವಿಧಿಯಲ್ಲಿ ಹೇಳಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಅಂತರ್ಗತ ಭಾಗವಾಗಿರುವಂತೆ ಭಾಸವಾಗುತ್ತದೆ’ ಎಂದು 1981ರಲ್ಲಿ ಎಸ್‌.ಪಿ. ಗುಪ್ತಾ ಮತ್ತು ರಾಷ್ಟ್ರಪತಿ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ಪಿ.ಎನ್. ಭಗವತಿ ಬರೆದಿದ್ದಾರೆ. ಜನರ ‘ಅರಿಯುವ’ ಹಕ್ಕಿನ ಕುರಿತು ದೇಶದ ಅತ್ಯುನ್ನತ ನ್ಯಾಯಾಲಯವು ಆಡಿರುವ ಮಾತುಗಳ ಹಿನ್ನೆಲೆಯಲ್ಲಿ ‘ಮಾಹಿತಿ ಹಕ್ಕು ಕಾಯ್ದೆ’ಯ (ಆರ್‌ಟಿಐ) ಮಹತ್ವವನ್ನು ಅರ್ಥ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವ್ಯಾಪ್ತಿಯನ್ನು ವಿಸ್ತರಿಸಿದಾಗ, ಮಾಹಿತಿ ಪಡೆದುಕೊಳ್ಳುವ ಸಾರ್ವಜನಿಕರ ಹಕ್ಕು ಎಷ್ಟು ಮಹತ್ವದ್ದು ಎಂಬುದು ಅರ್ಥವಾಗುತ್ತದೆ. ಪ್ರಭುತ್ವದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರಿಗೆ ಮಾತ್ರ ಆ ಚಟುವಟಿಕೆಗಳು ಸರಿಯೋ, ತಪ್ಪೋ ಎಂಬುದು ಗೊತ್ತಾಗುತ್ತದೆ. ಮಾಹಿತಿಯೇ ಇಲ್ಲವಾದರೆ, ಸರಿ–ತಪ್ಪುಗಳನ್ನು ನಿಷ್ಕರ್ಷೆಗೆ ಒಳಪಡಿಸುವ ಶಕ್ತಿ ಇಲ್ಲವಾಗುತ್ತದೆ. ಪ್ರಭುತ್ವದ ಚಟುವಟಿಕೆಗಳ ಬಗ್ಗೆ ಮಾಹಿತಿಪೂರ್ಣ ಅಭಿವ್ಯಕ್ತಿ ಇಲ್ಲದಂತಾಗುತ್ತದೆ. ಹಾಗಾಗಿಯೇ, ಮೂಲಭೂತ ಹಕ್ಕುಗಳಲ್ಲಿ ಒಂದಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಶಕ್ತಗೊಳಿಸಲು ‘ಮಾಹಿತಿ ಹಕ್ಕು’ ತೀರಾ ಅವಶ್ಯಕ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಈಗ ‘ಮಾಹಿತಿ ಹಕ್ಕು ಕಾಯ್ದೆ’ಗೆ ತರಲು ಹೊರಟಿರುವ ತಿದ್ದುಪಡಿಯ ಅಪಾಯಗಳನ್ನು ಗ್ರಹಿಸಬೇಕು. ತಿದ್ದುಪಡಿ ಮಸೂದೆಗೆ ಲೋಕಸಭೆಯ ಅನುಮೋದನೆ ಈಗಾಗಲೇ ದೊರೆತಿದ್ದು, ರಾಜ್ಯಸಭೆಯ ಸಮ್ಮತಿ ಬಾಕಿ ಇದೆ. ವಿರೋಧ ಪಕ್ಷಗಳು ಇದನ್ನು ‘ಮಾಹಿತಿ ಹಕ್ಕು ತಿದ್ದುಪಡಿ ಮಸೂದೆ ಅಲ್ಲ; ಮಾಹಿತಿ ಹಕ್ಕು ನಿರ್ಮೂಲನಾ ಮಸೂದೆ’ ಎಂದು ಕಟುವಾಗಿ ಟೀಕಿಸಿವೆ.

ಮಾಹಿತಿ ಆಯುಕ್ತರು ಮತ್ತು ಮುಖ್ಯ ಮಾಹಿತಿ ಆಯುಕ್ತರ (ಸಿಐಸಿ) ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರದ ವಿವೇಚನೆಗೆ ತರುತ್ತದೆ ಹೊಸ ತಿದ್ದುಪಡಿ. ಇದುವರೆಗೆ ಇವರ ಅಧಿಕಾರಾವಧಿ ಐದು ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ ಆಗಿತ್ತು. ಅಲ್ಲದೆ, ಈ ತಿದ್ದುಪಡಿ ಅಂಗೀಕಾರವಾದರೆ ಸಿಐಸಿ ಮತ್ತು ಮಾಹಿತಿ ಆಯುಕ್ತರ ವೇತನ ಎಷ್ಟಿರಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ತೀರ್ಮಾನಿಸಲಿದೆ. ಮಾಹಿತಿ ಹಕ್ಕು ಆಯೋಗದ ಅತ್ಯಂತ ಪ್ರಮುಖ ಹುದ್ದೆಗಳಲ್ಲಿ ಇರುವವರ ಅಧಿಕಾರಾವಧಿ, ವೇತನ–ಭತ್ಯೆಗಳನ್ನು ಕೇಂದ್ರ ಸರ್ಕಾರವೇ ನಿರ್ಧರಿಸುವುದರ ಪರಿಣಾಮವಾಗಿ, ಆ ಹುದ್ದೆಗಳಲ್ಲಿ ಇರುವವರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವುದು ಕಷ್ಟವಾಗಬಹುದು. ಆಯೋಗದ ಪ್ರಮುಖ ಹುದ್ದೆಗಳಲ್ಲಿ ಇರುವವರ ವೇತನ, ಅಧಿಕಾರಾವಧಿಯನ್ನು ಸರ್ಕಾರದ ಮರ್ಜಿಯಡಿ ತಂದಾಗ, ಸರ್ಕಾರ ಮುಚ್ಚಿಡಲು ಬಯಸುವ ಮಾಹಿತಿಗಳನ್ನು ಅವರು ಎಷ್ಟರಮಟ್ಟಿಗೆ ನಿರ್ಭಿಡೆಯಿಂದ ಬಹಿರಂಗಪಡಿಸಲು ಸಾಧ್ಯ? ಈಗಿರುವ ಕಾಯ್ದೆಯ ಅನ್ವಯ, ಕೇಂದ್ರದ ಮಟ್ಟದಲ್ಲಿ ಮುಖ್ಯ ಮಾಹಿತಿ ಆಯುಕ್ತ ಹಾಗೂ ಮಾಹಿತಿ ಆಯುಕ್ತರ ಹುದ್ದೆಗಳು ವೇತನ, ಭತ್ಯೆ ಹಾಗೂ ಇತರ ಸೇವಾ ನಿಯಮಗಳ ವಿಚಾರದಲ್ಲಿ ಕ್ರಮವಾಗಿ ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರಿಗೆ ಸಮ. ರಾಜ್ಯಗಳ ಮಟ್ಟದಲ್ಲಿ ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರ ಹುದ್ದೆಗಳು ಕ್ರಮವಾಗಿ ಚುನಾವಣಾ ಆಯುಕ್ತ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸಮ. ‘ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆ, ಮಾಹಿತಿ ಆಯೋಗವು ಶಾಸನಬದ್ಧ ಸಂಸ್ಥೆ. ಎರಡೂ ಸಂಸ್ಥೆಗಳ ಹೊಣೆಗಾರಿಕೆ, ಕೆಲಸಗಳು ಬೇರೆ ಬೇರೆ. ಹಾಗಾಗಿ, ಈ ಎರಡು ಸಂಸ್ಥೆಗಳ ಮುಖ್ಯಸ್ಥರ ಸ್ಥಾನಮಾನ ಮತ್ತು ಸೇವಾನಿಯಮಗಳು ಒಂದೇ ಆಗಬಾರದು’ ಎನ್ನುವುದು ಕೇಂದ್ರ ಸರ್ಕಾರದ ವಾದ. ಆದರೆ, ಸ್ಥಾನಮಾನ ಒಂದೇ ಆದರೆ ಮಾಹಿತಿ ನೀಡುವ ಪ್ರಕ್ರಿಯೆಗೇನೂ ತೊಂದರೆ ಆಗುವುದಿಲ್ಲವಲ್ಲ? ಸ್ಥಾನಮಾನ ಮತ್ತು ಸೇವಾ ನಿಯಮಗಳಲ್ಲಿ ಬದಲಾವಣೆ ತರುವ ಹೆಸರಿನಲ್ಲಿ, ಸಿಐಸಿ ಮತ್ತು ಮಾಹಿತಿ ಆಯುಕ್ತರ ಹುದ್ದೆಗಳನ್ನು ಕೇಂದ್ರದ ಮರ್ಜಿಯಡಿ ತರುವುದರಿಂದ ಆಯೋಗದ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯ ಮೇಲೆ ಬಲವಾದ ಏಟು ಬೀಳುತ್ತದೆ. ಆರ್‌ಟಿಐ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಇದ್ದಿದ್ದರೆ, ಆಯೋಗಕ್ಕೆ ಸಾಂವಿಧಾನಿಕ ಸಂಸ್ಥೆಯ ಸ್ಥಾನಮಾನ ನೀಡಬಹುದಿತ್ತು. ಇಂತಹ ತಿದ್ದುಪಡಿಗಳ ಬದಲು, ಆಯೋಗವನ್ನು ಇನ್ನಷ್ಟು ಬಲಪಡಿಸುವತ್ತ ಕ್ರಿಯಾಶೀಲ ಆಗಬೇಕಿರುವುದು ಪಾರದರ್ಶಕತೆಯ ಪರ ಮಾತನಾಡುವ ಸರ್ಕಾರದ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT