ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆಫ್‌ಲೈನ್ ಪಾವತಿಗೆ ನಿಯಮಜನಪ್ರಿಯಗೊಳಿಸುವ ಸವಾಲು

Last Updated 4 ಜನವರಿ 2022, 19:31 IST
ಅಕ್ಷರ ಗಾತ್ರ

ಇಂಟರ್ನೆಟ್‌ ಲಭ್ಯವಿಲ್ಲದ ಅಥವಾ ಇಂಟರ್ನೆಟ್‌ ಲಭ್ಯತೆಯು ತೀರಾ ದುರ್ಬಲವಾಗಿರುವ ಕಡೆಗಳಲ್ಲಿ ಆಫ್‌ಲೈನ್‌ ಮೂಲಕ ಹಣ ಪಾವತಿಸಲು ಅಗತ್ಯವಿರುವ ನಿಯಮಗಳ ಚೌಕಟ್ಟನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಸೋಮವಾರ ಪ್ರಕಟಿಸಿದೆ. ಇದರ ಪ್ರಕಾರ, ಆಫ್‌ಲೈನ್‌ ಮೂಲಕ ಪ್ರತೀ ವಹಿವಾಟಿನಲ್ಲಿ ಗರಿಷ್ಠ ₹ 200ರವರೆಗೆ ಪಾವತಿಸಲು ಅವಕಾಶ ಸಿಗಲಿದೆ. ಕಳೆದ ಒಂದು ದಶಕದ ಅವಧಿಯಲ್ಲಿ, ಜನಸಾಮಾನ್ಯರ ಹಣಕಾಸಿನ ವಹಿವಾಟುಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತಂದಿರುವುದು ಏಕೀಕೃತ ಪಾವತಿ ವ್ಯವಸ್ಥೆ (ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್‌– ಯುಪಿಐ). ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು ಡಿಜಿಟಲ್ ಪಾವತಿಯನ್ನು, ಬಹುಶಃ ಬೇರೆ ಯಾವ ಯೋಜನೆಗಳಿಂದಲೂ ಸಾಧಿಸಲಾಗದ ಮಟ್ಟಕ್ಕೆ ಜನಪ್ರಿಯಗೊಳಿಸಿದೆ. ನಗರ, ಪಟ್ಟಣಗಳ ಚಿಕ್ಕ–ಪುಟ್ಟ ಅಂಗಡಿಗಳ ಎದುರು ತೀರಾ ಸಣ್ಣ ಮೊತ್ತದ ವಹಿವಾಟಿಗೆ ಕೂಡ ಜನಸಾಮಾನ್ಯರು ಯುಪಿಐ ಆಧಾರಿತ ಆ್ಯಪ್‌ ಬಳಸಿ, ಹಣ ಪಾವತಿ ಮಾಡುತ್ತಿರುವುದು ಇದರ ಜನಪ್ರಿಯತೆಯನ್ನು ಹೇಳುತ್ತಿದೆ. ಯುಪಿಐ ಮೂಲಕ ನಡೆಯುವ ಪಾವತಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಅಂಕಿ–ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ. ತರಕಾರಿ, ಸೊಪ್ಪು ಖರೀದಿಸಿದ್ದಕ್ಕೆ ಹಣ ಪಾವತಿಯಿಂದ ಆರಂಭಿಸಿ ಷೇರು ಹೂಡಿಕೆಗಳವರೆಗಿನ ಕೆಲಸವನ್ನು ಯುಪಿಐ ಮೂಲಕವೇ ಮಾಡಬಹುದು. ಅಷ್ಟು ಉಪಯುಕ್ತವಾಗಿದೆ, ದೈನಂದಿನ ಬದುಕಿನಲ್ಲಿ ಅಷ್ಟು ಮಹತ್ವದ್ದಾಗಿದೆ ಈ ವ್ಯವಸ್ಥೆ.

ಆದರೆ, ಇಂಟರ್ನೆಟ್‌ ಲಭ್ಯ ಇರುವವರಿಗೆ, ಸ್ಮಾರ್ಟ್‌ ಫೋನ್‌ ಹೊಂದಿರುವವರಿಗೆ ಮಾತ್ರ ಈ ವ್ಯವಸ್ಥೆಯನ್ನು ಬಳಸಲು ಸಾಧ್ಯ. 2ಜಿ ತಂತ್ರಜ್ಞಾನ ಬಳಸಿ ಕೆಲಸ ಮಾಡುವ ಫೀಚರ್‌ ಫೋನ್‌ಗಳನ್ನು ಹೊಂದಿರುವವರ ಸಂಖ್ಯೆ ಕೋಟಿಗಳ ಲೆಕ್ಕದಲ್ಲಿ ಇರುವ ಭಾರತದಲ್ಲಿ ಯುಪಿಐ ವ್ಯವಸ್ಥೆಯು ಎಲ್ಲರನ್ನೂ ತಲುಪಿಲ್ಲ ಎಂಬುದೂ ಸತ್ಯ. ಇದನ್ನು ಗಮನಿಸಿದ್ದ ಆರ್‌ಬಿಐ, ಇಂಟರ್ನೆಟ್ ಇಲ್ಲದೆಯೂ ಡಿಜಿಟಲ್ ಪಾವತಿಯನ್ನು ಸಾಧ್ಯವಾಗಿಸಬಹುದೇ ಎಂಬ ಬಗ್ಗೆ ಪರಿಶೀಲನೆ ನಡೆಸಿತ್ತು. ಪ್ರಾಯೋಗಿಕ ಪರೀಕ್ಷೆಯ ನಂತರದಲ್ಲಿ ಈಗ ಅದು ನಿಯಮಗಳ ಚೌಕಟ್ಟನ್ನು ರೂಪಿಸಿದೆ. ಮೊಬೈಲ್‌ ಫೋನ್‌, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ವಾಲೆಟ್‌ ಬಳಸಿ ಆಫ್‌ಲೈನ್‌ ಪಾವತಿ ಮಾಡಬಹುದು. ಯುಪಿಐ‍ಪಾವತಿಯಲ್ಲಿ ಮಹತ್ವದ ಹಂತ, ಬಳಕೆದಾರರು ಪಾಸ್‌ವರ್ಡ್‌ ನಮೂದಿಸಿ, ತಾವು ಮಾಡಬೇಕಿರುವ ಪಾವತಿಯನ್ನು ಅನುಮೋದಿಸುವುದು. ಹಣ ಪಾವತಿಯ ಸಂದರ್ಭದಲ್ಲಿ ವಂಚನೆ ಆಗದಂತೆ ನೋಡಿಕೊಳ್ಳುವಲ್ಲಿ ಇದು ಮಹತ್ವದ್ದು. ಆದರೆ, ಈಗ ಆಫ್‌ಲೈನ್‌ ಪಾವತಿಗಳಿಗೆ ರೂಪಿಸಿರುವ ನಿಯಮಗಳ ಪ್ರಕಾರ ಪಾಸ್‌ವರ್ಡ್‌ ಅಥವಾ ಒಟಿಪಿ (ಒಂದು ಬಾರಿ ಮಾತ್ರ ಬಳಸಬಹುದಾದ ಪಾಸ್‌ವರ್ಡ್‌) ಬಳಕೆ ಇರುವುದಿಲ್ಲ. ಆಫ್‌ಲೈನ್‌ ಮೂಲಕ ಒಂದು ವಹಿವಾಟಿನಲ್ಲಿ ₹ 200 ಮಾತ್ರ ಪಾವತಿಸಬಹುದಾದರೂ, ಪಾವತಿಯ ಸುರಕ್ಷತೆಯನ್ನು ಖಾತರಿ‍ಪಡಿಸುವ ಹಂತವೊಂದು ಇರುವುದು ಸೂಕ್ತ. ಈಗ ಬಿಡುಗಡೆ ಮಾಡಿರುವ ನಿಯಮಗಳ ಪ್ರಕಾರ, ದೂರದಲ್ಲಿರುವ ವ್ಯಕ್ತಿಗೆ ಆಫ್‌ಲೈನ್‌ ಮೂಲಕ ಹಣ ಪಾವತಿ ಸಾಧ್ಯವಿಲ್ಲ. ಹಣ ಕೊಡುವವ ಹಾಗೂ ಸ್ವೀಕರಿಸುವವ ಒಂದೇ ಕಡೆ ಇದ್ದಾಗ ಮಾತ್ರ ಈ ಬಗೆಯ ಪಾವತಿ ಸಾಧ್ಯವಾಗಲಿದೆ. ವಹಿವಾಟಿನ ಮೇಲಿರುವ ಈ ಎರಡು ಮಿತಿಗಳನ್ನು ಗಮನಿಸಿದಾಗ, ಆಫ್‌ಲೈನ್‌ ಪಾವತಿ ವ್ಯವಸ್ಥೆಯು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಾಗ ಸಣ್ಣ ಮೊತ್ತದ ಖರೀದಿಗಳಿಗೆ ಮಾತ್ರ ಸೀಮಿತವಾಗಿ ನಡೆಯಬಹುದು ಎಂದು ಅನ್ನಿಸುತ್ತಿದೆ. ಪಾವತಿಯಲ್ಲಿ ಲೋಪವಾದರೆ, ಗ್ರಾಹಕ ಆರ್‌ಬಿಐನ ಒಂಬುಡ್ಸ್‌ಮನ್‌ ವ್ಯವಸ್ಥೆಯ ಮೊರೆ ಹೋಗಿ ನ್ಯಾಯ ಕೇಳಲು ಅವಕಾಶ ಇರಲಿದೆ. ಇದು ಗ್ರಾಹಕರಲ್ಲಿ ಒಂದಿಷ್ಟು ವಿಶ್ವಾಸ ಮೂಡಿಸುವಂಥದ್ದಾದರೂ, ಒಂಬುಡ್ಸ್‌ಮನ್‌ ಬಗ್ಗೆ ಎಷ್ಟರಮಟ್ಟಿಗೆ ಅರಿವು ಮೂಡಿಸಲು ಬ್ಯಾಂಕಿಂಗ್ ವ್ಯವಸ್ಥೆಗೆ ಸಾಧ್ಯವಾಗಲಿದೆ, ಸ್ಥಳೀಯ ಭಾಷೆಗಳಲ್ಲಿ ಒಂಬುಡ್ಸ್‌ಮನ್‌ ಸೇವೆ ಎಷ್ಟರಮಟ್ಟಿಗೆ ಲಭ್ಯವಾಗಲಿದೆ ಎನ್ನುವುದು ಇಡೀ ವ್ಯವಸ್ಥೆಯ ಯಶಸ್ಸನ್ನು ತೀರ್ಮಾನಿಸಬಹುದು.

ಯುಪಿಐ ವ್ಯವಸ್ಥೆಯು ಜನಪ್ರಿಯತೆ ಪಡೆದುಕೊಂಡಿರುವುದಕ್ಕೆ ಒಂದು ಬಹುಮುಖ್ಯ ಕಾರಣ ಇಡೀ ಪಾವತಿ ಪ್ರಕ್ರಿಯೆಯು ಅತ್ಯಂತ ಸರಳವಾಗಿ ನಡೆಯುವುದು. ಸಾಂಪ್ರದಾಯಿಕ ಆನ್‌ಲೈನ್‌ ಬ್ಯಾಂಕಿಂಗ್‌ನಲ್ಲಿ ಇರುವ ಸಂಕೀರ್ಣತೆಗಳು ಇದರಲ್ಲಿ ಇಲ್ಲ. ಅಷ್ಟೇ ಅಲ್ಲ, ತೀರಾ ಕಡಿಮೆ ಸಾಮರ್ಥ್ಯದ ಸ್ಮಾರ್ಟ್‌ ಫೋನ್‌ ಮೂಲಕವೂ ಇಡೀ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದೇ ಮಾತನ್ನು ಆಫ್‌ಲೈನ್‌ ಪಾವತಿಗೆ ಅನ್ವಯಿಸಿ ಹೇಳುವುದಾದರೆ, ಇದು ಎಷ್ಟರಮಟ್ಟಿಗೆ ಬಳಕೆದಾರಸ್ನೇಹಿ ಆಗಿರುತ್ತದೆ ಎನ್ನುವುದು ವ್ಯವಸ್ಥೆಯ ಯಶಸ್ಸನ್ನು ತೀರ್ಮಾನಿಸುತ್ತದೆ. ಸ್ಮಾರ್ಟ್‌ ಫೋನ್ ಹೊಂದಲಾಗದವರು, 4ಜಿ ಇಂಟರ್ನೆಟ್‌ ಸೇವೆಗಳನ್ನು ಪಡೆಯಲಾಗದವರು ಡಿಜಿಟಲ್ ಸಾಧನಗಳ ಬಳಕೆಯಲ್ಲಿ ಹೆಚ್ಚು ನುರಿತವರಾಗಿರುವುದಿಲ್ಲ ಎಂದು ಭಾವಿಸುವುದಾದಲ್ಲಿ, ಆಫ್‌ಲೈನ್‌ ಪಾವತಿ ಪ್ರಕ್ರಿಯೆಯುಅವರಿಗೆ ಸರಳವೆನಿಸುವಂತೆ ಮಾಡುವುದು ದೊಡ್ಡ ಸವಾಲಾಗಬಹುದು. ಆದರೆ, ಆರ್‌ಬಿಐನ ಹೊಸ ಉಪಕ್ರಮದ ಯಶಸ್ಸು ಬಳಕೆಯನ್ನು ಸುಲಭಗೊಳಿಸುವುದರ, ಜನರಿಗೆ ಅವರ ಭಾಷೆಯಲ್ಲಿಯೇ ಸೇವೆಗಳನ್ನು ಒದಗಿಸುವುದರ ಹಾಗೂ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡಿಸುವುದರ ಮೇಲೆಯೇ ನಿಂತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT