ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಮದ್ಯದ ‘ಹಿತಾನುಭವ’

Last Updated 19 ಏಪ್ರಿಲ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಏಪ್ರಿಲ್‌ 1ರಿಂದ ಭಾರತೀಯ ಮದ್ಯದ ಬೆಲೆಯಲ್ಲಿ ಏರಿಕೆಯಾಗಿದ್ದರೂ ವಿದೇಶಿ ಮದ್ಯದ ಬೆಲೆ ಹೆಚ್ಚಳವಾಗಿಲ್ಲ.

ವಿದೇಶದಿಂದ ಆಮದಾಗುವ ಬಗೆ ಬಗೆಯ ದುಬಾರಿ ಬೆಲೆಯ ಮದ್ಯಗಳ ರುಚಿ ಸವಿಯಬೇಕು ಎಂಬ ಹಂಬಲ ಇರುವ ಪಾನಪ್ರಿಯರಿಗೆ ಇದು ಸುಗ್ಗಿಯ ಕಾಲ.

₹43,410 ಕೊಟ್ಟು ಜಾನಿವಾಕರ್ ಬ್ಲೂ ಲೇಬಲ್‌ ವಿಸ್ಕಿ ಕುಡಿಯುವ ಕನಸು ಇದ್ದರೆ, ಹೇಗಪ್ಪಾ ಅಷ್ಟು ದುಡ್ಡು ಹೊಂದಿಸಲಿ ಎಂಬ ಚಿಂತೆ ಬಿಟ್ಟು ಬಿಡಬಹುದು. ಈಗ ₹17,370 ದರದಲ್ಲಿ 750 ಎಂ.ಎಲ್ ಬಾಟಲಿ ನಿಮ್ಮ ಕೈಗೆ ಸಿಗಲಿದೆ. ಬಾರ್ಡಿನೇಟ್ ಬ್ರಾಂಡಿ ಸವಿಯುವ ಉಮೇದು ಇದ್ದರೆ, ₹1,200 ಬದಲು ₹670 ಕೊಟ್ಟರೆ ನಿಮಗೆ ಮತ್ತಿನ ಗಮ್ಮತ್ತು ಸಿಗಲಿದೆ.

ರಾಜ್ಯ ಸರ್ಕಾರ ಅಬಕಾರಿ ಸುಂಕವನ್ನು ಶೇ8ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ, ರಾಜ್ಯದಲ್ಲಿ ಏಪ್ರಿಲ್ 1ರಿಂದ ಮದ್ಯದ ದರ ಏರಿಕೆಯಾಗಿದೆ, ವಿದೇಶಿ ಬ್ರಾಂಡ್‌ಗಳ ದರದಲ್ಲಿ ಭಾರಿ ವ್ಯತ್ಯಾಸಗಳೇನೂ ಆಗಿಲ್ಲ.

‘ರಾಜ್ಯಕ್ಕೆ ಹೋಲಿಸಿದರೆ ನೆರೆಯ ಗೋವಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ವಿದೇಶಿ ಬ್ರಾಂಡ್‌ಗಳ ದರ ಕಡಿಮೆಯಿದೆ. ರಾಜ್ಯದಲ್ಲೂ ತೆರಿಗೆಯಲ್ಲಿ ಬದಲಾವಣೆ ತರಬೇಕು ಎಂದು ವಿದೇಶಿ ಮದ್ಯ ಪೂರೈಕೆದಾರರು ಸರ್ಕಾರದ ಮುಂದೆ ಪ್ರಸ್ತಾವ ಇಟ್ಟಿದ್ದರು. ಸುದೀರ್ಘ ಚರ್ಚೆಯ ಬಳಿಕ ಸರ್ಕಾರ ಸ್ಲ್ಯಾಬ್‌ ನಿಗದಿಗೊಳಿಸಿದೆ’ ಎನ್ನುತ್ತಾರೆ ಮತ್ತೀಕೆರೆಯ ಎಸ್‌ಎಲ್‌ಎನ್‌ ವೈನ್ಸ್‌ನ ಕೀರ್ತನ್‌.

‘ವಿದೇಶಿ ಮದ್ಯದ ಮೇಲಿನ ಸ್ಲ್ಯಾಬ್‌ಗಳಲ್ಲಿ ಸರ್ಕಾರ ಬದಲಾವಣೆಗಳನ್ನು ಮಾಡಿದೆ. ಅಂದರೆ, ₹7,651 ರಿಂದ ₹ 15 ಸಾವಿರದವರೆಗಿನ ಬ್ರಾಂಡ್‌ಗಳ ಮೇಲೆ ₹ 2,000 ಹಾಗೂ ₹15 ಸಾವಿರ ಮೇಲ್ಪಟ್ಟ ಬ್ರಾಂಡ್‌ಗಳ ಮೇಲೆ ₹3,000 ಎಂದು ಸ್ಲ್ಯಾಬ್‌ಗಳನ್ನು ನಿಗದಿಮಾಡಲಾಗಿದೆ’ ಎಂದು ರಾಜ್ಯ ಪಾನೀಯ ನಿಗಮದ (ಕೆಎಸ್‌ಡಿಸಿಎಲ್‌) ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿದೇಶಿ ಬ್ರಾಂಡ್‌ ದರದಲ್ಲಿ ದಿಢೀರ್‌ ಬದಲಾವಣೆ ಆಗಿದ್ದರಿಂದ ನಾವು ಹೆಚ್ಚಿನ ಹಣ ಪಾವತಿಸಿ ಸಂಗ್ರಹಿಸಿಟ್ಟಿರುವ ಬ್ರಾಂಡ್‌ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ’ ಎನ್ನುತ್ತಾರೆ ಸೇಂಟ್‌ ಮಾರ್ಕ್ಸ್ ರಸ್ತೆಯಲ್ಲಿರುವ ದಿವಾರ್ಸ್‌ ವೈನ್ಸ್‌ ಮಾಲೀಕರು.

‘ಪ್ರತಿದಿನ ಒಂದರಿಂದ ಎರಡು ಬಾಟಲ್‌ ವಿದೇಶಿ ಬ್ರಾಂಡ್‌ ಮಾರಾಟವಾಗುತ್ತದೆ. ದರ ಪರಿಷ್ಕರಣೆಯಿಂದ ಮಾರಾಟದಲ್ಲಿ ಭಾರಿ ಏರಿಕೆ ಏನು ಕಂಡುಬಂದಿಲ್ಲ. ಅದೂ ಅಲ್ಲದೆ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎರಡು ಬಾಟಲ್ ಮಾತ್ರ ಗ್ರಾಹಕರು ಖರೀದಿಸಬಹುದು’ ಎನ್ನುತ್ತಾರೆ ಅವರು.

ಸ್ಲ್ಯಾಬ್‌ ಬದಲಾವಣೆ ಮಾಡಿ ಮೂರು ತಿಂಗಳಷ್ಟೇ ಆಗಿರುವುದರಿಂದ ಆಮದು ಬ್ರಾಂಡ್‌ಗಳಿಂದ ಬರುವ ಆದಾಯದ ಬಗ್ಗೆ ಈಗಲೇ ಸ್ಪಷ್ಟ ಚಿತ್ರಣ ಸಿಗುವುದಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

**

ಪರಿಷ್ಕೃತ ದರ ಪಟ್ಟಿ( 750 ಎಂ.ಎಲ್ ಬಾಟಲಿಗೆ ₹ ಗಳಲ್ಲಿ)

ಮದ್ಯದ ಹೆಸರು  ಹಳೆ ದರ             ಹೊಸ ದರ

ಜಾನಿವಾಕರ್‌– ಬ್ಲೂ ಲೇಬಲ್‌        43,410 17370

ಜಾನಿವಾಕರ್‌–ಪ್ಲಾಟಿನಂ ಲೇಬಲ್‌   17,730 8570

ಜಾನಿವಾಕರ್‌– ಬ್ಲ್ಯಾಕ್‌ ಲೇಬಲ್‌     6,960 4,880

ಜಾನಿವಾಕರ್‌– ರೆಡ್‌ ಲೇಬಲ್‌       2,990 2,690

ಜಾನಿವಾಕರ್‌ ಗೋಲ್ಡ್‌ ಲೇಬಲ್‌     9950 5900

ಕ್ರೌನ್‌ ರಾಯಲ್‌– ಎಕ್ಸ್‌.ಆರ್‌     34,470 14310

ರೇರ್‌ ಜೆ. ಬಿ 2875 2650

ಸಿಂಗಲ್ಟನ್‌ 8150 4615

ಚಿವಾಸ್‌ ರಿಗಲ್‌ 5,500 4,800

**

ವಿದೇಶಿ ಬ್ರಾಂಡ್‌ ಮಾರಾಟ ಹಿಂದೆ ಕಡಿಮೆ ಇತ್ತು. ಈಗ ದರದಲ್ಲಿ ಭಾರಿ ಕಡಿತ ಆಗಿರುವುದರಿಂದ ಏರಿಕೆಯಾಗಿದೆ.
- ಕೀರ್ತನ್‌, ಎಸ್ಎಲ್‌ಎನ್‌ ವೈನ್ಸ್‌ ಮತ್ತೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT