ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಪ್ರದೇಶದಿಂದ ತೆರವು ಸಂದೇಹ ನಿವಾರಣೆಯಾಗಲಿ

Last Updated 22 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಆದಿವಾಸಿಗಳು ಹಾಗೂ ಅರಣ್ಯವಾಸಿಗಳಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲೆಂದು2006ರ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು.ಆದರೆ ಈ ಕಾಯ್ದೆ ಕಾಗದದಿಂದ ಕ್ಷೇತ್ರಕ್ಕೆ ಪೂರ್ಣಪ್ರಮಾಣದಲ್ಲಿ ಇಳಿದಿಲ್ಲ. ಉದಾಹರಣೆಗೆ ಹೇಳುವುದಾದರೆ, ಐದು ಲಕ್ಷ ಹಕ್ಕುಪತ್ರಗಳನ್ನು ನೀಡಬೇಕೆಂಬ ಛತ್ತೀಸಗಡದ ಆದಿವಾಸಿಗಳ ಬೇಡಿಕೆಯನ್ನು ವರ್ಷಗಳ ಹಿಂದೆಯೇ ತಿರಸ್ಕರಿಸಲಾಗಿತ್ತು.ಸರ್ಗುಜಾ ಜಿಲ್ಲೆಯಲ್ಲಿ ಆದಿವಾಸಿಗಳಿಗೆ ಅರಣ್ಯ ಹಕ್ಕುಗಳ ಕಾಯ್ದೆಯಡಿ ನೀಡಿದ್ದ ಹಕ್ಕುಪತ್ರಗಳನ್ನು ಕಿತ್ತುಕೊಂಡ ವರದಿಗಳಿವೆ. ಕಲ್ಲಿದ್ದಲು ಗಣಿಗಳಿಗೆ ಮಣೆ ಹಾಕುವ ಹುನ್ನಾರ ಇದರ ಹಿಂದೆ ಅಡಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದಿವಾಸಿಗಳು ಮತ್ತು ಇತರೆ ಅರಣ್ಯವಾಸಿಗಳಿಗೆ ಅವರ ಪಾರಂಪರಿಕ ಅರಣ್ಯ ಭೂಮಿಯನ್ನು ಅನುಭೋಗಿಸುವ ಅವಕಾಶವನ್ನು ಸರ್ಕಾರವು ನಿರ್ದಿಷ್ಟ ಮಾನದಂಡಗಳ ಪ್ರಕಾರ ನೀಡಬೇಕು ಎಂದು2006ರ ಪರಿಶಿಷ್ಟ ಪಂಗಡಗಳು ಮತ್ತು ಇತರೆ ಪರಂಪರಾಗತ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಮಾನ್ಯತೆ)ಕಾಯ್ದೆಯು ಹೇಳುತ್ತದೆ.ಈ ಕಾಯ್ದೆಯು ಅರಣ್ಯ ಇಲಾಖೆಯ ಅಧಿಕಾರಿ ವರ್ಗದ ಗುಪ್ತ ವಿರೋಧ ಎದುರಿಸಿದ ವರದಿಗಳಿದ್ದವು.ಕೆಲ ವನ್ಯಜೀವಿ ಸಂರಕ್ಷಣಾ ಸಂಘ–ಸಂಸ್ಥೆಗಳು ಬಹಿರಂಗವಾಗಿ ಪ್ರತಿಭಟಿಸಿದ್ದವು.ಈ ಕಾಯ್ದೆ ಸಂವಿಧಾನಬಾಹಿರವಾಗಿದ್ದು ಅರಣ್ಯನಾಶಕ್ಕೆ ದಾರಿ ಮಾಡಿದೆ ಎಂಬುದುಅವುಗಳ ವಾದವಾಗಿತ್ತು. ಈ ಹಿನ್ನೆಲೆಯಲ್ಲಿಕಾಯ್ದೆ ಜಾರಿ ಕಠಿಣವೂ ಕುಂಠಿತವೂ ಆಯಿತು. ತಾವು ವಾಸಿಸುತ್ತಿರುವ ಅರಣ್ಯ ಭೂಮಿಯನ್ನು2005ರ ವೇಳೆಗೆ ಮೂರು ತಲೆಮಾರುಗಳ ಕಾಲ ಅನುಭೋಗಿಸಿದ ವಿವರಗಳನ್ನುಳ್ಳ ಅರ್ಜಿಗಳನ್ನು ಫಲಾನುಭವಿಗಳು ಸಲ್ಲಿಸಿದ್ದರು.ಕರ್ನಾಟಕವೂ ಸೇರಿದಂತೆ 16 ರಾಜ್ಯಗಳಲ್ಲಿ 40ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು.ಈ ಪೈಕಿ11.27 ಲಕ್ಷ ಅರ್ಜಿಗಳು ತಿರಸ್ಕೃತವಾಗಿವೆ. ಇಂತಹ ಕುಟುಂಬಗಳನ್ನು ಅರಣ್ಯ ಭೂಮಿಯಿಂದ ಹೊರಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 18.89 ಲಕ್ಷ ಅರ್ಜಿಗಳನ್ನು ಅಂಗೀಕರಿಸಿ ಸಂಬಂಧಪಟ್ಟ ಕುಟುಂಬಗಳಿಗೆ ಸದರಿ ಜಮೀನು ಹಕ್ಕುಪತ್ರ ವಿತರಿಸಲಾಗಿದೆ. ಈ ಮಾಹಿತಿಯನ್ನುಇನ್ನೂ ಹಲವಾರು ರಾಜ್ಯಗಳು ನ್ಯಾಯಾಲಯಕ್ಕೆಸಲ್ಲಿಸಬೇಕಿದೆ.ಆ ನಂತರ ತೆರವುಗೊಳಿಸಬೇಕಿರುವ ಕುಟುಂಬಗಳ ಸಂಖ್ಯೆ ಇನ್ನಷ್ಟು ಹೆಚ್ಚುವುದು ನಿಶ್ಚಿತ.

ಬುಡಕಟ್ಟು ಜನಾಂಗಗಳು ಮತ್ತು ಅರಣ್ಯಭೂಮಿ ವಾಸಿಗಳ ಈ ಬೃಹತ್ ಒಕ್ಕಲೆಬ್ಬಿಸುವಿಕೆಯು ಅಮಾನುಷ ಎಂಬ ಭಾವನೆ ವ್ಯಕ್ತವಾಗಿದೆ. ಅರಣ್ಯ ಮತ್ತು ಪರಿಸರ ಸಂರಕ್ಷಣೆ ಅತಿಮುಖ್ಯ. ಆದರೆ ಮಾನವೀಯ ಮುಖವಿಲ್ಲದ ಯಾವುದೇ ಸಂರಕ್ಷಣೆಗೆ ಅರ್ಥವಿರದು. ಅರಣ್ಯಭೂಮಿ ವಾಸಿಗಳ ಒಡೆತನದ ಹಕ್ಕುಗಳನ್ನು ಅರಣ್ಯ ಇಲಾಖೆಯು ಕಾಲಕಾಲಕ್ಕೆ ನಿಯಮಾನುಸಾರ ದಾಖಲಿಸಿ ಇತ್ಯರ್ಥಗೊಳಿಸಿಲ್ಲ. ಹೀಗಾಗಿ ತಮ್ಮದಲ್ಲದ ತಪ್ಪಿಗಾಗಿ ಈ ಜನ ಅತಿಕ್ರಮಣದ ಕಟಕಟೆಯಲ್ಲಿ ನಿಲ್ಲುವಂತಾಗಿದೆ.ಕಾನೂನಿನ ದೋಷಪೂರಿತ ಜಾರಿ ಮತ್ತು ಅತಿ ಉತ್ಸಾಹಿ ಪರಿಸರವಾದಿಗಳು- ವನ್ಯಜೀವಿ ಸಂರಕ್ಷಕ ಸಂಘಟನೆಗಳು ಈ ಸ್ಥಿತಿಗೆ ಕಾರಣ ಎಂದು ಆದಿವಾಸಿ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಭಾರಿ ಸಂಖ್ಯೆಯ ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿರುವ ಗಂಭೀರ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಇಡೀ ವಿದ್ಯಮಾನದ ಮರುಪರಿಶೀಲನೆ ನಡೆಯಬೇಕು. ಅಕ್ರಮದ ಸಂದೇಹಗಳು ನಿವಾರಣೆ ಆಗಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT