ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀಟ್‌’ ಗೊಂದಲ: ಸರ್ಕಾರಕ್ಕೆ ವಿದ್ಯಾರ್ಥಿಗಳಿಗೆ ಪಾಠವಾಗಲಿ

Last Updated 6 ಮೇ 2019, 19:50 IST
ಅಕ್ಷರ ಗಾತ್ರ

ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಗತ್ಯವಾದ ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ’ಯನ್ನು (ನೀಟ್‌) ರೈಲು ವಿಳಂಬದ ಕಾರಣ ಬರೆಯಲು ಸಾಧ್ಯವಾಗದ ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಇದು, ವಿದ್ಯಾರ್ಥಿಗಳ ಬೇಡಿಕೆಯೂ ಆಗಿತ್ತು. ರಾಜ್ಯ ಸರ್ಕಾರ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸಿತ್ತು. ಆದರೆ, ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇದ್ದುದರ ಲೋಪವನ್ನು ರೈಲ್ವೆ ಇಲಾಖೆ ಹೊರಬೇಕಾಗಿದೆ. ಭಾನುವಾರ ಬೆಳಿಗ್ಗೆ 7 ಗಂಟೆಗೆ ಬೆಂಗಳೂರು ತಲುಪಬೇಕಿದ್ದ ಹಂಪಿ ಎಕ್ಸ್‌ಪ್ರೆಸ್‌ ರೈಲು ಮಧ್ಯಾಹ್ನ 2.30ಕ್ಕೆ ಮುಟ್ಟಿದ್ದರಿಂದ ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾದರು. ರೈಲಿನ ಮಾರ್ಗ ಬದಲಾವಣೆ ಕಾರಣದಿಂದಾಗಿ ಈ ವಿಳಂಬ ಉಂಟಾಗಿದೆ. ಆದರೆ, ವಿಳಂಬದ ಬಗ್ಗೆ ಎಸ್‌ಎಂಎಸ್‌ ಸಂದೇಶ ಕಳುಹಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಹೇಳಿದೆ. ಅಷ್ಟುಮಾತ್ರದಿಂದಲೇ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರೈಲು ವಿಳಂಬವಾದ ಕಾರಣ ತೊಂದರೆಗೆ ಒಳಗಾದ ವಿದ್ಯಾರ್ಥಿಗಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಾದ ಹೊಣೆಯನ್ನು ಇಲಾಖೆ ಹೊರಬಹುದಿತ್ತು. ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಬಸ್‌ ವ್ಯವಸ್ಥೆ ಮಾಡಿಕೊಡುವುದೂ ಸಾಧ್ಯವಿತ್ತು. ಸಂವಹನದ ಸಾಧ್ಯತೆಗಳು ಬೆರಳ ತುದಿಯಲ್ಲಿರುವ ದಿನಗಳಲ್ಲಿ ವಿದ್ಯಾರ್ಥಿಗಳ ಗೋಳನ್ನು ನೋಡಿಯೂ ನಿಷ್ಕ್ರಿಯರಾಗಿದ್ದ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆಂದೇ ಭಾವಿಸಬೇಕಾಗಿದೆ. ರೈಲಿನ ವಿಳಂಬಕ್ಕೆ ಕೇಂದ್ರ ಸರ್ಕಾರವನ್ನು ದೂರುವ ಸ್ಥಳೀಯ ‍ಜನಪ್ರತಿನಿಧಿಗಳು ಕೂಡ ಮಕ್ಕಳ ನೆರವಿಗೆ ಬಾರದೆ ಮೂಕಪ್ರೇಕ್ಷಕರಾಗಿದ್ದುದನ್ನು ನೋಡಿದರೆ, ಈ ಲೋಪದಲ್ಲಿ ಅವರದೂ ಪಾಲು ಇದೆ ಎನ್ನಬೇಕಾಗುತ್ತದೆ. ಇದರೊಂದಿಗೆ ಪರೀಕ್ಷಾ ಕೇಂದ್ರ ಬದಲಾವಣೆಯಿಂದಾಗಿಯೂ ಒಂದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಕೇಂದ್ರ ಬದಲಾವಣೆ ಕುರಿತು ಇ–ಮೇಲ್‌ ಹಾಗೂ ಧ್ವನಿ ಸಂದೇಶ ರವಾನಿಸಲಾಗಿತ್ತು ಎಂದು ಪರೀಕ್ಷಾ ಸಂಘಟಕರು ಹೇಳಿದ್ದಾರೆ. ಸಂದೇಶ ತಲುಪಿತೋ ಇಲ್ಲವೋ? ವಿದ್ಯಾರ್ಥಿಗಳಂತೂ ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಮಾನವೀಯ ದೃಷ್ಟಿಯಿಂದ ಅವರಿಗೂ ಒಂದು ಅವಕಾಶ ಕಲ್ಪಿಸಬೇಕು.

‘ನೀಟ್‌’ ಬರೆಯಲು ದೂರ ಪ್ರದೇಶಗಳಿಂದ ಬರುವ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ ಸ್ಥಳಕ್ಕೆ ಒಂದು ದಿನ ಮೊದಲೇ ಬರುತ್ತಾರೆ. ಆದರೆ, ಈ ದುಬಾರಿ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಂದ ಇದನ್ನು ಅಪೇಕ್ಷಿಸುವುದು ಸಾಧ್ಯವಿಲ್ಲ. ಪ್ರಸಕ್ತ ಸಂದರ್ಭದಲ್ಲೂ ಕೆಲವು ವಿದ್ಯಾರ್ಥಿಗಳು ಮಾರ್ಗಮಧ್ಯದಲ್ಲಿಯೇ ರೈಲಿನಿಂದ ಇಳಿದು ಟ್ಯಾಕ್ಸಿಗಳ ಮೂಲಕ ಬೆಂಗಳೂರು ತಲುಪಿದ್ದಾರೆ. ಶೈಕ್ಷಣಿಕ ಅವಕಾಶಗಳಿಗೂ ಆರ್ಥಿಕ ಸ್ಥಿತಿವಂತಿಕೆಗೂ ಸಂಬಂಧ ಇರುವುದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಅನಾರೋಗ್ಯಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಆಡಳಿತ ವ್ಯವಸ್ಥೆಯೇ ವಿಕೇಂದ್ರೀಕರಣಗೊಂಡಿರುವ ಸಂದರ್ಭದಲ್ಲಿ ‘ನೀಟ್‌’ ಮಾತ್ರ ಕೆಲವೇ ಕೇಂದ್ರಗಳಿಗೆ ಸೀಮಿತಗೊಂಡಿರುವುದು ದುರದೃಷ್ಟಕರ. ಜಿಲ್ಲೆಯೊಂದರ ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯುವ ಅವಕಾಶ ದೊರೆಯುವಂತಾದರೆ ಇಂತಹ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ಪ್ರಸಕ್ತ ಘಟನೆಯು ಸರ್ಕಾರಗಳಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೂ ಪಾಠವಾಗಬೇಕು. ಎಲ್ಲರ ಕೈಗಳಲ್ಲೂ ಮೊಬೈಲ್ ಫೋನ್ ಇರುವ ಸಂದರ್ಭದಲ್ಲಿ ರೈಲು ವಿಳಂಬದ ಸೂಚನೆ ಕುರಿತು ಅಥವಾ ಪರೀಕ್ಷಾ ಕೇಂದ್ರ ಬದಲಾದ ವಿಷಯ ವಿದ್ಯಾರ್ಥಿಗಳಿಗೆ ಹಾಗೂ ಅವರ ‍ಪೋಷಕರಿಗೆ ತಿಳಿಯದಿರುವುದು ಆಶ್ಚರ್ಯಕರ. ನಮ್ಮ ವಿದ್ಯಾರ್ಥಿಗಳು ಕೇವಲ ಪಠ್ಯದ ಹುಳುಗಳಾಗದೆ ಸಮಾಜದ ಆಗುಹೋಗುಗಳ ಬಗ್ಗೆ ಬಿಡುಗಣ್ಣಾಗಿರುವ ಅಗತ್ಯವನ್ನು ಈ ಘಟನೆ ಸೂಚಿಸುತ್ತದೆ. ಈ ಪರೀಕ್ಷಾ ಪದ್ಧತಿಯ ವಿಚಿತ್ರ ನಿಯಮಗಳ ಪುನರ್‌ ಪರಿಶೀಲನೆಗೆ ಕೂಡ ಇದು ಸಕಾಲ. ಪರೀಕ್ಷಾ ಕೇಂದ್ರ ಪ್ರವೇಶಿಸುವ ಪರೀಕ್ಷಾರ್ಥಿಗಳು ಧರಿಸುವ ಮೂಗುತಿ, ಓಲೆ, ಉದ್ದ ತೋಳಿನ ಅಂಗಿ, ಪಾದರಕ್ಷೆಗಳ ಬಗ್ಗೆ ನಡೆಯುವ ತಪಾಸಣೆಯಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುವ ಘಟನೆಗಳು ಪ್ರತಿವರ್ಷ ವರದಿಯಾಗುತ್ತಲೇ ಇವೆ. ವಿದ್ಯಾರ್ಥಿಗಳನ್ನು ಉಸಿರುಗಟ್ಟಿಸುವ ಇಂಥ ಕ್ರಮಗಳ ಅಗತ್ಯದ ಬಗ್ಗೆ ಚರ್ಚೆ ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT