ಒಂಬತ್ತು ಪೊಲೀಸರಿಗೆ ಮರಣದಂಡನೆ ವಿಧಿಸಿರುವ ತಮಿಳುನಾಡು ನ್ಯಾಯಾಲಯದ ತೀರ್ಪು ಮಹತ್ವದ್ದು. ಆದರೆ, ಪ್ರೌಢ ನ್ಯಾಯವ್ಯವಸ್ಥೆಗೆ ತಕ್ಕುದಲ್ಲದ ಈ ತೀರ್ಪು, ‘ಕಣ್ಣಿಗೆ ಕಣ್ಣು’ ಎನ್ನುವ ಪ್ರತೀಕಾರದ ಧೋರಣೆ ಒಳಗೊಂಡಿದೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್ಕುಳಂ ಠಾಣೆಯಲ್ಲಿ ಘಟಿಸಿದ್ದ ತಂದೆ–ಮಗನ ‘ಲಾಕಪ್ ಡೆತ್’ ಪ್ರಕರಣದಲ್ಲಿ, ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಒಂಬತ್ತು ಪೊಲೀಸರಿಗೆ ಮರಣದಂಡನೆ ವಿಧಿಸಿರುವುದು ಅತ್ಯಂತ ಅಪರೂಪದ ತೀರ್ಪು. ಆದರೆ, ಮರಣದಂಡನೆಗೆ ಬಲವಾದ ಕಾರಣಗಳಿಲ್ಲದ ಈ ತೀರ್ಪು ಅಮಾನವೀಯವಾದುದೂ ಹೌದು. ಒಂದು ತಪ್ಪನ್ನು ಇನ್ನೊಂದು ತಪ್ಪಿನಿಂದ ಅಥವಾ ಪ್ರತೀಕಾರದ ಕ್ರಮದಿಂದ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದರ ಹಿನ್ನೆಲೆಯಲ್ಲಿ ಈ ತೀರ್ಪನ್ನು ನೋಡಬೇಕಾಗಿದೆ. ದೇಶದ ಪೊಲೀಸ್ ವ್ಯವಸ್ಥೆಗೆ ಲಾಕಪ್ ಡೆತ್ ಪ್ರಕರಣಗಳು ಕಳಂಕವಾಗಿ ಉಳಿದಿದ್ದು, ಪೊಲೀಸರ ಚಿತ್ರಹಿಂಸೆಗೆ ಜನಸಾಮಾನ್ಯರು ಬಲಿಯಾಗುವ ವಿದ್ಯಮಾನಗಳು ದೇಶದ ವಿವಿಧೆಡೆ ನಡೆಯುತ್ತಲೇ ಇವೆ. ಲಾಕಪ್ಡೆತ್ ಪ್ರಕರಣಗಳು ದೇಶಕ್ಕೆ ಹೊಸತೂ ಅಲ್ಲ. 2020ರ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಅವಧಿ ಮೀರಿ ಅಂಗಡಿ ತೆರೆದಿದ್ದ ಆರೋಪದಡಿ ಮೊಬೈಲ್ ವ್ಯಾಪಾರಿಗಳಾದ ಜಯರಾಜ್ ಹಾಗೂ ಅವರ ಪುತ್ರ ಬೆನ್ನಿಕ್ಸ್ ಅವರನ್ನು ಪೊಲೀಸರು ಬಂಧಿಸಿದ್ದರು. ಪೊಲೀಸ್ ವಶದಲ್ಲಿದ್ದ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಮಾರನೇ ದಿನವೇ ಸಾವನ್ನಪ್ಪಿದ್ದರು. ಆ ಸಾವುಗಳನ್ನು ಲಾಕಪ್ ಡೆತ್ ಎಂದು ಮೃತರ ಸಂಬಂಧಿಗಳು ಆರೋಪಿಸಿದ್ದರು. ಆ ಪ್ರಕರಣದ ತನಿಖೆಯನ್ನು ಮದ್ರಾಸ್ ಹೈಕೋರ್ಟ್ ಸಿಬಿಐಗೆ ವಹಿಸಿತ್ತು. ಬಂಧಿತರನ್ನು ಮನಬಂದಂತೆ ಥಳಿಸಲಾಗಿತ್ತು; ಠಾಣೆಯ ಪೀಠೋಪಕರಣ, ಲಾಠಿಗಳೆಲ್ಲ ರಕ್ತಸಿಕ್ತವಾಗಿದ್ದವು ಎಂದು ಓರ್ವ ಮಹಿಳಾ ಕಾನ್ಸ್ಟೆಬಲ್ ಸಿಬಿಐ ಮುಂದೆ ಹೇಳಿಕೆ ನೀಡಿದ್ದರು. ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿನ ದೃಶ್ಯಗಳನ್ನು ಅಳಿಸಲಾಗಿತ್ತು. ಪ್ರಕರಣ ಸಂಬಂಧ ನೂರಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿದ್ದ ಸಿಬಿಐ, ಬಂಧಿತರನ್ನು ತೀವ್ರ ಚಿತ್ರಹಿಂಸೆಗೆ ಗುರಿಪಡಿಸುವುದರ ಜೊತೆಗೆ ವೈದ್ಯಕೀಯ ನೆರವನ್ನೂ ನಿರಾಕರಿಸಿದ ಪೊಲೀಸರಿಗೆ, ಪೆರೋಲ್ಗೂ ಅವಕಾಶ ನೀಡದೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಈಗ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಆದರೆ, ಸಾತನ್ಕುಳಂ ಲಾಕಪ್ಡೆತ್ ಘಟನೆಯನ್ನು, ಸುಪ್ರೀಂ ಕೋರ್ಟ್ ಹೇಳಿರುವಂತೆ, ಮರಣದಂಡನೆ ವಿಧಿಸಬಹುದಾದ ಅಪರೂಪದಲ್ಲಿ ಅಪರೂಪವಾದ ಪ್ರಕರಣವೇನೂ ಅಲ್ಲ.

ಸಾಮಾನ್ಯ ನಾಗರಿಕರು ಈ ಅಪರಾಧ ಎಸಗಿದ್ದಲ್ಲಿ ಅವರಿಗೆ ಸಾಮಾನ್ಯ ಶಿಕ್ಷೆಯನ್ನೇ ವಿಧಿಸಲಾಗುತ್ತಿತ್ತು; ಆದರೆ, ಈ ಹತ್ಯೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಎನ್ನುವ ವಿಷಯವನ್ನು ಕೋರ್ಟ್ ಒತ್ತಿ ಹೇಳಿದೆ. ಈ ಹೋಲಿಕೆಯ ಮೂಲಕ, ಅಪರಾಧಿಗಳು ಪೊಲೀಸರಾಗಿರುವುದರಿಂದ ಅವರಿಗೆ ಅಸಾಮಾನ್ಯ ಶಿಕ್ಷೆ ಅಗತ್ಯವೆಂದು ಕೋರ್ಟ್ ಭಾವಿಸಿರುವಂತಿದೆ. ಈ ವಾದವು, ಸಮಾನ ಅಪರಾಧಗಳಿಗೆ ಭಿನ್ನವಾದ ಶಿಕ್ಷೆ ನೀಡುವುದು ಸರಿ ಎಂದು ಹೇಳುವಂತಿದೆ. ಆದರೆ, ಇಂಥ ಅಭಿಪ್ರಾಯಗಳನ್ನು ದೇಶದ ನ್ಯಾಯವ್ಯವಸ್ಥೆ ಒಪ್ಪುವುದಿಲ್ಲ. ಜನಸಾಮಾನ್ಯರಿಗೆ ಪೊಲೀಸರು ನೀಡುವ ಚಿತ್ರಹಿಂಸೆ ಹಾಗೂ ಲಾಕಪ್ಡೆತ್ಗಳನ್ನು ಮರಣದಂಡನೆ ಶಿಕ್ಷೆಯ ಮೂಲಕ ತಡೆಯಬಹುದು ಎನ್ನುವ ಅಭಿಪ್ರಾಯಕ್ಕೂ ಇಂಥ ತೀರ್ಪುಗಳು ಅವಕಾಶ ಕಲ್ಪಿಸಲಿವೆ. ಮರಣದಂಡನೆಯಿಂದ ಅಪರಾಧಗಳನ್ನು ತಡೆಯುವುದು ಸಾಧ್ಯವಿಲ್ಲ ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಹಾಗಾಗಿ, ತಮಿಳುನಾಡು ನ್ಯಾಯಾಲಯದ ತೀರ್ಪು ಮಾನವೀಯವಾದುದು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಅಪರಾಧಿಗಳೆಂದು ಗುರ್ತಿಸಿ ತೀರ್ಪು ನೀಡಿರುವುದು ಸ್ವಾಗತಾರ್ಹ. ಆದರೆ, ಅಪರಾಧಕ್ಕೆ ವಿಧಿಸಿರುವ ಶಿಕ್ಷೆಯ ಸ್ವರೂಪವು ತೀರ್ಪು ನೀಡಲು ಉದ್ದೇಶಿಸಿರುವ ಸಂದೇಶವನ್ನು ದುರ್ಬಲಗೊಳಿಸುವಂತಿದೆ.

ಕಾನೂನು ಮತ್ತು ಮಾನವಹಕ್ಕುಗಳ ಉಲ್ಲಂಘನೆಯಾದ ಲಾಕಪ್ಡೆತ್ ಕೃತ್ಯಗಳನ್ನು ನಾಗರಿಕ ಸಮಾಜ ಒಪ್ಪುವುದಕ್ಕೆ ಸಾಧ್ಯವಿಲ್ಲ. ಇಂಥ ಬಹುತೇಕ ಪ್ರಕರಣಗಳಲ್ಲಿ ದಲಿತರು, ಬಡವರು, ಅಲ್ಪಸಂಖ್ಯಾತರಂತಹ ದುರ್ಬಲ ಸಮುದಾಯಗಳಿಗೆ ಸೇರಿದವರೇ ಬಲಿಪಶುಗಳಾಗಿರುತ್ತಾರೆ ಎನ್ನುವುದು ಕಾಕತಾಳೀಯವೇನಲ್ಲ. ಪೊಲೀಸ್ ಠಾಣೆಗಳಲ್ಲಿನ ಹಿಂಸೆ ಮತ್ತು ಸಾವುಗಳ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಗಂಭೀರವಾಗಿ ಪ್ರತಿಕ್ರಿಯಿಸಿದೆ ಮತ್ತು ಪೊಲೀಸರ ನಡವಳಿಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ನೀಡಿದೆ. ಆದರೆ, ಆ ಮಾರ್ಗಸೂಚಿಯು ಪೊಲೀಸರ ಮೇಲೆ ಪರಿಣಾಮ ಬೀರಿಲ್ಲ ಎನ್ನುವುದನ್ನು ಹೆಚ್ಚುತ್ತಲೇ ಇರುವ ಲಾಕಪ್ ಡೆತ್ಗಳು ಸೂಚಿಸುವಂತಿವೆ. ಪ್ರತಿಯೊಂದು ಕಸ್ಟಡಿ ಹತ್ಯೆಯೂ ನಾಗರಿಕರ ಜೀವನ ಮತ್ತು ಹಕ್ಕುಗಳ ಮೇಲೆ ಎರಗುವ ಘೋರ ದಾಳಿಯಾಗಿದೆ. ಆದರೆ, ಅಪರಾಧ ಎಷ್ಟೇ ಕ್ರೌರ್ಯದಿಂದ ಕೂಡಿದ್ದರೂ ಅದಕ್ಕೆ ಮರಣದಂಡನೆ ಉತ್ತರವಾಗುವುದಿಲ್ಲ. ನ್ಯಾಯವು ಪ್ರತೀಕಾರದ ಮೇಲೆ ಆಧಾರಿತವಾಗಿಲ್ಲ. ಕಣ್ಣಿಗೆ ಕಣ್ಣು ಎನ್ನುವ ಪ್ರತೀಕಾರದ ಧೋರಣೆ ಪ್ರಬುದ್ಧ ನ್ಯಾಯವ್ಯವಸ್ಥೆಗೆ ಶೋಭೆಯನ್ನೂ ತರುವುದಿಲ್ಲ. ವಿಶ್ವದಲ್ಲಿ ನೂರಕ್ಕೂ ಹೆಚ್ಚು ದೇಶಗಳು ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿವೆ. ಇನ್ನೂ ಕೆಲವು ದೇಶಗಳು ಈ ಶಿಕ್ಷೆಯನ್ನು ರದ್ದುಪಡಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿವೆ. ಕಾನೂನು ವ್ಯವಸ್ಥೆಯಲ್ಲಿ ಮರಣದಂಡನೆಗೆ ಅವಕಾಶ ಇರುವ ದೇಶಗಳಲ್ಲೂ, ಆ ಶಿಕ್ಷೆ ತೀರಾ ಅಪರೂಪದ ಸಂದರ್ಭಗಳಲ್ಲಷ್ಟೇ ಜಾರಿಯಾಗುತ್ತಿದೆ. ದುರದೃಷ್ಟವಶಾತ್, ಭಾರತದಲ್ಲಿ ಅಪರಾಧವನ್ನು ಪ್ರತೀಕಾರದ ಭಾವದಲ್ಲಿ ಹತ್ತಿಕ್ಕುವ ಸಾರ್ವಜನಿಕ ಚರ್ಚೆಗಳು ಭಾವುಕ ನೆಲೆಗಟ್ಟಿನಲ್ಲಿ ಆಗಾಗ ನಡೆಯುತ್ತಿರುತ್ತವೆ. ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸುವ ನಿಟ್ಟಿನಲ್ಲಿ ಭಾರತದಲ್ಲೂ ಚರ್ಚೆಗಳು ನಡೆಯಬೇಕಾಗಿದೆ. ದೇಶದ ನ್ಯಾಯಾಲಯಗಳು ಮರಣದಂಡನೆ ಶಿಕ್ಷೆ ವಿಧಿಸುವ ಪ್ರವೃತ್ತಿಗೆ ವಿರುದ್ಧವಾಗಿ ನಿಲ್ಲಬೇಕಾಗಿದೆ. ಅಪರಾಧಿಗೆ ಮರಣದಂಡನೆ ವಿಧಿಸುವುದರಿಂದ ನಿಜವಾದ ನ್ಯಾಯ ದೊರೆಯುವುದಿಲ್ಲ ಎನ್ನುವುದನ್ನು ಪುನರುಚ್ಚರಿಸುವ ಮೂಲಕ ನ್ಯಾಯಾಂಗದ ದಿಕ್ಕನ್ನು ಮಾನವೀಯಗೊಳಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.