ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಆಕ್ಷೇಪಾರ್ಹ ಹೇಳಿಕೆ: ಸರ್ಕಾರ ಬಿಜೆಪಿ ಪಾಠ ಕಲಿಯಲಿ

Last Updated 7 ಜೂನ್ 2022, 19:31 IST
ಅಕ್ಷರ ಗಾತ್ರ

ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡ ದ್ವೇಷ ಭಾಷಣಗಳಿಗೆ ಮಿತಿ ಇದೆ ಎಂಬುದು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಆಕ್ರೋಶ ಮತ್ತು ಕೆಲವು ದೇಶಗಳ ರಾಜತಾಂತ್ರಿಕ ಕ್ರಮಗಳ ಬಳಿಕವಷ್ಟೇ ಬಿಜೆಪಿ ನಾಯಕರಿಗೆ ಅರ್ಥವಾಗಿದೆ. ಪ್ರವಾದಿ ಮಹಮ್ಮದ್‌ ಅವರ ವಿರುದ್ಧ ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರನ್ನು ಅಮಾನತು ಮಾಡಲಾಗಿದೆ. ಅದೇ ರೀತಿಯಲ್ಲಿ, ಪ್ರವಾದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ಪ್ರಕಟಿಸಿದ್ದ ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ವಿವಿಧ ಧರ್ಮಗಳಿಗೆ ಸಂಬಂಧಿಸಿ ಸಾರ್ವಜನಿಕ ವರ್ತನೆ ಮತ್ತು ಹೇಳಿಕೆಗಳಿಗೊಂದು ಲಕ್ಷ್ಮಣ ರೇಖೆ ಇರಬೇಕು ಎಂಬುದನ್ನು ಈಗಿನ ವಿದ್ಯಮಾನವು ತೋರಿಸಿಕೊಟ್ಟಿದೆ. ಭಾರತಕ್ಕೆ ನಿಕಟವಾಗಿವೆ ಎಂದು ಪರಿಗಣಿಸಲಾದ ದೇಶಗಳ ಪ್ರತಿಭಟನೆಯ ಕಾರಣಕ್ಕಾಗಿಯೇ ಅಮಾನತು ಮತ್ತು ಉಚ್ಚಾಟನೆಯಂತಹ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟ. ಕತಾರ್‌, ಕುವೈತ್‌ ಮತ್ತು ಇರಾನ್‌ ದೇಶಗಳು ಭಾರತದ ರಾಯಭಾರಿಗಳನ್ನು ಕರೆಸಿಕೊಂಡು ಹೇಳಿಕೆಯ ಬಗ್ಗೆ ತಮ್ಮ ಅಸಮಾಧಾನ ತೋರ್ಪಡಿಸಿವೆ.

ಇಸ್ಲಾಮಿಕ್ ಸಹಕಾರ ಸಂಘಟನೆಯು (ಒಐಸಿ) ಹೇಳಿಕೆಯನ್ನು ಖಂಡಿಸಿದೆ. ಭಾರತದ ಉತ್ಪನ್ನಗಳನ್ನು ನಿಷೇಧಿಸಬೇಕು ಎಂದು ಸೌದಿ ಅರೇಬಿಯಾ, ಕುವೈತ್‌ ಸೇರಿ ಹಲವು ದೇಶಗಳಲ್ಲಿ ಕೂಗು ಕೇಳಿಬಂದಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕತಾರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೇ ಆ ದೇಶವು ಹೇಳಿಕೆಯ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇದು ಭಾರತಕ್ಕೆ ರಾಜತಾಂತ್ರಿಕವಾಗಿ ಆಗಿರುವ ಹಿನ್ನಡೆ.

ನೂಪುರ್‌ ಅವರು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ವಿರುದ್ಧ ಕಾನ್ಪುರದಲ್ಲಿ ನಡೆದ ಪ್ರತಿಭಟನೆಯು ಹಿಂಸೆಗೆ ತಿರುಗಿತ್ತು. ಆದರೆ, ಆ ಸಂದರ್ಭದಲ್ಲಿ ಬಿಜೆಪಿಗೆ ಏನೂ ಅನ್ನಿಸಿರಲಿಲ್ಲ. ಅಲ್ಪಸಂಖ್ಯಾತ ಸಮುದಾಯಗಳು ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ಮನಸೋಇಚ್ಛೆ ಟೀಕಿಸುವುದು ತಮಗೊಂದು ಹೆಗ್ಗಳಿಕೆಯ ವಿಚಾರ ಎಂದು ಬಿಜೆಪಿಯ ಹಲವು ಮುಖಂಡರು ಮತ್ತು ಹಿಂದುತ್ವವಾದವನ್ನು ಪ್ರತಿಪಾದಿಸುವ ಹಲವು ನಾಯಕರು ಭಾವಿಸಿದ್ದಾರೆ. ದ್ವೇಷ ಭಾಷಣ ಮಾಡುವುದಕ್ಕೆ ಇಂತಹ ಮುಖಂಡರ ನಡುವೆ ಪೈಪೋಟಿಯೇ ಇದೆ. ಇಂತಹ ವಾತಾವರಣವು ದೇಶದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸದೆಯೇ ಬೇಜವಾಬ್ದಾರಿಯಿಂದ ಕೂಡಿದ ಮತ್ತು ಆಕ್ಷೇಪಾರ್ಹವಾದ ಹೇಳಿಕೆ ನೀಡುವ ಧೈರ್ಯವನ್ನು ಈ ಮುಖಂಡರಿಗೆ ಕೊಟ್ಟಿದೆ. ಈ ರೀತಿಯ ಹೇಳಿಕೆಗಳು ಮತ್ತು ಕೃತ್ಯಗಳ ಹಿಂದೆ ಇರುವುದು ಒಂದೇ ಉದ್ದೇಶ– ಬಹುಸಂಖ್ಯಾತ ಸಮುದಾಯದ ಪ್ರಾಬಲ್ಯವನ್ನು ದೃಢಪಡಿಸಿಕೊಳ್ಳಬೇಕು ಮತ್ತು ಅಲ್ಪಸಂಖ್ಯಾತರನ್ನು ಅಧೀನದಲ್ಲಿ ಇರಿಸಿಕೊಳ್ಳಬೇಕು.

ದ್ವೇಷ ಭಾಷಣಗಳನ್ನು ಆಕ್ಷೇಪಿಸಿದವರನ್ನು ಮತ್ತು ಸಹಿಷ್ಣುತೆ, ವಿವೇಕ ಬೇಕು ಎಂದು ಹೇಳಿದವರನ್ನು ‘ನಗರ ನಕ್ಸಲ್‌’ ಎಂದೋ ‘ಹುಸಿ ಜಾತ್ಯತೀತವಾದಿ’ಗಳೆಂದೋ ಅಥವಾ ಇನ್ನಿತರ ಹೀನ ಬೈಗುಳ ಬಳಸಿ ಅವಮಾನಿಸಲಾಗಿದೆ. ಹಿಂದೂಯೇತರ ಧರ್ಮಗಳ ಮೇಲೆ ಕೆಸರು ಎರಚಿದ್ದನ್ನು ಸಮರ್ಥಿಸಿಕೊಳ್ಳಲು ‘ಚಾರ್ಲಿ ಹೆಬ್ಡೊದಂತಹ ಪ್ರಕರಣ’ಗಳನ್ನು ಆಗೊಮ್ಮೆ ಈಗೊಮ್ಮೆ ಉಲ್ಲೇಖಿಸಲಾಗುತ್ತದೆ. ವಕ್ತಾರರ ವಿರುದ್ಧದ ಕ್ರಮದಿಂದಾಗಿ ಅಂತರರಾಷ್ಟ್ರೀಯ ಒತ್ತಡಕ್ಕೆ ಶರಣಾದಂತೆ ಆಯಿತು ಎಂದು ಕೆಲವರು ಟೀಕಿಸಿದ್ದೂ ಇದೆ. ಹಾಗೆ ನೋಡಿದರೆ, ಬಿಜೆಪಿ ಕೈಗೊಂಡ ಕ್ರಮ ಏನೇನೂ ಸಾಲದು. ಧರ್ಮಗಳಿಗೆ ಅಪಮಾನ ಮಾಡುವುದನ್ನು ಮತ್ತು ದ್ವೇಷ ಭಾಷಣವನ್ನು ಯಾವುದೇ ರೀತಿಯಲ್ಲಿ ಯಾವುದೇ ವ್ಯಕ್ತಿ ಮಾಡಿದರೂ ಅದು ತಪ್ಪು ಮತ್ತು ಸ್ವೀಕಾರಾರ್ಹ ಅಲ್ಲವೇ ಅಲ್ಲ. ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಮಾಡಬೇಕಾದದ್ದು ಇನ್ನೂ ಬಹಳವಿದೆ. ಒಐಸಿಯ ಹೇಳಿಕೆಯನ್ನು ‘ಅನಪೇಕ್ಷಿತ ಮತ್ತು ದುರುದ್ದೇಶಪೂರಿತ’ ಎಂದು ಭಾರತವು ಬಣ್ಣಿಸಿದೆ.

ಬಿಜೆಪಿ ವಕ್ತಾರರ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳಲಾಗಿದೆ ಮತ್ತು ಪಕ್ಷವು ‘ಕಠಿಣ ಕ್ರಮ’ ಕೈಗೊಂಡಿದೆ ಎಂದು ಹೇಳಲಾಗಿದೆ. ಈ ಮೂಲಕ ಇಂತಹ ವಿಚಾರಗಳಲ್ಲಿ ತನ್ನ ದ್ವಂದ್ವ ನಿಲುವನ್ನು ಸರ್ಕಾರವು ಎತ್ತಿ ಹಿಡಿದಿದೆ. ದೇಶದ ಹೊರಗಿನಿಂದ ಆಕ್ಷೇಪ ವ್ಯಕ್ತವಾಗುವ ತನಕ ಸರ್ಕಾರ ಅಥವಾ ಬಿಜೆಪಿಯು ವಕ್ತಾರರ ಹೇಳಿಕೆಗಳನ್ನು ಖಂಡಿಸಿರಲಿಲ್ಲ. ಇಂತಹ ನಿಲುವೇ ದ್ವೇಷ ಭಾಷಣ ಮಾಡುವವರಿಗೆ ಉತ್ತೇಜನ ನೀಡುತ್ತದೆ. ತಮ್ಮೆಡೆಗೆ ಬೊಟ್ಟು ತೋರುವವರನ್ನು ಟೀಕಿಸುವುದು ಮತ್ತು ಅವರ ಮೇಲೆ ಪ್ರತಿದಾಳಿ ನಡೆಸುವುದು ತಪ್ಪು ಮತ್ತು ಅದರಿಂದ ಯಾವುದೇ ಉಪಯೋಗ ಇಲ್ಲ. ಅಲ್ಪಸಂಖ್ಯಾತರನ್ನು ದೇಶದೊಳಗೆ ಗೌರವಯುತವಾಗಿ ನೋಡಿಕೊಳ್ಳಲಾಗುತ್ತಿದೆ ಎಂಬುದನ್ನು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಖಾತರಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT