ಗುರುವಾರ , ಜುಲೈ 29, 2021
23 °C

ಭದ್ರತಾ ಮಂಡಳಿಗೆ ಭಾರತ ಸುಧಾರಣೆಯ ನಡೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತಕ್ಕೆ ಮಹತ್ವದ ಗೆಲುವು ಲಭಿಸಿದೆ. ಏಷ್ಯಾ ಪೆಸಿಫಿಕ್‌ ವಲಯದ ಸದಸ್ಯ ರಾಷ್ಟ್ರದ ಆಯ್ಕೆಗೆ ನಡೆದ ಮತದಾನದಲ್ಲಿ ಚಲಾವಣೆಯಾದ 192 ಮತಗಳ ಪೈಕಿ 184 ಮತಗಳನ್ನು ಭಾರತ ಪಡೆದಿದೆ. ಗೆಲುವಿಗೆ ಮೂರನೇ ಎರಡರಷ್ಟು ಮತಗಳು ಅಗತ್ಯವಿದ್ದರೂ ಭಾರತವು ಶೇಕಡ 95.8ರಷ್ಟು ಮತಗಳನ್ನು ಪಡೆಯುವ ಮೂಲಕ ಭಾರಿ ಬೆಂಬಲವನ್ನು ಗಳಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 1950–51ರಿಂದ 2011–12ರವರೆಗೆ ಭಾರತವು ಏಳು ಬಾರಿ ಕಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ. 2021–22ನೇ ಸಾಲಿನ ಎರಡು ವರ್ಷಗಳ ಅವಧಿಗೆ ಎಂಟನೇ ಬಾರಿ ಏಷ್ಯಾ ಪೆಸಿಫಿಕ್‌ ವಲಯದ ರಾಷ್ಟ್ರಗಳನ್ನು ಪ್ರತಿನಿಧಿಸುವ ಅವಕಾಶ ಈಗ ಲಭಿಸಿದೆ.

ಭಾರತದೊಂದಿಗೆ ಮೆಕ್ಸಿಕೊ, ನಾರ್ವೆ ಮತ್ತು ಐರ್ಲೆಂಡ್‌ ರಾಷ್ಟ್ರಗಳು ಈ ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳಾಗಿ ಆಯ್ಕೆಯಾಗಿವೆ. ಆಫ್ರಿಕಾ ವಲಯದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಗಳಾಗಿದ್ದ ಕೀನ್ಯಾ ಮತ್ತು ಜಿಬೋಟಿ ರಾಷ್ಟ್ರಗಳ ಪೈಕಿ ಯಾವುದಕ್ಕೂ ನಿಗದಿತ ಪ್ರಮಾಣದ ಮತ ಲಭಿಸಿಲ್ಲ. ಈ ರಾಷ್ಟ್ರಗಳು ಮತ್ತೊಂದು ಸುತ್ತಿನ ಚುನಾವಣೆ ಎದುರಿಸಬೇಕಿದೆ. ಈ ಚುನಾವಣೆಯಲ್ಲಿ ಭಾರತದ ಗೆಲುವು ನಿರೀಕ್ಷಿತವೇ ಆಗಿತ್ತು. ನೆರೆಯ ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳು ಭಾರತದ ಉಮೇದುವಾರಿಕೆಯನ್ನು ವಿರೋಧಿಸಿರಲಿಲ್ಲ. ಏಷ್ಯಾ ಪೆಸಿಫಿಕ್‌ ವಲಯದಿಂದ ಚುನಾವಣಾ ಕಣದಲ್ಲಿರಲು ಬಯಸಿದ್ದ ಅಫ್ಗಾನಿಸ್ತಾನವು ಭಾರತದ ಕೋರಿಕೆಯನ್ನು ಪರಿಗಣಿಸಿ ಸ್ಪರ್ಧೆಯಿಂದ ಹೊರಗುಳಿಯಿತು. 55 ರಾಷ್ಟ್ರಗಳನ್ನು ಹೊಂದಿರುವ ಏಷ್ಯಾ ಪೆಸಿಫಿಕ್‌ ವಲಯದಿಂದ ಭಾರತ ಮಾತ್ರ ಚುನಾವಣಾ ಕಣದಲ್ಲಿ ಉಳಿದಿತ್ತು.

ಬಹುಪಕ್ಷೀಯವಾದ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಬಲಪಡಿಸುವ ಕುರಿತು ಭಾರತ ಆರಂಭಿಸಿದ ಚರ್ಚೆಗೆ ಚುನಾವಣೆಯಲ್ಲಿ ಬೆಂಬಲ ವ್ಯಕ್ತವಾಗಿದೆ. ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವುದು, ಅಂತರರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧ ಭಾರತದ ನೇತೃತ್ವದಲ್ಲಿ ಅಧಿವೇಶನ ನಡೆಸುವುದು, ವಿಶ್ವಸಂಸ್ಥೆಯ ಸುಧಾರಣೆ ಮತ್ತು ಭದ್ರತಾ ಮಂಡಳಿಯ ವಿಸ್ತರಣೆಯ ಬೇಡಿಕೆಗಳೊಂದಿಗೆ ಭಾರತವು ಈ ಚುನಾವಣೆಯ ಹೊಸ್ತಿಲಲ್ಲೇ ಪ್ರಚಾರ ಅಭಿಯಾನವೊಂದನ್ನು ನಡೆಸಿತ್ತು. ಅದು ಈ ಚುನಾವಣೆಯಲ್ಲಿ ಫಲ ನೀಡಿದೆ.

ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ಸ್ಥಾನ ಪಡೆಯಲು ನಿರಂತರ ಪ್ರಯತ್ನ ನಡೆಸಿರುವ ಭಾರತಕ್ಕೆ ಈಗ ಮತ್ತೊಂದು ಸುವರ್ಣ ಅವಕಾಶ ಲಭಿಸಿದೆ. ಕಾಯಂ ಸದಸ್ಯ ಸ್ಥಾನ ಹೊಂದಿರುವ ಚೀನಾ, ಫ್ರಾನ್ಸ್‌, ರಷ್ಯಾ, ಅಮೆರಿಕ ಮತ್ತು ಬ್ರಿಟನ್‌ ರಾಷ್ಟ್ರಗಳು ಮಂಡಳಿಯ ವಿಸ್ತರಣೆ ಮತ್ತು ವಿಶ್ವಸಂಸ್ಥೆಯನ್ನು ಮತ್ತಷ್ಟು ಪ್ರಜಾತಾಂತ್ರಿಕಗೊಳಿಸುವ ಪ್ರಯತ್ನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈಗ ಎರಡು ವರ್ಷಗಳ ಸದಸ್ಯತ್ವದ ಅವಧಿಯಲ್ಲಿ ಭಾರತವು ತನ್ನ ಬೇಡಿಕೆಗಳನ್ನು ಚರ್ಚೆಯ ಮುನ್ನೆಲೆಗೆ ತಂದು, ಅವುಗಳ ಸಾಕಾರಕ್ಕೆ ಬಲವಾದ ಪ್ರಯತ್ನ ಮಾಡಬೇಕಿದೆ. ಈ ಹಿಂದಿನ ಅವಧಿಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಮುಖ ವಿಚಾರಗಳ ಕುರಿತು ನಿರ್ಣಯ ತೆಗೆದುಕೊಂಡ ಸಂದರ್ಭಗಳಲ್ಲಿ ಯಾವ ರಾಷ್ಟ್ರಕ್ಕೂ ಅಸಮಾಧಾನ ಆಗದಂತೆ ನಡೆದುಕೊಳ್ಳಬೇಕೆಂಬ ಉದ್ದೇಶದಿಂದ ಭಾರತವು ಮತದಾನಕ್ಕೆ ಗೈರುಹಾಜರಾಗಿದ್ದೇ ಹೆಚ್ಚು.

ಈ ಅವಧಿಯಲ್ಲಿ ಅಂತಹ ಧೋರಣೆಯನ್ನು ಕೈಬಿಡಬೇಕು. ಅಂತಹ ಸಂದರ್ಭಗಳು ಎದುರಾದಾಗ ಬೇಲಿಯ ಮೇಲೆ ಕುಳಿತುಕೊಳ್ಳುವಂತಹ ಧೋರಣೆಯನ್ನು ಕೈಬಿಟ್ಟು, ಧೈರ್ಯ ಮತ್ತು ನ್ಯಾಯಸಮ್ಮತ ನಿಲುವು ಪ್ರದರ್ಶಿಸಬೇಕಿದೆ. ತಾತ್ವಿಕವಾದ ನಿಲುವುಗಳನ್ನು ಕೈಗೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಹಾಗೂ ನ್ಯಾಯವನ್ನು ಕಾಪಾಡುವುದಕ್ಕೆ ರಾಷ್ಟ್ರವು ಬದ್ಧತೆ ವ್ಯಕ್ತಪಡಿಸಬೇಕಿದೆ. ಎಲ್ಲ ಕಾಯಂ ಮತ್ತು ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆಯ ದಿಸೆಯಲ್ಲಿ ಸಹಮತ ಮೂಡಿಸುವಲ್ಲಿ ಯಶಸ್ವಿಯಾಗಬೇಕು. ನೆರೆಯ ರಾಷ್ಟ್ರಗಳೊಂದಿಗಿನ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಭದ್ರತಾ ಮಂಡಳಿಯ ಸದಸ್ಯ ಸ್ಥಾನದಲ್ಲಿ ಇರುವಾಗಲೇ ಭಾರತವು ಪ್ರಬಲವಾದ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುವುದು ಕೂಡ ಮುಖ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು