ಮಂಗಳವಾರ, ಮಾರ್ಚ್ 2, 2021
29 °C

ದೇಶದ್ರೋಹ ಆರೋಪಿಸುವ ಕರಾಳ ಕಾನೂನು ರದ್ದುಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೇಶದ್ರೋಹ ಆರೋಪಿಸುವ ಕಾನೂನಿನ ದುರ್ಬಳಕೆ ಕುರಿತಂತಹ ಚರ್ಚೆಗೆ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ವಸಾಹತುಶಾಹಿ ಕಾಲದ ಈ ಕಾನೂನನ್ನು ಮರು ಪರಿಶೀಲಿಸಬೇಕೆಂದು ಕಳೆದ ವಾರವಷ್ಟೇ ಅವಧಿ ಪೂರೈಸಿದ ಭಾರತ ಕಾನೂನು ಆಯೋಗ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. ದೇಶದ್ರೋಹ ಕಾನೂನನ್ನು 10 ವರ್ಷಗಳ ಹಿಂದೆಯೇ ಬ್ರಿಟನ್ ರದ್ದುಮಾಡಿದೆ. ಇಂತಹ ಕರಾಳ ಕಾನೂನು ಹೊಂದಿದ ದೇಶ ಎಂದೆನಿಸಿಕೊಳ್ಳಲು ತಾನು ಬಯಸುವುದಿಲ್ಲ ಎಂದು ಬ್ರಿಟನ್‍ ಆಗ ಹೇಳಿತ್ತು.

ಆದರೆ ಬ್ರಿಟಿಷರು ರೂಪಿಸಿದ ಕಾನೂನು ನಮ್ಮಲ್ಲಿನ್ನೂ ಚಾಲ್ತಿಯಲ್ಲಿದೆ ಎಂಬುದು ವಿಪರ್ಯಾಸ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ದಮನ ಮಾಡಲು ಸಾಧನವಾಗಿ ಬ್ರಿಟಿಷರು ಬಳಸಿಕೊಂಡಿದ್ದ ಈ ಕರಾಳ ಕಾನೂನು ಈ ಕಾಲದಲ್ಲಿ ನಮಗೆ ಬೇಕೇ ಎಂಬಂತಹ ಪ್ರಶ್ನೆಯನ್ನು ಕಾನೂನು ಆಯೋಗ ಕೇಳಿರುವುದು ಅತ್ಯಂತ ಪ್ರಸ್ತುತ. ಆಡಳಿತದಲ್ಲಿರುವ ಸರ್ಕಾರಕ್ಕೆ ಪಥ್ಯವಾಗದ ವಿಚಾರವವನ್ನು ಹೇಳಿದರೆ ಅದಕ್ಕೆ ದೇಶದ್ರೋಹ ಆರೋಪವನ್ನು ಹೊರಿಸಲಾಗದು. ಹೀಗಾಗಿ, 1860ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅಡಿ ಬರುವ ‘ದೇಶದ್ರೋಹ’ ಅಪರಾಧದ ಮರುವ್ಯಾಖ್ಯಾನಕ್ಕೆ ಕಾನೂನು ಆಯೋಗ ಕರೆ ನೀಡಿರುವುದು ಸಕಾಲಿಕ. ಈ ಬಗ್ಗೆ ಅಂತಿಮ ಶಿಫಾರಸುಗಳನ್ನು ಮಾಡುವ ಮೊದಲು ಸಾರ್ವಜನಿಕ ಚರ್ಚೆಯಾಗಬೇಕೆಂದು ಆಯೋಗ ಹೇಳಿದೆ. ಸರ್ಕಾರದ ಕಟು ಟೀಕಾಕಾರರನ್ನು ದೇಶ ವಿರೋಧಿಗಳೆಂದು ಚಿತ್ರಿಸಿ ದೇಶದ್ರೋಹದ ಆರೋಪ ಹೊರಿಸುವುದು ಅನೂಚಾನವಾಗಿ ನಡೆದುಬಂದಿದೆ. ಆಳುವ ಪಕ್ಷದ ಸಿದ್ಧಾಂತ ಯಾವುದೇ ಇರಲಿ, ಪ್ರತಿರೋಧವನ್ನು ಹತ್ತಿಕ್ಕುವ ಈ ಪ್ರವೃತ್ತಿ ಎದ್ದು ಕಾಣಿಸುವಂತಹದ್ದು. ಹೀಗಾಗಿಯೇ ದೇಶದ್ರೋಹ ಕಾನೂನಿನ ದುರ್ಬಳಕೆ ಸಾಧ್ಯತೆಯನ್ನು ಅನೇಕ ಪ್ರಕರಣಗಳಲ್ಲಿ ನ್ಯಾಯಾಂಗ ಪ್ರಸ್ತಾಪಿಸಿದೆ.

ರಾಜಕೀಯ ಪ್ರತಿರೋಧ ಅಥವಾ ಪರ್ಯಾಯ ರಾಜಕೀಯ ತತ್ವದ ಪ್ರತಿಪಾದನೆಗಳನ್ನು ಹತ್ತಿಕ್ಕಲು ದೇಶದ್ರೋಹ ಕಾನೂನು ದುರ್ಬಳಕೆ ಮಾಡಿರುವುದನ್ನೂ ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯ ಗಮನಿಸಿದೆ. ಹೀಗಿದ್ದೂ ಈ ಕರಾಳ ಕಾನೂನು ಉಳಿದುಕೊಂಡೇ ಬಂದಿರುವುದು ವಿಷಾದನೀಯ. ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಹೇರುವಂತಹದ್ದು ಇದು ಎಂಬುದನ್ನು ಕಾನೂನು ಆಯೋಗ ಈಗ ಮತ್ತೆ ಎತ್ತಿ ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಅಂತರ್ಗತ ಭಾಗ. ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು ಎಂಬುದೂ ನಮಗೆ ನೆನಪಿರಬೇಕು.

ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ಸುರಕ್ಷಾ ಕವಚ ಎಂದು ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್ ಸಹ ಅಭಿಪ್ರಾಯಪಟ್ಟಿದೆ. ಪ್ರಜಾಪ್ರಭುತ್ವ ಸುಸ್ಥಿತಿಯಲ್ಲಿರಲು ಇದು ಅಗತ್ಯ. ರಾಷ್ಟ್ರ ಅಥವಾ ರಾಷ್ಟ್ರದ ಇತಿಹಾಸವನ್ನು ಟೀಕಿಸುವುದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿ ರಕ್ಷಣೆ ಇದೆ ಎಂಬುದನ್ನು ಮನಗಾಣಬೇಕು. ಸರ್ಕಾರದ ಕುರಿತಾಗಿ ರಚನಾತ್ಮಕ ಟೀಕೆಗಳಿಗೆ ಮುಕ್ತ ಮನಸ್ಸು ಹೊಂದದಿದ್ದಲ್ಲಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಯುಗದ ಮಧ್ಯೆ ಯಾವುದೇ ವ್ಯತ್ಯಾಸ ಇಲ್ಲದಂತಾಗುತ್ತದೆ ಎಂದೂ ಕಾನೂನು ಆಯೋಗ ಸ್ಪಷ್ಟವಾಗಿ ಹೇಳಿದೆ.

ಹಿಂಸಾಚಾರ ಹಾಗೂ ಅಕ್ರಮಗಳ ಮೂಲಕ ಸರ್ಕಾರವನ್ನು ಕಿತ್ತೊಗೆಯುವ ಉದ್ದೇಶ ಇದ್ದ ಪ್ರಕರಣ ಗಳಲ್ಲಿ ಮಾತ್ರ ದೇಶದ್ರೋಹದ ಆರೋಪ ಹೊರಿಸಬಹುದು ಎಂಬ ಅಭಿಪ್ರಾಯವೂ ಕಾನೂನು ಆಯೋಗದ ವರದಿಯಲ್ಲಿದೆ. ಆದರೆ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಭಾರತೀಯ ದಂಡ ಸಂಹಿತೆ ಹಾಗೂ ಅಕ್ರಮ ಚಟುವಟಿಕೆ ತಡೆ ಕಾಯ್ದೆಯಲ್ಲಿ ಈಗಾಗಲೇ ಅವಕಾಶಗಳಿವೆ. ಹೀಗಾಗಿ ದೇಶದ್ರೋಹ ಕುರಿತಾದ ಈ ಕಾನೂನು ಅಗತ್ಯವಿಲ್ಲ. ಸೆಕ್ಷನ್
124ಎ ಅನ್ನು ಪೂರ್ಣವಾಗಿ ರದ್ದುಗೊಳಿಸುವುದೇ ಸೂಕ್ತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.