ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಶಕ್ಕೆ ಐಎಲ್‌&ಎಫ್‌ಎಸ್‌’: ಬಿಕ್ಕಟ್ಟು ಶಮನಕ್ಕೆ ಸಕಾಲಿಕ ಕ್ರಮ

Last Updated 2 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ದೀರ್ಘಾವಧಿಯ ಮೂಲಸೌಕರ್ಯ ಯೋಜನೆಗಳಿಗೆ ಸಾಲ ನೀಡುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ (ಐಎಲ್‌ಆ್ಯಂಡ್‌ಎಫ್‌ಎಸ್‌) ಎದುರಿಸುತ್ತಿರುವ ಬಿಕ್ಕಟ್ಟು ಬಗೆಹರಿಸಲು ಸರ್ಕಾರ ಕೊನೆಗೂ ಮಧ್ಯಪ್ರವೇಶ ಮಾಡಿದೆ. ನಿರ್ದೇಶಕ ಮಂಡಳಿ ರದ್ದುಪಡಿಸಿ, ಹೊಸ ನಿರ್ದೇಶಕರನ್ನು ನೇಮಿಸಿದೆ. ಸಾಲ ಮರುಪಾವತಿಸದ ಬಿಕ್ಕಟ್ಟಿಗೆ ಸಿಲುಕಿರುವ ದೈತ್ಯ ಹಣಕಾಸು ಸಂಸ್ಥೆಯಲ್ಲಿನ ವಿದ್ಯಮಾನಗಳನ್ನು ಸರಿಪಡಿಸುವ ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಕಂಡು ಬಂದಿರುವ ತಲ್ಲಣ ದೂರ ಮಾಡುವಂತಹ ದಿಟ್ಟ ನಿರ್ಧಾರವಿದು. ಇದರಿಂದ ಹಣ, ಷೇರು ಮತ್ತು ಸಾಲದ ಮಾರುಕಟ್ಟೆಯಲ್ಲಿ ಕವಿದಿದ್ದ ಆತಂಕದ ಕಾರ್ಮೋಡ ದೂರವಾಗುವ ನಿರೀಕ್ಷೆ ಇದೆ. ಹೂಡಿಕೆದಾರರು ಇಟ್ಟಿದ್ದ ವಿಶ್ವಾಸಕ್ಕೆ ಆಡಳಿತ ಮಂಡಳಿಯು ಎರವಾಗಿತ್ತು. ಹೀಗಾಗಿ ಸರ್ಕಾರದ ಈಗಿನ ನಿಲುವು ಅನಿವಾರ್ಯವೇ ಆಗಿತ್ತು. ಈ ನಿರ್ಧಾರ ಸಕಾಲಿಕವೂ ಆಗಿದೆ. ಮೂಲಸೌಕರ್ಯ ಯೋಜನೆಗಳು ಅನೇಕ ಕಾರಣಗಳಿಗೆ ವಿಳಂಬವಾಗಿರುವುದೇ ಈ ಬಿಕ್ಕಟ್ಟಿಗೆ ಮೂಲ ಕಾರಣ. ಐಎಲ್‌ಆ್ಯಂಡ್‌ಎಫ್‌ಎಸ್‌ನಲ್ಲಿ ಹಣ ಹೂಡಿಕೆ ಮಾಡಿದ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಬರಬೇಕಾದ ಹಣವು ಸಕಾಲದಲ್ಲಿ ಮರಳಿ ಬಂದಿರಲಿಲ್ಲ. ಇದರಿಂದ ಷೇರುಪೇಟೆಯಲ್ಲಿ ಇಂತಹ ಷೇರುಗಳಲ್ಲಿ ಮಾರಾಟ ಒತ್ತಡ ಕಂಡು ಬಂದಿತ್ತು. ಸಂಪತ್ತಿನ ಹೊಣೆಗಾರಿಕೆಯ ಅಸಮತೋಲನದಿಂದಾಗಿ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ರಸ್ತೆ, ವಿದ್ಯುತ್‌, ನೀರು, ಬಂದರು ಮತ್ತಿತರ ಮೂಲಸೌಕರ್ಯ ಯೋಜನೆಗಳಲ್ಲಿನ ಐಎಲ್‌ಆ್ಯಂಡ್‌ಎಫ್‌ಎಸ್‌ ಸಮೂಹದ ಸಂಸ್ಥೆಗಳಲ್ಲಿನ ವ್ಯವಹಾರವು ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಿತ್ತು. ಆಗಸ್ಟ್‌ನಲ್ಲಿಯೇ ಕಂಡು ಬಂದಿದ್ದ ಈ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವವರೆಗೆ ಅವಕಾಶ ಮಾಡಿಕೊಟ್ಟಿರುವುದೂ ಪ್ರವರ್ತಕ ಸಂಸ್ಥೆಗಳ ಕರ್ತವ್ಯಲೋಪವಾಗಿದೆ. ಈ ಎಲ್ಲ ಕಾರಣಕ್ಕೆ ಗಂಭೀರ ಸ್ವರೂಪದ ವಂಚನೆಗಳ ಬಗ್ಗೆ ಈಗ ತನಿಖೆಗೆ ಆದೇಶ ನಿಡಲಾಗಿದೆ. ಇಷ್ಟು ದೀರ್ಘ ಕಾಲ ಸಾಲದ ಹೊರೆ ಬೆಳೆಯುತ್ತಾ ಹೋದದ್ದು ಹೇಗೆ ಎಂಬುದು ತನಿಖೆಯಲ್ಲಿ ಪತ್ತೆಯಾಗಬೇಕು.

ಷೇರುಪೇಟೆಯಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಿರುವ ಈ ಬಿಕ್ಕಟ್ಟು ಆರ್‌ಬಿಐ ಮತ್ತು ಸೆಬಿಯ ಗಮನಕ್ಕೆ ಬಾರದಿರುವುದೂ ಅಚ್ಚರಿದಾಯಕವಾಗಿದೆ. ಅತಿದೊಡ್ಡ ಹೂಡಿಕೆ ಸಂಸ್ಥೆಯಾಗಿರುವ ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಮತ್ತು ಇತರ ಹೂಡಿಕೆ ಸಂಸ್ಥೆಗಳು ಬಿಕ್ಕಟ್ಟನ್ನು ಈ ಮೊದಲೇ ಪತ್ತೆ ಹಚ್ಚದಿರುವುದು ಅವುಗಳ ವೈಫಲ್ಯಕ್ಕೂ ಕನ್ನಡಿ ಹಿಡಿಯುತ್ತದೆ. ಐಎಲ್‌ಆ್ಯಂಡ್‌ಎಫ್‌ಎಸ್‌ ಹೋಲ್ಡಿಂಗ್‌ ಕಂಪನಿಯ 169 ಅಂಗಸಂಸ್ಥೆಗಳಲ್ಲಿನ ವಿದ್ಯಮಾನಗಳನ್ನೂ ತಪಾಸಣೆಗೆ ಗುರಿಪಡಿಸಬೇಕಾಗಿದೆ. ದೀರ್ಘಾವಧಿಯ ಭಾರಿ ಮೊತ್ತದ ಮೂಲ ಸೌಕರ್ಯ ಯೋಜನೆಗಳಿಗೆ ಹಣಕಾಸು ನೆರವು ಕಲ್ಪಿಸುತ್ತಿರುವ ಐಎಲ್‌ಆ್ಯಂಡ್‌ಎಫ್‌ಎಸ್‌ ಸಮೂಹವು ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದರೂ, ಷೇರುದಾರರಿಗೆ ಲಾಭಾಂಶ ವಿತರಣೆಗೆ ಮುಂದಾಗಿತ್ತು. ಉನ್ನತ ಹುದ್ದೆಯಲ್ಲಿ ಇದ್ದವರಿಗೆ ಉದಾರವಾಗಿ ಭತ್ಯೆಗಳನ್ನು ಮುಂದುವರೆಸಿತ್ತು. ವಾಸ್ತವಾಂಶಗಳನ್ನು ತಿರುಚಿ ಸಂಸ್ಥೆಯಲ್ಲಿನ ಬಿಕ್ಕಟ್ಟನ್ನು ಜಾಣತನದಿಂದ ಮರೆಮಾಚಲಾಗಿತ್ತು. ಸಂಸ್ಥೆಯ ಒಟ್ಟಾರೆ ಸಂಪತ್ತಿನ ಮೌಲ್ಯ ₹ 1.15 ಲಕ್ಷ ಕೋಟಿಗಳಷ್ಟಿದೆ. ಸಾಲಗಳನ್ನು ಸಮರ್ಥವಾಗಿ ನಿಭಾಯಿಸದ ಕಾರಣಕ್ಕೆ ಒಟ್ಟಾರೆ ಸಾಲದ ಹೊರೆಯು ₹ 91 ಸಾವಿರ ಕೋಟಿಗಳಿಗೆ ತಲುಪಿದೆ. ಈಗ, ಇದು ಇನ್ನಷ್ಟು ಸಾಲದ ಸುಳಿಗೆ ಸಿಲುಕದಂತೆ ತಡೆಯಲು ಸರ್ಕಾರ ಹಣಕಾಸಿನ ನೆರವು ಒದಗಿಸಬೇಕಾಗಿದೆ. ಮೂಲಸೌಕರ್ಯ ಯೋಜನೆಗಳು ಅಬಾಧಿತವಾಗಿ ಮುಂದುವರೆಯುವಂತೆ ಮುತುವರ್ಜಿ ವಹಿಸಬೇಕಾಗಿದೆ. 31 ವರ್ಷಗಳಷ್ಟು ಹಳೆಯ ಐಎಲ್‌ಆ್ಯಂಡ್‌ಎಫ್‌ಎಸ್‌ಗೆ ಈ ಬಿಕ್ಕಟ್ಟಿನ ಗಳಿಗೆಯಲ್ಲಿ ನೆರವಿನ ಹಸ್ತ ಚಾಚಬೇಕಾಗಿರುವುದು ಸರಿ. ಹಿಂದಿನ ನಿರ್ದೇಶಕ ಮಂಡಳಿಯ ವೈಫಲ್ಯಗಳಿಗೆ ಎಲ್‌ಐಸಿಯಲ್ಲಿನ ಸಾರ್ವಜನಿಕರ ಹಣದ ದುರ್ಬಳಕೆಯಾಗದಂತೆಯೂ ಎಚ್ಚರವಹಿಸಬೇಕು. ಷೇರು, ಹಣ ಮತ್ತು ಸಾಲದ ಮಾರುಕಟ್ಟೆಯಲ್ಲಿ ಮೂಡಿರುವ ಆತಂಕವನ್ನು ಆದ್ಯತೆ ಮೇರೆಗೆ ದೂರ ಮಾಡಬೇಕಾಗಿದೆ. ಕಾರ್ಪೊರೇಟ್‌ ಆಡಳಿತ ನಿರ್ವಹಣೆಯ ವೈಫಲ್ಯದ ಮತ್ತು ಇತರ ಬಗೆಯ ಅವ್ಯವಹಾರಗಳ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಹಣಕಾಸು ಪೇಟೆಯಲ್ಲಿ ದೂರಗಾಮಿ ಪರಿಣಾಮ ಬೀರುವ ಇಂತಹ ವೈಫಲ್ಯಗಳು ಮತ್ತೆ ಮರುಕಳಿಸದಂತೆ ನಿಗಾ ಹೆಚ್ಚಿಸುವುದೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT