ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನದಲ್ಲಿ ಕೃಪಾಂಕ ಕುರಿತು ನಿರ್ಧಾರ: ಶಿಖಾ

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದ್ವಿತೀಯ ಪಿಯು ಪರೀಕ್ಷೆಯ ಭೌತ ವಿಜ್ಞಾನ ಮತ್ತು ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯಲ್ಲಿನ ಕೆಲ ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕೋ, ಬೇಡವೋ ಎಂಬ ಬಗ್ಗೆ ಎರಡು ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ತಿಳಿಸಿದರು.

ಈ ಎರಡು ವಿಷಯಗಳೂ ಸೇರಿದಂತೆ ಒಟ್ಟಾರೆ 34 ವಿಷಯಗಳ ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಸೋಮವಾರದವರೆಗೆ 137 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಈ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿ ನೀಡುವ ಶಿಫಾರಸನ್ನು ಆಧರಿಸಿ ಕೃಪಾಂಕದ ಕುರಿತು ಕ್ರಮ
ತೆಗೆದುಕೊಳ್ಳಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಶ್ನೆ ಪತ್ರಿಕೆಯಲ್ಲಿ  ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಅಸಂಗತ ಪ್ರಶ್ನೆಗಳು ಮತ್ತು ಎರಡು, ಮೂರು ಅರ್ಥಗಳನ್ನು ನೀಡುವ  ಪ್ರಶ್ನೆಗಳು ಬಂದ ಸಂದರ್ಭದಲ್ಲಿ ಕೃಪಾಂಕ ನೀಡಲು ನಿಯಮದಲ್ಲಿ ಅವಕಾಶ ಇದೆ. ವಿದ್ಯಾರ್ಥಿಗಳು ಸಲ್ಲಿಸಿರುವ ಆಕ್ಷೇಪಣೆಗಳು ಇವುಗಳ ವ್ಯಾಪ್ತಿಗೆ ಬರುತ್ತವೆಯಾ, ಇಲ್ಲವಾ ಎಂಬುದನ್ನು ವಿಷಯ ತಜ್ಞರು ಪರಿಶೀಲಿಸುತ್ತಾರೆ ಎಂದು ಅವರು ಹೇಳಿದರು.

‘ಆಕ್ಷೇಪಣೆಗಳನ್ನು ಇಲಾಖೆಯ ವಿಷಯ ತಜ್ಞರ ಸಮಿತಿ ಮೊದಲಿಗೆ ಪರಿಶೀಲಿಸಿ, ಅಭಿಪ್ರಾಯದಿಂದ ಕೂಡಿದ ಶಿಫಾರಸು ಮಾಡುತ್ತದೆ. ಬಳಿಕ ಈ ಕುರಿತು ಸ್ವತಂತ್ರ ಸಂಸ್ಥೆಯ (ಬೆಂಗಳೂರು ವಿಶ್ವವಿದ್ಯಾಲಯದ ಅಥವಾ ಕೇಂದ್ರೀಯ ವಿದ್ಯಾಲಯ ಸಂಘಟನೆಯ) ವಿಷಯ ತಜ್ಞರ ಅಭಿಪ್ರಾಯವನ್ನು ಪಡೆಯಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಭೌತ ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯದ ಪ್ರಶ್ನೆ ಪತ್ರಿಕೆಯ ಆಕ್ಷೇಪಣೆಗಳಿಗೆ ಇಲಾಖೆಯ ವಿಷಯ ತಜ್ಞರ ಸಮಿತಿ ಈಗಾಗಲೇ ವರದಿ ನೀಡಿದೆ. ಈ ಕುರಿತು ಅಭಿಪ್ರಾಯ ಮತ್ತು ಶಿಫಾರಸು ನೀಡುವಂತೆ ಕೋರಿ ಸ್ವತಂತ್ರ ಸಂಸ್ಥೆಯ ತಜ್ಞರನ್ನು ಕೋರಲಾಗಿದೆ. ಎರಡು ದಿನದಲ್ಲಿ ಈ ವರದಿ ಬರಲಿದೆ’ ಎಂದು ಶಿಖಾ ತಿಳಿಸಿದರು.

ಭೌತ ವಿಜ್ಞಾನ ವಿಷಯದ ಪತ್ರಿಕೆಯಲ್ಲಿ ಮೂರು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿದ್ಯಾರ್ಥಿ
ಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಇಂಗ್ಲಿಷ್ ವಿಷಯದ ಪತ್ರಿಕೆಯಲ್ಲಿ 30ಕ್ಕೂ ಹೆಚ್ಚು ಪ್ರಶ್ನೆಗಳು ವ್ಯಾಕರಣ ದೋಷದಿಂದ ಕೂಡಿವೆ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT