ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣ:ಅಪಬಳಕೆಗೆ ಬೇಕಿದೆ ಕಡಿವಾಣ

Last Updated 3 ಜುಲೈ 2018, 20:14 IST
ಅಕ್ಷರ ಗಾತ್ರ

ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರು ಟ್ರೋಲ್‌ಗೆ ಒಳಗಾಗಿರುವ ವಿದ್ಯಮಾನ ರಾಜಕೀಯ ಕಾರ್ಯಸೂಚಿ ಪ್ರೇರಿತವಾದದ್ದು. ಕೋಮುದ್ವೇಷದ ಗುಂಪುಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಬಲ್ಯಕ್ಕೆ ಬಂದಿರುವುದಕ್ಕೆ ಉದಾಹರಣೆಯಂತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಭಾವಿಸಲಾಗಿರುವ ಸಾಮಾಜಿಕ ಜಾಲತಾಣಗಳು ಪ್ರಜಾಸತ್ತೆಯ ಮೂಲ ಆಶಯಗಳಿಗೆ ಸವಾಲಾಗಿ ಪರಿಣಮಿಸುತ್ತಿರುವುದು ಆತಂಕ ಹುಟ್ಟಿಸುವ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಾಗೂ ಮಾನಸಿಕ ಹಿಂಸಾಚಾರ ಉಂಟುಮಾಡುವ ನಿಟ್ಟಿನಲ್ಲಿ ಒಂದು ಗುಂಪು ಅಂತರ್ಜಾಲದಲ್ಲಿ ಸಕ್ರಿಯವಾಗಿದೆ. ಅಂತರ್‌ ಧರ್ಮೀಯ ದಂಪತಿಗೆ ಪಾಸ್‌ಪೋರ್ಟ್‌ ಪಡೆಯಲು ನೆರವಾದ ಘಟನೆಯ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್‌ ಅವರು ಪ್ರತಿರೋಧ ಎದುರಿಸುತ್ತಿರುವುದು ಸಾಮಾಜಿಕ ಪರಿಸರ ಕಲುಷಿತಗೊಂಡಿರುವುದನ್ನು ಸೂಚಿಸುವಂತಿದೆ. ಲಖನೌನ ಪಾಸ್‌ಪೋರ್ಟ್‌ ಸೇವಾಕೇಂದ್ರದಲ್ಲಿ ಅಂತರ್‌ ಧರ್ಮೀಯ ದಂಪತಿ ಅವಮಾನ ಎದುರಿಸಿದ್ದರು. ವಿಕಾಸ್‌ ಮಿಶ್ರಾ ಎನ್ನುವ ಅಧಿಕಾರಿ ತಮ್ಮನ್ನು ಅವಮಾನಕರವಾಗಿ ನಡೆಸಿಕೊಂಡಿದ್ದಾರೆ ಎಂದು ದಂಪತಿ ಆರೋಪಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ವರ್ಗ ಮಾಡಿ, ದಂಪತಿಗೆ ನೆರವಾಗಿರುವ ಸಚಿವರ ನಡವಳಿಕೆಯಲ್ಲಿ ಒಂದು ಗುಂಪಿಗೆ ಮುಸ್ಲಿಂ ಪ್ರೀತಿ ಕಾಣಿಸಿದೆ. ‘ಇಸ್ಲಾಮಿಕ್‌ ಕಿಡ್ನಿ’ ಪಡೆದುದರ ಫಲ ಇದೆಂದು ಸಚಿವೆಯನ್ನು ಹೀಯಾಳಿಸಲಾಗಿದೆ. ಸುಷ್ಮಾರ ವಿರುದ್ಧ ಟ್ರೋಲಿಗರು ಮುಗಿಬಿದ್ದಿರುವುದು, ಜಾಲತಾಣಗಳಲ್ಲಿ ತೊಡಗಿಕೊಂಡಿರುವ ಯುವ ತಲೆಮಾರಿನಲ್ಲಿ ಅಸಹಿಷ್ಣುತೆ ಮನೋಭಾವ ಬಲವಾಗಿದೆ ಎನ್ನುವ ಭಾವನೆಯನ್ನು ಮೂಡಿಸುವಂತಿದೆ.

‘ನನ್ನ ವಿರುದ್ಧ ಮಾಡುತ್ತಿರುವಂತಹ ಟ್ವೀಟ್‌ಗಳನ್ನು ನೀವು ಮೆಚ್ಚುವಿರಾ?’ ಎಂದು ಸುಷ್ಮಾ ಅವರು ಟ್ವಿಟರ್‌ನಲ್ಲಿ ಕೇಳಿದ ಜನಾಭಿಪ್ರಾಯಕ್ಕೆ ಶೇ 43 ಮಂದಿ ‘ಹೌದು’ ಎಂದು ಉತ್ತರಿಸಿರುವುದು ಈ ಗುಂಪಿನ ವ್ಯಾಪಕತೆಯನ್ನು ಸೂಚಿಸುವಂತಿದೆ. ಕೇಂದ್ರ ಸಚಿವರು ಇಂತಹ ಆಕ್ರೋಶಕ್ಕೆ ಗುರಿಯಾಗುವುದಾದರೆ, ಜನಸಾಮಾನ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸುರಕ್ಷಿತವಾಗಿ ಉಳಿಯುವುದು ಹೇಗೆ ಸಾಧ್ಯ? ಅಭಿಪ್ರಾಯಭೇದ ಎನ್ನುವುದು ಈಗ ಚರ್ಚೆಯ ವಿಷಯವಾಗಿಯಷ್ಟೇ ಉಳಿದಿಲ್ಲ. ಅದು ವ್ಯಕ್ತಿಗತ ಟೀಕೆ ಹಾಗೂ ಮಾನಸಿಕ ಹಲ್ಲೆಯ ರೂಪದಲ್ಲೂ ವ್ಯಕ್ತಗೊಳ್ಳುತ್ತಿದೆ. ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರ 10 ವರ್ಷದ ಪುತ್ರಿಯ ಮೇಲೆ ಅತ್ಯಾಚಾರದ ಬೆದರಿಕೆ ಒಡ್ಡಲಾಗಿದೆ. ದೇವರುಗಳ ಚಿತ್ರಗಳನ್ನು ಪ್ರೊಫೈಲ್‌ಗಳಲ್ಲಿ ಹಾಕಿಕೊಂಡಿರುವ ವ್ಯಕ್ತಿಗಳು ಅತ್ಯಾಚಾರ, ಕೊಲೆಯ ಬೆದರಿಕೆ ಹಾಕುವ ಘಟನೆಗಳನ್ನು ನೋಡಿದರೆ ಪ್ರೇಮ–ಸೌಹಾರ್ದವನ್ನು ಸಾಧಿಸಬೇಕಾಗಿದ್ದ ಧರ್ಮಗಳನ್ನು ದ್ವೇಷ–ಹಿಂಸೆಗೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ಪಡೆದುಕೊಂಡಿರುವ ಸ್ವರೂಪ ಸಾಮಾಜಿಕ ಸ್ವಾಸ್ಥ್ಯವನ್ನು ಗಾಸಿಗೊಳಿಸುವಂತಹದ್ದು. ತಮ್ಮ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅಂತರ್ಜಾಲ ತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಬಿಜೆಪಿ, ಈಗ ತಮ್ಮ ಪಕ್ಷದ ನಾಯಕಿಯೇ ಟ್ರೋಲ್‌ಗೊಳಗಾಗಿರುವ ಸಂದರ್ಭದಲ್ಲಿ ತಾಳಿರುವ ಮೌನ ಮಾರ್ಮಿಕವಾಗಿದೆ. ಬಿಜೆಪಿ ಮಾತ್ರವಲ್ಲ, ಎಲ್ಲ ರಾಜಕೀಯ ಪಕ್ಷಗಳೂ ಎದುರಾಳಿ ಪಾಳೆಯದವರನ್ನು ಹೀಗಳೆಯಲು ಸಾಮಾಜಿಕ ಜಾಲತಾಣದ ಹುಲಿಸವಾರಿ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಹೀಗೆ ಬಳಕೆಯಾಗುವ ಗುಂಪುಗಳು ಕೊನೆಗೊಮ್ಮೆ ತಮ್ಮನ್ನು ಪೋಷಿಸುತ್ತಿರುವವರ ನಿಯಂತ್ರಣವನ್ನು ಮೀರುತ್ತಿರುವುದೂ ಇದೆ. ಮಾತು–ಅಕ್ಷರಗಳ ಮೂಲಕ ಸಮಾಜದಲ್ಲಿ ಬಿರುಕುಂಟು ಮಾಡುವ ಕೆಲಸದಲ್ಲಿ ಯುವ ತಲೆಮಾರು ತೊಡಗಿರುವುದು ದುರದೃಷ್ಟಕರ. ಇದೆಲ್ಲವೂ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳುವವರನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಲು ಕಟ್ಟುನಿಟ್ಟಾದ ಪ್ರಯತ್ನಗಳನ್ನು ಕೈಗೊಳ್ಳುವುದು ತುರ್ತಾಗಿ ಆಗಬೇಕಾದ ಕಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT