ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಷಣ: ವಸ್ತುಸ್ಥಿತಿ ಮತ್ತು ವೈರುಧ್ಯ

Last Updated 29 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಮಹಾ ಅಧಿವೇಶನದ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಅಭಿವೃದ್ಧಿಯಿಂದ ಹಿಡಿದು ಅಫ್ಗಾನಿಸ್ತಾನದ ಬಿಕ್ಕಟ್ಟಿನವರೆಗೆ ಹಲವು ವಿಷಯಗಳ ಕುರಿತು ಮಾತ ನಾಡಿದ್ದಾರೆ. ವಿಶ್ವಸಂಸ್ಥೆಯ ಪರಿಣಾಮಕಾರಿ ಪಾತ್ರ, ಭಯೋತ್ಪಾದನೆ ನಿಗ್ರಹದ ತುರ್ತಿನ ಬಗ್ಗೆಯೂ ಅವರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಅದೇ ವೇದಿಕೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪದೇ ಪದೇ ಭಾರತದ ಹೆಸರನ್ನು ಉಲ್ಲೇಖಿಸಿದ್ದರೆ, ಮೋದಿ ತಮ್ಮ ಮಾತಿನಲ್ಲಿ ಎಲ್ಲೂ ಪಾಕಿಸ್ತಾನ ಮತ್ತು ಚೀನಾದ ಹೆಸರನ್ನು ಪ್ರಸ್ತಾಪಿಸಲಿಲ್ಲ. ಆದರೆ ಭಯೋತ್ಪಾದಕ ಗುಂಪುಗಳ ಬಗ್ಗೆ ಪಾಕಿಸ್ತಾನ ಮತ್ತು ಚೀನಾ ತಳೆದಿರುವ ಸೌಮ್ಯ ನಿಲುವಿನ ಕುರಿತು ಮೋದಿ ಪ್ರಸ್ತಾಪ ಮಾಡಿದ್ದಾರೆ. ಅಫ್ಗಾನಿಸ್ತಾನದ ಬಿಕ್ಕಟ್ಟಿನಲ್ಲಿ ಈ ಎರಡೂ ದೇಶಗಳಿಗೆ ಸ್ವಂತ ಹಿತಾಸಕ್ತಿಯೇ ಮುಖ್ಯವಾದದ್ದರ ಬಗ್ಗೆ ಮೋದಿ ಕಟುವಾಗಿ ಟೀಕಿಸಿದ್ದಾರೆ. ವಿಶ್ವಸಂಸ್ಥೆಯು ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಬೇಕಿದ್ದರೆ ಅದು ವಿಶ್ವಾಸಾರ್ಹ ಸಂಸ್ಥೆಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಕೋವಿಡ್–19 ವಿಶ್ವದಾದ್ಯಂತ ಸಾಂಕ್ರಾಮಿಕವಾಗಿ ಹಬ್ಬುವ ಮುಂಚೆಯೇ ಅದರ ತಡೆಗೆ ವಿಶ್ವ ಆರೋಗ್ಯ ಸಂಸ್ಥೆಯು ಕ್ಷಿಪ್ರವಾಗಿ ಕ್ರಮ ಕೈಗೊಳ್ಳದ ಕುರಿತು ಹಾಗೂ ಕೋವಿಡ್ ಹುಟ್ಟು ಮತ್ತು ಹರಡುವಿಕೆಗೆ ಚೀನಾವನ್ನು ಹೊಣೆ ಮಾಡದಿರುವುದಕ್ಕೆ ಮೋದಿ ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ತಮಗೆ ಮಾತನಾಡಲು ದೊರೆತ ಅವಕಾಶವನ್ನು ಮೋದಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಾಗಿದ್ದೂ ಪ್ರಧಾನಿ ಮೋದಿ ಮಾಡಿರುವ ಭಾಷಣ ವೈರುಧ್ಯಗಳಿಂದ ಕೂಡಿತ್ತು ಎನ್ನುವುದನ್ನು ನಾವು ಮರೆಮಾಚಲು ಆಗುವುದಿಲ್ಲ. ಉಗ್ರವಾದವನ್ನು ಯಾವ ದೇಶವೂ ಬೆಂಬಲಿಸಬಾರದು ಎನ್ನುವ ಬಗ್ಗೆ ಎರಡು ಮಾತಿಲ್ಲ. ಆದರೆ ಪಾಕಿಸ್ತಾನವು ಉಗ್ರರಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ಮೋದಿ, ಮತಾಂಧತೆ ವಿಚಾರದಲ್ಲಿ ತಮ್ಮ ದೇಶದಲ್ಲಿ ತಮ್ಮದೇ ಪಕ್ಷದ ಕೆಲವೊಂದು ನಿಲುವುಗಳ ಬಗ್ಗೆ ಜಾಣಮರೆವು ಪ್ರದರ್ಶಿಸುವುದೇಕೆ? ತಾವು ಪ್ರತಿನಿಧಿ ಸುವ ಪಕ್ಷದ ಮುಖಂಡರು ಮಾತ್ರವಲ್ಲ, ತಮ್ಮ ನೇತೃತ್ವದ ಸರ್ಕಾರದ ಸಚಿವರು, ಸಂಸದರು ಹಾಗೂ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಇರುವ ಕೆಲವು ಅಧಿಕಾರಸ್ಥರೂ ದೇಶದಲ್ಲಿ ಧಾರ್ಮಿಕ ಮತಾಂಧತೆಗೆ ಮತ್ತು ಹಿಂಸೆಗೆ ಪ್ರಚೋದನೆ ನೀಡುತ್ತಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರುವ ಭಾಷಣಗಳನ್ನು ಮಾಡುತ್ತಾ ಅಧಿಕಾರ ಹಿಡಿದಿರುವ ನಾಯಕರ ದೊಡ್ಡ ದಂಡೇಬಿಜೆಪಿಯಲ್ಲಿ ಇದೆ. ಸ್ವದೇಶದಲ್ಲಿ ಉಗ್ರ ಮತಾಂಧತೆಗೆ ಕುಮ್ಮಕ್ಕು ಕೊಡುವ ಸ್ವಪಕ್ಷೀಯರ ಧೋರಣೆಗಳನ್ನು ಮೌನವಾಗಿ ಬೆಂಬಲಿಸುತ್ತಾ, ಅದನ್ನು ತಡೆಯಲು ಗಂಭೀರ ಪ್ರಯತ್ನ ನಡೆಸದೆ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮತಾಂಧತೆಯ ಕುರಿತು ಸುದೀರ್ಘ ಭಾಷಣ ಮಾಡುವುದು ವಿರೋಧಾಭಾಸವೇ ಸರಿ. ತಮ್ಮ ಭಾಷಣದಲ್ಲಿ ಮೋದಿಯವರು ಇನ್ನೂ ಒಂದು ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ‘ವಿಜ್ಞಾನದ ತಳಹದಿಯನ್ನು ಹೊಂದಿರುವ ವಿಚಾರವಾದ ಮತ್ತು ಪ್ರಗತಿಪರ ಚಿಂತನೆಗಳೇ ನಮ್ಮ ಪ್ರಗತಿಗೆ ಮೂಲವಾಗಬೇಕು’ ಎನ್ನುವುದು ಅವರ ಮಾತು. ವಿಶ್ವಸಂಸ್ಥೆಯ ಅಧಿವೇಶನದಲ್ಲಿ ವಿಚಾರವಾದ ಮತ್ತು ವೈಜ್ಞಾನಿಕ ಚಿಂತನೆಗಳ ಮಹತ್ವವನ್ನು ನಮ್ಮ ಪ್ರಧಾನಿ ಒತ್ತಿ ಹೇಳಿದ್ದಾರೆ. ಆದರೆ, ಸ್ವದೇಶದಲ್ಲಿ ಅದಕ್ಕೆ ತದ್ವಿರುದ್ಧ ಚಿಂತನೆಗಳನ್ನು ಅವರು ಪ್ರತಿನಿಧಿಸುವ ಪಕ್ಷ ಬೆಂಬಲಿಸುತ್ತಿರುವುದು ಎದ್ದು ಕಾಣುತ್ತಿದೆ. ಭಾರತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುವುದನ್ನು ಹತ್ತಿಕ್ಕುವ ಬಿಜೆಪಿ ನೇತೃತ್ವದ ಸರ್ಕಾರ, ಭಿನ್ನಮತದ ಧ್ವನಿಗಳನ್ನು ಪೊಲೀಸ್ ಬಲದಿಂದ ಅಡಗಿಸುವ ಮತ್ತು ದೇಶದ ಬಹುತ್ವಕ್ಕೆ ಮಾರಕವಾಗುವ ಹಲವು ಕ್ರಮಗಳನ್ನು ಕೈಗೊಂಡಿದೆ. ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಚುನಾವಣಾ ಆಯೋಗ ಮುಂತಾಗಿ ಎಲ್ಲ ಶಾಸನಬದ್ಧ ಸ್ವತಂತ್ರ ಸಂಸ್ಥೆಗಳೂ ಬಿಜೆಪಿ ನೇತೃತ್ವದ ಸರ್ಕಾರದ ಅನಗತ್ಯ ಮತ್ತು ಅತೀವ ಹಸ್ತಕ್ಷೇಪದಿಂದಾಗಿ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯುವ ಅಸ್ತ್ರಗಳಾಗಿ ಬಳಕೆಯಾಗುತ್ತಿರುವುದಕ್ಕೆ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ. ಜಾಗತಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಮಾಡಿದ ಉದಾರವಾದಿ ಭಾಷಣಕ್ಕೂ ಸ್ವದೇಶದಲ್ಲಿ ಅವರ ನೇತೃತ್ವದ ಸರ್ಕಾರದ ಕಾರ್ಯವೈಖರಿಗೂ ಅಜಗಜಾಂತರ ಇದೆ.

ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಮೋದಿಯವರ ಭಾಷಣವು ಅಮೆರಿಕದಲ್ಲಿರುವ ಅವರ ಕೆಲವು ಬೆಂಬಲಿಗರನ್ನು ಖುಷಿಪಡಿಸಿರಬಹುದು. ಆದರೆ ಅಂತರರಾಷ್ಟ್ರೀಯ ಸಮುದಾಯದ ಮೇಲೆ ಈ ಭಾಷಣ ಯಾವುದೇ ಪರಿಣಾಮವನ್ನು ಬೀರಿದಂತೆ ಕಾಣಿಸುತ್ತಿಲ್ಲ. ರಾಜಕೀಯ ಬೆಂಬಲದಿಂದ ಧಾರ್ಮಿಕ ಮತಾಂಧತೆ ವ್ಯಾಪಕವಾಗುತ್ತಿರುವ ಈ ಹೊತ್ತಿನಲ್ಲಿ ಭಾರತದ ಧರ್ಮನಿರಪೇಕ್ಷ ಜನಸಮುದಾಯದ ನಡುವೆಯೂ ಮೋದಿಯವರ ಭಾಷಣ ಯಾವ ಉತ್ಸಾಹವನ್ನೂ ಉಂಟು ಮಾಡಿಲ್ಲ. ಮಾತು ಮತ್ತು ಕೃತಿಯ ನಡುವಣ ಅಂತರ ಮತ್ತು ವೈರುಧ್ಯವನ್ನು ಪ್ರಜಾಪ್ರಭುತ್ವವಾದಿ ಜನಸಮುದಾಯ ಸದಾ ಎಚ್ಚರ ದಿಂದ ಗಮನಿಸುತ್ತದೆ. ಭಾಷಣ ಮಾಡುವಾಗಿನ ಮೋದಿಯವರ ಹಾವಭಾವ, ಕೆಲವು ಶಬ್ದಗಳನ್ನು ಒತ್ತಿ ಹೇಳುವ ಶೈಲಿ, ಗಾಳಿಯಲ್ಲಿ ಕೈಯಾಡಿಸುವ ಮ್ಯಾನರಿಸಂ ಎಲ್ಲವೂ, ಇನ್ನೇನು ಚುನಾವಣೆಗೆ ಸಿದ್ಧವಾಗುತ್ತಿರುವ ಉತ್ತರಪ್ರದೇಶದ ರಾಜಕೀಯ ರ‍್ಯಾಲಿಯಲ್ಲಿ ಅವರು ಭಾಗವಹಿಸಿದ್ದಾರೇನೋ ಎನ್ನುವಂತಿತ್ತು. ವಿಶ್ವಸಂಸ್ಥೆಯಂತಹ ಜಾಗತಿಕ ಘನತೆಯುಳ್ಳ ವೇದಿಕೆಯಲ್ಲಿ ಇಂತಹ ಜನಪ್ರಿಯ ರಾಜಕೀಯ ಸ್ವರೂಪದ ಭಾಷಣಗಳ ಬಗ್ಗೆ ಯಾವ ದೇಶವೂ ಆಸಕ್ತಿ ತೋರಿಸುವುದಿಲ್ಲ. ಹಾಗೆಂದೇ ಅವರು ಭಾಷಣ ಮಾಡುವಾಗ ಸಭಾಂಗಣ ಬಹುತೇಕ ಖಾಲಿಯಾಗಿಯೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT