ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಹೊಸ ಅಧ್ಯಕ್ಷ ಗೋಟಬಯ ಅಪನಂಬಿಕೆಯ ಆತಂಕ ಮೀರಲಿ

Last Updated 18 ನವೆಂಬರ್ 2019, 19:45 IST
ಅಕ್ಷರ ಗಾತ್ರ

ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದ ಅಧ್ಯಕ್ಷರಾಗಿ ಗೋಟಬಯ ರಾಜಪಕ್ಸೆ ಅಧಿಕಾರ ವಹಿಸಿಕೊಂಡಿದ್ದಾರೆ. ಆರ್ಥಿಕ ಪ್ರಗತಿ ಕುಸಿತ, ನಿರುದ್ಯೋಗ ಹೆಚ್ಚಳ ಮತ್ತು ಬರಗಾಲದಂತಹ ಗಂಭೀರ ಸಮಸ್ಯೆಗಳನ್ನು ಆ ದೇಶವು ಎದುರಿಸುತ್ತಿರುವ ಸಂದರ್ಭದಲ್ಲಿ ಗೋಟಬಯ ಅವರು ಅಧ್ಯಕ್ಷರಾಗಿದ್ದಾರೆ.

ಏಪ್ರಿಲ್‌ 21ರಂದು ಈಸ್ಟರ್‌ ಭಾನುವಾರ ಇಲ್ಲಿನ ಮೂರು ಇಗರ್ಜಿಗಳ ಮೇಲೆ ಐಎಸ್‌ ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ 259 ಜನರು ಮೃತಪಟ್ಟ ದುರಂತವನ್ನು ನಾಗರಿಕರು ಇನ್ನೂ ಮರೆತಿಲ್ಲ. ಹಾಗಾಗಿ, ಪ್ರತ್ಯೇಕತಾವಾದದ ಕಾರಣಕ್ಕೆ ಉಂಟಾದ ಹಿಂಸೆಯಿಂದ ದಶಕಗಳ ಕಾಲ ತತ್ತರಿಸಿದ್ದ ಶ್ರೀಲಂಕಾದ ಜನರಲ್ಲಿ ಈಗ ಅಸುರಕ್ಷತೆಯ ಭೀತಿ ಮೂಡಿದೆ.

ಶ್ರೀಲಂಕಾದ ಈಗಿನ ಸ್ಥಿತಿಗೆ, ಹಿಂದೆ ಇದ್ದ ಸರ್ಕಾರ ಬಹುಮಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ. 2015ರಲ್ಲಿ ರನಿಲ್‌ ವಿಕ್ರಮಸಿಂಘೆ ಅವರು ಪ್ರಧಾನಿಯಾಗುವುದಕ್ಕೆ ಮೊದಲು, ಗೋಟಬಯ ಅವರ ಅಣ್ಣ ಮಹಿಂದ ರಾಜಪಕ್ಸೆ ಒಂಬತ್ತು ವರ್ಷ ಅಧ್ಯಕ್ಷರಾಗಿದ್ದರು. ತಮಿಳು ಪ್ರತ್ಯೇಕತಾವಾದಕ್ಕೆ ಹಿಂಸೆಯ ಆಯಾಮ ಕೊಟ್ಟು, ದೇಶದಲ್ಲಿ ರಕ್ತದೋಕುಳಿ ಹರಿಸಿದ್ದ ಎಲ್‌ಟಿಟಿಇಯ ನಿರ್ಮೂಲನೆ ಮಹಿಂದ ಅವರ ಅವಧಿಯಲ್ಲಿ ಆಯಿತು.

ಆಗ, ರಕ್ಷಣಾ ಕಾರ್ಯದರ್ಶಿ ಆಗಿದ್ದವರು ಗೋಟಬಯ. ‘ಎಲ್‌ಟಿಟಿಇಯ ನಿರ್ದಯ ದಮನ’ವನ್ನು ಗೋಟಬಯ ಅವರು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದಾರೆ. ದೇಶವನ್ನು ಸುರಕ್ಷವಾಗಿ ಕಾಯುವುದು ತಮ್ಮಿಂದ ಮಾತ್ರ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಲು ಅವರು ಈ ವಿಚಾರವನ್ನು ಹೇಳಿದ್ದಾರೆ. ಆದರೆ, ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆಯ ಅವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಯಾವ ಅಂಕುಶವೂ ಇರಲಿಲ್ಲ, ಸರ್ಕಾರದ ವಿರುದ್ಧ ಮಾತನಾಡಿದ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ದಿಢೀರ್‌ ನಾಪತ್ತೆಯಾಗಿದ್ದಾರೆ. ಅವರು ಮತ್ತೆಂದೂ ಕಾಣಿಸಿಕೊಂಡಿಲ್ಲ ಎಂದು ಅಂತರರಾಷ್ಟ್ರೀಯ ಸಮುದಾಯ ಆರೋಪಿಸುತ್ತಿದೆ. ಗೋಟಬಯ ವಿರುದ್ಧ ಯುದ್ಧ ಅಪರಾಧದ ಆರೋಪವನ್ನು ಅಮೆರಿಕ ಹೊರಿಸಿದೆ. ರಾಜಪಕ್ಸೆ ಕುಟುಂಬವು ನಿರಂಕುಶವಾಗಿ ವರ್ತಿಸುತ್ತದೆ ಎಂಬ ಆಪಾದನೆಯೂ ಇದೆ.

ಈ ಆರೋಪಗಳನ್ನು ಗೋಟಬಯ ಅಲ್ಲಗಳೆದಿದ್ದಾರೆ. ಆದರೆ, ಚುನಾವಣಾ ಪ್ರಚಾರದಲ್ಲಿ ಬಹುಸಂಖ್ಯಾತ– ಅಲ್ಪಸಂಖ್ಯಾತ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಗೋಟಬಯ ಅವರ ಪಕ್ಷವು ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಮತದಾನದ ವಿಧವು ಅದಕ್ಕೆ ಪುಷ್ಟಿ ನೀಡುವಂತೆಯೂ ಇದೆ. ಶ್ರೀಲಂಕಾದಲ್ಲಿ ಸುಮಾರು ಶೇ 15ರಷ್ಟು ತಮಿಳರು ಮತ್ತು ಶೇ 10ರಷ್ಟು ಮುಸ್ಲಿಮರು ಇದ್ದಾರೆ. ಗೋಟಬಯ ಅವರ ಪ್ರತಿಸ್ಪರ್ಧಿಯಾಗಿದ್ದ ಸಜಿತ್‌ ಪ್ರೇಮದಾಸ ಅವರಿಗೆ, ತಮಿಳರು ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಶ್ರೀಲಂಕಾದ ಉತ್ತರ ಭಾಗದಲ್ಲಿ ಹೆಚ್ಚು ಮತಗಳು ದೊರೆತಿವೆ.

ಸಿಂಹಳೀಯರು ಬಹುಸಂಖ್ಯಾತರಾಗಿರುವ ದಕ್ಷಿಣದಲ್ಲಿ ಗೋಟಬಯ ಭಾರಿ ಬಹುಮತ ಪಡೆದುಕೊಂಡಿದ್ದಾರೆ. ಪ್ರೇಮದಾಸ ಅವರಿಗೆ ಶೇ 42ರಷ್ಟು ಮತ ದೊರೆತಿದೆ. ಇವು ಗೋಟಬಯ ಅವರನ್ನು ಪ್ರತಿರೋಧಿಸಿ ದಾಖಲಾದ ಮತಗಳು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ವಿವಿಧ ಸಮುದಾಯಗಳು ಸಹಬಾಳ್ವೆ ನಡೆಸುವ ದೇಶವೊಂದರಲ್ಲಿ ಜನಾಂಗೀಯತೆ ಆಧಾರದಲ್ಲಿನ ತೀಕ್ಷ್ಣ ವಿಭಜನೆ ಕಳವಳಕಾರಿ.

‘ನನಗೆ ಮತ ಹಾಕಿದವರಿಗೆ ಮಾತ್ರವಲ್ಲ, ನನ್ನ ವಿರುದ್ಧ ಮತ ಹಾಕಿದವರಿಗೂ ನಾನು ಅಧ್ಯಕ್ಷ’ ಎಂದು ಗೋಟಬಯ ಹೇಳಿದ್ದಾರೆ. ಈ ಸ್ಫೂರ್ತಿಯನ್ನು ಅವರು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳುವುದು ದೇಶದ ಭವಿಷ್ಯಕ್ಕೆ ಒಳ್ಳೆಯದು. ರಾಜಪಕ್ಸೆ ಕುಟುಂಬವು ಶ್ರೀಲಂಕಾದ ಅತ್ಯಂತ ಪ್ರಭಾವಿ ರಾಜಕೀಯ ವಂಶ. ಈ ಕುಟುಂಬಕ್ಕೆ ಭಾರತಕ್ಕಿಂತ ಚೀನಾ ಬಗ್ಗೆ ಒಲವು ಹೆಚ್ಚು. ಮಹಿಂದ ಅವರು ಅಧ್ಯಕ್ಷರಾಗಿದ್ದಾಗ ಚೀನಾ ಪರವಾದ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಚೀನಾದ ಜಲಾಂತರ್ಗಾಮಿಗಳು ಶ್ರೀಲಂಕಾದಲ್ಲಿ ಎರಡು ಬಾರಿ ಲಂಗರು ಹಾಕಿದ್ದವು. ತನಗೆ ಈ ಮಾಹಿತಿ ನೀಡಿಲ್ಲ ಎಂದು ಭಾರತ 2014ರಲ್ಲಿ ಎರಡು ಬಾರಿ ಆಕ್ಷೇ‍ಪ

ವ್ಯಕ್ತಪಡಿಸಿತ್ತು. ಶ್ರೀಲಂಕಾದಲ್ಲಿ ಭಾರಿ ಮೊತ್ತದ ಹೂಡಿಕೆಗೂ ಚೀನಾಕ್ಕೆ ಅವಕಾಶ ಕೊಡಲಾಗಿತ್ತು. 2015ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹಿಂದ ರಾಜಪಕ್ಸೆ ಅವರ ಪಕ್ಷದ ವಿರುದ್ಧ ಭಾರತದ ಅಧಿಕಾರಿಯೊಬ್ಬರು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ದಕ್ಷಿಣ ಏಷ್ಯಾದ ಅಧಿಕಾರ ಸಮತೋಲನದ ದೃಷ್ಟಿಯಿಂದ ಭಾರತದ ಜತೆಗೆ ಶ್ರೀಲಂಕಾ ಉತ್ತಮ ಸಂಬಂಧ ಹೊಂದುವುದು ಅಗತ್ಯ. ಶ್ರೀಲಂಕಾದ ವಿವಿಧ ಜನಾಂಗ ಮತ್ತು ಸಮುದಾಯಗಳು ಸಾಮರಸ್ಯದಿಂದ ಬಾಳುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಹೊಸ ಅಧ್ಯಕ್ಷರ ಮೇಲಿದೆ. ವಿಭಜನೆ ರಾಜಕಾರಣವನ್ನು ಮೀರಿ ನಿಲ್ಲುವ ಮುತ್ಸದ್ದಿತನವನ್ನು ಗೋಟಬಯ ಅವರು ಪ್ರದರ್ಶಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT