ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಭೀಕರ ಸ್ಫೋಟ ಉಗ್ರರ ದಮನಕ್ಕೆ ಜಗವೇ ಒಂದಾಗಲಿ

Last Updated 22 ಏಪ್ರಿಲ್ 2019, 19:57 IST
ಅಕ್ಷರ ಗಾತ್ರ

ದ್ವೀಪರಾಷ್ಟ್ರ ಶ್ರೀಲಂಕಾ, ಭಯೋತ್ಪಾದನೆಯ ದೊಡ್ಡ ಹೊಡೆತಕ್ಕೆ ಸಿಲುಕಿದೆ. ಭಾನುವಾರ ಆ ದೇಶದ ಎಂಟು ಕಡೆ ನಡೆದ ಬಾಂಬ್‌ ಸ್ಫೋಟಗಳಲ್ಲಿ 290 ಮಂದಿ ಹತರಾಗಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೂರು ಪ್ರಮುಖ ಚರ್ಚ್‌ಗಳು ಮತ್ತು ಮೂರು ಐಷಾರಾಮಿ ಹೋಟೆಲ್‌ಗಳಲ್ಲಿ ನಡೆದ ಬಾಂಬ್‌ ಸ್ಫೋಟ ಇಡೀ ದೇಶವನ್ನು ತಲ್ಲಣಕ್ಕೆ ಈಡುಮಾಡಿದೆ. ಮೃತಪಟ್ಟವರಲ್ಲಿ ಎಂಟು ಮಂದಿ ಭಾರತೀಯರಿದ್ದು ಅವರಲ್ಲಿ ಏಳು ಮಂದಿ ಕರ್ನಾಟಕದವರು. ಎಂಟು ಮಂದಿ ಬ್ರಿಟಿಷ್ ಪ್ರಜೆಗಳು; ಟರ್ಕಿ, ಪೋರ್ಚುಗಲ್‌ ಮತ್ತು ಅಮೆರಿಕದ ತಲಾ ಒಬ್ಬರು ಮೃತರಲ್ಲಿ ಸೇರಿದ್ದಾರೆ. ಶ್ರೀಲಂಕಾದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ಈ ಭಯೋತ್ಪಾದನಾ ದಾಳಿಯನ್ನು ಜಗತ್ತಿನ ಎಲ್ಲ ದೇಶಗಳೂ ಅತ್ಯುಗ್ರ ಶಬ್ದಗಳಿಂದ ಖಂಡಿಸಿವೆ. ಮನುಷ್ಯತ್ವ ಇರುವ ಯಾರೇ ಆದರೂ ಇಂತಹ ಭೀಕರ ಕೃತ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಿಗ್ಗೆ ಎಂಟೂವರೆ ಹೊತ್ತಿಗೆ ಆರು ಸ್ಫೋಟಗಳು ಸರಣಿಯೋಪಾದಿಯಲ್ಲಿ ನಡೆದಿದ್ದು, ಒಂದು ಗಂಟೆಯ ಬಳಿಕ ಇನ್ನೆರಡು ಸ್ಫೋಟಗಳು ಸಂಭವಿಸಿವೆ. ಕೊಲಂಬೊ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಒಂದು ಬಾಂಬ್‌ ಅನ್ನು ಬಳಿಕ ತಜ್ಞರು ನಿಷ್ಕ್ರಿಯಗೊಳಿಸಿದ್ದಾರೆ. ಸ್ಫೋಟದ ಬಳಿಕ ದೇಶದಾದ್ಯಂತ ತುರ್ತುಪರಿಸ್ಥಿತಿ ಹೇರಲಾಗಿದೆ. ಕ್ರೈಸ್ತರ ಶ್ರದ್ಧಾಭಕ್ತಿಯ ದಿನವಾದ ಈಸ್ಟರ್‌ನಂದು ಅಪಾರ ಸಂಖ್ಯೆಯ ಭಕ್ತಾದಿಗಳು ಸೇರುವ ಸ್ಥಳಗಳಲ್ಲೇ ಈ ಬಾಂಬ್‌ ಸ್ಫೋಟಗಳನ್ನು ಯೋಜಿಸಿದ್ದನ್ನು ನೋಡಿದರೆ, ದೇಶವನ್ನು ಮತ್ತೊಮ್ಮೆ ಅಂತರ್ಯುದ್ಧಕ್ಕೆ ದೂಡುವ ಸಂಚಿನಂತೆ ಭಾಸವಾಗುತ್ತದೆ. ಸ್ಫೋಟದ ತೀವ್ರತೆ ಮತ್ತು ಸಮಯದ ಹೊಂದಾಣಿಕೆಯನ್ನು ಗಮನಿಸಿದರೆ ಇದೊಂದು ವ್ಯವಸ್ಥಿತ ಜಾಲದ ಕೃತ್ಯ ಎನ್ನಬೇಕಾಗುತ್ತದೆ. ಬಹುಸಂಖ್ಯಾತ ಸಿಂಹಳೀಯರು, ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಇತ್ತೀಚಿನ ವರ್ಷಗಳಲ್ಲಿ ಸೌಹಾರ್ದದಿಂದ ಬದುಕುತ್ತಿರುವ ಶ್ರೀಲಂಕಾ, ದೊಡ್ಡ ಮಟ್ಟದಲ್ಲಿ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಮುಖ್ಯವಾಗಿ ದಕ್ಷಿಣ ಭಾರತದಿಂದ ಸಾಕಷ್ಟು ಭಾರತೀಯರು ಈ ದ್ವೀಪರಾಷ್ಟ್ರದ ಪ್ರವಾಸೋದ್ಯಮಕ್ಕೆ ಬಲ ತುಂಬಿದ್ದಾರೆ.

ಸುಮಾರು ಮೂರೂವರೆ ದಶಕಗಳ ಕಾಲ ಬಹುಸಂಖ್ಯಾತ ಸಿಂಹಳೀಯರು ಮತ್ತು ಅಲ್ಪಸಂಖ್ಯಾತ ತಮಿಳರ ನಡುವಣ ಅಂತರ್ಯುದ್ಧವನ್ನು ಎದುರಿಸಿಯೂ ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ಅಂತಃಸ್ಸತ್ವವನ್ನು ಉಳಿಸಿಕೊಂಡ ದೇಶ ಶ್ರೀಲಂಕಾ. ಈ ಅಂತರ್ಯುದ್ಧದ ಅವಧಿಯಲ್ಲಿ ಹಲವು ರಕ್ತಸಿಕ್ತ ಘಟನೆಗಳು ಅಲ್ಲಿ ನಡೆದುಹೋಗಿವೆ. ಆದರೆ ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಶಾಂತಿ ನೆಲೆಸಿದ್ದು, ತಕ್ಕಮಟ್ಟಿಗೆ ಆರ್ಥಿಕ ಪ್ರಗತಿಯನ್ನೂ ಸಾಧಿಸಲಾಗಿದೆ. ಸಿಂಹಳೀಯರು ಮತ್ತು ತಮಿಳರು ಪರಸ್ಪರ ವೈರತ್ವವನ್ನು ಮರೆತು ಮತ್ತೆ ದೇಶ ಕಟ್ಟುವ ಕೆಲಸದಲ್ಲಿ ಒಂದಾಗಿದ್ದರು. ಇತ್ತೀಚೆಗೆ ಬಹುಸಂಖ್ಯಾತ ಬೌದ್ಧಧರ್ಮೀಯರು ಮತ್ತು ಮುಸ್ಲಿಮರ ಮಧ್ಯೆ ಕೆಲವು ಘರ್ಷಣೆಗಳು ವರದಿಯಾಗಿದ್ದರೂ, ಪರಿಸ್ಥಿತಿ ನಿಯಂತ್ರಣದಲ್ಲೇ ಇತ್ತು. ಈಗ ನಡೆದಿರುವ ಸರಣಿ ಬಾಂಬ್‌ ಸ್ಫೋಟದಿಂದಾಗಿ ದೇಶ ಮತ್ತೆ ಅಂತರ್ಯುದ್ಧದತ್ತ ವಾಲದಂತೆ ನೋಡಿಕೊಳ್ಳುವ ಜವಾಬ್ದಾರಿ ಅಲ್ಲಿನ ಎಲ್ಲ ಅಧಿಕಾರಸ್ಥರ ಮೇಲಿದೆ. ಬಾಂಬ್‌ ಸ್ಫೋಟಕ್ಕೆ ಯಾವುದೇ ಉಗ್ರಸಂಘಟನೆ ಹೊಣೆ ಹೊತ್ತುಕೊಂಡಿಲ್ಲವಾದರೂ ಒಂದು ವರ್ಷದಿಂದ ಕೆಲವು ಹಿಂಸಾಚಾರದ ಘಟನೆಗಳಲ್ಲಿ ಒಳಗೊಂಡಿರುವ ನ್ಯಾಷನಲ್‌ ತಬ್ಲೀಗ್‌ ಜಮಾತ್‌ನ ಕೈವಾಡ ಈ ಸ್ಫೋಟಗಳ ಹಿಂದೆ ಇರಬಹುದೆಂದು ಶಂಕಿಸಲಾಗಿದೆ. ಪೊಲೀಸರು 24 ಜನರನ್ನು ಸಂಶಯದ ಮೇಲೆ ಬಂಧಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಮಾರಣಹೋಮಕ್ಕೆ ಯಾರೇ ಕಾರಣರಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದ ಜನರಲ್ಲಿ ಸುರಕ್ಷೆಯ ಭಾವ ತುಂಬುವ ಕೆಲಸ ಶೀಘ್ರ ಆಗಬೇಕಿದೆ. ದೇಶದ ಚರ್ಚ್‌ಗಳ ಮೇಲೆ ಬಾಂಬ್‌ ದಾಳಿ ನಡೆಯುವ ಸಂಭವವಿದೆ ಎಂದು ಹತ್ತು ದಿನಗಳ ಹಿಂದೆಯೇ ಗುಪ್ತಚರ ಇಲಾಖೆ ವರದಿ ನೀಡಿದ್ದರೂ ಅಧಿಕಾರಿಗಳು ತುರ್ತುಕ್ರಮಗಳನ್ನು ಏಕೆ ಕೈಗೊಂಡಿಲ್ಲ ಎನ್ನುವ ಪ್ರಶ್ನೆಯೂ ಇಲ್ಲಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ. ಒಂದು ವರ್ಷದಿಂದ ಶ್ರೀಲಂಕಾದಲ್ಲಿ ರಾಜಕೀಯ ಪಕ್ಷಗಳ ಮಧ್ಯೆ ನಡೆಯುತ್ತಿರುವ ಆಂತರಿಕ ಸಂಘರ್ಷವೂ ಗುಪ್ತಚರ ವರದಿಯ ನಿರ್ಲಕ್ಷ್ಯಕ್ಕೆ ಕಾರಣವಿರಬಹುದು ಎನ್ನಲಾಗುತ್ತಿದೆ. ಏನೇ ಇದ್ದರೂ ಭಯೋತ್ಪಾದನೆಯನ್ನು ಮಟ್ಟ ಹಾಕುವ ಪ್ರಕ್ರಿಯೆಯಲ್ಲಿ ಶ್ರೀಲಂಕಾದ ಜೊತೆಗೆ ಅಂತರರಾಷ್ಟ್ರೀಯ ಸಮುದಾಯ ಹೆಗಲು ಕೊಡಬೇಕಿದೆ. ಭಯೋತ್ಪಾದನೆ ಎನ್ನುವುದು ಇಡೀ ಜಗತ್ತನ್ನೇ ನುಂಗಿ ನೊಣೆಯುವ ಪೆಡಂಭೂತ ಎನ್ನುವುದನ್ನು ಯಾರೂ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT