ಅಪಾಯಕಾರಿ ಬೀದಿನಾಯಿಗಳಿಗೆ ದಯಾಮರಣ ಕಲ್ಪಿಸಬಹುದು ಎನ್ನುವ ಸುಪ್ರೀಂ ಕೋರ್ಟ್ ತೀರ್ಪು, ನಾಯಿಗಳನ್ನು ಮನಬಂದಂತೆ ಕೊಲ್ಲುವ ಪರಿಸ್ಥಿತಿಗೆ ಕಾರಣ ಆಗಬಹುದು.

ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸುವ ಕುರಿತು 2025ರಲ್ಲಿ ನೀಡಿದ್ದ ತನ್ನದೇ ತೀರ್ಪನ್ನು ಸಮರ್ಥಿಸಿಕೊಂಡಿರುವ ಸುಪ್ರೀಂ ಕೋರ್ಟ್, ಆ ತೀರ್ಪಿನ ಮುಂದುವರಿಕೆಯಂತೆ ಆಕ್ರಮಣಕಾರಿ ಸ್ವಭಾವದ ಹಾಗೂ ಸ್ಪಷ್ಟವಾಗಿ ಅಪಾಯಕಾರಿಯಾಗಿ ಕಾಣಿಸುವ ನಾಯಿಗಳಿಗೆ ದಯಾಮರಣ ನೀಡಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ತನ್ನ ತೀರ್ಪಿಗೆ ಕಾರಣವನ್ನಾಗಿ ನೀಡಿದೆ. ಬಸ್ಸು ಹಾಗೂ ರೈಲ್ವೆ ನಿಲ್ದಾಣ, ಆಸ್ಪತ್ರೆ ಮತ್ತು ಹೆದ್ದಾರಿಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿನ ಬೀದಿನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ತೀರ್ಪು ಅಪಾರ ಹೂಡಿಕೆ ಮತ್ತು ನಿರ್ವಹಣೆಯ ಸವಾಲುಗಳನ್ನು ಒಳಗೊಂಡಿದ್ದುದರಿಂದ, ಅದನ್ನು ಜಾರಿಗೊಳಿಸುವುದು ಅವಾಸ್ತವಿಕವೆಂದು ಕಂಡುಬಂದಿತ್ತು. ಲಸಿಕೆ ನೀಡುವಿಕೆ ಮತ್ತು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ನಂತರವೂ ನಾಯಿಗಳನ್ನು ಅವುಗಳ ಮೂಲ ಸ್ಥಳಕ್ಕೆ ತಂದು ಬಿಡಬಾರದು ಎಂದೂ ಸುಪ್ರೀಂ ಕೋರ್ಟ್ನ ಆದೇಶ ಹೇಳಿದೆ. ಆದರೆ, ದೇಶದ ಪೌರಾಡಳಿತ ಸಂಸ್ಥೆಗಳು ಬೀದಿನಾಯಿಗಳನ್ನು ಆಶ್ರಯತಾಣಗಳಲ್ಲಿ ಇರಿಸಿಕೊಂಡು ನಿರ್ವಹಿಸಲು ಅಗತ್ಯವಾದ ಮೂಲ ಸೌಕರ್ಯಗಳನ್ನು ಹೊಂದದಿರುವುದನ್ನು ಗಮನಿಸಬೇಕು.

ಗುಣಪಡಿಸಲು ಸಾಧ್ಯವಾಗದಿರುವಷ್ಟು ಅನಾರೋಗ್ಯ ಹೊಂದಿರುವ, ಕ್ರೋಧೋನ್ಮತ್ತ ಸ್ವಭಾವದ ಹಾಗೂ ಆಕ್ರಮಣಕಾರಿ ವರ್ತನೆ ಸ್ಪಷ್ಟವಾಗಿ ಕಾಣಿಸುವ ನಾಯಿಗಳನ್ನು ದಯಾಮರಣ ಸೇರಿದಂತೆ ಕಾನೂನು ಅನುಮತಿಸುವ ಕ್ರಮಗಳ ಮೂಲಕ ಕೊಲ್ಲಬಹುದಾಗಿದೆ ಎಂದು ಸಂಬಂಧಿಸಿದ ಪ್ರಾಧಿಕಾರಗಳಿಗೆ ಕೋರ್ಟ್ ತಿಳಿಸಿದೆ. ಆದರೆ, ಅರ್ಹ ಪಶುವೈದ್ಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿಯೇ ತೀರ್ಮಾನ ಕೈಗೊಳ್ಳಬೇಕು ಎನ್ನುವ ನ್ಯಾಯಾಲಯದ ನಿಬಂಧನೆ ಪ್ರಾಯೋಗಿಕವಾಗಿ ಪಾಲನೆ ಆಗದಿರುವ ಸಾಧ್ಯತೆಯೇ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಬಳಸಿಕೊಂಡು ಪೌರಾಡಳಿತದ ಸಿಬ್ಬಂದಿಯೇ ನ್ಯಾಯಾಧೀಶರಂತೆ ವರ್ತಿಸುತ್ತ, ಬೀದಿನಾಯಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕೊನೆಗಾಣಿಸುವ ಸಂದರ್ಭ ರೂಪುಗೊಳ್ಳುವ ಅಪಾಯವೂ ಇದೆ. ನಾಯಿಗಳನ್ನು ಕೊಲ್ಲುವುದು ಸುಲಭ ಹಾಗೂ ಕಾನೂನುಸಮ್ಮತ ಎಂದು ಭಾವಿಸುವ ಮನಃಸ್ಥಿತಿಯೂ ಹೆಚ್ಚಾಗಬಹುದು. ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಅಗತ್ಯವಾದ ಮೂಲ ಸೌಕರ್ಯಗಳನ್ನು ವಿಸ್ತರಿಸುವ ಹಾಗೂ ಬಲಪಡಿಸುವ ದೀರ್ಘಕಾಲಿಕ ಸುಸಂಬದ್ಧ ಪ್ರಯತ್ನಗಳ ಕೊರತೆಯಿದೆ ಎಂದು ನ್ಯಾಯಾಲಯವೇ ಅಭಿಪ್ರಾಯಪಟ್ಟಿದ್ದು, ಆ ಪರಿಸ್ಥಿತಿ ಇನ್ನು ಮುಂದೆಯೂ ಮುಂದುವರಿಯಬಹುದು. ಶಸ್ತ್ರಚಿಕಿತ್ಸಾ ಸೌಲಭ್ಯ, ತರಬೇತಿ ಪಡೆದ ಸಿಬ್ಬಂದಿಯೊಂದಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿರುವ ಜನನ ನಿಯಂತ್ರಣ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿಯೂ ಸ್ಥಾಪಿಸಬೇಕೆಂದು ಕೋರ್ಟ್ ಆದೇಶಿಸಿದೆ. ಆದರೆ, ಈ ಕೇಂದ್ರಗಳ ಸ್ಥಾಪನೆಗೆ ಕಾಲಮಿತಿಯ ಕುರಿತು ಹಾಗೂ ಉಳಿದ ವಿವರಗಳ ಬಗ್ಗೆ ತೀರ್ಪಿನಲ್ಲಿ ಸ್ಪಷ್ಟತೆಯಿಲ್ಲ. ಒಂದಂತೂ ಸ್ಪಷ್ಟ: ಈಗ ನಮ್ಮ ಪರಿಸರದಲ್ಲಿರುವ ಬಹುತೇಕ ನಾಯಿಗಳು ಆ ಕೇಂದ್ರಗಳನ್ನು ನೋಡುವವರೆಗೆ ಜೀವಿಸಿರುವುದಿಲ್ಲ.

ಜನರು ಮತ್ತು ನಾಗರಿಕ ಸಂಸ್ಥೆಗಳು ಸೃಷ್ಟಿಸಿಕೊಂಡಿರುವ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಹೇಳಿತ್ತು. ಆಡಳಿತಾತ್ಮಕ ವೈಫಲ್ಯಗಳೇ ಬೀದಿನಾಯಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿವೆ. 2023ರ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ಲಸಿಕೆ ಹಾಕುವುದು ಹಾಗೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡುವುದು ಈ ಸಮಸ್ಯೆಗೆ ಪ್ರಾಯೋಗಿಕ ಪರಿಹಾರವಾಗಿವೆ. ಜನರ ಆರೋಗ್ಯ ಮತ್ತು ಕಲ್ಯಾಣಕ್ಕೆ ಸಾರ್ವಜನಿಕ ನೀತಿಗಳು ಆದ್ಯತೆ ಕೊಡಬೇಕು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಈ ನೀತಿಗಳು ಜೀವವಿರೋಧಿ ಆಗಿರಬಾರದು; ಮಾನವೀಯತೆಯಿಂದಲೂ ಕರುಣೆಯಿಂದಲೂ ಕೂಡಿರಬೇಕು. ಭೂಮಿ ಮನುಷ್ಯರಿಗೆ ಮಾತ್ರ ಸೇರಿದ್ದಲ್ಲ ಎನ್ನುವ ಪ್ರಕೃತಿಯ ಮೂಲತತ್ತ್ವವನ್ನು ವ್ಯವಸ್ಥೆಯ ನೀತಿಗಳು ಉಲ್ಲಂಘಿಸಬಾರದು. ಮನುಷ್ಯನ ಅಸ್ತಿತ್ವ, ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ರೂಪುಗೊಂಡ ಕಾನೂನು ಮತ್ತು ನೀತಿಗಳು ಉಳಿದ ಜೀವಿಗಳ ಹಕ್ಕುಗಳನ್ನು ಕಸಿದುಕೊಳ್ಳಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.